ನಮಗೆ ನಾವೆ ಹೇಳಿಕೊಳ್ಳುವ 12 ಸುಳ್ಳುಗಳು! : ಮೊದಲ ಕಂತು ~ 1ರಿಂದ 3

ನಮಗೆ ನಾವೆ ಹೇಳಿಕೊಳ್ಳುವ ಸುಳ್ಳುಗಳು ಯಾವತ್ತೂ ಯಾವ ಕಾರಣಕ್ಕೂ ಒಳಿತನ್ನುಂಟು ಮಾಡುವುದಿಲ್ಲ. ಅವುಗಳಿಂದ ಕೆಡುಕು ಕಟ್ಟಿಟ್ಟ ಬುತ್ತಿ. ನಮಗೆ ನಾವೆ ಹೇಳಿಕೊಳ್ಳುವ ಸುಳ್ಳು ನಮ್ಮ ಬೆಳವಣಿಗೆಯ ಸಾಧ್ಯತೆಗಳನ್ನು ಕತ್ತರಿಸಿ  ಹಾಕುವ ಚಿನ್ನದ ಕತ್ತರಿ ~ ಅಲಾವಿಕಾ

mask

ಸುಳ್ಳು ಒಂದು ಥರದ ವ್ಯಸನ. ಅದೊಂಥರಾ ಆಯಾ ಕ್ಷಣವನ್ನು ತಳ್ಳಿ ಹಾಕುವ ನಶೆ. ಹೇಗೋ ಆ ಘಳಿಗೆ, ಆ ಘಟನೆಯನ್ನು ದಾಟಿಬಿಟ್ಟರೆ ಸಾಕೆಂದು ನಾವು ಧರಿಸುವ ಭ್ರಮೆಯ ರೆಕ್ಕೆ. ಇತರರಿಗೆ ಸುಳ್ಳು ಹೇಳುವುದು ಒಂದು ಥರವಾದರೆ, ನಮಗೆ ನಾವೇ ಹೇಳಿಕೊಳ್ಳು ಮತ್ತೊಂದು ಥರ. ಎರಡರ ಪರಿಣಾಮವೂ ನಕಾರಾತ್ಮಕವೇ. ಆದರೆ, ಕೆಲವೊಮ್ಮೆ ಇತರರಿಗೆ ಹೇಳುವ ಕೆಲವು ಸುಳ್ಳುಗಳು ಹೇಗೋ ಹಾರಿಹೋಗುತ್ತವೆ. ಅವು ನಿರುಪದ್ರವಿಯೂ ಕೆಲವೊಮ್ಮೆ ಸಹಾಯಕವೂ ಆಗಿಬಿಡುತ್ತದೆ! ಅವು ಸಹಾಯ ಮಾಡಿದಾಕ್ಷಣ ಅವೇನೂ ಒಳ್ಳೆಯವಲ್ಲ… ಆದರೂ ಅಪರಾಧವೇನಾಗುವುದಿಲ್ಲ, ಅವುಗಳಿಂದ ಅಪಾಯವೂ ಇಲ್ಲ.

