ಚಿನ್ನಸ್ವಾಮಿ ವಡ್ಡಗೆರೆ ಅವರ “ವಿಪಶ್ಯನ” ಅನುಭವ – 3

chiswaಯಾವಾಗ ಪ್ರಜ್ಞೆಯಲ್ಲಿ ಸಾಧಕ ಸ್ಥಿತನಾಗುತ್ತನೊ ಆಗ ಅನಾಸಕ್ತಿ ಬೆಳೆಯುತ್ತದೆ ಮತ್ತು ಜೀವನಮುಕ್ತನಾಗಿಯೇ ತೀರುತ್ತಾನೆ. ಭೋಗಿಸುತ್ತಾ ಭೋಗಿಸುತ್ತಾ ಬಂಧನದಲ್ಲಿ ಸಿಲುಕುತ್ತೇವೆ. ಗಮನಿಸುತ್ತಾ ಗಮನಿಸುತ್ತಾ ಬಿಡುಗಡೆ ಹೊಂದುತ್ತೇವೆ. ಇದೇ ಬುದ್ಧ ಬೋಧೆಯಾಗಿದೆ  ~ ಚಿನ್ನಸ್ವಾಮಿ ವಡ್ಡಗೆರೆ

ಭಾಗ 1 ಓದಲು ಇಲ್ಲಿ ನೋಡಿ : https://aralimara.com/2019/01/10/vipassana-3/

” ಎಲ್ಲ ಪಾಪಕರ್ಮಗಳಿಂದ ದೂರವಿರು,
ಕುಶಲ ಕರ್ಮಗಳನ್ನೇ ಮಾಡು,
ನಿನ್ನ ಮನಸ್ಸನ್ನು ಪರಿಶುದ್ಧಗೊಳಿಸು”
ಇದೇ ಎಲ್ಲಾ ಸಂಬುದ್ಧರ ಉಪದೇಶ.

“ದುಃಖದ ಸತ್ಯವನ್ನು ಅದರ ಮೂಲದವರೆಗೂ ಪರಿಶೋಧಿಸಬೇಕು’ ಎಂದು ಬುದ್ಧನು ಹೇಳಿದನು. ಅದಕ್ಕೆಂದೆ ಬುದ್ಧ ತನಗೆ ಜ್ಞಾನೋದಯವಾದ ರಾತ್ರಿ ದುಃಖವೂ ಹೇಗೆ ಉಗಮವಾಗುವುದು ಮತ್ತು ಅದನ್ನು ನಿರ್ನಾಮ ಮಾಡುವುದು ಹೇಗೆ ? ಎಂದು ಅರಿತುಕೊಳ್ಳಲು ದೃಢ ನಿಶ್ಚಯಮಾಡಿ ಧ್ಯಾನಕ್ಕೆ ಕುಳಿತುಕೊಂಡನು. ನಂತರ `ಆಸೆಯೇ ದುಃಖಕ್ಕೆ ಮೂಲ’ ಎಂದು ನಾವು ನೀವೆಲ್ಲಾ ಆಗಾಗ ಹೇಳುತ್ತಲೇ ಇರುವ ವಾಕ್ಯವನ್ನು ಸ್ವತಃ ಅನುಭವದಿಂದಲೇ ಅರಿತುಕೊಂಡದ್ದು `ವಿಪಶ್ಯನ’ ಧ್ಯಾನದ ಆವಿಷ್ಕಾರಕ್ಕೆ ನಾಂದಿಯಾಯಿತು ಎನ್ನಲಾಗುತ್ತದೆ.

