ನೋಡುವುದು ನೇರ, ಮುಟ್ಟುವುದು ನೇರ, ಅನುಭವಿಸುವುದು ನೇರ. ಆದರೆ ಚಿಂತನೆ ಮಾತ್ರ ಪರೋಕ್ಷ. ಆದ್ದರಿಂದಲೇ,
ಪ್ರೇಮಿಗೆ, ನೃತ್ಯಪಟುವಿಗೆ, ಸಂಗೀತಗಾರನಿಗೆ, ರೈತನಿಗೆ ಸಾಧ್ಯವಾಗಬಹುದಾದ ದರ್ಶನ ಆಲೋಚಕನಿಗೆ ಸಾಧ್ಯವಾಗುವುದಿಲ್ಲ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ
Truth can not be sought : Part 2
ಹಿಂದಿನ ಭಾಗ ಇಲ್ಲಿ ಓದಿ : https://aralimara.com/2019/06/09/osho-21/
ಹೌದು; ತತ್ವಜ್ಞಾನಕ್ಕೆ ಕಪಟದ ಸಾಧ್ಯತೆ ಅಪಾರ
ಇದು ಮನಸ್ಸನ್ನು ಮೋಸಗೊಳಿಸುವ ತಂತ್ರ.
ಯಾರಿಗೆ ಏನು ಪ್ರಯೋಜನ ?
ಏನಿಲ್ಲ, ಅಜ್ಞಾನವೇ ಕಾರಣ.
ಜ್ಞಾನಕ್ಕೆ, ಒಪ್ಪಿಸುವ, ಸಾಬೀತು ಮಾಡುವ
ವಾಗ್ವಾದಕ್ಕಿಳಿಯುವ ಹುಕಿ ಇಲ್ಲ.
ಜ್ಞಾನಕ್ಕೆ ಪರ್ಯಾಯ ಎಂಬಂತೆ ಈ ತತ್ವಜ್ಞಾನದ ನಾಟಕ.
ತತ್ವಜ್ಞಾನದ ನೆರಳನ್ನೇ
ಜ್ಞಾನದ ಬೆಳಕು ಎಂದು ಸಾಧಿಸುತ್ತದೆ ಅಜ್ಞಾನ.
ವಿಷಯದ ನಿಜಸ್ಥಿತಿಯನ್ನು ನಿರಾಕರಿಸುವುದೆಂದರೆ
ನಿಜವನ್ನು ಕಳೆದುಕೊಂಡಂತೆ….. (ಸೊಸಾನ್)
ಇಲ್ಲೊಂದು ಮರ ಇದೆ
ಇದು ವಸ್ತು ಸ್ಥಿತಿ.
ಮರದ ವಸ್ತು ಸ್ಥಿತಿಯನ್ನು ನಿರಾಕರಿಸುವುದೆಂದರೆ
ಮರದೊಳಗಿನ ಸತ್ಯವನ್ನು ಕಳೆದುಕೊಂಡಂತೆ.
ಮರ ಕೇವಲ ವಸ್ತು ಸ್ಥಿತಿ, ಒಳಗಿನ ಸತ್ಯದ ಕವಚ.
ಹಾಗೆಯೇ, ಹಕ್ಕಿ ಒಂದು ವಸ್ತು ಸ್ಥಿತಿ,
ಆದರೆ ಸತ್ಯ ಮಾತ್ರ ಅದೇ.
ಒಮ್ಮೆ ಸತ್ಯ , ಮರದ ಹಾಗೆ ಕಂಡರೆ
ಇನ್ನೊಮ್ಮೆ ಹಕ್ಕಿಯ ಹಾಗೆ,
ಮತ್ತೊಮ್ಮೆ ಬಂಡೆಯ ಹಾಗೆ, ಮನುಷ್ಯನ ಹಾಗೆ.
ಆದರೆ ನೀವು ಆಳದಲ್ಲಿಳಿದು ಕಂಡಾಗ
ಸತ್ಯ ಮಾತ್ರ ಒಂದೇ.
ನೀವು ಎಲ್ಲ ಆಕಾರಗಳನ್ನು ನಿರಾಕರಿಸಿದರೆ
ಒಳಗಿನ ನಿರಾಕಾರವನ್ನು ನಿರಾಕರಿಸಿದಂತೆ.
