ಭಗವಾನ್ ಶ್ರೀ ಕೃಷ್ಣನಲ್ಲಿ ಕುಂತೀದೇವಿ ಮಾಡುವ ಪ್ರಾರ್ಥನೆಗಳು

ಸಂಬಂಧದಲ್ಲಿ ಶ್ರೀಕೃಷ್ಣನಿಗೆ ಸೋದರತ್ತೆ ಆಗಬೇಕಿದ್ದ ಕುಂತಿ, ಆತನ ದೈವೀಗುಣಗಳನ್ನು ಗುರುತಿಸಿದ್ದಳು. ಹಾಗೆಂದೇ ಅವನ ಭಕ್ತಳೂ ಆಗಿದ್ದಳು. ಕುಂತಿ ದೇವಿ ತನ್ನ ಸೋದರಳಿಯನೂ ಸ್ವತಃ ಪರಮಾತ್ಮನೂ ಆದ ಶ್ರೀಕೃಷ್ಣನಲ್ಲಿ ಮಾಡುವ ಕೆಲವು ಪ್ರಾರ್ಥನೆಗಳು ಇಲ್ಲಿವೆ….

Queen-Kunti-640x479
ಕೃಷ್ಣಾಯ ವಾಸುದೇವಾಯ ದೇವಕೀನಂದನಾಯ ಚ |
ನಂದಗೋಪಕುಮಾರಾಯ ಗೋವಿಂದಾಯ ನಮೋ ನಮಃ ||
ನಮಃ ಪಂಕಜನಾಭಾಯ ನಮಃ ಪಂಕಜಮಾಲಿನೇ |
ನಮಃ ಪಂಕಜನೇತ್ರಾಯ ನಮಸ್ತೇ ಪಂಕಜಾಂಘ್ರಯೇ ||

ಶ್ರೀ ಕೃಷ್ಣನಿಗೆ ನಮಸ್ಕಾರ. ವಸುದೇವ – ದೇವಕಿಯರ ಮಗನಾದ ವಾಸುದೇವನಿಗೆ ನಮಸ್ಕಾರ. ನಂದಗೋಪನ ಮಗನೇ, ನಿನಗೆ ನಮಸ್ಕಾರ. ಗೋವುಗಳಿಗೆ ಆನಂದ ತರುವ ಗೋವಿಂದನೇ ನಿನಗೆ ನಮಸ್ಕಾರ. ಹೊಕ್ಕುಳಲ್ಲಿ ಕಮಲದ ಹೂವುಳ್ಳವನೇ ನಿನಗೆ ನಮಸ್ಕಾರ. ಕಮಲದ ಹಾರದಿಂದ ಅಲಂಕೃತನಾದವನೇ ನಿನಗೆ ನಮಸ್ಕಾರ. ಕಮಲದಂಥ ಕಣ್ಣುಳ್ಳವನೇ ನಿನಗೆ ನಮಸ್ಕಾರ. ಕಮಲದಂಥ ಪಾದವುಳ್ಳವನೇ, ನಿನಗೆ ಮತ್ತೆ ಮತ್ತೆ ನಮಸ್ಕಾರ.

ಯಥಾ ಹೃಷೀಕೇಶ ಖಲೇನ ದೇವಕೀ ಕಂಸೇನ ರುದ್ಧಾತಿಚಿರಂ ಶುಚಾರ್ಪಿತಾ |
ವಿಮೋಚಿತಾಹಂ ಚ ಸಹಾತ್ಮಜಾ ವಿಭೋ ತ್ವಯ್ಯೇವ ನಾಥೇನ ಮುಹುರ್ವಿಪದ್ಗಣಾತ್ ||

ಹೇ ಹೃಷೀಕೇಶ! ಹಿಂದೆ ನೀನು ದುಷ್ಟ ಕಂಸನಿಂದ ಸೆರೆಮನೆಗೆ ತಳ್ಳಲ್ಪಟ್ಟು ದುಃಖ ಸಾಗರದಲ್ಲಿ ಮುಳುಗಿದ್ದ ದೇವಕಿಯನ್ನು ಕಾಪಾಡಿದೆ. ನಾನೂ ನನ್ನ ಮಕ್ಕಳೂ ಸಂಕಟಕ್ಕೆ ಬಿದ್ದಾಗೆಲ್ಲ ಮತ್ತೆ ಮತ್ತೆ ಕಾಪಾಡುತ್ತಲೇ ಇರುವೆ. (ನಿನ್ನ ಕೃಪೆ ಸದಾ ಹೀಗೆ ನಮ್ಮ ಮೇಲಿರಲಿ)

ವಿಷಾನ್ಮಹಾಗ್ನೇಃ ಪುರುಷಾದದರ್ಶನಾದ್ ಸತ್ಸಭಾಯಾ ವನವಾಸಕೃಚ್ಛ್ರತಃ |
ಮೃಧೇ ಮೃಧೇSನೇಕಮಹಾರಥಾಸ್ತ್ರತೋ ದ್ರೌಣ್ಯಸ್ತ್ರತಶ್ಚಾಸ್ಯ ಹರೇSಭಿರಕ್ಷಿತಾ ||