ಮೂರು ದಿನದ, ಒಂದು ದಿನದ ಧ್ಯಾನ ಶಿಬಿರಗಳಲ್ಲಿ ಭಾಗವಹಿಸಿ ಅನುಭವವಿದ್ದ ನನಗೆ `ಧಮ್ಮ ಫಫುಲ್ಲ’ ಧ್ಯಾನ ಕೇಂದ್ರದಲ್ಲಿ ಹತ್ತು ದಿನಗಳ ಕಾಲ ಪ್ರತಿದಿನ ಹತ್ತು ಗಂಟೆ ಆರ್ಯಮೌನದೊಂದಿಗೆ ಧ್ಯಾನ ಮಾಡಬೇಕು ಎಂದು ಕೇಳಿದಾಗಲೇ ಆತಂಕ ಭಯವಾಗಿತ್ತು.
ಮೈಸೂರಿನ ಉತ್ತನಹಳ್ಳಿ ಸಮೀಪವಿರುವ `ಸನ್ನಿಧಿ’ ಓಶೋ ಧ್ಯಾನಕೇಂದ್ರದಲ್ಲಿ ದಶಕದಿಂದಲ್ಲೂ ಧ್ಯಾನ ಶಿಬಿರಗಳಲ್ಲಿ ಭಾಶಗವಹಿಸುತ್ತಾ ಬಂದಿದ್ದೇನೆ. ಮೂರು ವರ್ಷಗಳ ಹಿಂದೆ ಸನ್ನಿಧಿಯಲ್ಲೇ ಹತ್ತು ದಿನಗಳ ಧ್ಯಾನ ಶಿಬಿರದಲ್ಲಿ ಭಾಗವಹಿಸಿದ್ದ ಅನುಭವವೂ ಇತ್ತು. ಅಲ್ಲಿಯೂ ಮೌನಕ್ಕೆ ಪ್ರಧಾನ್ಯತೆ ಇದ್ದರೂ ಪ್ರತಿದಿನ ಬೇರೆ ಬೇರೆ ಧ್ಯಾನ ವಿಧಾನಗಳನ್ನು ಕಲಿಸಿಕೊಡುತ್ತಿದ್ದರು. ದೆಹಲಿಯ ಧ್ಯಾನಕೇಂದ್ರದ ರವೀಂದ್ರ ಭಾರತಿ ಅವರ ಮಾರ್ಗದರ್ಶನದಲ್ಲಿ ಈ ಶಿಬಿರ ನಡೆದಿತ್ತು. ಆದರೆ ಧಮ್ಮ ಕೇಂದ್ರದಲ್ಲಿ ಹತ್ತು ದಿನ ಬರೀ ಉಸಿರನ್ನು ಗಮನಿಸುವುದನ್ನು ಬಿಟ್ಟರೆ ಬೇರೆ ಏನನ್ನೂ ಮಾಡುವಂತಿಲ್ಲ ಎಂದು ಹೇಳಿದಾಗ ಭಯವಾಗಿತ್ತು.
ಆದರೂ ಮೂರು ವರ್ಷಗಳಿಂದ ವಿಪಶ್ಶನ ಮಾಡಬೇಕೆಂಬ ಮನದಾಳದ ಆಸೆಯನ್ನು ಹತ್ತಿಕ್ಕಲು ಒಪ್ಪದ ಮನಸ್ಸು ಪ್ರಾಪಂಚಿಕ ಜಂಜಡ, ಕ್ಷುದ್ರ ದೈನಿಕ, ಮೊಬೈಲು, ದಿನ ಪತ್ರಿಕೆಗಳು, ಟಿವಿ, ಗೆಳೆಯರು, ತೋಟ ಎಲ್ಲರಿಂದ ಹತ್ತು ದಿನಗಳ ಕಾಲ ದೂರವಿದ್ದು ಬರೋಣ ಎಂದು ನಿರ್ಧರಿಸಿ ಹೊರಡಲು ಸಿದ್ಧತೆ ಮಾಡಿಕೊಳ್ಳತೊಡಗಿತು.

ವಿಪಶ್ಶನ ಅಭ್ಯಾಸಮಾಡಲು ಹತ್ತು ದಿನ ಬೇಕೆ? ಅದು ಸಾಧಕನು ಪ್ರತಿದಿನ ಬೆಳಗ್ಗೆ ನಾಲ್ಕು ಗಂಟೆಗೆ ರಾತ್ರಿ ಒಂಬತ್ತು ಗಂಟೆಯವರೆಗೆ ಸಾಧನೆ ಮಾಡಬೇಕೆ ? ಎಂದು ಅನಿಸಬಹುದು. ಇದಕ್ಕೆ ಉತ್ತರ ಬೇಕಾದರೆ ಭಾಗವಹಿಸಿಯೇ ಪಡೆದುಕೊಳ್ಳಬೇಕು. `ನಿನ್ನ ದಾರಿ ನೀನೆ ನಡೆದು ಸೇರಬೇಕು ಗುರಿಯನು’ ಅಂತಾರಲ್ಲ ಹಾಗೆ.