ಆಗ ಯಾವ ಭಗವಂತ? ಎಲ್ಲಿಯ ಸತ್ಯ?
ವಿಷಯದ ಖಾಲೀತನವನ್ನು ಒತ್ತಿಹೇಳುವುದೆಂದರೆ,
ನಿಜವನ್ನು ದೂರ ಮಾಡುವುದು. (ಸೊಸಾನ್)
ವಿಷಯದ ವಸ್ತು ಸ್ಥಿತಿಯನ್ನು ಒಪ್ಪಿಕೊಂಡರೂ
ಅದು ಖಾಲಿ ಎಂದು ವಾದ ಮಾಡುವುದು
ತತ್ವಜ್ಞಾನದ ಇನ್ನೊಂದು ವರಸೆ.
ಆದರೆ ಇದು, ಕೊಂಚ ಪ್ರಬುದ್ಧ ವಾದ.
ಆತ್ಮ ಇಲ್ಲ ಎನ್ನುವುದು
ಕೇವಲ ಸಂಯೋಜನೆ ಎನ್ನುವುದು
ಇನ್ನೊಂದು ತತ್ವಜ್ಞಾನ ಅಷ್ಟೇ.
ಮರಕ್ಕೆ ಅಸ್ತಿತ್ವ ಇದೆ, ಕೇವಲ ಸಂಯೋಜನೆ ಅಲ್ಲ.
ಬಂಡೆಗೂ ಕೂಡ ಅಸ್ತಿತ್ವ ಇದೆ.
ನೀವು ಸೂಕ್ಷ್ಮರಾಗುತ್ತ ಹೋದಂತೆ
ಬಂಡೆಯ ವಿವಿಧ ಭಾವಗಳು ಕಾಣ ತೊಡಗುತ್ತವೆ.
ಬಂಡೆಯ ಖುಶಿ, ಸಂಕಟ ಎಲ್ಲ ಅರ್ಥವಾಗತೊಡಗುತ್ತವೆ.
ನಿಮ್ಮೊಳಗಿರುವ ಪ್ರಜ್ಞೆಯ ಪ್ರಮಾಣ
ತೀರ ಅತ್ಯಲ್ಪ,
ದಾರಿಯಲ್ಲಿ ನಿರಾಯಾಸವಾಗಿ ಓಡಾಡಲು ಮಾತ್ರ ಸಾಕಾಗುವಷ್ಟು.
ಮನುಷ್ಯನ ಹಾಡನ್ನೇ ಪೂರ್ಣವಾಗಿ ಆಸ್ವಾದಿಸಲು
ಸಾಧ್ಯವಾಗದ ನಮಗೆ
ಬಂಡೆಯ ಹಾಡು ಕೇಳಿಸುವುದಾದರೂ ಹೇಗೆ?
ಹೊಸ ಸಂಶೋಧನೆಗಳ ಪ್ರಕಾರ
ಗಿಡ ಮರಗಳೂ ಪ್ರತಿಕ್ರಿಯಿಸುತ್ತವೆ,
ನಮ್ಮ ವಿಚಾರಗಳನ್ನು ಅರ್ಥಮಾಡಿಕೊಳ್ಳುತ್ತವೆ
ನಮ್ಮನ್ನು ಪ್ರೀತಿಸುತ್ತವೆ, ನಮಗೆ ಹೆದರುತ್ತವೆ.
ಆದ್ದರಿಂದಲೇ
ಎಲ್ಲವೂ ಜೀವಂತ, ಹಾಗಾಗಿ ಯಾವುದೂ ಖಾಲೀ ಅಲ್ಲ.
ಪ್ರಜ್ಞೆ ಎಲ್ಲೆಲ್ಲೂ ತುಂಬಿಕೊಂಡಿರುವಾಗ
ಸಂವಹನ ಯಾಕೆ ಸಾಧ್ಯವಾಗುವುದಿಲ್ಲ?
ಮತ್ತದೇ ಭಾಷೆಯ ಸಮಸ್ಯೆ.
ಮರದ ಪ್ರಜ್ಞೆ, ಬಂಡೆಯ ಪ್ರಜ್ಞೆ , ಮನುಷ್ಯನ ಪ್ರಜ್ಞೆ
ಎಲ್ಲದರ ಭಾಷೆ ಬೇರೆ ಬೇರೆ.
