‘ಧಮ್ಮ’ ಪ್ರಸಾರಕ್ಕಾಗಿ ಬದುಕನ್ನೇ ಮುಡಿಪಿಟ್ಟ ತಾಯಿ : ಜೀವಾ

ಮಗ ಸಿದ್ಧನಾಗಿ ನಿಂತಾಗ ಅವನಿಂದ ದೂರ ಸರಿಯತೊಡಗುತ್ತಾಳೆ. ಕುಮಾರಜೀವ ಧರ್ಮಪ್ರಸಾರಕ್ಕಾಗಿ ಚೀನಾದ ಕಡೆ ಹೊರಟುನಿಂತಾಗ ಕುಶಾನದಲ್ಲಿರುತ್ತಾಳೆ ಜೀವಾ. ಆದರೆ ಅದು ಕುಶಾನರ ಅಧಃಪತನದ ಕಾಲ. ಬೌದ್ಧ ಧರ್ಮ ನೆಲೆ ಕಳೆದುಕೊಳ್ಳುತ್ತ ಇತರ ದಿಕ್ಕುಗಳೆಡೆಗೆ ಸಾಗುತ್ತಿದ್ದ ಕಾಲ. ಕುಮಾರಜೀವನಿಗೆ ವಿದಾಯ ಕೋರಿ ಕಾಶ್ಮೀರಕ್ಕೆ ತೆರಳುತ್ತಾಳೆ ಜೀವಾ. ಮತ್ತೆಂದೂ ಆತನನ್ನು ಭೇಟಿಯಾಗುವುದೇ ಇಲ್ಲ… ~ ಚೇತನಾ ತೀರ್ಥಹಳ್ಳಿ

kumrajva-68d5aa48-3d28-4e12-8c66-ed46267a4b1-resize-750

“ಉಹು.. ನನ್ನನ್ನ ಹೋಗೋಕೆ ಬಿಡುವವರೆಗೂ ನಾನು ಊಟ ಮಾಡೋದಿಲ್ಲ. ನೀರೂ ಮುಟ್ಟೋಲ್ಲ”
“ಹೀಗೆಲ್ಲ ಹಟ ಹಿಡಿದರೆ ಹೇಗೆ ಮಡದೀ? ನಮ್ಮ ಪ್ರೇಮವನ್ನ ಮರೆತೆಯಾ?”
“ನಾನು ಹೋಗ್ತೀನಂದ ಮಾತ್ರಕ್ಕೆ ಪ್ರೇಮ ಇರೋದಿಲ್ಲ ಅಂತ ಯಾಕೆ ಅಂದುಕೊಳ್ತೀರಿ?”
“ನಿನ್ನ ಬಿಟ್ಟು ನಾನಿರಲಾರೆ. ಇವತ್ತಲ್ಲ ನಾಳೆ ನನ್ನ ಮಾತನ್ನೊಪ್ಪಿಕೊಳ್ತೀಯ ನೀನು”

ಆರು ದಿನಗಳು ಕಳೆದವು. ಅವಳು ಊಟವಿರಲಿ, ಒಂದು ಹನಿ ನೀರಿಗೂ ತುಟಿ ಸೋಕಿಸಲಿಲ್ಲ. ಮೈಯೊಣಗಿತು. ಶಕ್ತಿ ಕುಂದುತ್ತ ಹೋಯ್ತು. ಸುಮ್ಮನೆ ಜಗುಲಿಯಲ್ಲಿ ಉರುಳಿಕೊಂಡಳು.