ಆದರೆ, ನಮಗೆ ನಾವೆ ಹೇಳಿಕೊಳ್ಳುವ ಸುಳ್ಳುಗಳು ಯಾವತ್ತೂ ಯಾವ ಕಾರಣಕ್ಕೂ ಒಳಿತನ್ನುಂಟು ಮಾಡುವುದಿಲ್ಲ. ಅವುಗಳಿಂದ ಕೆಡುಕು ಕಟ್ಟಿಟ್ಟ ಬುತ್ತಿ. ನಮಗೆ ನಾವೆ ಹೇಳಿಕೊಳ್ಳುವ ಸುಳ್ಳು ನಮ್ಮ ಬೆಳವಣಿಗೆಯ ಸಾಧ್ಯತೆಗಳನ್ನು ಕತ್ತರಿಸಿ  ಹಾಕುವ ಚಿನ್ನದ ಕತ್ತರಿ. ನಮಗೆ ಅವು ಸುಳ್ಳೆಂದು ಗೊತ್ತಿದ್ದೂ ಅವುಗಳ ಕಣ್ಣಲ್ಲಿ ಕಣ್ಣಿಟ್ಟು ನೋಡದೆ ಮೇಲ್ಪದರದ ನಮ್ಮನ್ನು ನಂಬಿಸಿಕೊಳ್ಳುತ್ತಾ ಜೀವನ ಕಳೆದುಬಿಡುತ್ತೇವೆ. ಕೆಲವರು ಕೊನೆಗಾಲದಲ್ಲಿ ಅವನ್ನು ನೆನೆದು ಹಳಹಳಿಸುತ್ತಾರೆ. ಮತ್ತೆ ಕೆಲವರಿಗೆ ತಮಗೆ ತಾವೆ ಮಾಡಿಕೊಂಡ ನಷ್ಟಗಳನ್ನು ನೆನಯುವ ಧೈರ್ಯವೂ ಇರುವುದಿಲ್ಲ.

ನಾವೂ ನೀವೂ ಅಂತಹ ಕೆಲವು ಸುಳ್ಳುಗಳನ್ನು ನಮಗೆ ನಾವೆ ಹೇಳಿಕೊಂಡಿರುತ್ತೇವೆ. ಅವು ಅತ್ಯಂತ ಸಾಧಾರಣ ಸುಳ್ಳುಗಳು. ಆದರೆ ನಮ್ಮ ವಿಕಸನಕ್ಕೆ ಅಷ್ಟೇ ಹಾನಿಕಾರಕವಾಗಿರುವಂಥವು. ನಾವು ಜೀವನದಲ್ಲಿ ಏನಾಗಬಹುದಾಗಿದೆಯೋ ಅದನ್ನು ತಡೆಯುವಂಥವು. ವಿಕಸನಕ್ಕೆ ಹಾನಿಕರವಾದ ಸುಳ್ಳುಗಳಲ್ಲಿ ಕೆಲವನ್ನು ನೋಡೋಣ :

ಸುಳ್ಳು #1 : ನಾನು ಎಷ್ಟೆಲ್ಲ ತ್ಯಾಗ ಮಾಡಿದೆ!

ಇದು ಯಾವುದೇ ಮನುಷ್ಯ ತನಗೆ ತಾನೆ ಹೇಳಿಕೊಳ್ಳುವ ಬಹಳ ದೊಡ್ಡ ಸುಳ್ಳು. ಯಾವ ವ್ಯಕ್ತಿ ತಾನು ಮಾಡಿದ ತ್ಯಾಗವನ್ನು ಹೇಳಿಕೊಳ್ಳುತ್ಥಾನೋ/ಳೋ ಅವರು ಮಾಡಿದ್ದು ತ್ಯಾಗವಾಗಿ ಉಳಿಯುವುದಿಲ್ಲ. “ತ್ಯಾಗ ಮಾಡಿದೆ” ಅನ್ನುವ ಹಳಹಳಿಕೆ ಹೊಮ್ಮುವುದೇ ತನಗೆ ಸಿಗಬೇಕಿದ್ದ ಪ್ರತಿಫಲ ಸಿಗಲಿಲ್ಲ ಅನ್ನುವ ಬೇಸರದಿಂದ. ಪ್ರತಿಫಲಾಪೇಕ್ಷೆಯಿಂದ ಮಾಡಿದ ಯಾವುದಾದರೂ ‘ತ್ಯಾಗ’ವೆಂದು ಕರೆಸಿಕೊಳ್ಳೋದು ಹೇಗೆ?