ಪ್ರಜ್ಞೆ, ಸೂಕ್ಷ್ಮವಾದಾಗ, ಹರಿತವಾದಾಗ, ಸಂಪೂರ್ಣವಾದಾಗ
ಸಂವಹನ ಸಾಧ್ಯವಾಗುತ್ತದೆ.
ಮತ್ತೆ ಯಾಕೆ ತತ್ವಜ್ಞಾನಿಗಳು
ಎಲ್ಲವೂ ಖಾಲಿ ಎಂದು ಸಾಧಿಸಲು ಹೆಣಗುತ್ತಾರೆ?
ಇದೊಂದು ಹೋಲಿಕೆಯ ತಂತ್ರ.
ಎಲ್ಲವೂ ಖಾಲಿ ಎಂದು ಸಾಧಿಸಿಬಿಟ್ಟರೆ
ನಮ್ಮನ್ನು ನಾವು ಪೂರ್ಣ ಎಂದು ಸಾಧಿಸಿಕೊಂಡಂತೆ.
ಇದು ಕಪಟ.
ಪ್ರೇಮ, ಅರಿವು, ಧ್ಯಾನ ನಿಮ್ಮನ್ನು ಪೂರ್ಣಗೊಳಿಸಿದಾಗ
ಜಗತ್ತೂ ನಿಮಗೆ ಪೂರ್ಣವಾಗಿಯೇ ದಕ್ಕುತ್ತದೆ.
ತತ್ವಜ್ಞಾನ, ಸಾಪೇಕ್ಷತೆಯನ್ನು ಜಾಲವಾಗಿ ಬಳಸುತ್ತದೆ.
ನಾವೆಲ್ಲ ಈ ತಂತ್ರದ ಬಲಿಪಶುಗಳು.
ನಿಮ್ಮ ನೆರೆಮನೆಯವರನ್ನು ದುಷ್ಟರು ಎಂದು
ಯಾರಾದರೂ ಹೇಳಿದರೆ
ನೀವು ಥಟ್ಟನೇ ಒಪ್ಪಿಕೊಳ್ಳುತ್ತೀರಿ.
ಅವರು ದುಷ್ಟರೆಂದು ಜನ ಹೇಳುವಾಗ
ಸಹಜವಾಗಿಯೇ ನೀವು ಒಳ್ಳೆಯವರೆಂಬ
ವಾತಾವರಣ ನಿರ್ಮಾಣವಾಗುತ್ತದೆ.
ಇನ್ನೊಂದನ್ನು ನಿರಾಕರಿಸಿ
ತಮ್ಮನ್ನು ಸಾಧಿಸಿಕೊಳ್ಳುವ ತಂತ್ರ.
ಅಪ್ರಜ್ಞಾಪೂರಕವಾಗಿ ನಾವೆಲ್ಲ
ಈ ತಂತ್ರಗಾರಿಕೆಯ ಪಾಲುದಾರರು.
ಸೊಸಾನ್ ನ ಸೂತ್ರ ಹೇಳುವಂತೆ ……
ನಿಜದ ಬಗ್ಗೆ ಎಷ್ಟು ಹೆಚ್ಚು ಮಾತನಾಡುತ್ತೀರೊ,
ಎಷ್ಟು ಹೆಚ್ಚು ಚಿಂತನೆ ಮಾಡುತ್ತೀರೊ,
ಅಷ್ಟೇ ಹೆಚ್ಚು , ನಿಜದಿಂದ ದೂರವಾಗುತ್ತ ಹೋಗುತ್ತೀರಿ.
ಮಾತು ನಿಲ್ಲಿಸಿದಾಗ, ಯೋಚಿಸುವುದ ಸ್ಥಗಿತಗೊಳಿಸಿದಾಗ
ನಿಮಗೆ ತೆರೆದುಕೊಳ್ಳದ್ದು ಯಾವುದೂ ಇರುವುದಿಲ್ಲ.
ಯೋಚಿಸುವುದೆಂದರೆ,
ವಿಷಯದಿಂದ ದೂರ ಹೋಗುವುದು.