ಅವಳದ್ದೊಂದೇ ಹಟ, “ನನ್ನನ್ನ ಹೋಗಲು ಬಿಡು”.
ಅವನ ಮನಸೊಪ್ಪಲಿಲ್ಲ. ಅವಳಿಗೆ ಮನೆ ತೊರೆಯಲು ಬಿಡದಿದ್ದರೆ ದೇಹವನ್ನೇ ತೊರೆದು ನಡೆಯುತ್ತಾಳೆ!
ಕೊನೆಗೂ ಒಪ್ಪಿಕೊಂಡ. “ಸರಿ. ನಾನು ತಡೆಯೋದಿಲ್ಲ. ಇನ್ನಾದರೂ ಹಣ್ಣಿನ ರಸ ಕುಡಿ. ಊಟಕ್ಕೆ ನಡಿ…”

ಅವಳ ಪೇಲವ ಮುಖದಲ್ಲಿ ನಗು ಸುಳಿಯಿತು. ಗಂಡನ ಪ್ರೀತಿ ಅವಳನ್ನ ಬದುಕಿಸಿತು.
“ಖಂಡಿತಾ. ಹಣ್ಣಿನ ರಸ ತರಿಸಿ. ಅದಕ್ಕೂ ಮುಂಚೆ ಧರ್ಮಪಾಲರನ್ನ ಬರಹೇಳಿ. ನೀವು ಕೊಡುವ ಹಣ್ಣಿನ ರಸವೇ ನನಗೆ ಮೊದಲ ಭಿಕ್ಷೆಯಾಗಲಿ.”

ಕುಮಾರಾಯನ ಧರ್ಮಪಾಲರನ್ನು ಕರೆಸುತ್ತಾನೆ. ಬಿಕ್ಖುಗಳು, ಬಿಕ್ಖುಣಿಯರು ಬಂದು ಸೇರುತ್ತಾರೆ. ಮಂತ್ರ ಪಠಣಗಳೊಂದಿಗೆ ಜೀವಾಳ ಕೂದಲು ಕತ್ತರಿಸಿ ಬೀಳುತ್ತದೆ. ಅವಳೂ ಈಗ ಬೌದ್ಧ ಬಿಕ್ಖುಣಿ. ಕುಮಾರಾಯನನಿಂದ ಭಿಕ್ಷೆ ಪಡೆದು ಹೊರಡುತ್ತಾಳೆ, ಹಿಂತಿರುಗಿ ನೋಡದೆ.

ಪ್ರೀತಿಸಿ ಮದುವೆಯಾದ ಗಂಡ, ಮುದ್ದಿನಿಂದ ಬೆಳೆಸಿದ ಅಣ್ಣ, ರಾಜ ಪರಿವಾರಗಳೆಲ್ಲವೂ ಹಿಂದೆಯೇ ಉಳಿಯುತ್ತದೆ, ಏಳು ವರ್ಷದ ಪುಟ್ಟ ಮಗನೊಬ್ಬ ಜೊತೆಗೆ.
~

ಜೀವಾ ಕುಶಾನ ರಾಜಮನೆತನದ ಹೆಣ್ಣುಮಗಳು. ಕುಶಾನ ಅಥವಾ ಕುಶಿನ್‌ ಮಧ್ಯ ಏಷ್ಯಾದ ಒಂದು ಸವಿಸ್ತಾರ ರಾಜ್ಯ. ಬೌದ್ಧ ಧರ್ಮಕ್ಕೆ ಕೆಂಪು ಹಾಸು ಹಾಸಿ ಬೆಳೆಸಿತ್ತು ಅದು. ಬುದ್ಧನ ಬೋಧನೆಗಳು ಚೀನಾ, ಜಪಾನ್‌ಗಳನ್ನು ತಲುಪುವ ನೂರಾರು ವರ್ಷಗಳ ಮೊದಲೇ ಕುಶಾನರು ಅವನ್ನು ತಮ್ಮ ರಕ್ತದಂತೆ ಬದುಕಲ್ಲಿ ಅಳವಡಿಸಿಕೊಂಡಿದ್ದರು. ಹಾಗೆಂದೇ ಮಂತ್ರಿಯ ಮಗನೂ ಆಗಿದ್ದ ಕಾಶ್ಮೀರದ ಪಂಡಿತರ ಮನೆಯ ಹುಡುಗ ಕುಮಾರಾಯನ ದೇಶ ಬಿಟ್ಟು ಬಂದಾಗ ಅಲ್ಲಿನ ದೊರೆಗಳು ಆದರಿಸಿದ್ದರು. ಬ್ರಾಹ್ಮಣನಾಗಿದ್ದ ಆತ ಬೌದ್ಧತತ್ತ್ವಗಳಿಂದ ಆಕರ್ಷಿತನಾಗಿ ಅವುಗಳ ಗಹನ ಅಧ್ಯಯನ ನಡೆಸಿದ್ದ. ಕೊನೆಗೊಂದು ದಿನ ಸಂಸಾರ ತ್ಯಜಿಸಿ ಬೌದ್ಧ ಬಿಕ್ಖುವಾಗಿ ತನಗಾಗಿ ಕಾದಿದ್ದ ಮಂತ್ರಿ ಪದವಿಯನ್ನೂ ಪರಿವಾರವನ್ನೂ ಬಿಟ್ಟು ನಡೆದಿದ್ದ.

