ಚಾತಕ ಪಕ್ಷಿಯ ಪ್ರೇಮ ಪ್ರತಿಜ್ಞೆ : ಒಂದು ಸುಂದರ ಪಾಠ

ಇದು ಚಾತಕದ ಪ್ರೀತಿ. ಇದು ಚಾತಕದ ಪ್ರೇಮ ನಿಷ್ಠೆ. ಚಾತಕ ಪಕ್ಷಿ ಗಂಡಾಗಿದ್ದರೂ ಹೆಣ್ಣಾಗಿದ್ದರೂ ಪ್ರೇಮದ ಪರಿಭಾವದಲ್ಲಿ ಅದು ಹೆಣ್ಣು, ಮೇಘ ಗಂಡು. ಸ್ತ್ರೈಣತೆ ಇದ್ದಲ್ಲಿ ಮಾತ್ರ ಪ್ರೇಮದ ಉತ್ಕಟತೆ ಅನುಭವಿಸಲು, ಅಭಿವ್ಯಕ್ತಪಡಿಸಲು ಸಾಧ್ಯ ~ ಚೇತನಾ  

chataka

ನಮಗೆ ದೀಪ – ಪತಂಗದ ರೂಪಕ ಗೊತ್ತು. ಪ್ರೇಮ ಮತ್ತು ಪ್ರೇಮಿಯ ವಿಷಯದಲ್ಲಿ ಇದನ್ನು ಬಳಸೋದು ಸಾಮಾನ್ಯ. ಹಾಗೇ ನಾವು ಚಾತಕದ ಬಗ್ಗೆಯೂ ಕೇಳಿದ್ದೇವೆ. ಆದರೆ ಚಾತಕದ ಪ್ರೇಮರೂಪಕ ಗೊತ್ತೇ? ಅದು ಪತಂಗ – ದೀಪದ ರೂಪಕಕ್ಕಿಂತಲೂ ಸುಂದರವಾಗಿದೆ. ಗಹನವಾಗಿದೆ. ಭಾರತೀಯ ಪ್ರಾಚೀನ ಕಥನಗಳಲ್ಲಿ, ದೃಷ್ಟಾಂತಗಳಲ್ಲಿ ಈ ಹಕ್ಕಿಯ ಉಲ್ಲೇಖ ಮೇಲಿಂದ ಮೇಲೆ ಕಂಡುಬರುತ್ತದೆ. ಸಂತ ತುಳಸೀದಾಸರಂತೂ ತಮ್ಮ ‘ದೋಹಾವಲಿ’ಯಲ್ಲಿ ಚಾತಕದ ಗುಣಗಾನವನ್ನೇ ಮಾಡಿದ್ದಾರೆ.

ಚಾತಕ ಪಕ್ಷಿ ಮೇಘವನ್ನು ಪ್ರೀತಿಸುತ್ತದೆ. ಹಾಗೆಂದೇ ಅದು, “ನಾನು ಸ್ವಾತಿ ನಕ್ಷತ್ರದಲ್ಲಿ ಮೇಘದಿಂದ ಬಿದ್ದ ನೀರನ್ನು ಮಾತ್ರ ಕುಡಿಯುತ್ತೇನೆ. ಬೇರೆ ನೀರು ಕುಡಿಯಲೊಲ್ಲೆ” ಎಂದು ಪ್ರತಿಜ್ಞೆ ಮಾಡುತ್ತದೆ. “ಮೇಘವೇ! ನೀನು ಸಮಯಕ್ಕೆ ಮಳೆ ಸುರಿಸು ಅಥವಾ ಸುರಿಸದಿರು… ನಾನು ಪ್ರೀತಿಸೋದು ಮಾತ್ರ ನಿನ್ನನ್ನೇ” ಎಂದು ಪ್ರಮಾಣ ಮಾಡುತ್ತದೆ.  