ಯಾವುದಾದರೊಂದು ವಿಷಯದ ಬಗ್ಗೆ
ನೀವು ಯೋಚಿಸಲು ಆರಂಭ ಮಾಡಿದಾಗಲೇ
ಆ ವಿಷಯದಿಂದ ದೂರ ಸರಿಯಲು
ಶುರುಮಾಡುತ್ತೀರಿ.
ನೀವು ಒಂದು ಗುಲಾಬಿ ನೋಡುತ್ತೀರಿ,
ತಕ್ಷಣ ಆ ಗುಲಾಬಿಯ ಬಗ್ಗೆ ಯೋಚಿಸಲು ಶುರು ಮಾಡುತ್ತೀರಿ.
‘ಸುಂದರ’ ಎನ್ನುತ್ತೀರಿ
ಇಂಥ ‘ಸುಂದರ’ ಹೂವನ್ನ ನೋಡೇ ಇಲ್ಲ ಎಂದು
ಉದ್ಗಾರ ಮಾಡುತ್ತೀರಿ, ಅಥವಾ
ಇಂಥ ಎಷ್ಟೋ ಹೂವುಗಳನ್ನ ನೋಡಿದ್ದೇನೆ ಎಂದು
ವಾದ ಮಂಡಿಸುತ್ತೀರಿ….
ನಿಮ್ಮ ಮನಸ್ಸು ಯೋಚಿಸುತ್ತಲೇ ಹೋಗುತ್ತದೆ.
ಆಗಲೇ ಒಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ
‘ಸುಂದರ’ ಎಂದರೇನು?
ಯಾರಿಗೂ ಗೊತ್ತಿಲ್ಲ.
ಇಲ್ಲಿಯವರೆಗೂ ಯಾರೂ ಈ ಬಗ್ಗೆ ತೀರ್ಮಾನಕ್ಕೆ ಬಂದಿಲ್ಲ.
ಆಗಲೇ ನೀವು ಬೇರೆ ಹೂಗಳ ಜೊತೆ ಹೋಲಿಕೆಗೆ ಮುಂದಾಗುತ್ತೀರಿ.
ಪ್ರತಿಯೊಂದೂ ಅನನ್ಯ ಎಂದಾದ ಮೇಲೆ
ಹೋಲಿಕೆ ಹೇಗೆ ಸಾಧ್ಯ?
ಹೋಲಿಕೆ ಶುರು ಆದಾಗ, ಮನಸ್ಸಿಗೆ ಇನ್ನೂ ಗೊಂದಲ.
ಈ ಗೊಂದಲವೇ ನಿಮ್ಮ ಮತ್ತು ಹೂವಿನ ನಡುವೆ ತಡೆ ಗೋಡೆಯಾಗುತ್ತದೆ.
ಆಗ ಯಾವುದನ್ನ ನೀವು ತಾಕಬಹುದಾಗಿತ್ತೋ,
ಯಾವುದರ ಸುಗಂಧವನ್ನು ನೀವು ಆಸ್ವಾದಿಸಬಹುದಾಗಿತ್ತೋ
ಆ ಅನುಭವ ಸಾಧ್ಯವಾಗುವುದಿಲ್ಲ.
ಗುಲಾಬಿ ನಿಮ್ಮ ಹೃದಯದ ಬಾಗಿಲನ್ನು ತಟ್ಟುತ್ತಿದೆ
ಆದರೆ ನೀವು ಯೋಚನೆಯ ಲೋಕದಲ್ಲಿ ವಿಹಾರಕ್ಕೆ ಹೋಗಿದ್ದೀರಿ,
ನೀವು ತಿರುಗಿ ವಾಪಸ್ ಬರುವ ಹೊತ್ತಿಗೆ
ಗುಲಾಬಿ ಬಾಡಿ ಹೋಗಿರುತ್ತದೆ.
ತತ್ವಜ್ಞಾನಿ ಗುಲಾಬಿಯ ಬಗ್ಗೆ ಯೋಚಿಸುತ್ತಾನೆ.
ಕವಿ ಗುಲಾಬಿಯನ್ನು ಅನುಭವಿಸುತ್ತಾನೆ.
ನೀವು ತೀರ್ಮಾನ ಮಾಡಲೇ ಬೇಕಾದರೆ
ಕವಿಯ ಮಾತನ್ನು ಅನುಮೋದಿಸಿ.
