ಚಿತ್ರಗಳು, ಬಣ್ಣಗಳು, ಜ್ಯಾಮಿತಿ ಆಕಾರಗಳು – ಇವೆಲ್ಲವನ್ನು ಮಾನಸಿಕತೆಯ ಅಧ್ಯಯನಕ್ಕೆ, ಥೆರಪಿಗೆ ಬಳಸುವುದು ಪ್ರಾಚೀನ ಪದ್ಧತಿ. ಈಗ ಇದು ಪರ್ಸನಾಲಿಟಿ ಡೆವಲಪ್ಮೆಂಟ್ ಹಾಗೂ ಲೈಫ್ ಸ್ಟೈಲ್ ತರಗತಿಗಳಲ್ಲಿ ಸಾಮಾನ್ಯ. ಇವು ಮೂಢ ನಂಬಿಕೆಗಳಲ್ಲ. ಇವು ನಮ್ಮ ಇಷ್ಟಾನಿಷ್ಟಗಳು ನಮ್ಮ ಮಾನಸಿಕತೆಯ ಪ್ರತಿನಿಧಿಗಳೇ ಆಗಿರುವುದರಿಂದ, ಅದರ ಆಧಾರದ ಮೇಲೆ ನಡೆಸುವ ಮನೋವೈಜ್ಞಾನಿಕ ವಿಶ್ಲೇಷಣೆ. ಈಗಾಗಲೇ ಅರಳಿಮರ ಇಂತಹ ಕೆಲವು ಲೇಖನಗಳನ್ನು ಪ್ರಕಟಿಸಿದ್ದು, ಈ ಸರಣಿಯಲ್ಲಿ ‘ಮಂಡಲ’ಗಳು ನಮ್ಮ ಮನಸ್ಸು ಬಿಚ್ಚಿಡುವ ಕೆಲವು ಹೊಳಹುಗಳನ್ನು ನೀಡಿದ್ದೇವೆ.
ಈ ಮೂರು ಮಂಡಲಗಳನ್ನು ಗಮನವಿಟ್ಟು ನೋಡಿ. ನಿಮ್ಮ ಮನಸ್ಸನ್ನು ಸೆಳೆಯುತ್ತಿರುವ ಮಂಡಲ ಯಾವುದು? ಗುರುತು ಮಾಡಿಕೊಳ್ಳಿ. ಅದು ನಿಮ್ಮ ಮಂಡಲ. ಅನಂತರ ಯಾವ ಮಂಡಲ ಏನು ಹೇಳುತ್ತದೆ ಎಂಬುದನ್ನು ಓದಿಕೊಳ್ಳಿ.
ಮಂಡಲ 1
ನಿಮ್ಮ ಇತ್ತೀಚಿನ ಬೆಳವಣಿಗೆಗಳ ಅವಲೋಕನ ಮಾಡಿಕೊಳ್ಳಿ. ನೀವು ಹೊಸ ಹೊಸ ಅವಕಾಶಗಳನ್ನು ಮತ್ತು ವ್ಯಕ್ತಿಗಳನ್ನು ಆಕರ್ಷಿಸುತ್ತಿದ್ದೀರಿ. ನಿಮ್ಮಲ್ಲಿ ಒಂದು ವಿಶಿಷ್ಟ ಆತ್ಮವಿಶ್ವಾಸ ಮೂಡಿದೆ. ಅದು ನಿಮ್ಮಲ್ಲಿ ಹೊಸ ಭರವಸೆ ಬಿತ್ತಿದೆ ಮತ್ತು ಪ್ರೀತಿ, ಸಂತೋಷ, ಯಶಸ್ಸುಗಳನ್ನು ಅನುಭವಿಸುವಂತೆ ಮಾಡಿದೆ. ಈ ದಿನಗಳಲ್ಲಿ ನೀವು ಮಾಡಿದ್ದೆಲ್ಲ ಯಶ ಕಾಣುತ್ತಿದೆ.
ಈ ಮಾತುಗಳು ನಿಜವಾಗಿದ್ದರೆ ಮಾತ್ರ ಮುಂದಿನ ಸಾಲುಗಳನ್ನು ಓದಿ.
“ಪ್ರತಿಯೊಂದಲ್ಲೂ ನಿಖರತೆ ಬಯಸುವ ನೀವು, ನಿಮ್ಮ ಯಶಸ್ಸನ್ನು ಉಳಿಸಿಕೊಳ್ಳಬೇಕೆಂದರೆ, ನಿಮ್ಮ ಕೆಲಸದಲ್ಲಿ ಸ್ವತಃ ನೀವು ಕೂಡಾ ನಿಖರತೆ ತೋರಿಸಬೇಕಾಗುತ್ತದೆ. ಎಲ್ಲರನ್ನೂ ಎಲ್ಲವನ್ನೂ ಆಕರ್ಷಿಸುತ್ತಿರುವ ನೀವು, ಇತರರನ್ನು ಮೆಚ್ಚುವ ಮತ್ತು ಅದನ್ನು ತೋರ್ಪಡಿಸುವ ರೂಢಿ ಮಾಡಿಕೊಳ್ಳುವುದು ಅತಿ ಮುಖ್ಯ” ಅನ್ನುತ್ತಿದೆ ಈ ಮಂಡಲ.