ಚಾತಕದ ಈ ಪ್ರೇಮಪ್ರತಿಜ್ಞೆ ಕೇಳಿ ತುಳಸೀದಾಸರು ಹೇಳುತ್ತಾರೆ, “ಹೇ ಚಾತಕ! ನೀನು ಸ್ವಾತಿ ನಕ್ಷತ್ರದಲ್ಲಿ ಬೀಳುವ ಮಳೆಯ ನೀರನ್ನೂ ಸಹ ಕುಡಿಯಬೇಡ! ಯಾಕೆಂದರೆ, ಪ್ರೇಮದ ಪಿಪಾಸೆ ಹೆಚ್ಚಾಗುತ್ತಲೇ ಇರಬೇಕು. ಕಡಿಮೆಯಾದರೆ ಪ್ರೇಮದ ಪ್ರತಿಷ್ಠೆಗೆ ಧಕ್ಕೆ ಬಂದೀತು. ಪ್ರೇಮದ ಮುಖ್ಯ ಲಕ್ಷಣವೆಂದರೆ ತಾನು ಪ್ರೀತಿಸುವ ವಸ್ತುವಿಗಾಗಿ ಅನಂತ ಕಷ್ಟಗಳನ್ನು ಅನುಭವಿಸುವುದು. ಹಾಗೆಯೇ ನೀನು ಸ್ವಾತಿ ಹನಿಯನ್ನೂ ಕುಡಿಯದೆ ನಿನ್ನ ಪ್ರೇಮದ ದಾಹ ಹೆಚ್ಚಿಸಿಕೋ!”

ತುಳಸೀದಾಸರ ಈ ಮಾತು ಆತ್ಮವೇ ನಾಲಿಗೆಯಾಗಿ ಪ್ರೇಮದ ತಹತಹವನ್ನು ಚಪ್ಪರಿಸುವ ಉತ್ಕಟತೆಯನ್ನು ಬಿಂಬಿಸುತ್ತದೆ.  

ತುಳಸೀದಾಸರು ವರ್ಣಿಸುತ್ತಾರೆ;

ಚಾತಕವೊಂದು ಬಾಯಾರಿ ಬಳಲಿದೆ. ಆದರೂ ಪ್ರಿಯತಮನಾದ ಮೇಘವನ್ನೇ ಧ್ಯಾನಿಸುತ್ತಿದೆ. ಮೇಘ ಭಾರೀ ಗಾತ್ರದ ಮಂಜಿನ ತುಂಡುಗಳನ್ನು ಅದರ ರೆಕ್ಕೆ ಮೇಲೆ ಸುರಿಸಿದರೂ, ಗುಡುಗು ಮಿಂಚುಗಳಿಂದ ಬೆದರಿಸಿದರೂ ಚಾತಕ ವಿಚಲಿತವಾಗುವುದಿಲ್ಲ. ಅದಕ್ಕೆ ಮೇಘದ ವರ್ತನೆಯಲ್ಲಿ ಯಾವ ದೋಷವೂ ಕಾಣುವುದಿಲ್ಲ. ಅದನ್ನು ದೂರುವುದೂ ಇಲ್ಲ. ಹಾಗೇ, ಚಾತಕವೇನೂ ಸ್ವಾತಿ ಮಳೆಹನಿಗಾಗಿ ಪರಿತಪಿಸುತ್ತ ಕೂತಿಲ್ಲ. ಅದರ ಧ್ಯಾನವೆಲ್ಲ ಮೇಘದ ಕುರಿತು. ಸ್ವಾತಿ ಮಳೆ ಬಿದ್ದರೆ, ಬಿದ್ದಾಗ ಬಾಯ್ತೆರೆದು ಮುಗಿಲಿಗೆ ಮುಖವೊಡ್ಡಿ ಹನಿಗಳನ್ನು ನೇರವಾಗಿ ಗುಟುಕರಿಸುತ್ತದೆ, ಅದು ಕೂಡಾ ತನ್ನ ಪ್ರಿಯತಮನ ಉಡುಗೊರೆ ಎಂಬ ಪ್ರೇಮದಿಂದ ಮಾತ್ರ!

