ಒಮ್ಮೆ ಉನ್’ಲುಕುಲು ದೇವರು ದೇವಲೋಕದಿಂದ ಎದ್ದು ಬಂದು, ಮನುಷ್ಯರನ್ನೂ, ಪ್ರಾಣಿಗಳನ್ನೂ, ಹಾವು, ಮೀನು, ಪಕ್ಷಿ ಇತ್ಯಾದಿಗಳನ್ನೂ ಸೃಷ್ಟಿ ಮಾಡಿದ. ಆಮೇಲೆ ಗೋಸುಂಬೆಯನ್ನು ಕರೆದು, “ಹೋಗು! ಮನುಷ್ಯರ ಬಳಿ ಹೋಗಿ ನಿಮಗೆ ಸಾವಿಲ್ಲ ಎಂದು ತಿಳಿಸು” ಅಂತ ಆದೇಶ ನೀಡಿದ.
ಗೋಸುಂಬೆ ಹೊರಟಿತು. ಅದರ ನಡಿಗೆ ನಿಧಾನ. ಹೆಚ್ಚೂಕಡಿಮೆ ತೆವಳಿದಂತೆ ಸಾಗುತ್ತಾ, ದಾರಿಯಲ್ಲಿ ಹಸಿವಾಗಿ ಬಕ್ವೆಬೆಜೇನ್ ಎಂಬ ಗಿಡವನ್ನು ತಿನ್ನುತ್ತಾ ಕುಳಿತುಕೊಂಡಿತು.
ಗೋಸುಂಬೆ ಹೋಗಿ ಬಹಳ ಕಾಲವಾದ್ದರಿಂದ, ದೇವರು ಕಪ್ಪೆಯನ್ನು ಕರೆದು, “ಹೋಗು! ಮನುಷ್ಯರ ಬಳಿ ಹೋಗಿ ನಿಮಗೂ ಸಾವಿದೆ ಎಂದು ತಿಳಿಸು” ಅಂತ ಆದೇಶ ನೀಡಿದ.
ಇಬ್ಬರಲ್ಲಿ ಯಾರ ಸಂದೇಶ ಮೊದಲು ಮನುಷ್ಯರನ್ನು ತಲುಪುತ್ತದೆಯೋ ಅದರಂತೆ ಮನುಷ್ಯರ ಹಣೆಬರಹ ನಿರ್ಧಾರವಾಗಲಿದೆ ಎಂದು ದೇವರು ನಿಶ್ಚಯಿಸಿದ್ದ.
ಕಪ್ಪೆ ಕುಪ್ಪಳಿಸುತ್ತಾ ಗೋಸುಂಬೆಗಿಂತ ಮುಂಚೆ ಮನುಷ್ಯರನ್ನು ಮುಟ್ಟಿ ಸಂದೇಶ ತಲುಪಿಸಿತು. ಮನುಷ್ಯರ ಸಾವು ನಿಕ್ಕಿಯಾಗಿದ್ದು ಹೀಗೆ.
ಆದ್ದರಿಂದಲೇ ಝುಲು ಜನರು ಕಪ್ಪೆಯನ್ನೂ ಬಕ್ವೆಬೆಜೇನ್ ಗಿಡವನ್ನೂ ದ್ವೇಷಿಸುತ್ತಾರೆ. ಮತ್ತೆ, ಗೋಸುಂಬೆಯನ್ನು ಮಹಾ ಸೋಮಾರಿ ಎಂದು ಹಿಡಿ ಶಾಪ ಹಾಕುತ್ತಾರೆ!
(ಸಂಗ್ರಹ ಮತ್ತು ಅನುವಾದ : ಅಲಾವಿಕಾ)