ಕುರಾನ್ ಹೇಳುತ್ತದೆ…. : ಅರಳಿಮರ Poster

ಮೂಲತಃ ಧರ್ಮಗಳು ಬೋಧಿಸುವುದು ಬದುಕನ್ನು. ಮತ್ತು ಬದುಕು ಸಾಮರಸ್ಯದ ಮೊತ್ತ. ಹಾಗೆಯೇ ಕುರಾನ್ ಕೂಡಾ  “ನಿಮಗೆ ನಿಮ್ಮ ಧರ್ಮ, ನನಗೆ ನನ್ನ ಧರ್ಮ (109.6)” ಎನ್ನುವ ಮೂಲಕ  ಸಹಿಷ್ಣುತೆಯನ್ನು, ಸಾಮರಸ್ಯವನ್ನು ಬೋಧಿಸಿದೆ. 

kuran

“ಪ್ರತಿಯೊಬ್ಬನಿಗೂ ಒಂದು ನಿಯ, ಮತ್ತು ಮಾರ್ಗ ನೀಡಲಾಗಿದೆ. ದೇವರು ಇಷ್ಟಪಟ್ಟಿದ್ದರೆ ನಿಮ್ಮೆಲ್ಲರನ್ನೂ ಒಂದೇ ರೀತಿಯವರನ್ನಾಗಿ (ಒಂದೇ ಮಾರ್ಗಾವಲಂಬಿಗಳನ್ನಾಗಿ) ಮಾಡಬಹುದಿತ್ತು. ಆದರೆ ಅವನು ಬೇರೆ ರೀತಿಯಾಗಿಯೇ ಮಾಡಿರುವನು. ನಿಮಗೆ ಪ್ರತ್ಯೇಕವಾಗಿ ಯಾವುದನ್ನು ನೀಡಲಾಗಿದೆಯೋ ಅದೇ ಮಾರ್ಗದಲ್ಲಿಯೇ ನೀವು ಸತ್ಕಾರ್ಯದಲ್ಲಿ ಮುಂದುವರಿಯಬೇಕೆಂಬುದು ಅವನ ಇಚ್ಛೆ. ನೀವು ಭಗವಂತನೆಡೆಗೆ ಹೋಗಿ; ನಿಮಗೆ ಯಾವುದು ಸರಿಹೊಂದುವುದಿಲ್ಲವೋ ಅದರ ಕುರಿತಾಗಿ ಅವನೇ (ಭಗವಂತನೇ) ಹೇಳುತ್ತಾನೆ” ಅನ್ನುತ್ತದೆ ಕುರಾನ್ (5.48). 

ಮೂಲತಃ ಕುರಾನ್, “ಧರ್ಮದ ವಿಚಾರದಲ್ಲಿ ಬಲಾತ್ಕಾರ ಸಲ್ಲದು” ಎಂದೇ ಹೇಳುತ್ತದೆ. 

ಇಸ್ಲಾಮೀಯರ ನಾಡಿನಲ್ಲಿ ಜನಿಸಿದ, ಮೂಲತಃ ಮುಸ್ಲಿಮನಾಗಿದ್ದ ಸೂಫಿ ಜಲಾಲುದ್ದಿನ್ ರೂಮಿಯ ಸಾಲುಗಳೂ ಅದೇ ಅರ್ಥವನ್ನು ಧ್ವನಿಸುತ್ತವೆ. 

“ಭಗವಂತ ಹೇಳುತ್ತಾನೆ; ನಾನು ಪ್ರತಿಯೊಬ್ಬರಿಗೂ ಅವರವರಿಗೆ ವಿಶಿಷ್ಟವಾದ ಪೂಜಾವಿಧಾನ ನೀಡಿರುವೆ. ಪ್ರತಿಯೊಬ್ಬರಿಗೂ ಅವರದೇ ಆದ ಅಭಿವ್ಯಕ್ತಿ ನೀಡಿರುವೆ. ಹಿಂದೂಸ್ತಾನದ ಭಾಷಾ ವೈಶಿಷ್ಟ್ಯ ಹಿಂದೂಗಳಿಗೆ ಉತ್ತಮ. ಸಿಂಧೂ ದೇಶದ ಭಾಷಾ ವೈಶಿಷ್ಟ್ಯ ಆ ದೇಶದವರಿಗೆ ಉತ್ತಮ. ನಾನು ಭಾಷೆಯನ್ನಾಗಲೀ ನುಡಿಯನ್ನಾಗಲೀ ನೋಡುವುದಿಲ್ಲ. ನನಗೆ ಬೇಕಿರುವುದು ಆಂತರಿಕ ಭಾವನೆ ಮತ್ತು ಹೃದಯವಂತಿಕೆ.” ಎನ್ನುತ್ತಾನೆ ರೂಮಿ. 

ಪ್ರತಿಯೊಂದು ಧರ್ಮವೂ ಇಂತಹಾ ಒಳಗೊಳ್ಳುವಿಕೆಯ ಚಿಂತನೆಯನ್ನು ಒಳಗೊಂಡಿವೆ. ಈಗ ಅವೆಲ್ಲವನ್ನೂ ನೆನಪಿಸಿಕೊಂಡು ಸಾಮರಸ್ಯದ ಹಾದಿಯಲ್ಲಿ ನಡೆಯುವ ತುರ್ತು ಅಗತ್ಯವಿದೆ. 

Leave a Reply