ಪದೇಪದೇ “ನಾನು ತ್ಯಾಗ ಮಾಡಿದೆ” ಎಂದು ನಿಮಗೆ ನೀವೇ ಹೇಳಿಕೊಳ್ಳುವ ಮೂಲಕ ನೀವು ಮಹಾತ್ಮರೆಂದು ನಿಮ್ಮನ್ನು ನಂಬಿಸಿಕೊಳ್ಳುತ್ತಿದ್ದೀರಿ. ವಾಸ್ತವದಲ್ಲಿ ನೀವು ತ್ಯಾಗಿಯೇನಲ್ಲ. ಪ್ರತಿಫಲ ಬಯಸಿ ಏನನ್ನೋ ಮಾಡಿದ್ದೀರಿ, ಅದು ನಿಮಗೆ ದೊರೆಯಲಿಲ್ಲ, ಅಷ್ಟೆ. ಅದು ಯಾಕೆ ದೊರೆಯಲಿಲ್ಲ, ಅದನ್ನು ಪಡೆಯಲು ಬೇರೇನು ಮಾಡಬೇಕಿತ್ತು? ಅಥವಾ ಪ್ರತಿಫಲ ಸ್ವೀಕರಿಸುವಲ್ಲಿ ನನ್ನ ಕಡೆಯಿಂದಲೇ ತಪ್ಪಾಗಿದೆಯೇ? ಪ್ರತಿಫಲವನ್ನು ನಾನು ಗುರುತಿಸಲಿಲ್ಲವೆ? – ಇತ್ಯಾದಿ ಪ್ರಶ್ನೆಗಳನ್ನು ನಮಗೆ ನೀವೆ ಕೇಳಿಕೊಳ್ಳಬೇಕಾಗುತ್ತದೆ. ಆದರೆ ನೀವೊಬ್ಬ ತ್ಯಾಗಿ ಎಂದು ನಿಮಗೆ ನೀವೆ ಹೇಳಿಕೊಂಡ ಸುಳ್ಳು, ನಿಮ್ಮನ್ನು ಈ ಎಲ್ಲ ವೀಶ್ಲೇಷಣೆಯಿಂದ ದೂರವಿಡುತ್ತದೆ. ನಿಮ್ಮ ಬಯಕೆಯ ಫಲ ಪಡೆಯಲು ಅನುಸರಿಸಬಹುದಾಗಿದ್ದ ಮತ್ತೊಂದು ಮಾರ್ಗದ ಬಾಗಿಲನ್ನೂ ಶಾಶ್ವತವಾಗಿ ಮುಚ್ಚಿಹಾಕುತ್ತದೆ.

ಸುಳ್ಳು #2 :  ನಾನು ಒಬ್ಬಂಟಿ

ಈ ಸುಳ್ಳು ನಮ್ಮ ಮನಸ್ಸನ್ನು ಹಾಳುಗೆಡವಿ, ನಮ್ಮನ್ನು ವಿಕ್ಷಿಪ್ತರನ್ನಾಗಿಸಲು ಸಾಕಷ್ಟಾಯಿತು. ಇಡೀ ಜಗತ್ತಿನ ಪ್ರತಿಯೊಂದು ಜಡ ಚೇತನವೂ ಪರಸ್ಪರ ಅಂತಸ್ಸಂಬಂಧ ಹೊಂದಿರುವಾಗ ನಾವು ಅದುಹೇಗೆ ತಾನೆ ಒಮಟಿಯಾಗಿರಬಲ್ಲೆವು?

ಆದರೆ ನಮಗೆ ನೊಂದುಕೊಳ್ಳಲು ಇಷ್ಟ. ಯಾತನೆಪಡಲು ಇಷ್ಟ. ಸ್ವಾನುಕಂಪ ಇಷ್ಟ. ಮಾತ್ರವಲ್ಲ, ಮತ್ತೊಬ್ಬರಿಂದ ‘ಪಾಪ’ ಅನ್ನಿಸಿಕೊಳ್ಳಲೂ ಇಷ್ಟ!

