ಪರೀಕ್ಷೆಯ ಫಲಿತಾಂಶ ಎದುರಿಸುವುದು ಹೇಗೆ? : ಭಗವದ್ಗೀತೆಯ ಪಾಠಗಳು #4

ಅದು ಶಾಲಾ ಕಾಲೇಜುಗಳ ಪಠ್ಯ ಪರೀಕ್ಷೆ ಇರಬಹುದು ಅಥವಾ ಉದ್ಯೋಗ ಸ್ಥಳದ ಯಾವುದೆ ಕೌಶಲ್ಯ ಬೇಡುವ ಸವಾಲು. ಅಥವಾ ಜೀವನದ ಮಹತ್ತರ ತಿರುವನ್ನು ನಿರ್ಧರಿಸುವ ಘಟ್ಟವೇ ಆಗಿರಬಹುದು. ಅದನ್ನು ನಾವು ಹೇಗೆ ನಿರ್ವಹಿಸುತ್ತೇವೆ ಅನ್ನುವುದು ನಮ್ಮ ಸಾಮರ್ಥ್ಯವನ್ನು ತೋರಿಸಿಕೊಡುತ್ತದೆ. ~ ಆನಂದಪೂರ್ಣ

ಕೆಲವೊಂದು ಪರೀಕ್ಷೆಗಳು ಪೂರ್ವ ನಿರ್ಧಾರಿತವಾಗಿರುತ್ತವೆ. ನಮಗೆ ಅದರ ಕುರಿತು ಮೊದಲೇ ಮಾಹಿತಿ ಇದ್ದು, ಅದರಲ್ಲಿ ಉತ್ತೀರ್ಣರಾಗುವ ಎಲ್ಲ ಸಿದ್ಧತೆ ಮಾಡಿಕೊಂಡಿರುತ್ತೇವೆ. ಮತ್ತೆ ಕೆಲವು ಪರೀಕ್ಷೆ ಅನಿರೀಕ್ಷಿತವಾಗಿ ಧುತ್ತೆಂದು ನಮ್ಮೆದುರು ಬಂದು ನಿಲ್ಲುತ್ತವೆ. ಯಾವ ತಯಾರಿಯೂ ಇಲ್ಲದೆ ನಾವು ಅದನ್ನು ಎದುರಿಸಬೇಕಾಗುತ್ತದೆ. ಎಷ್ಟೋ ಬಾರಿ ಪೂರ್ವ ನಿರ್ಧಾರಿತ ಪರೀಕ್ಷೆಗಳಲ್ಲಿ ಸೋಲುವ ನಾವು ಅನಿರೀಕ್ಷಿತ ಪರೀಕ್ಷೆಗಳಲ್ಲಿ ಗೆದ್ದು ಬಿಟ್ಟಿರುತ್ತೇವೆ. 

ಅದೇನೇ ಇರಲಿ. ನಮಗೆ ಪರೀಕ್ಷೆ ಎದುರಿಸುವುದಕ್ಕಿಂತಲೂ ಅದರ ಫಲಿತಾಂಶ ಎದುರಿಸಲು ಹೆಚ್ಚು ಮಾನಸಿಕ ಸ್ಥೈರ್ಯ ಬೇಕಾಗುತ್ತದೆ ಅನ್ನುವುದು ಸರ್ವಸಮ್ಮತ ಮಾತು. ಏಕೆಂದರೆ ಪರೀಕ್ಷೆಯ ಕುರಿತು ಭಯ ಆರಂಭವಾಗುವುದೇ ಅದರ ಫಲಿತಾಂಶದ ಕಡೆಗಿನ ಗಮನದಿಂದ. ಪರೀಕ್ಷೆಯಲ್ಲಿ ಪಾಲ್ಗೊಳ್ಳುವ, ಅದರ ಸವಾಲನ್ನು ಎದುರಿಸುವ ಸಾಹಸ ಅಥವಾ ಬೌದ್ಧಿಕ ಕಸರತ್ತಿನ ಆನಂದಕ್ಕಾಗಿ ಪರೀಕ್ಷೆಗೆ ಒಡ್ಡಿಕೊಳ್ಳುವವರು ಅತ್ಯಂತ ಕಡಿಮೆ. ಯಾವ ದೃಷ್ಟಿಯಿಂದ ನೋಡಿದರೂ ಒಂದು ನಿರ್ದಿಷ್ಟ ಫಲಿತಾಂಶ ಪಡೆಯಲಿಕ್ಕೆಂದು ಪರೀಕ್ಷೆ ಸ್ವೀಕರಿಸುವವರೇ ಹೆಚ್ಚು. ಅನಿರೀಕ್ಷಿತ ಸಂದರ್ಭಗಳಲ್ಲಿ ಕೂಡಾ ಹೀಗಾಗುವುದುಂಟು. ಅನಿವಾರ್ಯವಾಗಿ ಎದುರಿಸುವುದಕ್ಕಿಂತ, ಇಂಥದೊಂದು ಫಲ ದೊರೆಯುವುದಾದರೆ ಒಮ್ಮೆ ನೋಡಿಬಿಡೋಣ ಎಂದು ಮುಂದಾಗುವವರು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಾರೆ.