ಕುಮಾರಾಯನನನ್ನು ಕುಶಾನರು ತಮ್ಮ ರಾಜಪಂಡಿತನನ್ನಾಗಿ ಮಾಡಿಕೊಂಡರು. ಮನೆಗಿಂತ ಹೆಚ್ಚು ವಿಚಾರ ಗೋಷ್ಠಿಗಳಲ್ಲೇ ಕಾಲ ಕಳೆಯುತ್ತಿದ್ದ ಜೀವಾ ಆತನಿಂದ ಆಕರ್ಷಿತಳಾದಳು. ಅದುವರೆಗೂ ಮದುವೆ ಬೇಡವೆಂದು ಹಟ ಹಿಡಿದಿದ್ದ ಹುಡುಗಿ ಈಗ ಮತ್ತೊಂದು ಹಟ ಮುಂದಿಟ್ಟಳು. “ನಾನು ಮದುವೆಯಾಗುವುದಾದರೆ ಅಂತಲ್ಲ, ನಾನು ಖಂಡಿತವಾಗಿಯೂ ಕುಮಾರಾಯನನ್ನು ಮದುವೆಯಾಗ್ತೀನಿ. ನೀವು ಅವರ ಬಳಿ ಪ್ರಸ್ತಾಪವಿಡಬೇಕು”!

ಬುದ್ಧಿವಂತಳೂ ವಿನಯಶೀಲಳೂ ಆಗಿದ್ದ ತಂಗಿಯ ಬೇಡಿಕೆ ಅಣ್ಣಂದಿರಿಗೇನೋ ಪ್ರಿಯವೇ ಆಗಿತ್ತು. ಆದರೆ ಬಿಕ್ಖುವಿನಂತೆ ಇರುತ್ತಿದ್ದ ಕುಮಾರಾಯನನನ್ನು ಒಪ್ಪಿಸೋದು ಹೇಗೆ?

ಜೀವಾ ತನ್ನ ಲಜ್ಜೆಯ ಪರದೆ ಸರಿಸಿದಳು. ತಾನೇ ಮಾತಾಡಿ ನೋಡುವೆನೆಂದು ಹೊರಟಳು. ಹೆಚ್ಚೇನೂ ಕಷ್ಟವಾಗಲಿಲ್ಲ. ಕುಮಾರಾಯನ ಸಹಜವಾಗಿಯೇ ಬುದ್ಧಿವಂತ ಪ್ರೇಮಾಕಾಂಕ್ಷಿಯ ವಾದಕ್ಕೆ ಸೋತ. ಶಾಸ್ತ್ರಾರ್ಥಗಳಿಂದಲೇ ಆತನ ಮುಂದೆ ತನ್ನ ಮನದಿಂಗಿತ ತೋಡಿಕೊಂಡು ಮದುವೆಗೆ ಒಪ್ಪಿಸಿದ್ದಳು ಜೀವಾ. ಇಂಥಾ ಹೆಂಡತಿಯಿಂದ ತನ್ನ ಆಧ್ಯಾತ್ಮಿಕ ಸಾಧನೆಗೆ ಅಣುವಿನಷ್ಟೂ ಬಾಧೆಯಾಗದು ಅನ್ನುವುದು ಕುಮಾರಾಯನನಿಗೆ ಖಾತ್ರಿಯಾಯ್ತು. ಮದುವೆ ನಡೆಯಿತು.

