ಮೌನವೊಂದು ಬೆಳಗುವ ಹಣತೆ ~ ಬಯಾಜಿದ್ ಬಸ್ತಮಿ

ಮಾತಿನ ಗದ್ದಲ ನಡೆಯುವಲ್ಲಿ ಮೌನವ ತಂದು ಪ್ರಶಾಂತವಾಗಿಸಬಹುದು. ಆದರೆ ಮೌನವೇ ತುಂಬಿರುವಲ್ಲಿ ಗದ್ದಲವೇ ಇರುವುದಿಲ್ಲ. ಅದಕ್ಕೆ ಬಯಾಜಿ಼ದ್ ಬಸ್ತಮಿ ಹೇಳುವುದು ‘ಮೌನದ ಹಣತೆಗಿಂತ ಪ್ರಖರವಾಗಿ ಬೆಳಗುವ ಹಣತೆಯನ್ನು ನಾನೆಲ್ಲೂ ಕಂಡಿಲ್ಲ’ ಎಂದು! ~ ಸಾಕಿ

IMG-20180531-WA0005.jpg

ಮಗೆಲ್ಲ ಮಾತಿನ ಚಟ. ನಮ್ಮನ್ನು ಸಮರ್ಥಿಸಿಕೊಳ್ಳುವ ಹಠ. ಆ ಮಾತಿನ ಭರಾಟೆಯಲ್ಲಿ ಮುಳುಗುವುದು ನಮ್ಮ ನೆಮ್ಮದಿ; ಆರುವುದು ನಮ್ಮೊಳಗಿನ ದೀಪ. ದೀಪವಾರಿದರೆ ಕುರುಡುತನ ನಮ್ಮನ್ನು ಆವರಿಸುವುದು. ಅಲ್ಲಿಗೆ ದುರಹಂಕಾರ ನಮ್ಮ ಬೆನ್ನು ಹತ್ತುವುದು. ಮುಂದೆ ನಾವು ಮಾಡಿದ್ದೆಲ್ಲ ಸರಿ, ಉಳಿದದ್ದೆಲ್ಲ ತಪ್ಪು, ನಮ್ಮ ಅಭಿಪ್ರಾಯವೇ ಅಂತಿಮ ಎಂದಾಗುತ್ತದೆ. ಸಂಬಂಧಗಳು ಬಿರುಕು ಬಿಡಲು ಇಷ್ಟು ಸಾಕು. ಮಾತಿನಿಂದಾಗಿ ಸಂಬಂಧಗಳು ಕಡಿಡುಕೊಂಡವು ಎಂದು ಗೊತ್ತಾಗುವ ಹೊತ್ತಿಗೆ ನಮ್ಮ ಮಾತಿನ ಹಣತೆ ಆರಿರುತ್ತದೆ. ಸುತ್ತ ಕಾರ್ಗತ್ತಲು ಕವಿದಿರುತ್ತದೆ. ಖಿನ್ನತೆ ನಮ್ಮ ಸಂಗಾತಿಯಾಗಿರುತ್ತದೆ.

ಈ ಕಾಲದಲ್ಲಿ ಗಾಳಿ ಬೀಸಿದರೆ ಹಣತೆ ಮಾತ್ರವಲ್ಲ ಎಲೆಕ್ಟ್ರಿಕ್ ದೀಪ ಕೂಡ ಆರುತ್ತದೆ, ಅಲ್ಲವೇ? ಇನ್ನು ಮಾತಿನ ಭರಾಟೆಯೆಂಬ ಗಾಳಿ ಬೀಸಿದರೆ ನೆಮ್ಮದಿಯೆಂಬ ಹಣತೆ ಉಳಿದೀತು ಹೇಗೆ? ಒಮ್ಮೆ ಮನೆಯಲ್ಲಿ ಅದೇನೋ ಜಗಳ ಎಂದಿಟ್ಟುಕೊಳ್ಳಿ. ಪರಸ್ಪರ ಪ್ರೀತಿಪಾತ್ರರೆಲ್ಲ ಯಾವುದೋ ವಿಚಾರಕ್ಕೆ ತೀವ್ರ ವಾಗ್ವಾದಕ್ಕೆ ಬಿದ್ದಿದ್ದಾರೆ. ಮಾತಿಗೆ ಮಾತು ಬೆಳೆದು ಪರಸ್ಪರ ಕೈ ಮಿಲಾಯಿಸುವ ತನಕ ಮುಟ್ಟುತ್ತದೆ. ಅಷ್ಟರಲ್ಲಿ ಮನೆಯ ಹಿರಿಯರು ಅಲ್ಲಿ ಪ್ರವೇಶಿಸುತ್ತಾರೆ. ಅವರು ಯಾವತ್ತೂ ಹೆಚ್ಚು ಮಾತಾಡುವವರಲ್ಲ. ಅವರು ಬಂದು ನಡುಮನೆಯಲ್ಲಿ ಸುಮ್ಮನೆ ಕೂತರೆ ಸಾಕು, ಆ ಜಗಳ ತನ್ನಿಂತಾನೆ ನಿಂತು ಬಿಡುತ್ತದೆ. ಕಾರಣ ಆ ಹಿರಿಯರ ಗಂಭೀರ ಮೌನ, ಆ ಮೌನಕ್ಕೆ ಮನೆಯ ಸದಸ್ಯರು ಕೊಡುವ ಗೌರವ.

ಮಾತಿನ ಗದ್ದಲ ನಡೆಯುವಲ್ಲಿ ಮೌನವ ತಂದು ಪ್ರಶಾಂತವಾಗಿಸಬಹುದು. ಆದರೆ ಮೌನವೇ ತುಂಬಿರುವಲ್ಲಿ ಗದ್ದಲವೇ ಇರುವುದಿಲ್ಲ. ಅದಕ್ಕೆ ಬಯಾಜಿ಼ದ್ ಬಸ್ತಮಿ ಹೇಳುವುದು ‘ಮೌನದ ಹಣತೆಗಿಂತ ಪ್ರಖರವಾಗಿ ಬೆಳಗುವ ಹಣತೆಯನ್ನು ನಾನೆಲ್ಲೂ ಕಂಡಿಲ್ಲ’ ಎಂದು. ಇಲ್ಲಿ ‘ಮಾತು ಬೆಳ್ಳಿ ಮೌನ ಬಂಗಾರ’ ಎಂಬ ನಮ್ಮ ನೆಲದ ನಾಣ್ನುಡಿಯೂ ನೆನಪಾದರೆ, ಮೌನಕ್ಕೆ ನಮ್ಮ ಹಿರಿಯರು ಮತ್ತು ದೂರದ ಪರ್ಶಿಯಾದ ಸೂಫಿಗಳು ಹೇಗೆ ಸಮಾನ ಗೌರವ ಕೊಟ್ಟಿದ್ದರು ಎಂದು ಅರಿವಾಗುತ್ತದೆ. ಮಾತಿನ ಭರಾಟೆಯ ಲೋಕದಲ್ಲಿ ಒಮ್ಮೆ ಮೌನಕ್ಕೆ ಶರಣಾಗಿ ನೋಡಿ. ನೆಮ್ಮದಿ ನಿಮ್ಮನ್ನು ಹುಡುಕಿ ಬರುವುದು.

Leave a Reply