ಅಹಂಕಾರದ ತೆರೆ ಸರಿಸಿದರೆ ಸಿಗುವುದು ಆನಂದ

ನಮ್ಮೊಳಗಿನ ಆನಂದವನ್ನು ಹೊರಗೆ ತರಬೇಕೆಂದರೆ ಮೊದಲು ಅದರ ಇರುವನ್ನು ಅರಿತುಕೊಳ್ಳಬೇಕು. ಈ ಅರಿವು ಸಾಧ್ಯವಾಗುವುದು ಅಹಂಕಾರದ ತೆರೆ ಸರಿದಾಗ ಮಾತ್ರ. ಅಹಂಕಾರದ ಮುಸುಕಿನಿಂದ ಈಚೆ ಬಂದರೆ ನಮ್ಮೆಲ್ಲ ಒಳಿತು ಕೆಡುಕುಗಳಿಗೂ ನಾವೇ ಬಾಧ್ಯಸ್ಥರು ಎನ್ನುವ ಅರಿವು ಮೂಡುತ್ತದೆ ~ ಆನಂದಪೂರ್ಣ

ಮನುಷ್ಯ ತನ್ನ ಅಸ್ತಿತ್ವವನ್ನು ಖಾತ್ರಿಪಡಿಸಿಕೊಳ್ಳುವುದೇ ಅಹಂಕಾರದಿಂದ. ಒಂದು ದಿನ ತಾನು ಅವಜ್ಞೆಗೆ ಒಳಗಾದೆ, ಯಾರೂ ನನ್ನನ್ನು ಗಮನಿಸುತ್ತಿಲ್ಲ ಎಂದು ಅನ್ನಿಸಿದರೂ ಸಾಕು ತೀವ್ರ ಚಡಪಡಿಸಿಹೋಗುತ್ತಾನೆ. ಜನರ ಗಮನ ಸೆಳೆಯಲು ತಂತ್ರಗಳನ್ನು ಹೂಡುತ್ತಾನೆ. ಇದು ಅತಿರೇಕಕ್ಕೆ ಹೋದಾಗಲೇ ಅಪರಾಧಗಳು ಸಂಭವಿಸುವುದು. ತನ್ನ ಅಹಂಕಾರ ತೃಪ್ತಿಗಾಗಿ ವ್ಯಕ್ತಿಯು ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ಹೊರಡುತ್ತಾನೆ. ಇತರರೆದುರು ಅದನ್ನು ಮಾಡಲಾಗದೆ ಹೋದಾಗ ತನ್ನ್ನನ್ನು ತಾನೇ ತೃಪ್ತಿಪಡಿಸಿಕೊಳ್ಳಲು ಹೊರಡುತ್ತಾನೆ. ಎಲ್ಲ ವಿಕೃತಿಗಳ ಬೀಜ ಮೊಳೆಯುವುದು ಈ ಘಳಿಗೆಯಲ್ಲೇ.

ಪರಮಹಂಸರು ಹೇಳುತ್ತಾರೆ, `ಕೊಡುತ್ತೇನೆ. ಇತರರಿಗೆ ಸಹಾಯ ಮಾಡುತ್ತೇನೆ ಅನ್ನುವ ಭಾವನೆಯನ್ನು ತೊಲಗಿಸಿ ಹಾಕು. ಇದರಿಂದ ಅಹಂಕಾರ ಹುಟ್ಟುವುದು. ಅಹಂಕಾರವೇ ಉಳಿದೆಲ್ಲ ಅನಾಹುತಕ್ಕೆ ಮೂಲ’ ಎಂದು. ಈ ಅನ್ನಿಸಿಕೆಯ ಜೊತೆಗೇ ನಮ್ಮ ಉಪಕಾರಕ್ಕೆ ಅವರು ಋಣಿಯಾಗಿರಬೇಕು ಎನ್ನುವ ನಿರೀಕ್ಷೆ ಬೆಳೆಸಿಕೊಳ್ತೇವೆ. ತಾಯ್ತಂದೆಯರು ಮಗುವಿಗೆ ಜನ್ಮ ನೀಡುತ್ತಾರೆ. ಅದನ್ನೊಂದು ಉಪಕಾರ ಎಂದು ಭಾವಿಸುವುದರಿಂದಲೇ ಪ್ರತ್ಯುಪಕಾರವನ್ನು ಅಪೇಕ್ಷಿಸತೊಡಗುತ್ತಾರೆ. ಅದಕ್ಕೆ `ಕರ್ತವ್ಯ’ದ ಪಟ್ಟಿ ಹಚ್ಚಲಾಗುತ್ತದೆ. ಮಕ್ಕಳೂ ಅಷ್ಟೆ. ತಾವು ಹುಟ್ಟೇ, ತಮ್ಮ ಅಸ್ತಿತ್ವವೇ ತಾಯ್ತಂದೆಯರಿಗೆ ತಾವು ಮಾಡಿರುವ ಮಹದುಪಕಾರ ಎಂದು ಭಾವಿಸುತ್ತಾರೆ. ಆದ್ದರಿಂದ ಅವರದೆಲ್ಲವೂ ತಮ್ಮ `ಹಕ್ಕು’ ಎಂದು ತಿಳಿದು ಚಲಾವಣೆಗೆ ತೊಡಗುತ್ತಾರೆ. ಇದು ಕೂಡಾ ಅಹಂಕಾರದ ಉತ್ಪನ್ನವೇ. ಇದರಿಂದ ಕುಟುಂಬದಲ್ಲಿ ಅಶಾಂತಿ ಉಂಟಾಗುತ್ತದೆ. 

