“ಸಾಯುವುದೇ ಖಚಿತವೆಂದಾದ ಮೇಲೆ,..” ಎಂಬ ನಿಶ್ಚಿತತೆ ಅವನೊಳಗೆ ಅಗೋಚರವಾದ ಶಕ್ತಿಯನ್ನು ತುಂಬಿತ್ತು. ಖಡ್ಗ ವಿದ್ಯೆ ಗೊತ್ತಿರದಿದ್ದರೂ ಅವನ ರೋಷಾವೇಶದೆದುರು ಸೇನಾಪತಿಯ ಶಾಂತ ಮನಃಸ್ಥಿತಿ ಸೋತುಹೋಯಿತು ~ಓಶೋ ರಜನೀಶ್
ನಮ್ಮ ದೇಹ, ಮನಸ್ಸುಗಳಲ್ಲಿರುವ ಶಕ್ತಿಯನ್ನು ವಿನಾಶಾತ್ಮಕವಾಗಿ ಬಳಸಿಕೊಳ್ಳುವುದೇ ನರಕದ್ವಾರ. ನಮ್ಮೊಳಗಿನ ಶಕ್ತಿಗಳನ್ನು ಸೃಜನಾತ್ಮಕವಾಗಿ ಉಪಯೋಗಿಸುವುದೇ ಸ್ವರ್ಗದ ಹಾದಿ. ಬದುಕಿನಲ್ಲಿ ನಮ್ಮ ಮುಂದಿರುವುದು ಈ ಎರಡೇ ಹಾದಿಗಳು. ಸೃಜನಶೀಲತೆಯೇ ಸ್ವರ್ಗ ಮತ್ತು ಸ್ವಯಂನಾಶವೇ ನರಕ.
ಸ್ವರ್ಗ ನರಕಗಳಿಗೆ ಇದನ್ನು ಬಿಟ್ಟರೆ ಬೇರೆ ಮತ್ತೇನೂ ಅರ್ಥವಿಲ್ಲ. ಒಬ್ಬ ವ್ಯಕ್ತಿ ಕ್ರೋಧಭರಿತನಾದಾಗ ಅವನೊಳಗೆ ಅದೆಂತಹ ತೀವ್ರವಾದ ಶಕ್ತಿಯ ಸಂಚಯವಾಗುತ್ತದೆ ಎಂಬುದನ್ನೇನಾದರೂ ಬಲ್ಲಿರಾ? ಕ್ರೋಧಭರಿತನಾದ ಒಬ್ಬ ನರಪೇತಲನೂ ದೊಡ್ಡ ಗಾತ್ರದ ಬಂಡೆ ಕಲ್ಲನ್ನು ಎತ್ತಿ ಎಸೆಯಬಲ್ಲ. ಕೋಪಾವಿಷ್ಟನಾದ ವ್ಯಕ್ತಿ ತನಗಿಂತ ಶಕ್ತಿಶಾಲಿಯಾದ ಶಾಂತ ಸ್ವಭಾವದ ವ್ಯಕ್ತಿಯನ್ನು ಸುಲಭವಾಗಿ ಮೆಟ್ಟಿ ನಿಲ್ಲಬಲ್ಲ.
ಇಂಥದೊಂದು ಪ್ರಸಂಗ ಒಮ್ಮೆ ಜಪಾನಿನಲ್ಲಿ ನಡೆಯಿತು. ಅಲ್ಲಿ ಸಾಮುರಾಯ್ ಎಂಬ ಒಂದು ವರ್ಗವಿದೆ. ಸಾಮುರಾಯ್ ಎಂದರೆ ಕ್ಷತ್ರಿಯ ಎಂದರ್ಥ. ಕತ್ತಿ ಗುರಾಣಿಯೇ ಅವರ ಕಸುಬು ಹಾಗು ಕೊಲ್ಲುವುದು ಮತ್ತು ಸಾಯುವುದು ಅವರ ಪಾಲಿಗೊಂದು ಮನರಂಜನೆ. ಈ ಸಾಮುರಾಯ್ ವರ್ಗದ ಓರ್ವ ಸೇನಾಧಿಪತಿಯ ಹೆಂಡತಿಯು ಮನೆಯ ಪರಿಚಾರಕನೊಬ್ಬನನ್ನು ಪ್ರೀತಿಸುತ್ತಿದ್ದಳು.ಅಲ್ಲಿ ಯಾರಾದರೂ ಒಬ್ಬ ವ್ಯಕ್ತಿ ಪರಸ್ತ್ರೀಯನ್ನು ಪ್ರೇಮಿಸಿದರೆ ಅವನು ಆಕೆಯ ಪುರುಷನೊಂದಿಗೆ ಕಾಳಗ ಮಾಡಬೇಕು. ಕಾಳಗದಲ್ಲಿ ಗೆಲ್ಲುವವನು ಆಕೆಯನ್ನು ವರಿಸುವನು.ಜಪಾನಿನಲ್ಲಿ ಇಂಥದೊಂದು ಸಂಪ್ರದಾಯವಿತ್ತು.
