ನಿನ್ನ ಬಯಕೆಯೇ ನೀನಾಗಿರುವೆ : ಬೃಹದಾರಣ್ಯಕ ಉಪನಿಷತ್

“ನಿಮ್ಮ ಅಂತರಂಗದಾಳದಲ್ಲಿ ನೀವು ತೀವ್ರವಾಗಿ ಏನನ್ನು ಬಯಸುತ್ತೀರೋ, ನೀವು ಅದೇ ಆಗಿರುತ್ತೀರಿ. ಮತ್ತು, ಅದಕ್ಕೆ ತಕ್ಕಂತೆ ನಿಮ್ಮ ಚರ್ಯೆ ಇರುತ್ತದೆ. ನಿಮ್ಮ ಚರ್ಯೆಯಂತೆ ನಿಮ್ಮ ಕಾರ್ಯ, ನಿಮ್ಮ ಕಾರ್ಯದಂತೆ ನಿಮ್ಮ ಭವಿಷ್ಯವಿರುತ್ತದೆ” ಅನ್ನುತ್ತದೆ ಬೃಹಾದರಣ್ಯಕ ಉಪನಿಷತ್ತು.

brihad

ಮೂಲಮಂತ್ರ:

ಯಥಾಕಾರೀ ಯಥಾಚಾರೀ ತಥಾ ಭವತಿ; ಸಾಧುಕಾರೀ ಸಾಧುರ್ಭವತಿ; ಪಾಪಕಾರೀ ಪಾಪೋ ಭವತಿ; ಪುಣ್ಯಃ ಪುಣ್ಯೇನ ಕರ್ಮಣಾ ಭವತಿ, ಪಾಪಃ ಪಾಪೇನ |
ಅಥೋ ಖಲ್ವಾಹುಃ ಕಾಮಮಯ ಏವಾಯಂ ಪುರುಷ ಇತಿ; ಸ ಯಥಾಕಾಮೋ ಭವತಿ ತತ್ ಕ್ರತುರ್ಭವತಿ, ಯತ್ ಕ್ರತುರ್ಭವತಿ ತತ್ಕರ್ಮ ಕುರುತೇ, ಯತ್ಕರ್ಮ ಕುರುತೇ ತದಭಿಸಂಪದ್ಯತೇ || ಬೃಹದಾರಣ್ಯಕ ಉಪನಿಷತ್ | 4:4:5 ||

ಒಟ್ಟಾರೆಯಾಗಿ ಈ ಶ್ಲೋಕದ ಅರ್ಥ : “ನಿಮ್ಮ ಬಯಕೆಯೇ ನೀವಾಗಿರುತ್ತೀರಿ” ಎಂದು. ನೀವು ಜ್ಞಾನವನ್ನು ತೀವ್ರವಾಗಿ ಬಯಸಿದರೆ, ಜ್ಞಾನಾಭ್ಯಾಸಿಯಾಗಿ ಪಂಡಿತರಾಗುತ್ತೀರಿ. ಮೋಕ್ಷ ಬಯಸಿದರೆ, ಅಧ್ಯಾತ್ಮ ಸಾಧಕರಾಗುತ್ತೀರಿ. ಧನ ಬಯಸಿದರೆ, ಲೋಭಿಗಳಾಗುತ್ತೀರಿ. ಕಾಮ ಬಯಸಿದರೆ, ಕಾಮುಕರಾಗುತ್ತೀರಿ. ಭೋಜನ ಬಯಸಿದರೆ, ಹೊಟ್ಟೆಬಾಕರಾಗುತ್ತೀರಿ. ಶಾಂತಿ ಬಯಸಿದರೆ, ಸ್ವತಃ ಶಾಂತಿಸ್ರೋತವೇ ಆಗುತ್ತೀರಿ. ನೀವು ಏನಾಗಿದ್ದೀರೋ, ನಿಮ್ಮ ಬಯಕೆಯ ಫಲವೇ ಆಗಿದ್ದೀರಿ; ಅಥವಾ ನಿಮ್ಮ ಬಯಕೆಯೇ ನಿಮ್ಮ ವ್ಯಕ್ತಿತ್ವವನ್ನು ರೂಪಿಸಿದೆ. 

ಆದರೆ, ಈ ಬಯಕೆ ತೀವ್ರವಾಗಿರಬೇಕು. ತೀವ್ರತೆ ಮಾತ್ರ ಫಲ ನೀಡಬಲ್ಲದು. ನೀವು ಬಾಯಿಮಾತಿಗೆ ‘ನನಗೆ ಜ್ಞಾನದ ಬಯಕೆ ಇದೆ’ ಅಂದುಬಿಟ್ಟರೆ ಪಮಡಿತರಾಗಿಬಿಡುವುದಿಲ್ಲ. ಇದು ಎಲ್ಲಕ್ಕೂ ಅನ್ವಯಿಸುತ್ತದೆ. ನಿಮ್ಮ ಬಯಕೆ ತೀವ್ರವಾಗಿದ್ದಾಗ, ಅದಕ್ಕೆ ತಕ್ಕ ಚರ್ಯೆ ನಿಮ್ಮಲ್ಲಿ ಮೂಡುತ್ತದೆ. ನೀವು ಅಭ್ಯಾಸ – ಅಧ್ಯಯನ ಆರಂಬಿಸುತ್ತೀರಿ. ಅನಂತರ, ಅದನ್ನು ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಹಾಕುತ್ತೀರಿ. ಅಂದರೆ, ಕಾರ್ಯ ನಡೆಸುತ್ತೀರಿ. ಅದರ ಪ್ರತಿಫಲವಾಗಿ ನಿಮ್ಮ ಭವಿಷ್ಯ – ಈಗ ನೀವೇನಿದ್ದೀರೋ, ಅದಾಗುತ್ತೀರಿ. 

ನೀವಿನ್ನೂ ಯೌವನದ ಹಂತದಲ್ಲಿದ್ದರೆ, ಈ ಮೇಲಿನ ಶ್ಲೋಕ ಮತ್ತು ಅರ್ಥಗಳನ್ನು ಮನದಟ್ಟು ಮಾಡಿಕೊಂಡು, ನಿಮ್ಮ ದಾರಿಯನ್ನು ಜಾಗ್ರತೆಯಿಂದ ಆಯ್ಕೆ ಮಾಡಿಕೊಳ್ಳಿ. 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.