ಇಷ್ಟು ಸಾಲದೆಂಬಂತೆ, ಮತ್ತೊಬ್ಬರ ಅಭಿಪ್ರಾಯಗಳನ್ನು ನಮ್ಮೊಳಗೆ ನಾವೆ ರೂಪಿಸಿಕೊಳ್ಳುತ್ತಾ ಅದಕ್ಕೆ ಸ್ಪಂದಿಸುತ್ತಾ ಮನಸ್ಸನ್ನು ಕದಡಿಕೊಳ್ಳುತ್ತೇವೆ. ಇದರಿಂದಲೂ ಅಶಾಂತಿಯೇ ಉಂಟಾಗುವುದು. ವಾಸ್ತವವಾಗಿ ಕೊಳದ ನೀರು ನೆಲದ ಕಂಪನದಿಂದಲೋ ಗಾಳಿಯ ನೇವರಿಕೆಯಿಂದಲೋ ಕಲಕಿ ರಾಡಿಯಾಗುತ್ತ ಇರುತ್ತದೆ. ನಾವು ಮಾತ್ರ ಯಾರೋ ಹೊರಗಿನಿಂದ ಕಲ್ಲೆಸೆಯುತ್ತ ಇದ್ದಾರೆಂದು ದೂರುತ್ತೇವೆ. ಸಮಸ್ಯೆಯ ಮೂಲ ನಮ್ಮೊಳಗೇ ಇದೆ ಎಂಬುದನ್ನು ಕಂಡುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಜನರಿಗೆ ಇತರರತ್ತ ಬೆಟ್ಟು ಮಾಡುವುದೆಂದರೆ ವಿಪರೀತ ಖುಷಿ. ಹೀಗೆ ಮಾಡುವ ಮೂಲಕ ಅವರು ತಮ್ಮನ್ನು ತಾವು ಸರಿ ಪಡಿಸಿಕೊಳ್ಳುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ದೂರುವ ಮನಸ್ಥಿತಿಯ ಹಿಂದೆ ಇರುವುದು ಇಂಥಾ ಎಸ್ಕೇಪಿಸ್ಟ್ ಮನೋಭಾವವೇ.

ನಮ್ಮೊಳಗಿನ ಆನಂದವನ್ನು ಹೊರಗೆ ತರಬೇಕೆಂದರೆ ಮೊದಲು ಅದರ ಇರುವನ್ನು ಅರಿತುಕೊಳ್ಳಬೇಕು. ಈ ಅರಿವು ಸಾಧ್ಯವಾಗುವುದು ಅಹಂಕಾರದ ತೆರೆ ಸರಿದಾಗ ಮಾತ್ರ. ಅಹಂಕಾರದ ಮುಸುಕಿನಿಂದ ಈಚೆ ಬಂದರೆ ನಮ್ಮೆಲ್ಲ ಒಳಿತು ಕೆಡುಕುಗಳಿಗೂ ನಾವೇ ಬಾಧ್ಯಸ್ಥರು ಎನ್ನುವ ಅರಿವು ಮೂಡುತ್ತದೆ. ಇದರ ಜೊತೆಗೇ ನಮ್ಮ ನಮ್ಮ ಸುಖದುಃಖಗಳಿಗೂ ನಾವೇ ಜವಾಬ್ದಾರರೆಂಬುದು ಮನದಟ್ಟಾಗಿ, ಸದಾ ಸಂತಸದಿಂದ ಇರುವ ಆತ್ಮದ ಸಹಜ ಸ್ವಭಾವವು ಪ್ರಕಟಗೊಳ್ಳುತ್ತದೆ. ಆದ್ದರಿಂದ ಮೊದಲು ನಮಗೇನು ಬೇಕು ಅನ್ನುವುದನ್ನು ನಾವು ಖಾತ್ರಿಪಡಿಸಿಕೊಳ್ಳಬೇಕು. ಸಂತಸದಿಂದಿರುವುದೇ ನಮ್ಮ ನೈಜ ಸ್ವಭಾವ ಎಂದು ಅರಿತುಕೊಳ್ಳಬೇಕು. ವ್ಯಕ್ತಿಯೊಬ್ಬ ಸುಲಭವಾಗಿ ಸಂತೋಷದಿಂದ ಇರುವಂತಾಗಲು ಇರುವ ಮಾರ್ಗ ಇದೊಂದೇ.

Leave a Reply