ಯಾವುದರಿಂದ ಏನು ಕಲಿಯಬೇಕು? : ಶ್ರೀ ಕೃಷ್ಣ ಉದ್ಧವನಿಗೆ ಹೇಳಿದ್ದು…

ಶ್ರೀ ಕೃಷ್ಣನ ಅವತಾರ ಸಮಾಪ್ತಿ ಸಮೀಪಿಸುತ್ತಿದ್ದಾಗ ಉದ್ಧವ ಅವನ ಬಳಿ ಸಾರಿ ತನಗೆ ಉಪದೇಶ ನೀಡೆಂದು ಕೋರುತ್ತಾನೆ. ಆಗ ಶ್ರೀ ಕೃಷ್ಣ, ಅವನಿಗೆ ಪ್ರಕೃತಿಯಲ್ಲಿ ದೊರೆಯುವ ಮಾರ್ಗದರ್ಶಕರು ಮತ್ತು ಅದರಲ್ಲಿ ಯಾರಿಂದ ಏನು ಕಲಿಯಬೇಕು ಎಂಬುದನ್ನು ತಿಳಿಸುತ್ತಾನೆ… 

ನಿಮ್ಮ ನಿಮ್ಮಲ್ಲೇ ಹೊಡೆದಾಡಿ ಯಾದವ ಕುಲ ನಾಶವಾಗಲಿ ಎಂದು ಕುರುಕ್ಷೇತ್ರ ಯುದ್ಧದಲ್ಲಿ ಮಕ್ಕಳನ್ನು ಕಳೆದುಕೊಂಡ ಗಾಂಧಾರಿ ಕೃಷ್ಣನಿಗೆ ಶಾಪ ನೀಡಿದ್ದಳು. ಅದಕ್ಕೆ ಸರಿಯಾಗಿ ದೂರ್ವಾಸರು ತನ್ನೊಡನೆ ಅಧಿಕಪ್ರಸಂಗವಾಡಿದ ಸಾಂಬನಿಗೆ ನಿನ್ನ ಹೊಟ್ಟೆಯಲ್ಲಿ ಒನಕೆ ಹುಟ್ಟಿ, ನೀವೆಲ್ಲರೂ ಅದರಲ್ಲೇ ಹೊಡೆದಾಡಿಕೊಂಡು ನಾಶವಾಗುತ್ತೀರೆಂದು ಶಪಿಸಿದ್ದರು. ಅದಕ್ಕೆ ಸರಿಯಾಗಿ ದ್ವಾರಕೆಯನ್ನು ಸುತ್ತುವರಿದಿದ್ದ ಸಮುದ್ರ ಉಕ್ಕೇರಿ ಏಳು ದಿನಗಳಲ್ಲಿ ಸಂಪೂರ್ಣ ಮುಳುಗಿಹೋಗುವುದು ಖಚಿತವಾಗಿತ್ತು. ಒಟ್ಟಾರೆ ಶ್ರೀಕೃಷ್ಣನ ಅವತಾರ ಸಮಾಪ್ತಿಯ ಕಾಲ.

ಇಂಥಾ ಸಮಯದಲ್ಲಿ ಉದ್ಧವ ಕೃಷ್ಣನ ಬಳಿ ಬಂದು, ಕೊನೆಯ ದಿನಗಳಲ್ಲಾದರೂ ಮನಸ್ಸಿಗೆ ಶಾಂತಿ ಬೇಕೆನಿಸಿದೆ. ಏನಾದರೂ ಸೂಚಿಸು ಎಂದು ಕೇಳುತ್ತಾನೆ. ಅದಕ್ಕೆ ಕೃಷ್ಣನು ಉದ್ಧವನಿಗೆ ತೀರ್ಥಯಾತ್ರೆಗೆ ಹೋಗುವಂತೆ ಸೂಚಿಸಿ, ಕೆಲವು ನಿರ್ದೇಶನಗಳನ್ನು ನೀಡುತ್ತಾನೆ.