ವಾಸ್ತವದಲ್ಲಿ, ಭಗವದ್ಗೀತೆಯ ಶ್ರೀಕೃಷ್ಣ ಹೇಳಿದಂತೆ ಫಲಾಫಲಗಳ ಬಗ್ಗೆ ಚಿಂತಿಸದೆ ಕೇವಲ ಕರ್ಮವನ್ನು ಮಾಡಬೇಕು. ಆದರೆ ಫಲವನ್ನು ಅಪೇಕ್ಷಿಸಿಯೇ ಒಂದು ಕೆಲಸವನ್ನು ಹಿಡಿದಿರುವಾಗ, ಸಾಹಸಕ್ಕೆ ಕೈಹಾಕಿದಾಗ ಏನು ಮಾಡಬೇಕು? ಆಗ ನಮ್ಮ ನಿರೀಕ್ಷೆ ಅದೇನೇ ಇದ್ದರೂ ಬರಲಿರುವ ಯಾವುದೇ ಫಲಿತಾಂಶವನ್ನು ಒಪ್ಪಿಕೊಳ್ಳುವ ಮನಸ್ಥಿತಿ ರೂಪಿಸಿಕೊಳ್ಳಬೇಕು. ನಮ್ಮ ಯತ್ನ ಮಾಡಿದ್ದೇವೆ, ಬಂದ ಫಲಿತಾಂಶವನ್ನು ಸ್ವೀಕರಿಸುತ್ತೇವೆ ಅನ್ನುವ ಮಾನಸಿಕತೆ ಬೆಳೆಸಿಕೊಂಡರೆ, ಅದೇನೇ ಬಂದರೂ ಅದನ್ನು ಮೆಟ್ಟಿಲಾಗಿಸಿಕೊಂಡು ಮೇಲೇರುವ ಹುಮ್ಮಸ್ಸು, ಶಕ್ತಿ ದೊರೆಯುವುದು.

ನಾವು ತೆಗೆದುಕೊಂಡ ಪರೀಕ್ಷೆಯನ್ನು ಉತ್ತಮವಾಗಿ ನಿರ್ವಹಿಸುವುದು ನಮ್ಮ ಕರ್ತವ್ಯ. ನಿರ್ದಿಷ್ಟ ವಸ್ತು – ವಿಷಯದಲ್ಲಿ ನಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಲೆಂದೇ ಪರೀಕ್ಷೆಯನ್ನು ಸ್ವೀಕರಿಸಿರುತ್ತೇವೆ. ಅದಕ್ಕೆ ತಕ್ಕಂತೆ ನಮ್ಮೆಲ್ಲ ಪರಿಶ್ರಮದಿಂದ ಅಭ್ಯಾಸ ನಡೆಸಿ ಆ ನಿರ್ದಿಷ್ಟ ವಿಷಯದಲ್ಲಿ ನಮ್ಮ ಪರಿಣಿತಿ ಏನಿದೆ ಅನ್ನುವುದನ್ನು ಕಂಡುಕೊಳ್ಳುವುದು ಮುಖ್ಯವಾಗುತ್ತದೆ. 