ಜೀವಾ ಬಹುಬೇಗ ತಾಯಿಯೂ ಆದಳು. ಆ ದಂಪತಿಯ ಪರಸ್ಪರ ಪ್ರೇಮ ಎಷ್ಟಿತ್ತೆಂದರೆ, ತಮ್ಮಿಬ್ಬರ ಹೆಸರುಗಳನ್ನು ಕೂಡಿಸಿ ಮಗುವಿಗೆ ’ಕುಮಾರಜೀವ’ ಎಂದು ನಾಮಕರಣ ಮಾಡಿದರು.

ತಾಯ್ತನದ ಅನುಭೂತಿಯೊಡನೆ ಜೀವಾಳ ಜೀವನಚಹರೆಯೇ ಬದಲಾಗತೊಡಗಿತು. ಅವಳೀಗ ಮೊದಲಿನಂತೆ ಹುಡುಗಾಟದವಳಾಗಿ ಉಳಿಯಲಿಲ್ಲ. ಅಧ್ಯಯನದಲ್ಲಿ ತನ್ನನ್ನು ತೊಡಗಿಸಿಕೊಂಡು, ಆಗ ತಾನೆ ಮಾತು ಕಲಿಯುತ್ತಿದ್ದ ಮಗನನ್ನೂ ಕೂರಿಸಿಕೊಂಡು, ತಾನು ಓದುವುದೆಲ್ಲವೂ ಅವನ ಕಿವಿಯ ಮೇಲೆ ಬೀಳುವಂತೆ ಮಾಡುತ್ತಿದ್ದಳು. ಹೀಗೇಕೆಂದು ಕೇಳಿದರೆ ಅವಳ ಉತ್ತರ, “ಬೌದ್ಧ ಧರ್ಮದ ಶಾಂತಿ ಜಗತ್ತನ್ನು ತಬ್ಬಬೇಕು. ನನ್ನ ಮಗ ಅಪ್ಪನಿಂದ ಸಂಸ್ಕೃತ ಕಲಿಯುತ್ತಾನೆ. ನನ್ನಿಂದ ಈ ನೆಲದ ಭಾಷೆ ತಿಳಿಯುತ್ತಾನೆ. ಮತ್ತೂ ಪೂರ್ವಕ್ಕೆ ಅವನು ಹೋಗುವಂತಾಗಬೇಕು. ಸಂಸ್ಕೃತದಿಂದ, ಪಾಲಿಯಿಂದ ಬುದ್ಧನ ಬೋಧನೆಗಳನ್ನು, ಸೂಕ್ತಗಳನ್ನೂ ಪೂರ್ವದ ಭಾಷೆಗಳಿಗೆ ಅನುವಾದ ಮಾಡಬೇಕು. ಧರ್ಮವನ್ನು ಹರಡಬೇಕು…”
~

ಏಳು ವರ್ಷದ ಮಗುವನ್ನು ಕರೆದುಕೊಂಡು ಸನ್ಯಾಸಿನಿ ಮಠಕ್ಕೆ ತೆರಳುವ ಜೀವಾಳಿಗೆ ಬುದ್ಧನ ತವರಾದ ಭಾರತದಲ್ಲಿ ಅವನ ಅಧ್ಯಯನ ಮಾಡಿಸುವಾಸೆ. ಅದರಂತೆ ಕಾಶ್ಮೀರಕ್ಕೆ ತೆರಳುತ್ತಾಳೆ. ಎರಡು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿಸುತ್ತಾಳೆ. ಅಲ್ಲಿಂದ ಮತ್ತೆ ಪೂರ್ವಕ್ಕೆ ಪ್ರಯಾಣ. ಮತ್ತೆ ಚೀನಾದೆಡೆಗೆ… ಹೀಗೆ ಅಲ್ಪಾವಧಿಯಲ್ಲೇ ಮಗನೊಂದಿಗೆ ಸಾಕಷ್ಟು ಸುತ್ತಾಡುತ್ತಾಳೆ. ತನ್ನ ಮಗನನ್ನು ತಯಾರು ಮಾಡಬಲ್ಲ ಗುರುವಿಗಾಗಿ ಅರಸುತ್ತಾಳೆ. ಹಿರಿಯ ಸನ್ಯಾಸಿಗಳಿಂದ ಬೋಧನೆ ಮಾಡಿಸುತ್ತಾಳೆ. ವಿವಿಧ ಭಾಷೆಗಳನ್ನು ಕಲಿಸುತ್ತಾಳೆ.

