ನಮ್ಮನ್ನು ಯಾರೂ ಇಷ್ಟಪಡುವುದಿಲ್ಲ, ಪ್ರೀತಿಸುವುದಿಲ್ಲ ಎಂದು ಭಾವಿಸುವುದಕ್ಕಿಂತ ನಾನು ಇತರರನ್ನು ಹೇಗೆ ಪ್ರೀತಿಸಬಲ್ಲೆ ಎಂಬುದನ್ನು ಆಲೋಚಿಸಬೇಕು.
ಇಷ್ಟವಾದ ಗುಣಗಳು ನಮ್ಮಲ್ಲಿದ್ದರೆ ಇತರರು ನಮ್ಮನ್ನು ಇಷ್ಟಪಡುತ್ತಾರೆ. ಕಾರಣಾಂತರಗಳಿಂದ ಕೆಲವರು ಇಷ್ಟಪಡದೇ ಇರಬಹುದು, ಅಷ್ಟೆ. ಹಾಗೆಂದು ಎಲ್ಲರೂ ಎಲ್ಲರನ್ನೂ ಇಷ್ಟಪಡಲೇಬೇಕೆಂದೇನೂ ಇಲ್ಲ. ಅದು ಅಗತ್ಯವೂ ಅಲ್ಲ.
“ನಿಮ್ಮ ಪ್ರೀತಿ ಇತರರಲ್ಲಿ ಪ್ರೀತಿಯನ್ನು ಜಾಗೃತಗೊಳಿಸದಿದ್ದರೆ; ಅಂದರೆ, ನಿಮ್ಮ ಪ್ರೀತಿಯ ಮೂಲಕ ಇತರರ ಪ್ರೀತಿಗೆ ನೀವು ಪಾತ್ರರಾಗದೆ ಇದ್ದರೆ, ನಿಮ್ಮ ಪ್ರೀತಿ ನಿಸ್ಸತ್ವ ಮತ್ತು ದುರದೃಷ್ಟ ಎಂದು ತಿಳಿಯಬೇಕಾಗುತ್ತದೆ” ಅನ್ನುತ್ತಾನೆ ಮನಶ್ಶಾಸ್ತ್ರಜ್ಞ ಎರಿಕ್ ಫ್ರೊಮ್. ನಿಮ್ಮ ವೈಫಲ್ಯಕ್ಕೆ ನಿಮ್ಮೊಳಗಿನ ಸ್ವಾರ್ಥ ಅಥವಾ ಪ್ರತಿಫಲಾಪೇಕ್ಷೆಯೇ ಕಾರಣ. ಅದು ಪ್ರೇಮವನ್ನು ಡೈಲ್ಯೂಟ್ ಮಾಡುತ್ತದೆ. ಆದ್ದರಿಂದ, ನಮ್ಮನ್ನು ಯಾರೂ ಇಷ್ಟಪಡುವುದಿಲ್ಲ, ಪ್ರೀತಿಸುವುದಿಲ್ಲ ಎಂದು ಭಾವಿಸುವುದಕ್ಕಿಂತ ನಾನು ಇತರರನ್ನು ಹೇಗೆ ಪ್ರೀತಿಸಬಲ್ಲೆ ಎಂಬುದನ್ನು ಆಲೋಚಿಸಬೇಕು.
ಈ ನಿಟ್ಟಿನಲ್ಲಿ ಸೇಂಟ್ ಫ್ರಾನ್ಸಿಸ್ ಆಫ್ ಅಸಿಸ್ಸಿಯ ಈ ಕೆಳಗಿನ ಪ್ರಾರ್ಥನೆ ತುಂಬ ಬೋಧಪ್ರದವಾದುದು:
ಸಾಂತ್ವನ ಬಯಸುವ ಬದಲು ಸಾಂತ್ವನ ನೀಡುವ ಬಬಯಕೆ
ಗೌರವ ಬಯಸುವ ಬದಲು ಗೌರವ ನೀಡುವ ಬಯಕೆ
ಪ್ರೀತಿಯಾಶೆಯ ಬದಲು ಪ್ರೀತಿಸುವ ಬಯಕೆ
ಇವುಗಳನಿತ್ತು ರಕ್ಷಿಸೆಮ್ಮನು ದೇವದೇವ!
ನೀಡುವುದರಿಂದ ಪಡೆದಂತಾಗುವುದು
ಕ್ಷಮಿಸುವುದರಿಂದ ಕ್ಷಮಿಸಲ್ಪಡುವೆವು
ಮೃತ್ಯು ಭಯ ನೀಗಿ ಅಮರತ್ವ ದೊರೆಯುವುದು.
ಆದ್ದರಿಂದ, ಮತ್ತೊಬ್ಬರು ನನ್ನನ್ನು ಇಷ್ಟಪಡುತ್ತಾರೋ ಇಲ್ಲವೋ ಅನ್ನುವುದು ನಮ್ಮನ್ನು ಚಿಂತೆಗೆ ದೂಡಬೇಕಿಲ್ಲ. ನಾವು ಮತ್ತೊಬ್ಬರನ್ನು ಇಷ್ಟಪಡುತ್ತಲೇ ಇರುವುದು, ಎಲ್ಲರನ್ನೂ ಪ್ರೀತಿಸಲು ಕಲಿಯುವುದು ಆದ್ಯತೆಯಾಗಬೇಕು.
(ಅರಳಿ ಬಳಗ ಸಂಗ್ರಹದಿಂದ)