ಆದ್ದರಿಂದಲೇ ಸದಾ ಕಾಲ ‘ನಾನು ಒಂಟಿ … ನಾನು ಒಂಟಿ…’ ಅನ್ನುತ್ತ ನಮಗೆ ನಾವೆ ಮೋಸ ಮಾಡಿಕೊಳ್ಳುತ್ತ ಇರುತ್ತೇವೆ. ದಾರಿಹೋಕ ಮಗುವಿನತ್ತ ಒಂದು ಮುಗುಳ್ನಗೆ ಬೀರಿದ ಮಾತ್ರಕ್ಕೆ ಕಳೆಯುವ ಒಂಟಿತನ, ಕೈದೋಟದ ಹೂವನ್ನು ನೇವರಿಸಿದ ಕೂಡಲೇ ಮಾಯವಾಗುವ ಒಂಟಿತನ, ಗೇಟಿನೆದುರು ಬಾಲವಾಡಿಸುವ ನಾಯಿಗೆ ಬಿಸ್ಕಿಟ್ ತಿನಿಸುವಾಗ ಕರಗಿಹೋಗುವ ಒಂಟಿತನ; ನಮ್ಮನ್ನು ನಿಜಕ್ಕೂ ಕಾಡಬಲ್ಲದೆ? ಅಷ್ಟು ದುರ್ಬಲವಾದ ಒಂಟಿತನಕ್ಕೆ ನಾವು ವಿಷಾದದ ಕಸುವು ನೀಡಿ ನಮ್ಮ ಜೀವನೋತ್ಸಾಹವನ್ನೆ ಕಸಿಯುವಂತೆ ಪೋಷಿಸಿ ಬೆಳೆಸೋದು ಯಾಕೆ?

ಸಾಕು. ಇನ್ನಾದರೂ ಸುಳ್ಳು ಹೇಳಿಕೊಳ್ಳುವುದು ನಿಲ್ಲಿಸಿ. ನಿಮಗೆ ನೀವು ಒಂಟಿಯಲ್ಲ ಅನ್ನೋದು ಗೊತ್ತಿದೆ. ಬಾಗಿಲು ತೆರೆದರೆ ಜಗತ್ತಿದೆ. ನಿಮ್ಮ ಕಣ್ಣೋಟದಲ್ಲಿ ಒಂಟಿತನ ಕೊನೆಯಾಗುತ್ತದೆ. ಒಂಟಿತನ ಒಂದು ಅವಸ್ಥೆಯಲ್ಲ… ಅದೊಂದು ಮನಸ್ಥಿತಿ. ಈ ಮನಸ್ಥಿತಿ. ಅದನ್ನು ಭ್ರಮಿಸುತ್ತಿರುವವರು ನೀವೇ ಆದ್ದರಿಂದ, ಅದನ್ನು ಹೋಗಲಾಡಿಸಬೇಕಾದವರೂ ನೀವೇ. ಇಲ್ಲವಾದರೆ, ನಿಮ್ಮ ಒಂಟಿತನದ ಜಪ, ಕೊನೆಗೆ ಖುದ್ದು ನೀವೂ ನಿಮ್ಮೊಡನೆ ಇರಲಾರದಂಥ ಪರಿಸ್ಥಿತಿಗೆ ನಿಮ್ಮನ್ನ ದೂಡಿಬಿಡುತ್ತದೆ.  