ದುಃಖಕ್ಕೆ ಕಾರಣವಾದ ರಾಗ ದ್ವೇಷ ಅಜ್ಞಾನವನ್ನು ನಿವಾರಿಸಿಕೊಂಡು ಮುಕ್ತಿಹೊಂದಲು ಬುದ್ಧನು ಮಾರ್ಗವೊಂದನ್ನು ಕಂಡುಕೊಂಡನು.ತಾನು ಅನುಸರಿಸಿ ಇತರರಿಗೂ ಭೋದಿಸಿದನು.ಅದನ್ನು ಬುದ್ಧ `ಆರ್ಯ ಅಷ್ಠಾಂಗ ಮಾರ್ಗ’ ಎಂದು ಕರೆದನು. ಅದನ್ನು ಸರಳವಾಗಿ ಲೇಖನದ ಆರಂಭದಲ್ಲಿ ಹೇಳಿರುವ ಸರಳ ಮಾತುಗಳಲ್ಲಿ ಬುದ್ಧ ಹೇಳಿದನು. ಈ ಅಷ್ಠಾಂಗ ಮಾರ್ಗವೂ `ಶೀಲ, ಸಮಾಧಿ, ಪ್ರಜ್ಞೆ’ ಎಂಬ ಮೂರು ವಿಭಾಗವುಳ್ಳದಾಗಿದೆ.

ಮತ್ತೆ ಇಲ್ಲಿ ಹನ್ನೆರಡನೇ ಶತಮಾನದ ದಾರ್ಶನಿಕ ಬಸವಣ್ಣ ನೆನಪಿಗೆ ಬರುತ್ತಾನೆ. ” ಕಳಬೇಡ,ಕೊಲಬೇಡ,ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲಸಂಗನ ಒಲಿಸುವ ಪರಿ” ಎಂಬ ವಚನ ನೆನಪಿಗೆ ಬರುತ್ತದೆ.ಇದನ್ನೇ ಎರಡೂವರೆ ಸಾವಿರ ವರ್ಷಗಳ ಹಿಂದೆ ಬುದ್ಧ ಶೀಲ ಎಂದು ಕರೆದ.ಇದು ಧ್ಯಾನ ಮಾಡುವ ಸಾಧಕನಿಗೆ ತಳಪಾಯವಿದ್ದಂತೆ.

ಶೀಲ ಇಲ್ಲದಿದ್ದರೆ ಧ್ಯಾನ ಘಟಿಸುವುದೆ ಇಲ್ಲ. ನೈತಿಕತೆಯ ಅಭ್ಯಾಸ ಮಾಡದೆ ಧ್ಯಾನಮಾಡಲಾಗದು. ಕಾಮ,  ಕ್ರೋಧ, ಮದ, ಮತ್ಸರ, ರಾಗ ಮತ್ತು ದ್ವೇಷಗಳಿಂದ ದೂರವಿದ್ದು ಧ್ಯಾನಕ್ಕೆ ಕುಳಿತುಕೊಳ್ಳಬೇಕು.ಅದಕ್ಕಾಗಿ ಈ ಹತ್ತು ದಿನದಲ್ಲಿ ಮೂರು ದಿನಗಳ ಕಾಲ ಶೀಲವನ್ನು ಅಭ್ಯಾಸಮಾಡಿಸಲು ಮನಸ್ಸನ್ನು ಆ ಎಲ್ಲಾ ವಿಕಾರಗಳಿಂದ ದೂರಮಾಡಲು ಕಲಿಸಿಕೊಡಲಾಗುತ್ತದೆ.

ಶೀಲದಲ್ಲಯೂ ಮೂರು ವಿಭಾಗಗಳಿದ್ದು ಅವು `ಸಮ್ಯಕ್ ವಾಣಿ,ಸಮ್ಯಕ್ ಕ್ರಿಯೆ ಮತ್ತು ಸಮ್ಯಕ್ ಜೀವನೋಪಾಯ’ ಗಳಾಗಿವೆ.ನಾವು ಆಡುವ ಮಾತು,ಮಾಡುವ ಕೆಲಸ,ಕೈಗೊಳ್ಳುವ ಕೆಲಸ ಎಲ್ಲವೂ ಪರಿಶುದ್ಧವಾಗಿದ್ದು ತನಗೂ ಇತರರಿಗೂ ಹಾನಿ ಉಂಟುಮಾಡದಂತಿರಬೇಕಾಗುತ್ತದೆ. ಮತ್ತೆ ಮಹಾತ್ಮ ಗಾಂಧಿಯ ಮೂರು ಮಂಗಗಳು ನೆನಪಾಗುತ್ತವೆ `ಕೆಟ್ಟದ್ದನ್ನು ನೋಡಬೇಡ,ಕೆಟ್ಟದ್ದನ್ನು ಮಾಡಬೇಡ, ಕೆಟ್ಟದ್ದನ್ನು ಕಲಿಯಬೇಡ’ ಎಂಬ ಮಂಗಗಳ ಚಿತ್ರ ನೆನಪಿಗೆ ಬರುತ್ತದೆ. 

