ದೇವರೊಬ್ಬನೇ, ದಾರಿ ಬೇರೆ ಬೇರೆ…. : ಅರಳಿಮರ POSTER

ಧರ್ಮ, ಬದುಕನ್ನು ಸ್ವಸ್ಥವೂ ಸುಂದರವೂ ಆಗಿಸಿಕೊಳ್ಳಲೆಂದೇ ಇರುವ ದಾರಿ. ಸಹಜೀವಿಗಳೊಡನೆ ಸೌಹಾರ್ದದ ಬದುಕು ಬಾಳಲು ಮನುಷ್ಯ ತನಗೆ ತಾನೆ ಹಾಕಿಕೊಂಡ ನಿಯಮ. ದಾರಿ ಅಂದ ಮೇಲೆ ಅದು ಒಂದಕ್ಕೆ ಸೀಮಿತವಲ್ಲ. ಸೃಷ್ಟಿಯೊಂದು ಬಯಲು. ಬಯಲಲ್ಲಿ ಯಾರು ಎಲ್ಲಿ ನಡೆಯುತ್ತಾರೋ ಅದೆಲ್ಲವೂ ದಾರಿಯೇ. 

ಕೆಲವರು ಒಬ್ಬರು ನಡೆದ ದಾರಿಯನ್ನೇ ಅನುಸರಿಸಿ, ಈ ಅನುಚರರ ಸಂಖ್ಯೆ ಹೆಚ್ಚಾಗಿದ್ದಿರಬಹುದು. ಇನ್ನು ಕೆಲವು ದಾರಿಗಳಲ್ಲಿ ಕಡಿಮೆ ಸಂಖ್ಯೆಯ ಪಥಿಕರಿರಬಹುದು. ಆಯಾ ದಾರಿಗೊಂದು ಗುರುತಿನ ಅನುಕೂಲಕ್ಕಾಗಿ ಹೆಸರು ಕೊಟ್ಟಿರಬಹುದು. ಕೆಲವು ನಿಶ್ಶಬ್ದ ದಾರಿಗಳು ಹೆಸರಿಲ್ಲದೆಯೂ ಇರಬಹುದು. ಅದೇನೇ ಇದ್ದರೂ ಎಲ್ಲ ದಾರಿಯ ಗುರಿ ಒಂದೇ. ಪರಮ ಸತ್ಯವನ್ನು ಹೊಂದುವುದು. 

ಇದನ್ನು ಕೆಲವರು ದೇವರೆಂದೂ ಕೆಲವರು ಮೋಕ್ಷವೆಂದೂ ಕೆಲವು ಜ್ಞಾನೋದಯವೆಂದೂ ಮತ್ತೆ ಕೆಲವರು ಸ್ವರ್ಗವೆಂದೂ ಕರೆದಿರುವರು. ಅದೇನೇ ಇದ್ದರೂ ಗುರಿ ಇರುವುದು ಒಂದೇ. ಆಯಾ ದಾರಿಯ ನಡಿಗೆಯಂತೆ ಅದಕ್ಕೆ ಹಲವು ಹೆಸರು. ಹಿಂದೂ, ಕ್ರೈಸ್ತ, ಮುಸಲ್ಮಾನ, ಬೌದ್ಧ, ಯಹೂದಿ…. ಹತ್ತಾರು, ನೂರಾರು ಹೆಸರು. 

ಈ ಮಾತನ್ನು ಸಾಧಕರೆಲ್ಲರೂ ಹೇಳಿದ್ದಾರೆ. ಸತ್ಯದ ಹಾದಿ ನಡೆದವರಿಗೆ ಮಾತ್ರ ಈ ಅರಿವು ದಕ್ಕುವುದರಿಂದ, ಸರ್ವ ಧರ್ಮ ಸಮಭಾವ ಸಾರಿದವರ ಸಂಖ್ಯೆ ತೀರ ಕಡಿಮೆ. ಯಾರು ಪ್ರತ್ಯೇಕಿಸುತ್ತಾರೋ, ಯಾರು ಭೇದ ಬಿತ್ತುತ್ತಾರೋ, ಅವರಿಗೆ ಸತ್ಯದ ಹಾದಿಯಿನ್ನೂ ತಲುಪಿಲ್ಲ, ಸತ್ಯದರ್ಶನವಾಗಿಲ್ಲ ಎಂದೇ ಅರ್ಥ ಅಲ್ಲವೆ? 

ಇರಲಿ. ಎಲ್ಲ ಧರ್ಮಗಳೂ ಭಗವಂತನ ಕುರಿತು ಹೇಳುವುದೊಂದೇ ಅನ್ನುವುದಕ್ಕೆ ಚಿಕ್ಕ ನಿದರ್ಶನ, ಈ Posterನಲ್ಲಿ ನೋಡಿ…

dharma

 

Leave a Reply