ಪೆಟ್ಟು ತಿಂದ ಬಸ್ತಮಿ, ಕುಡುಕನಿಗೆ ಮಿಠಾಯಿ ಕಳಿಸಿದ್ದೇಕೆ? : Tea time story

ದಾರಿಯಲ್ಲಿ ಸಿಕ್ಕ ಕುಡುಕ ರಕ್ತ ಸೋರುವಂತೆ ಬಸ್ತಮಿಯ ತಲೆ ಮೇಲೆ ಹೊಡೆದರೂ, ಬಸ್ತಮಿ ಮರುದಿನ ಅವನಿಗೆ ಬುಟ್ಟಿ ತುಂಬ ಮಿಠಾಯಿ ಕಳಿಸುತ್ತಾನೆ. ಅವನು ಹಾಗೇಕೆ ಮಾಡಿದ? ಅದರ ಪರಿಣಾಮವೇನಾಯ್ತು…!?

ಒಮ್ಮೆ ಬಯಾಜಿದ್ ಬಸ್ತಮಿ ರಸ್ತೆಯಲ್ಲಿ ಒಂಟಿಯಾಗಿ ಬರುತ್ತಿದ್ದ. ನಡುರಾತ್ರಿ ಮೀರುತ್ತಿತ್ತು. ಅಲ್ಲೊಬ್ಬ ಕುಡುಕ ತಂತಿವಾದ್ಯವನ್ನು ಮೀಟುತ್ತಾ ಎತ್ತರಿಸಿದ ಅಪಸ್ವರದಲ್ಲಿ ಹಾಡುತ್ತ ಕುಳಿತಿದ್ದ. ರಸ್ತೆಯಲ್ಲಿ ಯಾರು ಕಂಡರೂ ಹಾಡು ನಿಲ್ಲಿಸಿ ವಾಚಾಮಗೋಚರ ಬೈಯುತ್ತಿದ್ದ.

ಕುಡುಕನ ವರ್ತನೆ ಕಂಡು ಬಸ್ತಮಿ ಅವನಿಗೆ ಸಮಾಧಾನದಿಂದ ಬುದ್ಧಿ ಹೇಳಿದ. “ನೋಡು, ನಡುರಸ್ತೆಯಲ್ಲಿ ಹೀಗೆಲ್ಲ ಮಾಡುವುದು ಸರಿಯಲ್ಲ. ನಿನ್ನ ಮನೆ ಎಲ್ಲಿದೆ ಹೇಳು, ನಾನೇ ಬಿಟ್ಟುಬರುತ್ತೇನೆ” ಅಂದ.

ಬಸ್ತಮಿಯ ಮಾತು ಕುಡುಕನಿಗೆ ಸಿಟ್ಟು ತರಿಸಿತು. ಬಾಯಿಗೆ ಬಂದ ಹಾಗೆ ನಿಂದಿಸಿ, ತನ್ನ ವಾದ್ಯವನ್ನು ಬಸ್ತಮಿಯ ತಲೆ ಮೇಲೆ ಎತ್ತಿ ಕುಕ್ಕಿದ. ವಾದ್ಯ ಒಡೆದು, ಬಸ್ತಮಿಯ ತಲೆಗೆ ವಿಪರೀತ ಏಟಾಗಿ ರಕ್ತ ಚಿಲ್ಲೆಂದು ಹರಿಯತೊಡಗಿತು. ಅತ್ತ ವಾದ್ಯವೂ ತಂತಿ ಹರಿದು ಚೂರಾಗಿ ನೆಲಕ್ಕೆ ಬಿತ್ತು.

ಬಸ್ತಮಿ ಪ್ರತಿಕ್ರಿಯೆ ನೀಡಲಿಲ್ಲ. ತನ್ನ ಪಾಡಿಗೆ ರಕ್ತ ಹರಿಯದಂತೆ ತಲೆಯನ್ನು ಒತ್ತಿ ಹಿಡಿದುಕೊಂಡು ಮನೆಗೆ ಬಂದ. ಕುಡುಕ ಬಸ್ತಮಿ ರಸ್ತೆ ತುದಿಯಲ್ಲಿ ಮರೆಯಾಗುವವರೆಗೂ ಬೈಯುತ್ತಲೇ ನಿಂತಿದ್ದ.

ಬೆಳಗಾಯಿತು. ಬಸ್ತಮಿ ತನ್ನೊಬ್ಬ ಸೇವಕನನ್ನು ಕರೆದು, ಒಂದು ಬುಟ್ಟಿ ಮಿಠಾಯಿಯನ್ನೂ ಕೆಲವು ನಾಣ್ಯಗಳನ್ನೂ ಕೊಟ್ಟ. “ನೋಡು, ಆ ರಸ್ತೆಯಲ್ಲೊಬ್ಬ ಕುಡುಕನಿದ್ದಾನೆ. ಅವನಿಗೆ ಇವನ್ನು ಕೊಟ್ಟು ಬಾ. ನೆನ್ನೆ ರಾತ್ರಿ ನಿನ್ನ ವಾದ್ಯ ಬಸ್ತಮಿಯ ತಲೆಗೆ ತಗುಲಿ ಚೂರಾಯಿತೆಂದೂ, ಈ ಹಣದಿಂದ ಹೊಸ ವಾದ್ಯ ಕೊಳ್ಳಬೇಕೆಂದೂ ಹೇಳು. ಮತ್ತೆ, ನೆನ್ನೆ ಅವನು ನನ್ನನ್ನು ವಾಚಾಮಗೋಚರ ನಿಂದಿಸಿದ್ದರಿಂದ ಆತನ ನಾಲಿಗೆ ಕಹಿಯಾಗಿರಬಹುದು, ಆದ್ದರಿಂದ ಈ ಮಿಠಾಯಿ ತಿಂದು ಸಿಹಿ ಮಾಡಿಕೊಳ್ಳಲು ಹೇಳು” ಅಂದ.

ಬಸ್ತಮಿಯ ಸೇವಕ ತಂದ ಹಣ ಮತ್ತು ಮಿಠಾಯಿಗಳನ್ನು ನೋಡಿ ಕುಡುಕನಿಗೆ ಮಾತೇ ಹೊರಡದಾಯಿತು. ತನ್ನ ವರ್ತನೆಯ ಬಗ್ಗೆ ನಾಚಿಕೆಯಾಗಿ ಪಶ್ಚಾತ್ತಾಪ ಮೂಡಿತು. ಅದೇ ಸೇವಕನೊಡನೆ ಬಸ್ತಮಿಯ ಬಳಿ ಬಂದು, ಅವನ ಕಾಲಿಗೆ ಬಿದ್ದು ಕ್ಷಮೆ ಕೋರಿದ.

ಮುಂದೆಂದೂ ಅವನು ಹಾಗೆಲ್ಲ ಕುಡಿದು ಅಸಭ್ಯವಾಗಿ ವರ್ತಿಸಲಿಲ್ಲ ಎಂದು ಜನರು ಬಸ್ತಮಿಯ ಕರುಣೆಯನ್ನು ಪ್ರೀತಿಯಿಂದ ನೆನೆಯುತ್ತಾರೆ.

(ಸಂಗ್ರಹ ಮತ್ತು ಅನುವಾದ : ಅಲಾವಿಕಾ)

Leave a Reply