ಅದು ಶಾಲಾ ಕಾಲೇಜುಗಳ ಪಠ್ಯ ಪರೀಕ್ಷೆ ಇರಬಹುದು ಅಥವಾ ಉದ್ಯೋಗ ಸ್ಥಳದ ಯಾವುದೆ ಕೌಶಲ್ಯ ಬೇಡುವ ಸವಾಲು. ಅಥವಾ ಜೀವನದ ಮಹತ್ತರ ತಿರುವನ್ನು ನಿರ್ಧರಿಸುವ ಘಟ್ಟವೇ ಆಗಿರಬಹುದು. ಅದನ್ನು ನಾವು ಹೇಗೆ ನಿರ್ವಹಿಸುತ್ತೇವೆ ಅನ್ನುವುದು ನಮ್ಮ ಸಾಮರ್ಥ್ಯವನ್ನು ತೋರಿಸಿಕೊಡುತ್ತದೆ. ಅಕಸ್ಮಾತ್ ನಾವು ಅದರಲ್ಲಿ ಸೋತರೆ, ಅದು ನಮ್ಮ ಅಸ್ತಿತ್ವಕ್ಕೆ ಸಲ್ಲುವ ಕ್ಷೇತ್ರವಲ್ಲ ಎಂದು ಮನಗಂಡು, ನಮ್ಮೊಳಗಿನ ಕೌಶಲ್ಯಕ್ಕೆ ತಕ್ಕಂತೆ ಮತ್ತೊಂದು ವಸ್ತು ಯಾ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. 
ಆದ್ದರಿಂದ ಫಲಿತಾಂಶ ಅದೇನೇ ಬಂದರೂ ಅದನ್ನು ಬಂದಂತೆ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ಕೌಶಲ್ಯ ಇರುವುದೇ ಇಷ್ಟು, ನಮ್ಮ ಸಾಮರ್ಥ್ಯ ಇರುವುದೇ ಇಷ್ಟು ಎನ್ನುವುದನ್ನು ಒಪ್ಪಿಕೊಳ್ಳುವುದು ನಾವು ಬದುಕಿಗೆ ತೋರುವ ಗೌರವವಾಗಿರುತ್ತದೆ. ಅದಕ್ಕೆ ಬದಲಾಗಿ ಫಲಿತಾಂಶದ ಕುರಿತು ದುಃಖಿಸುತ್ತ ಕೂರುವುದರಿಂದ ಯಾವ ಪ್ರಯೋಜನವೂ ಇಲ್ಲ. ಇದು ನಮ್ಮ ಸಾಮರ್ಥ್ಯವನ್ನು ನಾವೇ ಅವಮಾನಿಸಿಕೊಂಡಂತೆ ಆಗುತ್ತದೆ ಅಷ್ಟೇ.

ಆದರೆ ಇದು ಹೇಳುವಷ್ಟು ಸುಲಭವಲ್ಲ. ಏಕೆಂದರೆ ನಾವು ನಮ್ಮ ಸಾಮರ್ಥ್ಯದ ಮಿತಿಯನ್ನು ಒಪ್ಪಿಕೊಳ್ಳಲು ಸಿದ್ಧ ಇರುವುದಿಲ್ಲ. ನಾವು ನಮ್ಮನ್ನು ನಮ್ಮ ಅರಿವಿನಾಚೆ ಅಂದಾಜಿಸಿಕೊಂಡಿರುತ್ತೇವೆ. ಅಲ್ಲಿ ನಮ್ಮ ಅಹಂಕಾರ ಮತ್ತು ಅಪ್ರಾಮಾಣಿಕತೆಗಳು, ತೀವ್ರ ಮಹತ್ವಾಕಾಂಕ್ಷೆ, ಅಭೀಪ್ಸೆಗಳೆಲ್ಲ ಸಂಚು ಹೂಡಿ ಕುಳಿತಿರುತ್ತವೆ. ಆದ್ದರಿಂದ ನಾವು ಫಲಿತಾಂಶವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅಲ್ಲ, ನಮ್ಮ ಬಯಕೆಗೆ ತಕ್ಕಂತೆ ಬರಲೆಂದು ನಿರೀಕ್ಷಿಸುತ್ತೇವೆ. ಸಮಸ್ಯೆ ಉದ್ಭವಿಸುವುದು ಇಲ್ಲಿಯೇ. ನಿರೀಕ್ಷೆಗಳು ನೆರವೇರುವುದು ಪೂರಕ ಅಂಶಗಳಿದ್ದಾಗ ಮಾತ್ರ. ನಮ್ಮ ಸಾಮರ್ಥ್ಯ ಅದಕ್ಕೆ ಪೂರಕವಾಗಿದ್ದರೆ, ಫಲಿತಾಂಶವೂ ನಿರೀಕ್ಷೆಯನ್ನು ಮುಟ್ಟುತ್ತದೆ. 

ಕೆಲವು ಪರೀಕ್ಷೆಗಳನ್ನು ನಾವು ಸಾಮಾಜಿಕ ಅಗತ್ಯಗಳಿಗಾಗಿ ಸ್ವೀಕರಿಸುತ್ತೇವೆ. ಇಂದಿನ ಶಿಕ್ಷಣ ಪದ್ಧತಿಯು ಶೈಕ್ಷಣಿಕ ಅರ್ಹತೆಗೆ ಒತ್ತು ಕೊಡುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಎಲ್ಲರಿಗೂ ಸಾಮಾನ್ಯವಾಗಿರುವ ವಿಷಯಗಳನ್ನು ಅಭ್ಯಸಿಸಿ ಅವಕ್ಕೆ ಉತ್ತರ ಬರೆಯಬೇಕೆಂದು ವಿಧಿಸುತ್ತದೆ. ಅದರಂತೆ ವಿದ್ಯಾರ್ಥಿಗಳು ಎಲ್ಲವನ್ನೂ ಅಭ್ಯಾಸ ಮಾಡುತ್ತಾರೆ. ಆದರೆ ಯಾರ ಜೀನಿಯಸ್, ಯಾರ ಆಸಕ್ತಿ ಯಾವುದರಲ್ಲಿದೆಯೋ ಅದರಲ್ಲಿ ಮಾತ್ರ ಹೆಚ್ಚು ಅಂಕ ಪಡೆಯುತ್ತಾರೆ. 
ಮತ್ತೆ ಕೆಲವರು ಆಯಾ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳದೆಯೂ ಉತ್ತಮ ಫಲಿತಾಂಶ ಪಡೆಯುತ್ತಾರೆ. ಆದರೆ ಅವರು ಬುದ್ಧಿವಂತರೇನೂ ಆಗಿರುವುದಿಲ್ಲ. ಇದು ಹೇಗೆ ಸಾಧ್ಯವಾಯಿತು? ಆ ವಿದ್ಯಾರ್ಥಿಗಳು ಸ್ಮರಣ ಶಕ್ತಿ ಹಾಗೂ ಕಂಠಪಾಠದಲ್ಲಿ ಹೆಚ್ಚು ಸಾಮರ್ಥ್ಯ ಹೊಂದಿರುತ್ತಾರೆ. ಆದ್ದರಿಂದ ಅದು ಸಾಧ್ಯವಾಗುತ್ತದೆ.

