ಹಂದಿಯಾಗಿ ಸಾಯಲೊಪ್ಪದ ಗುರು : ತೆಲುಗು ಜನಪದ ಕಥೆ

ಒಂದು ದಿನ ಒಬ್ಬ ಗುರು ಮುಂದಿನ ಜನ್ಮದಲ್ಲಿ ತಾನು ಏನಾಗಿ ಹುಟ್ಟುತ್ತೇನೆ ಎಂದು ಎಂಬುದನ್ನು ದಿವ್ಯದೃಷ್ಟಿಯಿಂದ ತಿಳಿದುಕೊಂಡ. ಹಾಗೂ ತಾನು ಸದ್ಯದಲ್ಲೇ ಸಾಯಲಿದ್ದೇನೆ ಎಂಬುದೂ ಅವನಿಗೆ ತಿಳಿಯಿತು. ಹಂದಿಯಾಗಿ ಬಾಳುವುದನ್ನು ನೆನೆದೇ ಅವನ ಮೈ ಜುಮ್ಮೆಂದಿತು. ತನ್ನ ಪ್ರಿಯ ಶಿಷ್ಯನನ್ನು ಕರೆದು, “ನನಗೆ ಗುರುದಕ್ಷಿಣೆಯಾಗಿ ನೀನು ಏನು ಕೊಡುತ್ತೀ?” ಎಂದು ಕೇಳಿದ.

“ನೀವು ಏನು ಕೇಳಿದರೂ ಕೊಡುತ್ತೇನೆ ಗುರುಗಳೇ” ಅಂದ ಶಿಷ್ಯ ನಮ್ರತೆಯಿಂದ.

“ನಾನು ಹೇಳುವುದನ್ನು ಸರಿಯಾಗಿ ಕೇಳಿಸಿಕೊ. ಯಾವುದೇ ಭಾವುಕತೆಗೆ ಒಳಗಾಗಬೇಡ. ನಾನು ಸದ್ಯದಲ್ಲೇ ಸಾಯಲಿದ್ದೇನೆ ಮತ್ತು ಹಂದಿಯಾಗಿ ಹುಟ್ಟಲಿದ್ದೇನೆ. ನಮ್ಮ ಆಶ್ರಮದ ಹಿತ್ತಲಲ್ಲಿ ಹೊಲಸು ತಿನ್ನುತ್ತದಲ್ಲ, ಆ ಹಂದಿ ಮತ್ತೊಮ್ಮೆ ಮರಿ ಹಾಕುತ್ತದಲ್ಲ, ಆಗ ಅದರ ನಾಲ್ಕನೆ ಮರಿಯಾಗಿ ನಾನು ಹುಟ್ಟಲಿದ್ದೇನೆ. ಅದರ ಹುಬ್ಬಿನ ಮೇಲೆ ಒಂದು ಮಚ್ಚೆ ಇರುತ್ತದೆ. ಹಾಗೆ ನೀನು ನನ್ನನ್ನು ಗುರುತಿಸಬಹುದು.” ಎಂದು ಹೇಳಿ ಅಲ್ಪವಿರಾಮ ಹಾಕಿದ.

ಶಿಷ್ಯನಿಗೆ ಗುರು ಅದೇನು ಹೇಳಲಿದ್ದಾರೆಂದು ತಿಳಿಯದೆ ಗಲಿಬಿಲಿಗೊಂಡ.

“ನೋಡು! ಆ ಮರಿ ಇರುತ್ತದಲ್ಲ, ಅದನ್ನು ನೀನು ಒಂದೇ ಏಟಿಗೆ ಕತ್ತಿಯಿಂದ ಕುತ್ತಿಗೆ ಕತ್ತರಿಸಿ ಕೊಂದುಹಾಕಬೇಕು. ಅದರಿಂದ ನನಗೆ ಮೋಕ್ಷ ಸಿಗುತ್ತದೆ” ಅಂದ.