ತನ್ನ ಪತ್ನಿಯ ರಹಸ್ಯ ಪ್ರಣಯವನ್ನು ಅರಿತ ಆ ಸಾಮುರಾಯ್ ಆ ಪರಿಚಾರಕನನ್ನು ಕುರಿತು “ನಿನಗೇನು ತಲೆ ನೆಟ್ಟಗಿದೆಯೇ? ನನ್ನೊಂದಿಗೆ ದ್ವಂದ್ವಯುದ್ಧ ಮಾಡಿ ಗೆದ್ದು ಉಳಿಯಬಲ್ಲೆಯಾ? ನಾಳೆ ಮುಂಜಾನೆಯೇ ಶಸ್ತ್ರ ಸನ್ನದ್ಧನಾಗಿ ಯುದ್ಧಕ್ಕೆ ಬಾ” ಎಂದು ಆಹ್ವಾನಿಸಿದ.
ಆ ಮಾತುಗಳನ್ನು ಕೇಳಿ ಪರಿಚಾರಕನ ಕೈಕಾಲುಗಳು ಅದುರಲಾರಂಭಿಸಿತು. ಏಕೆಂದರೆ ಆ ಸೇನಾಧಿಪತಿ ಸಾಧಾರಣವಾದ ಪರಾಕ್ರಮಿಯಾಗಿರಲಿಲ್ಲ. ಅಂಥವನ ಮುಂದೆ ಕಸಪೊರಕೆ ಹಿಡಿದು ಕೆಲಸ ಮಾಡುವುದನ್ನಷ್ಟೇ ತಿಳಿದಿದ್ದ ಈ ಪರಿಚಾರಕ ಹೇಗೆ ತಾನೆ ಕತ್ತಿಯನ್ನು ಝಳಪಿಸಬಲ್ಲ. ಅವನು ತನ್ನ ಜೀವಮಾನದಲ್ಲೇ ಎಂದೂ ಕತ್ತಿಯನ್ನು ಕೈಯಿಂದ ಮುಟ್ಟಿದವನಲ್ಲ.
“ನಿನ್ನಂಥವನೆದುರು ನಾನು ಹೇಗೆ ನಿಲ್ಲಬಲ್ಲೆ?” ಎಂದು ಪರಿಚಾರಕ ಅವನಿಗೆ ಶರಣಾದ.
ಆದರೆ ಸೇನಾಪತಿ “ನಮ್ಮ ಸಂಪ್ರದಾಯದ ಪ್ರಕಾರ ನೀನು ಹಾಗೆ ಮುಖಾಮುಖಿಯಾಗಿ ನಿಲ್ಲದೆ ಬೇರೆ ದಾರಿಯೇ ಇಲ್ಲ. ನಾಳೆಯ ದಿನ ನಿನ್ನ ಕತ್ತಿಯೊಂದಿಗೆ ಬಂದುಬಿಡು” ಎಂದು ಹೇಳಿ ಹೊರಟೇ ಬಿಟ್ಟ,
ಆ ಪರಿಚಾರಕ ಮನೆಗೆ ಹೋಗಿ ರಾತ್ರಿಯೆಲ್ಲ ತಲೆ ಕೆಡಿಸಿಕೊಂಡ. ಅವನೆದುರಿಗೆ ಯುದ್ಧ ಮಾಡುವುದನ್ನು ಬಿಟ್ಟು ಬೇರೆ ಮತ್ತೊಂದು ಆಯ್ಕೆಯೇ ಇರಲಿಲ್ಲ. ಮರುದಿನ ಮುಂಜಾನೆ ಅವನು ಕತ್ತಿ ಹಿಡಿದು ಬಂದೇ ಬಿಟ್ಟ. ಅವನ ಬರವನ್ನು ಕಂಡು ನೆರೆದಿದ್ದ ಜನಗಳಿಗೆ ಅಚ್ಚರಿಯಾಯಿತು.ಇದನ್ನು ನಿರೀಕ್ಷಿಸಿರದಿದ್ದ ಆ ಸೇನಾಪತಿಯೂ ಒಂದು ಕ್ಷಣ ಅವಾಕ್ಕಾದ. ಕತ್ತಿಯನ್ನು ಕೌಶಲ್ಯಪೂರ್ಣವಾಗಿ ಹಿಡಿಯಲೂ ಗೊತ್ತಿರದ ಅವನನ್ನು ಉದ್ದೇಶಿಸಿ ಆ ಸೇನಾಪತಿ “ಓಹೋ, ನಿನಗೆ ಕತ್ತಿ ಹಿಡಿಯಲೂ ಗೊತ್ತೋ?”ಎಂದು ಲೇವಡಿ ಮಾಡಿದ.
