ಒಂಟಿ ಪ್ರಯಾಣ : ತಾವೋ ಧ್ಯಾನ ~ 22

ತಾವೋ ಜೊತೆ ಒಂಟಿ ಪ್ರಯಾಣ ಮಾತ್ರ ಸಾಧ್ಯ. ಇದೇ ಹಾದಿಯಲ್ಲಿ ಸಾಕಷ್ಟು ಸಾಧಕರು ಪ್ರಯಾಣ ಮಾಡುತ್ತಿರುತ್ತಾರಾದರೂ ನಮ್ಮ ಪ್ರಯಾಣದಲ್ಲಿ ನಾವು ಅವರನ್ನು ಭೇಟಿಯಾಗಲಾರೆವು ~ ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ

tao

ಎಲ್ಲವೂ ತಾವೋ ಒಳಗೆ ಒಂದಾಗಿವೆ
ಆದರೂ ತಾವೋ ಗೆ ಅಧಿಕಾರದ ಹುಕಿಯಿಲ್ಲ
ಆದ್ದರಿಂದ ಅದು ಪ್ರಚಂಡ.

ತಾವೋಗೆ ತನ್ನ ಮಹತ್ವದ ಬಗ್ಗೆ ಅರಿವಿಲ್ಲ
ಆದ್ದರಿಂದ ಅದು ಮಹಾತ್ಮ .

**

ತಾವೋ ಸಾಧಕರು ಖಚಿತತೆಯನ್ನ ಮೈಗೂಡಿಸಿಕೊಂಡವರಲ್ಲ. ಅವರು ವಿಕ್ಷಿಪ್ತರಂತೆ, ಸಮಾಜ ವಿರೋಧಿಗಳಂತೆ, ಹೊಣೆಗೆಡಿಗಳಂತೆ, ವಿವರಿಸಲಾಗದವರಂತೆ, ಅತಿರೇಕಿಗಳಂತೆ ಕೆಲವೊಮ್ಮೆ ಹಗರಣ ಮಾಡುವವರಂತೆ ಕಾಣಿಸಿಕೊಳ್ಳುತ್ತಾರೆ.

ಅವರು ಹೊರಗಿನ ದನಿಗಳನ್ನು ಕೇಳಿಸಿಕೊಳ್ಳುತ್ತಾರಾದರೂ ಸ್ಪಂದಿಸುವುದು ಒಳಗಿನ ತುಡಿತಗಳಿಗೆ ಮಾತ್ರ. ಅವರಿಗೆ ಸಮಾಜದ ನೈತಿಕ ನಿಯಮಗಳಲ್ಲಿ ಆಸಕ್ತಿಯಿಲ್ಲ ; ತಾವೋ ಪಾಲಿಸುವುದರಲ್ಲಷ್ಟೇ ಅವರ ಆಸ್ಥೆ. ಜನ ಅವರನ್ನು ಅರ್ಥ ಮಾಡಿಕೊಳ್ಳಲು ವಿಫಲರಾದರೂ ಅವರು ಬೇಸರಿಸಿಕೊಳ್ಳುವುದಿಲ್ಲ. ಅವರನ್ನು ಯಾವುದು ಪೋಷಿಸುತ್ತದೆಯೋ ಅದನ್ನು ಬೇರೆಯವರು ಗ್ರಹಿಸುವುದು ಸಾಧ್ಯವಿಲ್ಲ.

ನಿನ್ನ ದುಃಖಕ್ಕೆ
ಪರಿಹಾರವೇ ಇಲ್ಲ ಎನ್ನುವುದನ್ನ ಕಂಡುಕೊಂಡಾಗಲೇ
ನೀನು ಪರಮ ಸುಖಿ.

ತಲೆಬಾಗಿ ಹೂಂ ಗುಡುವುದಕ್ಕೂ ,
ತಲೆಯೆತ್ತಿ ಹೂಂ ಗುಡುವುದಕ್ಕೂ ಏನು ವ್ಯತ್ಯಾಸ?
ಗೆಲುವು, ಸೋಲುಗಳ ನಡುವೆ?
ಅವರ ಹೂಂ, ನಿನ್ನ ಹೂಂ ಆಗಲೇಬೇಕೆ?
ಅವರು ಉಹೂಂ ಎಂದರೆ, ನೀನೂ ?
ಎಂಥ ನಗೆಪಾಟಲಿನ ಸಂಗತಿ.

ಅವರು ಯುದ್ಧಕ್ಕೆ ಹೊರಟವರಂತೆ ಉತ್ತೇಜಿತರು
ನನಗೆ ಆ ಸಂಭ್ರಮವಿಲ್ಲ
ನಿರ್ಲಿಪ್ತ ನಾನು
ಇನ್ನೂ ನಗು ಕಲಿಯದ ಹಸುಗೂಸು.