ಆತ ತತ್ವಜ್ಞಾನಿಗಿಂತ ಹೆಚ್ಚು ಸಮೀಪದಿಂದ
ಗುಲಾಬಿಯನ್ನು ತಿಳಿದುಕೊಂಡಿದ್ದಾನೆ.
ಆದರೆ ಅನುಭಾವಿ
ಗುಲಾಬಿಯ ಬಗ್ಗೆ ಯೋಚಿಸುವುದೂ ಇಲ್ಲ
ಗುಲಾಬಿಯನ್ನು ತಾಕುವುದೂ ಇಲ್ಲ
ಸುಮ್ಮನೇ ಗುಲಾಬಿಯೊಡನೆ ಒಂದಾಗುತ್ತಾನೆ.
ಈ ಒಂದಾಗುವಿಕೆಯಲ್ಲಿ ಯಾವ ಯೋಚನೆಯೂ ಇಲ್ಲ
ಯಾವ ಅನುಭವವೂ ಇಲ್ಲ.
ಯೋಚನೆ ಒಂದು ಬೃಹತ್ ಕ್ರಿಯೆ
ಅನುಭವ ಒಂದು ಸೂಕ್ಷ್ಮ ಕ್ರಿಯೆ.
ಅನುಭವ, ಯೋಚನೆಯತ್ತ ಹೆಜ್ಜೆ ಹಾಕಬಹುದು
ಯೋಚನೆ, ಅನುಭವಕ್ಕೆ ಮುಂದಾಗಬಹುದು
ಅವು ಒಂದಕ್ಕೊಂದು ಬಹಳ ದೂರವೇನಿಲ್ಲ.
ಅನುಭವ ಮೊಳಕೆಯಾದರೆ
ಯೋಚನೆ ಮಹಾ ವೃಕ್ಷ.
ಹೃದಯ ಮತ್ತು ಮೆದುಳು ಕೂಡ ಹತ್ತಿರಹತ್ತಿರವೇ.
ಎಲ್ಲ ಶುರು ಆಗೋದು ಹೃದಯದಲ್ಲಿಯೇ
ನಿಮ್ಮ ಅರಿವು , ಹತೋಟಿ ಸಾಧಿಸುವುದಕ್ಕಿಂತ ಮುಂಚೆಯೇ
ಮೆದುಳು ತನ್ನ ಕೆಲಸ ಶುರು ಮಾಡಿರುತ್ತದೆ.
ಯೋಚನೆ ನಿಂತಾಗ
ಅನುಭವ ಮಾತು ಮುಗಿಸಿದಾಗ
ಏಕಾಏಕಿ ನೀವು ಇಲ್ಲವಾಗುತ್ತೀರಿ
ಸುತ್ತಲಿನ ಜಗತ್ತು ಕೂಡ,
ಆಗಲೇ ಅನಾವರಣವಾಗುತ್ತದೆ
ಅಪರಿಮಿತ, ನಿರಾಕಾರ ಸತ್ಯ.
ಸತ್ಯ ತತ್ವಶಾಸ್ತ್ರದ ಕಾಣ್ಕೆ ಅಲ್ಲ
ಅದು ಇರುವಿಕೆಯ ಅರಿವು.
ನಿಜದ ಬಗ್ಗೆ ಎಷ್ಟು ಹೆಚ್ಚು ಮಾತನಾಡುತ್ತೀರೊ,
ಎಷ್ಟು ಹೆಚ್ಚು ಚಿಂತನೆ ಮಾಡುತ್ತೀರೊ,
ಅಷ್ಟೇ ಹೆಚ್ಚು , ನಿಜದಿಂದ ದೂರವಾಗುತ್ತ ಹೋಗುತ್ತೀರಿ.
ಮಾತು ನಿಲ್ಲಿಸಿದಾಗ, ಯೋಚಿಸುವುದ ಸ್ಥಗಿತಗೊಳಿಸಿದಾಗ
ನಿಮಗೆ ತೆರೆದುಕೊಳ್ಳದ್ದು, ಯಾವುದೂ ಇರುವುದಿಲ್ಲ (ಸೊಸಾನ್)
ಯೋಚನೆಗಳು ನಿಂತಾಗ ಬಾಗಿಲು ತೆರೆದುಕೊಳ್ಳುತ್ತದೆ
ಮಾತುಗಳು ಮುಗಿದಾಗ ಬೇಲಿ ಮಾಯವಾಗುತ್ತದೆ
ಮನಸ್ಸು ನಿಶ್ಚಲವಾದಾಗ ದಾರಿ ಕಾಣಿಸತೊಡಗುತ್ತದೆ.