ಚಾತಕ ನೀರಿಗಾಗಿ ಮೇಘವನ್ನು ಬೇಡುವುದಿಲ್ಲ. ಅದು ಆತುರಪಡುವುದೂ ಇಲ್ಲ. ಸ್ವಾತಿ ಮಳೆ ಬಿದ್ದಾಗ ನೀರ ಹನಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದೂ ಇಲ್ಲ. ಮೇಘ ಭೂಮಿಯನ್ನು ತನ್ನ ಧಾರೆಯಿಂದ ಸಂಪನ್ನಗೊಳಿಸುತ್ತದೆ. ಆದರೆ ಭೂಮಿಯ ಮೇಲಿನ ಯಾರು ಕೂಡಾ ಚಾತಕದಷ್ಟು ಮೇಘವನ್ನು ಜಪಿಸುವುದೂ ಇಲ್ಲ, ಪ್ರೇಮಿಸುವುದೂ ಇಲ್ಲ. ಆದರೆ ಚಾತಕ ಹಾಗಲ್ಲ. ಕುಡಿಯುವುದು ಕೆಲವೇ ಗುಟುಕುಗಳಾದರೂ ಮೇಘದ ಮೇಲಿನ ಅದರ ಪ್ರೇಮ ಅಸೀಮ. ಸೃಷ್ಟಿಯಲ್ಲೇ ಮೇಘದಂಥ ದಾನಿ ಮತ್ತೊಂದಿಲ್ಲ. ಹಾಗೆಯೇ, ಸೃಷ್ಟಿಯಲ್ಲಿ ಚಾತಕದಷ್ಟು ಶ್ರೇಷ್ಠ ಗ್ರಾಹಕರೂ ಯಾರಿಲ್ಲ. ಮಳೆ ಎಷ್ಟು ಬಿದ್ದರೂ, ಸ್ವಾತಿ ಮಳೆಯೇ ಬೇಕಾದಷ್ಟು ಸುರಿದರೂ ಅದು ಗ್ರಹಿಸುವುದು ತನಗೆ ಬೇಕಾದ ಕೆಲವು ಗುಟುಕುಗಳನ್ನು ಮಾತ್ರ.

ಹಾಗೆಯೇ ಮೇಘವೇನೂ ಸಾಧಾರಣನಲ್ಲ… ಅದು ಚಾತಕವನ್ನು ಸಾಕಷ್ಟು ಪರೀಕ್ಷಿಸುತ್ತದೆ. ಎಷ್ಟೆಂದರೆ, ಜನ ಹೇಳುತ್ತಾರೆ, “ಚಾತಕವಿದ್ದಲ್ಲಿ ಮೇಘ ಮಳೆ ಸುರಿಸುವುದಿಲ್ಲ” ಎಂದು. ಜನರು ಚಾತಕವನ್ನು ಪಾಪಿ ಎನ್ನುತ್ತಾರೆ. ಆದರೆ ಚಾತಕ ಪಾಪಿಯೂ ಅಲ್ಲ, ಮೇಘ ದುಷ್ಟನೂ ಅಲ್ಲ. ಅವೆರಡರ ನಡೆ ಲೋಕಕ್ಕೆ ಬಿತ್ತರಿಸುವ ಪ್ರೇಮಪಾಠವೆಂದು ತಿಳಿಯಬೇಕು.

ಹೀಗೇ ಒಂದು ಚಾತಕಕ್ಕೆ ತನ್ನ ಮರಣಾನಂತರ ಏನಾಗುತ್ತದೋ ಎಂಬ ಚಿಂತೆ. ತನ್ನ ಎಲುಬು ಸಾಧಾರಣ ನೀರಲ್ಲಿ ಬಿದ್ದರೆ ಗತಿ ಏನು ಎಂಬ ಅಳಲು. ಆ ಚಾತಕ ಪಕ್ಷಿಯನ್ನು ಬೇಡನೊಬ್ಬ ಗುರಿಯಿಟ್ಟು ಕೊಂದ. ಅದರ ದೇಹ ಹೋಗಿ ಗಂಗಾ ನದಿಯಲ್ಲಿ ಬಿದ್ದಿತು. ಮೃತ್ಯುಮುಖಿಯಾದಾಗಲೂ ಚಾತಕದ ಚಿಂತೆ ಏನು ಗೊತ್ತೆ? “ಗಂಗೆಯ ನೀರು ನನ್ನೊಳಗೆ ಸೇರಿಬಿಟ್ಟರೆ ನನ್ನ ಪ್ರೇಮಪ್ರತಿಜ್ಞೆ ಭಂಗವಾಗುತ್ತದೆ” ಎಂದು! ಆದ್ದರಿಂದಲೇ ಆ ಚಾತಕ ಪಕ್ಷಿ ಗಂಗೆಯ ನೀರು ಒಳಗೆ ಹೋಗದಂತೆ ತನ್ನ ಕೊಕ್ಕನ್ನು ಮೇಲ್ಮುಖವಾಗಿ ಇರಿಸಿಕೊಂಡು ಪ್ರಾಣೋತ್ಕ್ರಮಣ ಮಾಡಿತು ಎಂದು ಬರೆಯುತ್ತಾರೆ ತುಳಸೀದಾಸರು.

