ಕನ್’ಫ್ಯೂಶಿಯಸ್ ಹೇಳಿದ್ದು…. : ಅರಳಿಮರ POSTER

ನಮಗೆ ಬದುಕಲು ಒಂದೇ ಅವಕಾಶ ಇರುವುದು ಎಂಬುದು ಮನದಟ್ಟಾಗಿಬಿಟ್ಟರೆ, ಆ ಕ್ಷಣದಿಂದಲೇ ನಾವು ನಮ್ಮ ಬದುಕನ್ನು ಸುಂದರವಾಗಿಟ್ಟುಕೊಳ್ಳುವ ಪ್ರಯತ್ನ ಆರಂಭಿಸುತ್ತೇವೆ, ಹೊಸತಾಗಿ ಬದುಕಲು ತೊಡಗುತ್ತೇವೆ – ಅನ್ನುವುದು ಕನ್’ಫ್ಯೂಶಿಯಸ್ ಮಾತಿನ ಅರ್ಥ ~ ‘ಲಾ

 

confucius-quote-1

ದುಕು ಮನುಷ್ಯ ಜೀವಿಗಳಿಗೆ ಮಾತ್ರ ಇರುವಂಥದ್ದು. ಉಳಿದೆಲ್ಲ ಜೀವಿಗಳು ಹುಟ್ಟು – ಸಾವಿನ ನಡುವೆ ಆಹಾರ, ಸಂಭೋಗ ಮತ್ತು ನಿದ್ರೆಗಳ ಚಕ್ರದಲ್ಲಿ ಸುತ್ತುತ್ತಾ ಇರುತ್ತವೆ. ಮನುಷ್ಯರ ಜೀವನ ಚಕ್ರದಲ್ಲಿ ಧರ್ಮ, ದುಡಿಮೆ, ಕಾಮ ಮತ್ತು ಮುಕ್ತಿಯ ಹೆಚ್ಚುವರಿ ಉದ್ದೇಶಗಳೂ ಇರುವುದರಿಂದ ಬರಿದೇ ಹುಟ್ಟಿ ಸಾಯುವುದರ ಆಚೆಗೂ ಬದುಕು ಚಾಚಿಕೊಂಡಿದೆ. ಇವನ್ನು ‘ಚತುರ್ವಿಧ ಪುರುಷಾರ್ಥ’ಗಳೆಂದು ಕರೆಯುತ್ತಾರೆ.

ನಾವು ಈ ಚತುರ್ವಿಧ ಪುರುಷಾರ್ಥಗಳಿಗಾಗಿಯೇ ಬದುಕು ನಡೆಸುತ್ತೇವೆ. ಇವುಗಳ ಹೊಂದುವಿಕೆಯಲ್ಲಿ, ನಡೆಸುವಿಕೆಯಲ್ಲಿ ಅಥವಾ ಸಂಭಾಳಿಸುವಿಕೆಯಲ್ಲಿ ಸೋತರೆ ಬದುಕೇ ಮುಗಿದುಹೋದಂತೆ ಭಾವಿಸುತ್ತೇವೆ. ಬಹುತೇಕರು ಈ ಸೋಲನ್ನು ಹೊರೆಯಂತೆ ಹೊತ್ತುಕೊಂಡು ಶೋಕಿಸುತ್ತ ಉಳಿದ ಜೀವನವನ್ನು ತಳ್ಳುತ್ತಾರೆ. ಆದರೆ ಕೆಲವರು ಮಾತ್ರವೇ ತಮಗೆ ತಾವೇ ಎರಡನೆಯ ಅವಕಾಶ ಸೃಷ್ಟಿಸಿಕೊಂಡು ಗುರಿಯತ್ತ ನಡಿಗೆ ಮುಂದುವರೆಸುತ್ತಾರೆ.

“ಪ್ರತಿಯೊಬ್ಬರಿಗೂ ಎರಡು ಬದುಕುಗಳು ಇರುತ್ತವೆ. ಮತ್ತು ಎರಡನೆಯದು ಇರುವುದೊಂದೇ ಬದುಕು ಎಂಬ ಅರಿವಾದ ಕ್ಷಣದಿಂದ ಆರಂಭವಾಗುತ್ತದೆ” ಅನ್ನುತ್ತಾನೆ ಚೀನೀ ತತ್ತ್ವಶಾಸ್ತ್ರಜ್ಞ ಕನ್’ಫ್ಯೂಶಿಯಸ್. ನಮಗೆ ಬದುಕಲು ಒಂದೇ ಅವಕಾಶ ಇರುವುದು ಎಂಬುದು ಮನದಟ್ಟಾಗಿಬಿಟ್ಟರೆ, ಆ ಕ್ಷಣದಿಂದಲೇ ನಾವು ನಮ್ಮ ಬದುಕನ್ನು ಸುಂದರವಾಗಿಟ್ಟುಕೊಳ್ಳುವ ಪ್ರಯತ್ನ ಆರಂಭಿಸುತ್ತೇವೆ, ಹೊಸತಾಗಿ ಬದುಕಲು ತೊಡಗುತ್ತೇವೆ – ಅನ್ನುವುದು ಕನ್’ಫ್ಯೂಶಿಯಸ್ ಮಾತಿನ ಅರ್ಥ.
ಆದ್ದರಿಂದ ಸೋಲುಗಳಿಗೆ ಹೆದರಿ ಅಥವಾ ಹತಾಶರಾಗಿ ‘ಬದುಕು ಮುಗಿಯಿತು’ ಎಂದು ದುಃಖಿಸುತ್ತಾ ಕೂರಬೇಡಿ. ಎರಡನೇ ಅವಕಾಶವನ್ನು ನೀವೇ ಸೃಷ್ಟಿಸಿಕೊಂಡು ಬದುಕು ಕಟ್ಟಿಕೊಳ್ಳಿ.

ನೆನಪಿರಲಿ,
ಬದುಕು ಎಲ್ಲಿಂದ ಬೇಕಾದರೂ ಶುರುವಾಗಬಹುದು.
ನಿಮ್ಮ ಬೆರಳಿನ ತುದಿಯಲ್ಲೇ ಶುರುವಿನ ಬಿಂದು ಇರುವುದು.

Leave a Reply