ಪೋಷಣೆ : ತಾವೋ ಧ್ಯಾನ ~ 25

ತಾವೋ ಪಾಲಿಸುವವರು ಹದಿನಾರು ಗುಣ ಸ್ವಭಾವಗಳನ್ನು ಸ್ವಂತಕ್ಕಾಗಿ ಮತ್ತು ಇತರರಿಗಾಗಿ ಬಳಸಲು ಬಯಸುತ್ತಾರೆ. ಯಾವಾಗಲಾದರೂ ನೀವು ಇತತರರಿಗೆ ಸಹಾಯ ಮಾಡಲು ಬಯಸುವುರಾದರೆ ಈ 16 ಗುಣ ಸ್ವಭಾವಗಳಿಂದ ಸ್ಪೂರ್ತಿ ಪಡೆಯಿರಿ  ~ ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ

tao

ಜಗತ್ತಿನ ಪ್ರತಿಯೊಂದೂ
ತಾವೋ ಹಾಡಿದಂತೆ.
ಹುಟ್ಟುವಾಗ ಭೋಳೆ, ಪರಿಪೂರ್ಣ,
ರೆಕ್ಕೆ ಬಿಚ್ಚಿದ ಹಕ್ಕಿ.
ಆಮೇಲೆ, ಸುತ್ತ ಮುತ್ತಲಿನ ಸನ್ನಿವೇಶಗಳೇ
ತಂದೆ, ತಾಯಿ.
ರಾಜ ದರ್ಬಾರುಗಳಲ್ಲಿ ಹಾಡಿದಂತಲ್ಲ ಇದು
ಕೋಗಿಲೆಯ ಹಾಗೆ ಸರಾಗ, ತಾವೋ ರಾಗ.

ಕೇವಲ ಹುಟ್ಟಿಸುವುದಲ್ಲ
ಆರೈಕೆ, ಲಾಲನೆ ಪಾಲನೆ, ರಕ್ಷಣೆ
ಎಲ್ಲ ತಾವೋ ಜವಾಬ್ದಾರಿ,
ಕೊನೆಗೆ ತನ್ನೊಳಗೆ ವಾಪಸ್ ಕರೆಸಿಕೊಳ್ಳುವ ತನಕ.

ಸ್ವಾಧೀನದ ಹುಕಿಯಿಲ್ಲದ ಸೃಷ್ಟಿ,
ನಿರೀಕ್ಷೆಗಳ ಆಸೆಯಿಲ್ಲದ ಕ್ರೀಯೆ,
ತಲೆ ತೂರಿಸುವ ಚಾಲಾಕಿಯಿಲ್ಲದ ಸಲಹೆ
ತಾವೋಗೆ ತುಂಬ ಸಹಜ.

ಅಂತಯೇ, ತಾವೋ ಪ್ರೇಮ
ಹುಟ್ಟು ಗುಣ.

~ ಲಾವೋತ್ಸು

ನಿಮ್ಮೊಳಗೆಯೇ ಇಟ್ಟು ಕೊಳ್ಳಬಯಸುವಿರಾದರೆ, ಈ ಸಾಧನೆ, ಸಿದ್ಧಿಯಿಂದ ಉಪಯೋಗವಾದರೂ ಏನು?
If you are blessed with some special powers, then using those powers to the good of mankind becomes your moral obligation ಎನ್ನುವ ಮಾತಿದೆ ಸ್ಪೈಡರ್ ಮ್ಯಾನ್ ಸಿನೇಮಾದಲ್ಲಿ. ಜ್ಞಾನ ಇರುವುದೇ ಹಂಚಿಕೊಳ್ಳಲು, ಇತರರಿಗಾಗಿ ಅಥವಾ ಇತರರ ಪರವಾಗಿ ಈ ಕಾರ್ಯ ಮಾಡುವ ಅವಕಾಶ ನಿಮಗೆ ಲಭ್ಯವಾದರೆ ಹಿಂದೆ ಮುಂದೆ ನೋಡಬೇಡಿ.

