ಆತ್ಮ ಎಂದರೇನು? ಒಂದು ಕಿರು ಸಂಭಾಷಣೆ

ಒಮ್ಮೆ ಒಬ್ಬ ಶಿಷ್ಯ ತನ್ನ ಗುರುವನ್ನು “ಆತ್ಮ ಎಂದರೇನು?” ಎಂದು ಕೇಳಿದ. ನಂತರ ನಡೆದ ಸಂಭಾಷಣೆ ಇಲ್ಲಿದೆ:

ಗುರು: ಶಿಷ್ಯಾ, ಹಾಲು ಉಪಯೋಗಕರವೇ?
ಶಿಷ್ಯ : ಹೌದು.
ಗುರು: ನೀನು ಹಾಲನ್ನು ಗಂಟೆಗಟ್ಟಲೆ ಹಾಗೇ ಇಟ್ಟುಬಿಟ್ಟರೆ ಏನಾಗುತ್ತದೆ?
ಶಿಷ್ಯ : ಹಾಳಾಗುತ್ತದೆ.
ಗುರು: ಅದು ಹಾಳಾಗದೇ ಇರಲು ಅದಕ್ಕೆ ಮಜ್ಜಿಗೆ ಹಾಕಬೇಕು. ಆಗ ಹಾಲು ಮೊಸರಾಗುತ್ತದೆ. ಮೊಸರಿನಲ್ಲಿನ ಹಾಲು ಹಾಳಾಗುವುದಿಲ್ಲ.
ಶಿಷ್ಯ : ಹೌದು.
ಗುರು : ಮೊಸರಿನಲ್ಲಿನ ಹಾಲು ಒಂದು ದಿನ ಚೆನ್ನಾಗಿರಬಹುದು. ಇನ್ನೂ ಒಂದು ದಿನ ಇಟ್ಟರೆ ಏನಾಗುತ್ತದೆ?
ಶಿಷ್ಯ : ಹಾಳಾಗುತ್ತದೆ.
ಗುರು : ಅದು ಇನ್ನಷ್ಟು ಹಾಳಾಗುವುದನ್ನು ತಪ್ಪಿಸಲು ನಾವು ಅದನ್ನು ಕಡೆದು ಬೆಣ್ಣೆ ತೆಗೆಯಬೇಕು. ಆಗ ಬೆಣ್ಣೆಯೊಳಗಿನ ಹಾಲು ಹಾಳಾಗುವುದಿಲ್ಲ.
ಶಿಷ್ಯ : ಹೌದು.
ಗುರು : ಬೆಣ್ಣೆಯೊಳಗಿನ ಹಾಲು ಕೆಲವು ದಿನ ಉಳಿಯಬಹುದು. ದಿನ ಕಳೆದಂತೆ ಬೆಣ್ಣೆ ಏನಾಗುತ್ತದೆ?
ಶಿಷ್ಯ : ಹಾಳಾಗುತ್ತದೆ.
ಗುರು : ಅದು ಹಾಳಾಗದೇ ಇರಲು ಅದನ್ನು ಕರಗಿಸಬೇಕು. ಸರಿಯಾಗಿ ಕರಗಿಸಿದರೆ ತುಪ್ಪ ಸಿಗುತ್ತದೆ. ಈಗ ಹಾಲು ತುಪ್ಪದ ರೂಪದಲ್ಲಿದೆ. ಅತಿ ಶುದ್ಧವಾದ ತುಪ್ಪ ಎಂದಿಗೂ ಹಾಳಾಗುವುದಿಲ್ಲ. ಈಗ ಹೇಳು. ಇದರಿಂದ ನಿನಗೆ ಏನು ತಿಳಿಯುತ್ತದೆ?
ಶಿಷ್ಯ : ಹಾಳಾಗದ ತುಪ್ಪವು ಹಾಳಾಗುವ ಹಾಲಿನಲ್ಲಿದೆ.
ಗುರು : ಹೌದು. ಹಾಳಾಗದ ಆತ್ಮವು ಹಾಳಾಗುವ ಶರೀರದಲ್ಲಿದೆ. ಇದನ್ನು ಅರ್ಥ ಮಾಡಿಕೊಂಡು ಆತ್ಮವನ್ನು ಪೋಷಿಸಲು ಅಭ್ಯಾಸ ಮಾಡುವವರ ಕ್ರೋಧ, ಕಾಮ, ಬಯಕೆ, ದುರಾಸೆ, ಅತಿ ನಿರೀಕ್ಷೆಗಳು ನಶಿಸುತ್ತವೆ. ಅವರು ಬೌದ್ಧಿಕವಾಗಿ ಬೆಳೆದು ಪ್ರಪಂಚದ ಇತರರಿಗೆ ಒಳ್ಳೆಯ ವಿಷಯಗಳ ಬಗ್ಗೆ ಹೇಳುವ ಅರ್ಹತೆ ಪಡೆಯುತ್ತಾರೆ.

(ಸಂಗ್ರಹದಿಂದ….)

Leave a Reply