ಶಿಷ್ಯನಿಗೆ ಇದನ್ನು ಕೇಳಿ ದುಃಖವಾಯಿತು. ಮೊದಲನೆಯದಾಗಿ, ತನ್ನ ಗುರು ಹಂದಿ ಮರಿಯಾಗಿ ಹುಟ್ಟುವುದನ್ನು ನೋಡಬೇಕು. ಎರಡನೆಯದಾಗಿ, ತಾನು ತನ್ನ ಕೈಯಾರ ಅದನ್ನು ಕೊಲ್ಲಬೇಕು! ಆದರೆ ಗುರುವಿನ ಮಾತನ್ನು ಒಪ್ಪಿಕೊಳ್ಳದೆ ವಿಧಿಯಿಲ್ಲ. ಅವರಿಗೆ ಹಾಗೆಯೇ ಮಾಡುವೆನೆಂದು ಮಾತುಕೊಟ್ಟ.

ಅದಾಗಿ ಮೂರನೇ ದಿನಕ್ಕೆ ಗುರು ತೀರಿಕೊಂಡ. ಅದೇ ದಿನ ಸಂಜೆ ಹಿತ್ತಲ ಹಂದಿಯು ನಾಲ್ಕು ಮರಿಗಳನ್ನು ಹಾಕಿತ್ತು. ಗುರುವಿನ ಮಾತನ್ನು ನೆರವೇರಿಸಲಿಕ್ಕಾಗಿ ಕತ್ತಿಯನ್ನು ಹರಿತವಾಗಿ ಇಟ್ಟುಕೊಂಡಿದ್ದ ಶಿಷ್ಯ, ಹಂದಿಮರಿಗಳನ್ನು ನೋಡಲು ಹೋದ. ಅವುಗಳಲ್ಲಿ ನಾಲ್ಕನೇ ಮರಿಯ ಹುಬ್ಬಿನ ಮೇಲೆ ಮಚ್ಚೆ ಇರುವುದನ್ನು ಗುರುತಿಸಿದ. ಅದನ್ನು ಕೈಯಲ್ಲಿ ಎತ್ತಿಕೊಂಡು, ತನ್ನ ಗುರುಗಳನ್ನು ನೆನೆಯುತ್ತಾ ಕುತ್ತಿಗೆಯನ್ನು ಕತ್ತರಿಸಲು ಕತ್ತಿಯನ್ನು ತೆಗೆದ.

ಇನ್ನೇನು ಪಟ್ಟು ಹಾಕಬೇಕು, ಆಗ “ನಿಲ್ಲು!” ಅನ್ನುವ ದನಿಯೊಂದು ತಡೆಯಿತು.

ಶಿಷ್ಯ ಗಾಬರಿಯಾಗಿ ಸುತ್ತ ನೋಡಿದ. ಅವನಿದ್ದಲ್ಲೇ ದನಿ ಹೊರಟಿತ್ತು. ಆ ಹಂದಿ ಮರಿ ಮಾತಾಡುತ್ತಿತ್ತು!

“ನಿಲ್ಲು… ನನ್ನನ್ನು ಕೊಲ್ಲಬೇಡ! ನಾನು ಹಂದಿಯ ಹಾಗೆ ಬದುಕಬೇಕು ಅಂದುಕೊಂಡಿರುವೆ. ನನ್ನನ್ನು ಕೊಲ್ಲು ಅಂದಿದ್ದು ನಿಜ; ಆಗ ನನಗೆ ಹಂದಿಯ ಬದುಕು ಹೇಗಿರುತ್ತದೆ ಎಂದು ಗೊತ್ತಿರಲಿಲ್ಲ. ಈಗ ಅದನ್ನು ಅನುಭವಿಸಿ ತಿಳಿಯಬೇಕೆಂದಿರುವೆ. ನನ್ನನ್ನು ಬಿಟ್ಟುಬಿಡು” ಎಂದು ಹಂದಿಮರಿ ಶಿಷ್ಯನ ಬಳಿ ಗೋಗರೆಯತೊಡಗಿತು.

 

2 Comments

  1. ಕಥೆಗಳು

    ಙ್ಞಾನೋದಯವನ್ನು

    ಉಂಟುಮಾಡುತ್ತದೆ.

Leave a Reply