ವಿಷಪ್ರಾಶನವಿರಲಿ, ಅರಗಿನ ಮನೆಯ ಭೀಕರ ಬೆಂಕಿಯಿರಲಿ, ಅಸುರರ ಹಾವಳಿಯಿರಲಿ, ದ್ಯೌತದಿಂದ ಉಂಟಾದ ವಿಪತ್ತಿರಲಿ, ವನವಾಸದಲ್ಲಿ ಎದುರಾದ ಅಪಾಯಗಳಿರಲಿ; ಯುದ್ಧದ ಯಾವುದೇ ಸಂದರ್ಭವಿರಲಿ, ಮಹಾರಥರ ದಾಳಿಯಿರಲಿ, ಇದೀಗ ಅಶ್ವತ್ಥಾಮ ಪ್ರಯೋಗಿಸಿದ ಬ್ರಹ್ಮಾಸ್ತ್ರವೇ ಇರಲಿ… ಯಾವಾಗಲೂ ಎಂಥಾ ಸನ್ನಿವೇಶದಲ್ಲೂ ನೀನು ನಮ್ಮನ್ನು ಕಾಪಾಡಿರುವೆ. (ನಿನ್ನ ಕೃಪೆ ಸದಾ ಹೀಗೆ ನಮ್ಮ ಮೇಲಿರಲಿ)

ವಿಪದಃ ಸಂತು ನಃ ಶಶ್ವತ್ ತತ್ರ ತತ್ರ ಜಗದ್ಗುರೋ |
ಭವತೋ ದರ್ಶನಂ ಯತ್ ಸ್ಯಾದಪುನರ್ಭವದರ್ಶನಮ್ ||

ಜಗತ್ತಿಗೇ ಗುರುವಾದ ಹೇ ಕೃಷ್ಣನೇ! ನಮಗೆ ಆಗಾಗ ಕಷ್ಟಗಳು ಬರುತ್ತಲೇ ಇರಲಿ ಎಂದು ನಾನು ಹಾರೈಸುತ್ತೇನೆ. ನಮಗೆ ಕಷ್ಟ ಒದಗಿದಾಗೆಲ್ಲ ನೀನು ಧಾವಿಸಿ ಬರುವೆಯಾದ್ದರಿಂದ, ನಮಗೂ ಮತ್ತೆ ಮತ್ತೆ ನಿನ್ನ ದರ್ಶನ ಲಾಭ ದೊರೆಯುತ್ತದೆ. ನಿನ್ನ ದಿವ್ಯದರ್ಶನದಿಂದ ನಾವು ಜನನ ಮರಣ ಚಕ್ರದಿಂದ ಬಿಡುಗಡೆಗೊಂಡು, ಪುನರ್ಜನ್ಮದಿಂದ ಪಾರಾಗುತ್ತೇವೆ!!

ಈ ಲೇಖನವನ್ನೂ ಓದಿ :
ಕೃಷ್ಣನಲ್ಲಿ ಕುಂತೀದೇವಿಯ ಪ್ರಾರ್ಥನೆ
ಜೀವಿತದ ಅರ್ಧಕ್ಕಿಂತಲೂ ಹೆಚ್ಚು ಕಾಲ ತನ್ನ ಕುಟುಂಬದ, ತನ್ನ ಮಕ್ಕಳ ಅಧಿಕಾರ ಪ್ರಾಪ್ತಿಗಾಗಿ ಪರಿತಪಿಸಿದ್ದ ಕುಂತಿ ಅಂತ್ಯಕಾಲದಲ್ಲಿ ತನ್ನ ಈ ಸಾಂಸಾರಿಕ ಗುರುತನ್ನೆ ಅಳಿಸಿ ಹಾಕೆಂದು ಕೃಷ್ಣನಲ್ಲಿ ಕೇಳಿಕೊಳ್ಳುತ್ತಾಳೆ. `ನಾನು ಇಂತಹ ಮನೆತನಕ್ಕೆ ಸೇರಿದವಳು ಎನ್ನುವ ಭಾವನೆಯನ್ನು ಅಳಿಸಿ ಹಾಕು ಕೃಷ್ಣ’ ಎಂದಾಕೆ ಪ್ರಾರ್ಥಿಸುತ್ತಾಳೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ : https://aralimara.com/2018/04/17/kunti/  

1 Comment

  1. ಕುಂತಿಯಪ್ರಾರ್ಥನೆಯನ್ನೆ ಉಲ್ಲೇಖಿಸಿ ನಮ್ಮಪರಂಗುರುಗಳು ನಮ್ಮಮನೆಯಲ್ಲಿ ೧೯೮೨ರಲ್ಲಿ‌ ಯ ಮೊಕ್ಕಾಮಿನಲ್ಲಿ ಆಶೀರ್ವಚನ ನೀ ಡಿದ್ದರು . ನೆನಪಾಯಿತು.ಹರೇ ರಾಮ

Leave a Reply