ಸುಳ್ಳು #3: ದುಡಿಮೆ ಸಾಕಾಗೋದಿಲ್ಲ

ಎಲ್ಲಿಯವರೆಗೆ ದಿನಕ್ಕೊಂದು ಲೋಟ ನೀರು, ಒಂದು ಮುಷ್ಟಿ ಅನ್ನ ನಾವು ದುಡಿಯಬಲ್ಲೆವೋ, ಅಲ್ಲಿಯವರೆಗೆ ದುಡಿಮೆ ಸಾಕಾಗುವುದಿಲ್ಲ ಅನ್ನುವ ಸುಳ್ಳಿಗೆ ಬೆಲೆಯೇ ಇಲ್ಲ!
ದುಡಿಮೆ ಸಾಕಾಗುತ್ತದೆ. ಆದರೆ ನೀವು ಹೆಚ್ಚು ಖರ್ಚು ಮಾಡುತ್ತಿದ್ದೀರಿ… ಆದರೆ ನಿಮಗೆ ಖರ್ಚಿನ ವಿಷಯ ಚಿಂತಿಸಲು ಮನಸಿಲ್ಲ. ಅದನ್ನು ನೀವು ಬಿಡಲಾರಿರಿ. ಅದಕ್ಕೆ ಬದಲಾಗಿ, ‘ದುಡಿಮೆಯೇ ಸಾಲುತ್ತಿಲ್ಲ’ ಎಂಬ ಸುಳ್ಳಿನ ಮೊರೆ ಹೋಗುತ್ತೀರಿ. ಅದಕ್ಕಾಗೇ ಹೆಚ್ಚುವರಿ ದುಡಿಮೆ, ಡಬಲ್ ಶಿಫ್ಟ್ ಕೆಲಸ, ಕೆಲವೊಮ್ಮೆ ವಂಚನೆ, ಅಪರಾಧ ಇತ್ಯಾದಿ… ಈ ಎಲ್ಲಕ್ಕೂ ‘ದುಡಿಮೆ ಸಾಲದು’ ಅನ್ನುವ ಸುಳ್ಳೇ ಕಾರಣ.

ದುಡಿಮೆ ಯಾವುದಕ್ಕೆ ಸಾಲದು? ಮರ್ಯಾದೆಯ ಬದುಕು ನಡೆಸಲಿಕ್ಕೇ? ಈ ಮರ್ಯಾದೆ ಆಸ್ತಿಯಲ್ಲಾಗಲೀ ಹಣದಲ್ಲಾಗಲೀ ಇರುತ್ತದೆಯೇ? ಮನೆ ತುಂಬ ತುಂಬಿಕೊಂಡ ಗ್ಯಜೆಟ್, ವಾಹನಗಳು, ಹೋಟೆಲ್ ಬಿಲ್’ಗಳಲ್ಲಿ ಇರುತ್ತದೆಯೇ? ಸ್ವಸ್ಥ ಬದುಕಿಗೆ ಎಷ್ಟು ಬೇಕೋ ಅಷ್ಟು ದುಡಿಯುತ್ತಾ ಇರುವವರು ‘ದುಡಿಮೆ ಸಾಲದು’ ಎಂದು ತಮ್ಮನ್ನು ತಾವು ನಂಬಿಸಿಕೊಂಡಾಗಲೇ ಆರ್ಥಿಕ ಅಪರಾಧಗಳು ಆರಂಭವಾಗುವುದು. ಅದರ ಪ್ರಮಾಣ ಚಿಕ್ಕದಿರಲಿ ಅತವಾ ದೊಡ್ಡದು. ಹಾಗೇ ಅನಗತ್ಯ ಹೆಚ್ಚುವರಿ ದುಡಿಮೆ, ಆ ಮೂಲಕ ವರ್ತಮಾನದ ಸುಖ ಕಳೆದುಕೊಳ್ಳುವುದೂ ಇದೇ ಸುಳ್ಳಿನಿಂದಲೇ. ನೀವು ಸರಳ ಸುಂದರ ಬದುಕು ನಡೆಸುವ ಸಾಧ್ಯತೆ ಕಳೆದುಕೊಳ್ಳುವುದೂ ಈ ಸುಳ್ಳಿನ ಕಣ್ಕಟ್ಟಿನಿಂದಲೇ.

(ಮುಂದುವರೆಯುವುದು….)

Leave a Reply