ಪರಿಚಾರಕನು “ಸಾಯುವುದೇ ಖಚಿತವಾದ ಮೇಲೆ ಸುಮ್ಮನೆ ಸಾಯದೆ ಕೊಂದೇ ಸಾಯೋಣವೆಂದು ನಿರ್ಧರಿಸಿ ಬಂದಿದ್ದೇನೆ” ಎಂದು ಉತ್ತರಿಸಿದ. ಅಂದು ಅವರಿಬ್ಬರ ನಡುವೆ ವಿಲಕ್ಷಣವಾದ ಒಂದು ಯುದ್ಧ ನಡೆಯಿತು. ಯುದ್ಧದಲ್ಲಿ ಸೇನಾಧಿಪತಿ ಸತ್ತು ಪರಿಚಾರಕನು ಗೆಲುವನ್ನು ಸಾಧಿಸಿದ.
“ಸಾಯುವುದೇ ಖಚಿತವೆಂದಾದ ಮೇಲೆ,..” ಎಂಬ ನಿಶ್ಚಿತತೆ ಅವನೊಳಗೆ ಅಗೋಚರವಾದ ಶಕ್ತಿಯನ್ನು ತುಂಬಿತ್ತು. ಖಡ್ಗ ವಿದ್ಯೆ ಗೊತ್ತಿರದಿದ್ದರೂ ಅವನ ರೋಷಾವೇಶದೆದುರು ಸೇನಾಪತಿಯ ಶಾಂತ ಮನಃಸ್ಥಿತಿ ಸೋತುಹೋಯಿತು. ಅವನ ಖಡ್ಗವಿದ್ಯಾ ಪ್ರಾವೀಣ್ಯವೆಲ್ಲ ವ್ಯರ್ಥವಾಗಿತ್ತು. ಅವನಲ್ಲಿ ಹುಟ್ಟಿದ ಅಸಾಧಾರಣ ಶಕ್ತಿಯ ಎದುರು ಸೇನಾಧಿಪತಿ ಸಾಯಲೇ ಬೇಕಾಯಿತು. ಕೋಪದಲ್ಲಿ ಅಥವಾ ಭಾವ ತೀವ್ರತೆಯ ಕ್ಷಣದಲ್ಲಿ ಅಸಾಧಾರಣವಾದ ಶಕ್ತಿ ಜನ್ಮ ತಳೆಯುತ್ತದೆ. ನಮ್ಮ ಪ್ರತಿಯೊಂದು ಜೀವಕೋಶವೂ ತಮ್ಮ ತಮ್ಮ ಜೀವಚೈತನ್ಯವನ್ನು ಆ ಶಕ್ತಿಗೆ ಸಮರ್ಪಣೆ ಮಾಡುತ್ತದೆ.
ನಮ್ಮ ಶರೀರದಲ್ಲಿ ಹಲವು ಸುರಕ್ಷಾ ಕೋಶಗಳಿರುತ್ತವೆ. ಆ ಸುರಕ್ಷಾ ಕೋಶಗಳು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿರುವುದಿಲ್ಲ. ಸಾಮಾನ್ಯವಾಗಿ ನಾವು ವೇಗವಾಗಿ ಓಡದಿದ್ದರೂ ನಮ್ಮತ್ತ ಯಾರಾದರೂ ಬಂದೂಕಿನಿಂದ ಗುರಿಯಿಟ್ಟಾಗ ನಂಬಲಸಾಧ್ಯವೆನಿಸುವಂತೆ ನಾಗಾಲೋಟದಲ್ಲಿ ಓಡಿಬಿಡುವೆವು. ಆಗ ಶಕ್ತಿಯನ್ನು ಸಂಚಯಿಸಿರುವ ಕೋಶಗಳು ತಾವು ಸಂಚಯಿಸಿಕೊಂಡಿರುವ ಶಕ್ತಿಯನ್ನೆಲ್ಲ ಒಮ್ಮೆಲೆ ಶರೀರದಲ್ಲಿ ಬಿಡುಗಡೆ ಮಾಡಿಬಿಡುತ್ತವೆ. ಇಂತಹ ಅಗಾಧ ಶಕ್ತಿಯನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳದಿದ್ದಲ್ಲಿ ಆ ಶಕ್ತಿ ನಮ್ಮನ್ನೇ ಆಹುತಿ ತಗೆದುಕೊಂಡುಬಿಡುವುದು. ಆದ್ದರಿಂದ, ಸೃಜನಶೀಲ ಚಟುವಟಿಕೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ಅಗತ್ಯ.