ಚಾತಕದ ಇನ್ನೊಂದು ಕಥೆ ಹೀಗಿದೆ.

ಚಾತಕ ಪಕ್ಷಿಯೊಂದರ ಮೊಟ್ಟೆಯೊಡೆದು ಮರಿ ಹೊರಗೆ ಬರುವ ಹೊತ್ತು… ಆ ಮೊಟ್ಟೆಯ ಕೋಶವು ನೀರಿನ ಸ್ಪರ್ಶದಲ್ಲಿರಬಾರದೆಂಬ ಉದ್ದೇಶದಿಂದ ತಾಯಿ ಅದನ್ನು ಮೇಲಕ್ಕೆಸೆಯುತ್ತದೆ. ಮರಿ ಚಾತಕ ಗಾಳಿಯಲ್ಲೆ ತೇಲುತ್ತಾ ತಾಯಿಯ ಉಪದೇಶ ಕೇಳುತ್ತದೆ. ತಾಯಿ ತನ್ನ ಪ್ರೇಮಪ್ರತಿಜ್ಞೆಯನ್ನು ತನ್ನ ಮರಿಗೆ ದಾಟಿಸುತ್ತದೆ. “ನಾನು ಯಾವಾಗ ಸತ್ತರೂ ಹೇಗೆ ಸತ್ತರೂ ಮೇಘದಿಂದ ಬಿದ್ದ ನೀರಿನಿಂದಲೇ ತರ್ಪಣ ಕೊಡಬೇಕು, ಬೇರೆ ಯಾವ ನೀರಿನಿಂದಲೂ ಕೊಡಬಾರದು” ಎಂದು ತಾಕೀತು ಮಾಡುತ್ತದೆ. ಅದಕ್ಕೆ ಸುರನದಿ ಗಂಗೆಗಿಂತ ತನ್ನ ಮೇಘ ಸುರಿಸುವ ಸ್ವಾತಿ ಹನಿ ಹೆಚ್ಚು ಪವಿತ್ರ! ಅದರ ಬಾಯಾರಿಕೆ ದೇಹದ್ದಲ್ಲ, ಪ್ರೇಮದ್ದು.

ಚಾತಕದ ಪ್ರೇಮ ನಿಷ್ಠೆ ಸಾರುವ ಇನ್ನೂ ಒಂದು ಕಥೆ ನೋಡೋಣ.  

ಬಿರು ಬೇಸಿಗೆಯ ಒಂದು ಮಧ್ಯಾಹ್ನ. ಚಾತಕವೊಂದು ವಿಪರೀತ ಬಳಲಿರುತ್ತದೆ. ಯಾವುದಾದರೂ ಮರದ ಕೆಳಗೆ ಆಶ್ರಯ ಪಡೆಯೋಣವೆಂದು ಯೋಚಿಸುತ್ತದೆ. ಆ ಯೋಚನೆಯ ಬೆನ್ನಿಗೇ, “ಎಲ್ಲ ಮರಗಳೂ ಮೇಘದಿಂದ ನೀರು ಪಡೆದು ಬೆಳೆಯುತ್ತವೆ. ಆದರೆ ಯಾವುದಕ್ಕೂ ಮೇಗದ ಮೇಲೆ ಪ್ರೇಮವಿಲ್ಲ. ಅಂಥಾ ಕೃತಘ್ನ ಮರಗಳ ನೆರಳು ನನಗೆ ಬೇಡ” ಎಂದು ಆಲೋಚಿಸುತ್ತದೆ. ಬಿಸಿಲಿಗೆ ಮೈಯೊಡ್ಡಿ ದಿನ ಕಳೆಯುತ್ತದೆ ಹೊರತು, ನೆರಳಿನಲ್ಲಿ ಕೂರಲು ನಿರಾಕರಿಸುತ್ತದೆ.