ಮಗ ಸಿದ್ಧನಾಗಿ ನಿಂತಾಗ ಅವನಿಂದ ದೂರ ಸರಿಯತೊಡಗುತ್ತಾಳೆ. ಕುಮಾರಜೀವ ಧರ್ಮಪ್ರಸಾರಕ್ಕಾಗಿ ಚೀನಾದ ಕಡೆ ಹೊರಟುನಿಂತಾಗ ಕುಶಾನದಲ್ಲಿರುತ್ತಾಳೆ ಜೀವಾ. ಆದರೆ ಅದು ಕುಶಾನರ ಅಧಃಪತನದ ಕಾಲ. ಬೌದ್ಧ ಧರ್ಮ ನೆಲೆ ಕಳೆದುಕೊಳ್ಳುತ್ತ ಇತರ ದಿಕ್ಕುಗಳೆಡೆಗೆ ಸಾಗುತ್ತಿದ್ದ ಕಾಲ. ಕುಮಾರಜೀವನಿಗೆ ವಿದಾಯ ಕೋರಿ ಕಾಶ್ಮೀರಕ್ಕೆ ತೆರಳುತ್ತಾಳೆ ಜೀವಾ. ಮತ್ತೆಂದೂ ಆತನನ್ನು ಭೇಟಿಯಾಗುವುದೇ ಇಲ್ಲ.

ಕುಮಾರಜೀವ ಅಮಿತಾಭ ಸುತ್ತ, ಪದ್ಮಸುತ್ತವೇ ಮೊದಲಾದ ಬೌದ್ಧ ಮಂತ್ರ ಹಾಗೂ ಬೋದನೆಗಳನ್ನು ಚೀನೀ ಭಾಷೆಗೆ ಅನುವಾದಿಸುತ್ತಾನೆ. ಈವರೆಗೆ ಇರುವ ಸಹಸ್ರಾರು ಅನುವಾದಗಳಲ್ಲಿ, ೪ನೇ ಶತಮಾನದಲ್ಲಿ ಮಾಡಲಾದ ಕುಮಾರಜೀವನ ಅನುವಾದವೇ ಸರ್ವಶ್ರೇಷ್ಠ ಮತ್ತು ಅಧಿಕೃತ ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ ಮತ್ತು ಇಂದಿಗೂ ಅಲ್ಲಿನ ಬೌದ್ಧರು ಪಠಿಸುವುದು ಕುಮಾರಜೀವನ ಅನುವಾದವನ್ನೇ. ಹೀಗೆ ಬಿಕ್ಖುಣಿ ಜೀವಾಳ ತ್ಯಾಗದ ಬದುಕು ಮತ್ತು ಪ್ರಯತ್ನಗಳು ಸಾರ್ಥಕಗೊಳ್ಳುತ್ತವೆ. ತಾಯಿಯ ಹೆಸರು ಮಾತ್ರವಲ್ಲ, ಆಕೆಯ ಆದರ್ಶವನ್ನೂ ಹೊತ್ತ ಮಗ, ಆಕೆಯ ಬಯಕೆ ಈಡೇರಿಸಿ ಅರ್ಹನ್ತನೆನಿಸುತ್ತಾನೆ.

“ಉದ್ದೇಶ ಈಡೇರಿದ ಬಳಿಕವೂ ಸಾಧನವನ್ನ ಹಿಡಿದಿಟ್ಟುಕೊಳ್ಳೋದು ಯಾಕೆ?” ಎಂದು ಮಗನನ್ನು ಬೀಳ್ಕೊಟ್ಟು ಹೊರಟುಬಿಟ್ಟ ಜೀವಾ, ಸನ್ಯಾಸದ ನಿಜ ರೂಪಕವಾಗಿ ಉಳಿಯುತ್ತಾಳೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.