ಈ ಸ್ಥಿತಿ ಸಾಧ್ಯವಾಗುವುದಾದರೂ ಹೇಗೆ?
ಹೌದು ಕಷ್ಟ.
ನೀವಿರುವಲ್ಲಿ ತಾನೂ ಇರುವುದು ಮನಸ್ಸಿಗೆ ಸಾಧ್ಯವಿಲ್ಲ
‘ಅರಿವು’ ನೀವಿರುವಲ್ಲಿಯೇ ಠಿಕಾಣಿ ಹಾಕಬಲ್ಲದು.
ಮನಸ್ಸಿಗೆ ತಿರುಗಾಟದ ಚಟ.
ಮತ್ತೆ ಮತ್ತೆ ಕರೆಸಿಕೊಳ್ಳಿ
ಜಗಳ ಬೇಡ, ಆತಂಕ ಬೇಡ
ಮತ್ತೆ ಮತ್ತೆ ವಾಪಸ್ ಕರೆಸಿಕೊಳ್ಳಿ.
ನೀವು ಈ ಕ್ಷಣವನ್ನು ಆನಂದಿಸತೊಡಗಿದಾಗ
ಇರುವ ಒಂದೇ ಕಾಲಕ್ಕೆ,
ಇರುವ ಒಂದೇ ಒಂದು ಅಸ್ತಿತ್ವಕ್ಕೆ,
ಇರುವ ಒಂದೇ ಬದುಕಿಗೆ
ಮನಸ್ಸು
ಹೆಚ್ಚು ಹೆಚ್ಚು ವಾಪಸ್ಸಾಗುತ್ತ ಹೋಗುತ್ತದೆ
ನಿಧಾನವಾಗಿ ತಿರುಗಿ ಹೋಗುವುದ ಮರೆಯುತ್ತ ಹೋಗುತ್ತದೆ.
ಆಗ ಶ್ರುತಿ ಕೂಡಿಕೊಳ್ಳುತ್ತದೆ
ನೀವು ಇರುವಲ್ಲಿಯೇ ಸತ್ಯ ತೆರೆದುಕೊಳ್ಳುತ್ತದೆ.
ಹಾಗೆ ನೋಡಿದರೆ ಸತ್ಯ ಅಲ್ಲೇ ಇತ್ತು
ನೀವೇ ಇರಲಿಲ್ಲ.
ಸತ್ಯವನ್ನು ಹುಡುಕಾಡುವುದಲ್ಲ ಕೆಲಸ;
ನೀವು ವಾಪಸ್ಸಾಗುವುದು!
ಮುಂದುವರೆಯುತ್ತದೆ……
ಓಶೋ ಮಾತು ಕವಿತೆಗಿಂತ ಭಿನ್ನವಲ್ಲ. ಅವರ ಉಪನ್ಯಾಸಗಳು ಖಂಡ ಕಾವ್ಯದಂತೆ ಇರುತ್ತಿದ್ದವು. ಉದ್ವೇಗವಿಲ್ಲದ ತಣ್ಣನೆ ಪ್ರವಾಹದಂತೆ ಓಶೋ ಮಾತು. ಇನ್ನು ಕಾವ್ಯದ ಕುರಿತೇ ಹೇಳುವಾಗ ಅದು ಹೇಗಿದ್ದೀತು! ಝೆನ್ ಪರಂಪರೆಯ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದ ಓಶೋ, ಚೀನೀ ಝೆನ್ ಕವಿ, ಸಾಧಕ Sosan ರಚಿಸಿದ್ದೆಂದು ಹೇಳಲಾಗುವ Hsin hsin ming ಕಾವ್ಯದ ಬಗ್ಗೆ ನೀಡಿದ ಉಪನ್ಯಾಸದ ಭಾವಾನುವಾದ ಇಲ್ಲಿದೆ. ಅರಳಿಬಳಗದ ಚಿದಂಬರ ನರೇಂದ್ರ ಇದನ್ನು ಕನ್ನಡಕ್ಕೆ ತಂದಿದ್ದಾರೆ.