ಇದು ಚಾತಕದ ಪ್ರೀತಿ. ಇದು ಚಾತಕದ ಪ್ರೇಮ ನಿಷ್ಠೆ. ಚಾತಕ ಪಕ್ಷಿ ಗಂಡಾಗಿದ್ದರೂ ಹೆಣ್ಣಾಗಿದ್ದರೂ ಪ್ರೇಮದ ಪರಿಭಾವದಲ್ಲಿ ಅದು ಹೆಣ್ಣು, ಮೇಘ ಗಂಡು. ಸ್ತ್ರೈಣತೆ ಇದ್ದಲ್ಲಿ ಮಾತ್ರ ಪ್ರೇಮದ ಉತ್ಕಟತೆ ಅನುಭವಿಸಲು, ಅಭಿವ್ಯಕ್ತಪಡಿಸಲು ಸಾಧ್ಯ.

ಹಾಗೇ; ಚಾತಕದ ಈ ಪ್ರೇಮ, ಪರಮ ಪ್ರೇಮ. ಅದರ ಪ್ರೇಮಕಥೆಯೊಂದು ರೂಪಕ. ಮತ್ತು ಈ ರೂಪಕದಲ್ಲಿ ಮೇಘ ಪರಮಾತ್ಮ, ಚಾತಕ ಜೀವಾತ್ಮವೆಂದು ಪ್ರತ್ಯೇಕ ಹೇಳಬೇಕೆ!?

1 Comment

  1. ಚಾತಕ ಪಕ್ಷಿಯ ಬಗ್ಗೆ ಒಂದು ವೈಜ್ಞಾನಿಕ ಅಂಕಣವನ್ನು ಬರೆಯುತ್ತಿರುವೆ, ವಿಜ್ಞಾನದ ಜೊತೆಗೆ ಪುರಾಣ, ಕಾವ್ಯ, ನೀತಿ, ಆಧ್ಯಾತ್ಮದ ಸೊಗಡನ್ನು ಲೇಪಿಸುತ್ತಿರುವೆ. ನಿಮ್ಮ ಈ ಅಂಕಣ, ಚಾತಕ ಪಕ್ಷಿಯ ಬಗ್ಗೆ ಓದಿದ ಇತರ ಎಲ್ಲದಕ್ಕಿಂತಲ್ಲೂ ಭಿನ್ನವಾಗಿತ್ತು , ಸೊಗಸಾಗಿದೆ.

    ಋಗ್ವೇದದಿಂದ, ಕಾಳಿದಾಸನ ಮೇಘದೂತದ ಕಾವ್ಯದಿಂದ, ಇತ್ತೀಚಿಗಿನ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ವರೆಗೆ ಚಾತಕ ಪಕ್ಷಿಯ ಉಲ್ಲೇಖಿಸಿರುವುದರ ಬಗ್ಗೆ ಶೋಧಿಸುತ್ತಿದ್ದೇನೆ.

    ಪುರಾಣ ಮತ್ತು ಕಾವ್ಯಗಳಲ್ಲಿ ಈ ಚಾತಕ ಪಕ್ಷಿಯ ಉಲ್ಲೇಖಿಸಿದ ಬಗ್ಗೆ ಇನ್ನಷ್ಟು ಮಾಹಿತಿ ನೀವು ಕೊಡಲು ಸಾಧ್ಯವೇ?

    hareesha329as@gmail.com
    9739210339

Leave a Reply