ಬೇಕಾದದ್ದು ಇದ್ದೇ ಇದೆ ಎಲ್ಲರ ಬಳಿ
ನಾನೊಬ್ಬನೇ ಬರಿಗೈ ದೊರೆ
ನೂಕಿದಂತೆ ನೂಕಿಸಿಕೊಳ್ಳುವವನು
ಅಪ್ಪಟ ದಡ್ಡ, ಪೂರ್ತಿ ಖಾಲಿ.

ಅವರು ಖಚಿತಮತಿಗಳು, ನಾನು ಮಹಾ ಗೊಂದಲದ ಮನುಷ್ಯ
ಅವರು ಚುರುಕು, ನಾನು ಮಬ್ಬು
ಅವರಿಗೋ ಒಂದು ಉದ್ದೇಶ
ನಾನು ಕಣ್ಣಿಗೆ ಪಟ್ಟಿ ಕಟ್ಟಿಕೊಂಡವನು
ಅಲೆ ಕರೆದುಕೊಂಡು ಹೋದಲ್ಲಿ, ಗಾಳಿ ಬೀಸಿದ ದಿಕ್ಕಿನಲ್ಲಿ
ಹರಿದು ಹೋಗುವವನು

ಎಲ್ಲರಂಥವನಲ್ಲ ನಾನು
ಸೀದಾ ಮಹಾ ಮಾಯಿಯ ಮೊಲೆಗೆ ಬಾಯಿಟ್ಟವನು.

~ ಲಾವೋತ್ಸು

ಒಳಗಿನ ತುಡಿತವನ್ನು ಉತ್ತೇಜಿಸುವುದು ಮತ್ತು ಅಧ್ಯಾತ್ಮಿಕ ಒತ್ತಡಗಳನ್ನು , ಸಹಜ ಪ್ರವೃತ್ತಿಗಳಿಂದ ಬೇರೆ ಮಾಡಿ ಸಾಕ್ಷಿಯಾಗುವುದು ತಾವೋ ಸಾಧನೆಯ ಮೂಲ ಉದ್ದೇಶ.

ನಮ್ಮೊಳಗೆ ಹಲವಾರು ದನಿಗಳು, ವ್ಯಕ್ತಿತ್ವಗಳು, ಗುರಿಗಳು, ಒಲವುಗಳೂ ಒಂದಾಗಿವೆ. ಅವನ್ನೆಲ್ಲ ಬೇರೆ ಬೇರೆ ಎಂದು ಗುರುತಿಸುವುದು ಮತ್ತು ತಾವೋದಲ್ಲಿ ಅವನ್ನೆಲ್ಲ ಒಂದಾಗಿಸುತ್ತ ಮುನ್ನಡೆಯುವುದು ಇರುವಿಕೆಯ ಸ್ಥಿತಿಯನ್ನು ಮುಟ್ಟಲು ತೀರಾ ಅವಶ್ಯಕ. ಒಮ್ಮೆ ತಾವೋದಲ್ಲಿ ಒಂದಾದರೆ ಸಂಶಯಗಳು , ಪರರ ಗುಣಾವಗುಣಗಳು ನಮ್ಮ ಮೇಲೆ ಪ್ರಭಾವ ಬೀರಲಾರವು. ತಾಯಿಯ ಮೊಲೆಯೊಡನೆ ಒಂದಾದ ಮಗುವಿನ ಸ್ಥಿತಿಯೇ ತಾವೋ.

ತಾವೋ ಜೊತೆ ಪ್ರಯಾಣ ಸಾಗಿದಂತೆಲ್ಲ ಸಾಧಕ, ತನ್ನನ್ನು ತಾನು ಪರಿಪಕ್ವವಾಗಿಸಿಕೊಳ್ಳುವಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತ ಹೋಗುತ್ತಾನೆ. ಇನ್ನು ಬೇಕಾಗಿರುವುದು ತಾವೋ ಒಡನೆ ಹೆಜ್ಜೆ ಹಾಕುವ ಧೃಢತೆ ಮಾತ್ರ. ತಾವೋ ಜೊತೆ ಒಂಟಿ ಪ್ರಯಾಣ ಮಾತ್ರ ಸಾಧ್ಯ. ಇದೇ ಹಾದಿಯಲ್ಲಿ ಸಾಕಷ್ಟು ಸಾಧಕರು ಪ್ರಯಾಣ ಮಾಡುತ್ತಿರುತ್ತಾರಾದರೂ ನಮ್ಮ ಪ್ರಯಾಣದಲ್ಲಿ ನಾವು ಅವರನ್ನು ಭೇಟಿಯಾಗಲಾರೆವು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.