ಹಿಂದೊಮ್ಮೆ ಒಬ್ಬ ಮನುಷ್ಯನಿದ್ದ, ಆತ ಪ್ರತಿದಿನ ದೇವಸ್ಥಾನದಲ್ಲಿ ಒಬ್ಬ ದೇವರ ಎದುರು ಮಾತ್ರ ಅಗರಬತ್ತಿ ಹಚ್ಚುತ್ತಿದ್ದ. ಅವನ ಈ ಪ್ರಯತ್ನದ ಫಲವನ್ನು ಸುತ್ತ ಮುತ್ತಲಿನ ಇತರ ದೇವರುಗಳೂ ಅನುಭವಿಸುತ್ತಿದ್ದರು. ಇದರಿಂದಾಗಿ ಸಿಡಿಮಿಡಿಗೊಂಡ ಆ ಮನುಷ್ಯ ತನ್ನ ದೇವರಿಗಾಗಿಯೇ ವಿಶೇಷ ಕೊಳವೆಯೊಂದನ್ನು ತಯಾರಿಸಿ ಆ ಕೊಳವೆಯನ್ನು ತನ್ನ ದೇವರ ಮೂಗಿಗೆ ಹಿಡಿದು ಅದರಲ್ಲಿ ಅಗರಬತ್ತಿ ಇಡತೊಡಗಿದ. ಸ್ವಲ್ಪ ದಿನಗಳಲ್ಲಿಯೇ ಆ ದೇವರ ಮೂಗು ಕಪ್ಪಾಗಿ , ಮೂರ್ತಿ ವಿರೂಪಗೊಂಡಿತು.

ತಾವೋ ಪಾಲಿಸುವವರು ಈ ಹದಿನಾರು ಗುಣ ಸ್ವಭಾವಗಳನ್ನು ಸ್ವಂತಕ್ಕಾಗಿ ಮತ್ತು ಇತರರಿಗಾಗಿ ಬಳಸಲು ಬಯಸುತ್ತಾರೆ : ಅಂತಃಕರಣ, ಸೌಮ್ಯತೆ, ಸಹನೆ, ಯಾವುದಕ್ಕೂ ಅಂಟಿಕೊಳ್ಳದಿರುವುದು, ಸ್ವ ನಿಗ್ರಹ, ಕೌಶಲ್ಯ, ಖುಶಿ, ಪ್ರೇಮ, ವಿನಮ್ರತೆ, ಸ್ವ ಮನನ, ನೆಮ್ಮದಿ, ಗಾಂಭೀರ್ಯ, ಶ್ರಮ, ಭಾವನೆಗಳ ಮೇಲೆ ಹತೋಟಿ, ಉದಾರತೆ ಮತ್ತು ಏಕಾಗ್ರತೆ. ಯಾವಾಗಲಾದರೂ ನೀವು ಇತತರರಿಗೆ ಸಹಾಯ ಮಾಡಲು ಬಯಸುವುರಾದರೆ ಈ 16 ಗುಣ ಸ್ವಭಾವಗಳಿಂದ ಸ್ಪೂರ್ತಿ ಪಡೆಯಿರಿ. ಈ 16 ಗುಣಗಳನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಸ್ವಂತ ತ್ಯಾಗದ ಬಗ್ಗೆ ಉಲ್ಲೇಖ ಮಾಡಲಾಗಿಲ್ಲ. ಸ್ವಂತಕ್ಕೆ ಘಾಸಿ ಮಾಡಿಕೊಂಡು ಇತರರಿಗೆ ಸಹಾಯ ಮಾಡುವಲ್ಲಿ ಕೆಲ ತೊಂದರೆಗಳಿವೆ.

ತಾವೋ ಜೊತೆ ಹೆಜ್ಜೆ ಹಾಕುವ ಅನಿವಾರ್ಯತೆ ಮಾತ್ರ ನಿಮ್ಮದು. ಈ ಪ್ರಯಾಣದಲ್ಲಿ ನೀವು ಇತರರಿಗೆ ನಿಮಗೆ ಸಾಧ್ಯವಾದಷ್ಟು ನೆಮ್ಮದಿಯನ್ನು ಕೊಡಬಲ್ಲಿರಾದರೆ ನೀವು ನಿಮ್ಮ ಕೆಲಸ ಮಾಡಿದಂತೆಯೇ.

1 Comment

Leave a Reply