ಕೆಲವು ಪರೀಕ್ಷೆಗಳನ್ನು ನಾವು ನಮ್ಮ ಅನುಕೂಲಕ್ಕಾಗಿ ಎದುರಿಸುತ್ತೇವೆ. ಯಾವುದೋ ಒಂದು ನಿರ್ದಿಷ್ಟ ಫಲವನ್ನು ಪಡೆಯುವ ಉದ್ದೇಶದಿಂದ ಪ್ರಯಾಸ ಪಟ್ಟು ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತೇವೆ. ಪ್ರಾಮಾಣಿಕ ಪ್ರಯತ್ನವನ್ನೂ ಹಾಕಿ ಬೆಟ್ಟದಷ್ಟು ಆಸೆ ಇರಿಸಿಕೊಳ್ಳುತ್ತೇವೆ. ನಮ್ಮ ಪ್ರಕಾರ ಅದು ನಮಗೆ ಸಲ್ಲಲೇಬೇಕು. ನಾವು ಅದಕ್ಕೆ ಸಂಪೂರ್ಣ ಅರ್ಹರು. ನಾವು ಇಷ್ಟೆಲ್ಲ ಪ್ರಯತ್ನ ಹಾಕಿರುವಾಗ ನಮಗಲ್ಲದೆ ಮತ್ಯಾರಿಗೆ ತಾನೆ ಅದು ಸಲ್ಲಬೇಕು ಅನ್ನುವ ಚಿಂತನೆ ನಮ್ಮೊಳಗೆ ಇರುತ್ತದೆ. 
ಹಾಗಿದ್ದೂ ಫಲಿತಾಂಶ ಬಾರದೆ ಹೋದರೆ? ಅದನ್ನು ಸ್ವೀಕರಿಸೋದು ಹೇಗೆ!? ಅಷ್ಟೆಲ್ಲ ಪ್ರಯತ್ನಕ್ಕೆ ಪ್ರತಿಫಲ ಬಯಸಬೇಡ ಎಂದರೆ ಅದು ತೀರ ಒಣ ವೇದಾಂತದ ಮಾತು ಆಗುವುದಿಲ್ಲವೆ?

ಹೌದು. ಆಗುತ್ತದೆ. ಆದರೆ ನಮಗೆ ಏನು ಸಿಗಬೇಕಿರುತ್ತದೆಯೋ ಅದು ಸಿಗುತ್ತದೆ ಮತ್ತು ಏನು ಸಿಗಬಾರದೋ ಅದು ಸಿಗುವುದಿಲ್ಲ. ಪುರಂದರ ದಾಸರು ಹೇಳಿದಂತೆ `ಆದದ್ದೆಲ್ಲ ಒಳಿತೇ’ ಆಗಿರುತ್ತದೆ. ಆ ಮೊದಲ ಹಂತದ ಫಲಿತಾಂಶ ನಮ್ಮ ನಿರೀಕ್ಷೆಯಂತೆ ಬರದಿದ್ದರೂ ಅದರಲ್ಲಿ ನಾವು ಅನುತ್ತೀರ್ಣರಾಗಿದ್ದರೂ ಆ ಪ್ರಯತ್ನದ ಒಟ್ಟು ಫಲಿತಾಂಶ ಬಹು ದೂರದಲ್ಲಿ, ಅಂತಿಮದಲ್ಲಿ ಫಲಪ್ರದವಾಗಿಯೇ ಇರುತ್ತದೆ. ನಮ್ಮ ಕುರಿತು ನಮಗೆ ನಂಬಿಕೆ ಇರಬೇಕಷ್ಟೆ. 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.