ದೇವರನ್ನು ಒಲಿಸಿಕೊಳ್ಳುವುದು ಎಷ್ಟೊಂದು ಸುಲಭ! : ಬಸವ ತತ್ವ

ಭಗವಂತನನ್ನು ಒಲಿಸಿಕೊಳ್ಳಲು ಹೆಚ್ಚೇನೂ ಸಾಹಸಪಡಬೇಕಾಗಿಲ್ಲ. ಪ್ರಾಮಾಣಿಕವಾಗಿ. ಪರಿಶುದ್ಧರಾಗಿದ್ದರೆ ಸಾಕು ಅನ್ನುತ್ತಾರೆ ಶರಣಶ್ರೇಷ್ಠರಾದ ಬಸವಣ್ಣ | ಇಂದು (ಮೇ 7) ಬಸವ ಜಯಂತಿ

ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮ ದೇವರನೊಲಿಸುವ ಪರಿ….

ಭಗವಂತನನ್ನು ಒಲಿಸಿಕೊಳ್ಳುವುದು ಬಹಳ ಸುಲಭ. ಅದಕ್ಕಾಗಿ ವಿಶೇಷ ಪ್ರಯತ್ನಗಳನ್ನೇನೂ ಹಾಕಬೇಕಿಲ್ಲ. ಸಹಜವಾಗಿದ್ದರೆ ಸಾಕು. ಪ್ರಾಮಾಣಿಕವಾಗಿದ್ದರೆ ಸಾಕು. ಬಸವಣ್ಣನವರು ಇದನ್ನು ಬಹಳ ಸರಳವಾಗಿ ತಮ್ಮ ವಚನದಲ್ಲಿ ನಿರೂಪಿಸಿದ್ದಾರೆ.

ಕಳಬೇಡ – ಕಳ್ಳತನ ಮಾಡಬೇಡ; ಕೊಲಬೇಡ – ಕೊಲೆಯಂಥ ದುಷ್ಕೃತ್ಯಗಳನ್ನು ಮಾಡುವುದಿರಲಿ, ಚಿಂತಿಸಲೂಬೇಡ; ಹುಸಿಯ ನುಡಿಯಲು ಬೇಡ – ಸುಳ್ಳು ಹೇಳಬೇಡ; ಮುನಿಯಬೇಡ – ಕೋಪ ಬಹಳ ಕೆಟ್ಟದ್ದು, ಅದನ್ನು ಬಿಟ್ಟುಬಿಡು; ಅನ್ಯರಿಗೆ ಅಸಹ್ಯ ಪಡಬೇಡ – ಅಸಹಿಷ್ಣುವಾಗಬೇಡ, ಹೊಟಟೆಕಿಚ್ಚು ಮಾಡಬೇಡ; ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ – ನಿಮ್ಮ ಬಗ್ಗೆ ನೀವೇ ಜಂಭ ಕೊಚ್ಚಿಕೊಳ್ಳುವುದನ್ನಾಗಲೀ, ಇತರರನ್ನು ನಿಕೃಷ್ಟರೆಂದು ತೆಗಳಿ ಹಳಿಯುವುದಾಗಲೀ ಮಾಡಬೇಡ; ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ – ಒಳಹೊರಗಿನ ಶುದ್ಧಿಗಳೆಂದರೆ ಇವೇ ಆಗಿವೆ (ಸ್ನಾನಾಚಮನಗಳು ಮಾತ್ರವೇ ಶುದ್ಧಿಯಲ್ಲ). ಇಂಥಾ ಪರಿಶುದ್ಧ ಜನರಿಗೆ ಭಗವಂತನು ಒಲಿಯುತ್ತಾನೆ.

ಈ ಮೇಲಿನವನ್ನು ಅನುಸರಿಸಲು ಆರಂಭಿಸಿ. ಕೃತಕವಾಗಿಯಾದರೂ ಸರಿ, ಶುರು ಮಾಡಿ. ಪರಿಣಾಮರೂಪಿ ಫಲವು ನಿಮ್ಮೊಳಗೆ ಶಾಂತಿಯಾಗಿ, ಸಂತಸವಾಗಿ ಹೊಮ್ಮುತ್ತದಲ್ಲ, ಅದನ್ನು ಗಮನಿಸಿ. ಆ ಶಾಂತಿಯೇ, ಆ ಸಂತಸವೇ ಭಗವಂತ. ಅವನೇ ಬಸವಣ್ಣನ ಕೂಡಲ ಸಂಗಮ ದೇವ ಮತ್ತು ನಮ್ಮನಮ್ಮ ಪಾಲಿಗೆ ನಮ್ಮನಮ್ಮ ಇಷ್ಟದೈವ.

Leave a Reply