ಮಂಡಲ 2
ನೀವು ಅತ್ಯುತ್ತಮ ಮಾತುಗಾರರು. ಪ್ರತಿಯೊಂದನ್ನೂ ಕೂದಲು ಸೀಳುವಂತೆ ಸೀಳುತ್ತಾ ವಿಶ್ಲೇಷಣೆ ನಡೆಸುವುದೆಂದರೆ ನಿಮಗಿಷ್ಟ. ಬಹುತೇಕ ಚರ್ಚೆಗಳಲ್ಲಿ ಜಯ ನಿಮ್ಮದೇ. ಪ್ರತಿಯೊಂದಕ್ಕೂ ಪ್ರತಿಕ್ರಿಯಿಸುವುದು ನಿಮ್ಮ ಗುಣ.
ಇದು ಹೌದೇ ಆಗಿದ್ದಲ್ಲಿ ಮಾತ್ರ ಮುಂದಿನ ಸಾಲುಗಳನ್ನು ಓದಿ.
“ನೀವು ಪ್ರತಿಯೊಬ್ಬರನ್ನೂ ಒಪ್ಪಿಸಲೆಂದೇ ಮಾತಾಡಬೇಕಿಲ್ಲ. ನಿಮ್ಮನ್ನು ಆಹ್ವಾನಿಸುವ ಪ್ರತಿಯೊಂದು ವಾಗ್ವಾದದಲ್ಲೂ ಭಾಗವಹಿಸಲೇಬೇಕೆಂಬ ನಿಶ್ಚಯವನ್ನು ಸ್ವಲ್ಪ ಕಾಲ ಸಡಿಲಗೊಳಿಸಿ. ಮತ್ತೊಬ್ಬರ ಭಾವನೆಗಳಿಗೆ ನೀವು ಸ್ಪಂದಿಸಲೇಬೇಕಂಬ ನಿಯಮವೂ ಇಲ್ಲ, ಮರೆಯದಿರಿ. ಈ ಎಲ್ಲ ಮಾತು, ಆಲೋಚನೆ, ಕನ್ವಿನ್ಸ್ ಮಾಡುವ ಸಾಮರ್ಥ್ಯವನ್ನು ನಿಮಗಾಗಿ ಬಳಸಿಕೊಳ್ಳಿ. ನಿಮ್ಮನ್ನು ನೀವು ಒಪ್ಪಿಸಬೇಕಾದ ವಿಚಾರಗಳು ಸಾಕಷ್ಟಿವೆ. ಅವುಗಳತ್ತ ಗಮನ ಕೊಡಿ” ಅನ್ನೋದು ಈ ಮಂಡಲದ ಸೂಚನೆ.
ಮಂಡಲ 3
ಎಲ್ಲವನ್ನೂ ನಿಭಾಯಿಸುತ್ತೇನೆ ಅಂದುಕೊಂಡು, ಉಲ್ಲನ್ ಚೆಂಡಿನೊಡನೆ ಆಡುವ ಬೆಕ್ಕಿನಂತೆ ಗೋಜಲು ಮಾಡಿಕೊಳ್ಳುವುದು ನಿಮ್ಮ ಸ್ವಭಾವ. ಅನಂತರ ಅದನ್ನು ಸರಿಪಡಿಸಿಕೊಳ್ಳಲು ಹರಸಾಹಸ ಮಾಡಬೇಕಾಗುತ್ತದೆ. ನಿಮ್ಮ ಎನರ್ಜಿ ಎಲ್ಲಾ ಇದಕ್ಕೇ ಖರ್ಚಾಗಿ ನೀವು ಬೇರೇನೂ ಮಾಡಲಾಗದೆಹೋಗುತ್ತೀರಿ. ಇದು ನಿಮ್ಮ ಇತರ ಕೆಲಸಗಳ ಮೇಲೆ ಪರಿಣಾಮ ಬೀರುತ್ತಿದೆ.
ಹೌದೆ? ಹಾಗಿದ್ದಲ್ಲಿ ಮಾತ್ರ ಮುಂದೆ ಓದಿ.
ನಿಮ್ಮ ಖಾಸಗಿ ಬದುಕಿನ ಗೋಜಲುಗಳನ್ನು ಬಿಡಿಸಿಕೊಳ್ಳಲು ಇದು ಸರಿಯಾದ ಸಮಯ. ಸಾಧ್ಯವಾದಷ್ಟೂ ಹತ್ತು ಹಲವು ಸಂಬಂಧಗಳನ್ನು ಗುಡ್ಡೆ ಹಾಕಿಕೊಳ್ಳಬೇಡಿ. ನಿಮ್ಮ ಪರಿಚಿತ ವಲಯದ ಯಾರೋ ಇಬ್ಬರು ಪರಸ್ಪರ ದ್ವೇಷಿಸುತ್ತಾರೆ ಎಂದರೆ ಅದಕ್ಕೆ ನೀವು ಜವಾಬ್ದಾರರಾಗಬೇಕಿಲ್ಲ. ಅವರನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ನೀವು ಗಂಟಿಗೆ ಸಿಲುಕುತ್ತೀರಿ. ಆದ್ದರಿಂದಸದ್ಯಕ್ಕೆ ರಿಲೇಶನ್’ಶಿಪ್ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನೀವು ಸಹಜವಾಗಿದ್ದರೆ ಸಾಕು. ಮುಂದೆ ಎಲ್ಲವೂ ತಾನಾಗಿಯೇ ಸರಿಹೋಗುತ್ತವೆ” ಅನ್ನುತ್ತಿದೆ ಈ ಮಂಡಲ.