ಗಿರಣಿ ವಿಸ್ತಾರ ನೋಡಮ್ಮ, ಶರಣಿ ಕೂಡಮ್ಮ : ಸಂತ ಶರೀಫರ ತತ್ವಪದ

ಆಧುನಿಕ ಕಾಲದ ವಿದ್ಯಮಾನಕ್ಕೆ ಸಂತ ಶಿಶುನಾಳ ಶರೀಫರು ಸ್ಪಂದಿಸಿದ ಬಗೆಯಿದು. ಸಮಾಜದೊಳಗಿದ್ದೇ ಸಾಧನೆ ಮಾಡುವ ಸಂತರು ದೈನಂದಿನ ಆಗುಹೋಗುಗಳಿಗೆ ಸ್ಪಂದಿಸುತ್ತಲೇ ಆಧ್ಯಾತ್ಮಿಕ ಉನ್ನತಿಗೆ ಏರಿರುತ್ತಾರೆ. ಶರೀಫರು ಅಂತಹಾ ಸಂತರಲ್ಲೊಬ್ಬರು. 

ಹುಬ್ಬಳ್ಳಿಯಲ್ಲಿ ಆಗ ತಾನೇ ಹತ್ತಿಯನ್ನು ಹಿಂಜುವ ಗಿರಣಿ (ginning mill) ಪ್ರಾರಂಭವಾಗಿತ್ತು. ಆ ಕಾಲದಲ್ಲಿ ಇಂತಹ ಯಾಂತ್ರಿಕ ಗಿರಣಿ ನಮ್ಮವರಿಗೆ ಸೋಜಿಗದ ವಸ್ತುವಾಗಿತ್ತು. ಶರೀಫರೂ ಸಹ ಈ ಗಿರಣಿಯನ್ನು ಕಂಡು, ಬೆರಗಾಗಿ ಅದನ್ನು ತಮ್ಮ ಸಖಿಗೆ ವರ್ಣಿಸುತ್ತಿದ್ದಾರೆ.
ಶರೀಫರು ಧರಣಿಪತಿಯಾದ, ಭೂಮಂಡಲದ ರಾಣಿಯಾದ, ಕರುಣಾಪೂರ್ಣಳಾದ ವ್ಹಿಕ್ಟೋರಿಯಾ ರಾಣಿ ತನ್ನ ಆಧೀನದಲ್ಲಿರುವ ಈ ರಾಜ್ಯಕ್ಕೆ ತರಿಸಿದ ಘನಚೋದ್ಯವಿದು ಎಂದು ಈ ಗಿರಣಿಯನ್ನು ಬಣ್ಣಿಸುತ್ತಾರೆ.

Untitled-1

ಗಿರಣಿ ವಿಸ್ತಾರ ನೋಡಮ್ಮ
ಶರಣಿ ಕೂಡಮ್ಮ ||ಪಲ್ಲವಿ||

ಧರಣಿಪತಿಯು ರಾಣಿ
ಕರುಣಾಟ ರಾಜ್ಯಕೆ
ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ ||ಅ.ಪ.||

ಜಲ ಅಗ್ನಿ ವಾಯು ಒಂದಾಗಿ
ಕಲೆತು ಚಂದಾಗಿ
ಜಲ ಅಗ್ನಿ ವಾಯು ಒಂದಾಗಿ
ನೆಲದಿಂದ ಗಗನಕ್ಕೆ ಮುಟ್ಟಿದಂತೆಸುವುದು
ಚಲುವ ಚನ್ನಿಗವಾದ ಕಂಭವೋ, ಹೊಗಿಯ ಬಿಂಬವೋ ||1||

ಒಳಗೊಂದು ಬೇರೆ ಆಕಾರ
ತಿಳಕೋ ಚಮತ್ಕಾರ
ಒಳಗೊಂದು ಬೇರೆ ಆಕಾರ
ದಳಗಳೊಂಭತ್ತು ಚಕ್ರ ಸುಳಿವ ಸೂತ್ರಾಧಾರ
ಲಾಳಿ ಮೂರು ಕೊಳಿವಿಯೊಳು ಎಳೆ ತುಂಬುತದರೊಳು ||2||

ಅಲ್ಲಿ ಬರದಿಟ್ಟರಳಿ ಹಿಂಜಿ
ಅಲ್ಯಾದವು ಹಂಜಿ
ಅಲ್ಲಿ ಬರದಿಟ್ಟರಳಿ ಹಿಂಜಿ
ಗಾಲಿಯೆರಡರ ಮೇಲೆ ಮೂಲಬ್ರಹ್ಮದ ಶೀಲ
ನಾಡಿ ಸುಷುಮ್ನನು ಕೂಡಿ ಅಲ್ಲಾಯ್ತೋ ಕುಕ್ಕಡಿ ||3||

ಪರಮಾನೆಂಬುವ ಪಟ್ಟೇವೋ ಅಲ್ಲೆ
ಮಾರಾಟಕಿಟ್ಟೇವೋ
ಪರಮಾನೆಂಬುವ ಪಟ್ಟೇವೋ
ಧರೆಯೊಳು ಶಿಶುನಾಳ ದೇವಾಂಗ ಋಷಿಯಿಂದ
ನೇಸಿ ಹಚ್ಚಡ ಹೊಚ್ಚಿತೋ ಲೋಕ ಮೆಚ್ಚಿತೋ ||4||

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.