“ಭೂಮಿಯಿಂದ ಸರ್ವಸಂಗ ಪರಿತ್ಯಾಗವನ್ನೂ,

ನೀತಿಯುಕ್ತ ಬದುಕಿಗಾಗಿ ಭೂಮಿಯಿಂದ ಕ್ಷಮಾಗುಣವನ್ನೂ,

ವಾಯುವಿನಿಂದ ನಿರ್ಲಿಪ್ತತೆಯನ್ನೂ,

ಜಲದಿಂದ ಪವಿತ್ರತೆಯನ್ನೂ,

ಆಕಾಶದಿಂದ ನಿರ್ದೋಷತ್ವವನ್ನೂ,

ಅಗ್ನಿಯಿಂದ ಶುಚಿತ್ವವನ್ನೂ,

ಚಂದ್ರನಿಂದ ನಿರ್ವಿಕಾರ ಬುದ್ಧಿಯನ್ನೂ,

ಸೂರ್ಯನಿಂದ ಸ್ವಾರ್ಥತ್ಯಾಗವನ್ನೂ,

ಪಾರಿವಾಳದಿಂದ ಅತಿಸ್ನೇಹ ವರ್ಜನೆಯನ್ನೂ,

ಹೆಬ್ಬಾವಿನಿಂದ ಸಿಕ್ಕಿದ್ದರಲ್ಲೇ ತೃಪ್ತಿಪಡುವುದನ್ನೂ,

ಸಮುದ್ರದಿಂದ ಸುಖ ದುಃಖಗಳನ್ನು ಸಮವಾಗಿ ಸ್ವೀಕರಿಸುವುದನ್ನೂ,

ಜೇನುನೊಣದಿಂದ ಸದಾ ಸಂಚರಿಸುತ್ತಿರಬೇಕೆಂಬುದನ್ನೂ,

ಆನೆಯಿಂದ ಮೋಸವಾಗಬಾರದೆಂಬುದನ್ನೂ,

ಜಿಂಕೆಯಿಂದ ಚಂಚಲಚಿತ್ತನಾಗಬಾರದೆಂಬುದನ್ನೂ,

ಮೀನಿನಿಂದ ನಾಲಗೆ ರುಚಿಗೆ ಮರುಳಾಗಬಾರದೆಂಬುದನ್ನೂ,

ಪಕ್ಷಿಯಿಂದ ಸಂಗ್ರಹಬುದ್ಧಿ ಕೂಡದೆಂಬುದನ್ನೂ,

ಮಗುವಿನಿಂದ ಮಾನಾಪಮಾನದ ಅಭಿಮಾನ ತೊರೆಯಬೇಕೆಂಬುದನ್ನೂ,

ಬಿಲ್ಲುಗಾರನಿಂದ ಏಕಾಗ್ರತೆಯನ್ನೂ, ಹಾವಿನಿಂದ ಮೌನವನ್ನೂ,

ದುಂಬಿಯಿಂದ ಧ್ಯಾನಿಸಿದ್ದನ್ನು ದೊರಕಿಸಿಕೊಳ್ಳುವ ನಂಬಿಕೆಯನ್ನೂ – ಅರಿತುಕೋ. ಇವು ಪ್ರಕೃತಿಯಲ್ಲಿ ದೊರೆಯುವ ಮಾರ್ಗದರ್ಶಕರು”

ಎಂದು ಶ್ರೀಕೃಷ್ಣ ಉದ್ಧವನಿಗೆ ಹೇಳುತ್ತಾನೆ. ಅನಂತರ ಉದ್ಧವನ ಕೋರಿಕೆಯಂತೆ ಅವನಿಗೆ ಭಾಗವತವನ್ನು ಉಪದೇಶಿಸಿ, ತೀರ್ಥಯಾತ್ರೆಗೆ ಅವನನ್ನು ಬೀಳ್ಕೊಡುತ್ತಾನೆ.

 

3 Comments

Leave a Reply