ಶೀಲದ ಅಭ್ಯಾಸವೂ ಧರ್ಮದ ಅವಿಭಾಜ್ಯ ಅಂಗವಾಗಿದೆ.ಶೀಲವಿಲ್ಲದಿದ್ದರೆ ಆತಂರ್ಯದಲ್ಲಿ ಸತ್ಯದ ಹುಡುಕಾಟ ನಡೆಸುವ ಸಮಯದಲ್ಲಿ ಮನಸ್ಸು ಕ್ಷೋಭೆಗೆ ಒಳಗಾಗುತ್ತದೆ.ಚಿತ್ತ ವಿಕಾರಗಳು ಉಂಟಾಗುತ್ತವೆ. ಶೀಲವಿಲ್ಲದೆ ಆಧ್ಯಾತ್ಮದ ಪ್ರಗತಿ ಸಾಧ್ಯವಿಲ್ಲ. ಶೀಲವನ್ನು ಅಭ್ಯಾಸಮಾಡದೆ ಹಲವಾರು ಗುರುಗಳು, ಸ್ವಾಮೀಜಿಗಳು ಪರಮಾನಂದದ ಸ್ಥಿತಿಯನ್ನು ಅನುಭವಿಸತ್ತಲೂ ಇರಬಹುದು. ಆದರೆ ಶೀಲವಿಲ್ಲದೆ ಮನಸ್ಸನ್ನು ದಃಖದಿಂದ ಬಿಡುಗಡೆಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಮಾತ್ರ ಯಾರು ನಿರಾಕರಿಸಲಾಗದು. ಶೀಲದ ಅನುಸರಣೆಯ ನಂತರವೇ ಬರುವುದು ಸಮಾದಿ ಮತ್ತು ಪ್ರಜ್ಞೆ.

ಶಿಬಿರದಲ್ಲಿ ಪಾಲ್ಗೊಳ್ಳುವುದು ಹೇಗೆ?

ಹತ್ತು ದಿನಗಳ ಈ ಶಿಬಿರದಲ್ಲಿ ಭಾಗವಹಿಸಲು ಧಮ್ಮ ಎಂಬ ಮೊಬೈಲ್ ಆ್ಯಫ್ ಡೌನ್ಲೋಡ್ ಮಾಡಿಕೊಂಡು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಪುರುಷರು, ಮಹಿಳೆಯರೂ ಸೇರಿ ನೂರು ಮಂದಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. 2018 ಸೆಪ್ಟೆಂಬರ್ ತಿಂಗಳಿನಿಂದ ಪ್ರಯತ್ನಿಸಿದ ನನಗೆ ಡಿಸೆಂಬರ್ 19 ರಿಂದ 30 ರವರೆಗೆ ನಡೆದ ಧ್ಯಾನಶಿಬಿರದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತು. ಸತತ ಮೂರು ತಿಂಗಳ ಪ್ರಯತ್ನ ಫಲನೀಡಿತು. 

ಅಲ್ಲಿಯವರೆಗೆ ವಿಪಶ್ಶನ ಧ್ಯಾನ ಕುರಿತು ಸುಮಾರು 25 ಗಂಟೆಗಳಿಗೂ ಹೆಚ್ಚು ಕಾಲ ಆಡಿಯೋ, ವೀಡಿಯೋ,ಬಿಬಿಸಿ ಚಾನಲ್ನವರು,ಕನ್ನಡದ ಟಿವಿ 9 ಅವರು ವಿಪಶ್ಶನ ಕುರಿತು ಮಾಡಿರುವ ಟಿವಿ ಪ್ರೋಗ್ರಾಂ, ಅಲ್ಲದೆ ಎಸ್.ಎನ್.ಗೋಯಂಕಾ ಅವರು ಹನ್ನೊಂದು ದಿನಗಳ ಕಾಲ ಪ್ರತಿದಿನ ಒಂದೂವರೆ ಗಂಟೆಗಳ ಕಾಲ ನೀಡುವ ಉಪನ್ಯಾಸ ಎಲ್ಲವನ್ನು ಕೇಳಿ,ನೋಡಿ ವಿಪಶ್ಶನದ ಪರಿಣಾಮದ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೆ. ಆದರೆ ಎಷ್ಟೇ ಓದಿದರೂ,ನೋಡಿದರೂ,ಕೇಳಿದರೂ ಸ್ವತಃ ಅನುಭವಿಸದೆ ವಿಪಶ್ಶನದ ಮಹತ್ವ ತಿಳಿಯುವುದಿಲ್ಲ ಎನ್ನುವ ಸತ್ಯ ಶಿಬಿರದಲ್ಲಿ ಭಾಗವಹಿಸಿದ ನಂತರ ಅರ್ಥವಾಯಿತು.

Advertisements

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.