ಮೈದಾಸನೆಂಬ ಗ್ರೀಕ್ ರಾಜನಿಗೆ ಕತ್ತೆ ಕಿವಿ ಮೂಡಿದ ಕಥೆ !

ನಿಮಗೆ ಮುಟ್ಟಿದ್ದೆಲ್ಲ ಚಿನ್ನವಾಗುವ ವರ ಪಡೆದಿದ್ದ ಮೈದಾಸನ ಕಥೆ ಗೊತ್ತಿದೆ. ಆದರೆ ಅದೇ ಮೈದಾಸ್ ಶಾಪ ಪಡೆದು, ಕತ್ತೆ ಕಿವಿ ಮೂಡಿ, ಅದೇ ಕಾರಣಕ್ಕೆ ಜೀವವನ್ನೇ ಕಳೆದುಕೊಂಡ ಕಥೆ ಗೊತ್ತಿದೆಯೇ? ಇಲ್ಲಿದೆ, ದೊರೆ ಮೈದಾಸನ ಕತ್ತೆ ಕಿವಿಯ ಪ್ರಸಂಗ….

ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ

myths-midas-donkey-ears-a5545035

ಮ್ಮೆ ಮೈದಾಸ್ ಅಪೋಲೋ ದೇವತೆಗೂ ಭೂಮಿಯ ಸಂಗೀತಗಾರ ಮಾರ್ಸಿಯಸ್’ನಿಗೂ ನಡೆದ ವಾದ್ಯ ಸ್ಪರ್ಧೆಯಲ್ಲಿ ತೀರ್ಪುಗಾರನಾಗಿ ಹೋಗಿದ್ದ. ಉಳಿದವರೆಲ್ಲ ಅಪೋಲೋ ದೇವತೆ ಪರ ತೀರ್ಪು ಕೊಟ್ಟರೆ, ಮೈದಾಸ್ ಮಾರ್ಸಿಯಸ್ ಪರ ತೀರ್ಪು ಕೊಟ್ಟ. ಇದರಿಂದ ಸಿಟ್ಟುಗೊಂಡ ಅಪೋಲೋ “ನಿನಗೆ ಕತ್ತೆಗಳಿಗಿರುವಷ್ಟೂ ಸಂಗೀತ ಜ್ಞಾನವಿಲ್ಲ. ಉತ್ತಮವಾದುದನ್ನು ಗುರುತಿಸಲಾಗದ ನಿನ್ನ ಕಿವಿ ಕತ್ತೆ ಕಿವಿಯಾಗಲಿ” ಎಂದು ಶಪಿಸಿದ.

ಮೈದಾಸ್ ಬೇಸರದಿಂದ ತನ್ನ ರಾಜ್ಯಕ್ಕೆ ಮರಳಿದ. ಬೆಳಗಾಗಿ ಏಳುವ ವೇಳೆಗೆ ಅವನ ಎರಡೂ ಕಿವಿಗಳು ಮೇಲಕ್ಕೆ – ಉದ್ದಕ್ಕೆ ಬೆಳೆದಿದ್ದವು. ಹೌದು! ಅಪೋಲೋ ದೇವತೆಯ ಶಾಪ ಫಲಿಸಿ ಮೈದಾಸನಿಗೆ ಕತ್ತೆ ಕಿವಿಗಳು ಬೆಳೆದಿದ್ದವು!!

ಮೈದಾಸ್ ಉದ್ದನೆಯ ಟೊಪ್ಪಿಗೆಯನ್ನು ಹೊಲಿಸಿಕೊಂಡು ಅದರೊಳಗೆ ತನ್ನ ಕಿವಿ ಬಚ್ಚಿಟ್ಟುಕೊಂಡ. ನೋಡುವವರಿಗೆ ದೊರೆ ಟೊಪ್ಪಿ ಧರಿಸಿದಂತೆಯೇ ಅನ್ನಿಸುತ್ತಿತ್ತು. ಅದರೊಳಗಿನ ಕತ್ತೆ ಕಿವಿ ಯಾರ ಗಮನಕ್ಕೂ ಬರಲಿಲ್ಲ. ಆದರೆ ಮೈದಾಸನಿಗೆ ಫಜೀತಿ ಎದುರಾಗಿದ್ದು ಕ್ಷೌರಿಕನ ಬಳಿ ಹೋದಾಗ. ಚೌರ ಮಾಡಿಸಲು ಅವನು ಟೊಪ್ಪಿಯನ್ನು ತೆಗೆಯಲೇಬೇಕಿತ್ತು. ದೊರೆಯ ಕತ್ತೆ ಕಿವಿಗಳನ್ನು ನೋಡಿ ಕ್ಷೌರಿಕ ಅವಾಕ್ಕಾದ. ನಗುವ ಹಾಗಂತೂ ಇಲ್ಲ. ಏನಾಯ್ತೆಂದು ಕೇಳುವಂತೆಯೂ ಇಲ್ಲ. ಮೈದಾಸನೂ ಚಿಂತೆಗೀಡಾದ. ಕ್ಷೌರಿಕನ ಕುತ್ತಿಗೆಯ ಮೇಲೆ ಕತ್ತಿ ಇರಿಸಿ, “ನನ್ನ ಕಿವಿಗಳ ವಿಷಯ ಯಾರಿಗಾದರೂ ಹೇಳಿದರೆ ಅವತ್ತೇ ನಿನ್ನ ಬದುಕು ಕೊನೆಯಾಗುತ್ತದೆ” ಎಂದು ಎಚ್ಚರಿಸಿದ.

ಮೈದಾಸ್ ಚೌರ ಮುಗಿಸಿಕೊಂಡು ಅರಮನೆಗೆ ಮರಳಿದ. ಇತ್ತ ಕ್ಷೌರಿಕನಿಗೆ ದೊರೆಯ ಗುಟ್ಟು ಹೊಟ್ಟೆಯಲ್ಲಿಟ್ಟುಕೊಮಡು ತಳಮಳ ಶುರುವಾಯ್ತು. ಯಾರ ಬಳಿಯಾದರೂ ಹೇಳಿಕೊಳ್ಳದೆ ಹೋದರೆ ತನ್ನ ಹೊಟ್ಟೆ ಒಡೆದೇಹೋಗುತ್ತದೆ ಅಂದುಕೊಂಡ. ಸಂಜೆಯಾಗುತ್ತಲೇ ಕಾಡಿಗೆ ಓಡಿದ. ಅಲ್ಲೊಂದು ಗುಂಡಿ ತೆಗೆದು “ದೊರೆ ಮೈದಾಸನ ಕಿವಿ ಕತ್ತೆ ಕಿವಿ” ಎಂದು ಒದರಿದ. ಆಮೇಲೆ ಆ ಗುಂಡಿಯನ್ನು ಹಾಗೇ ಮುಚ್ಚಿಬಿಟ್ಟ. ಅಲ್ಲಿಗೆ, ತನ್ನ ಹೊಟ್ಟೆಯ ಗುಟ್ಟು ಹೊರಗೂ ಬಂತು, ಗುಂಡಿಯಲ್ಲಿ ಮಣ್ಣಾಗಿಯೂಹೋಯ್ತು ಎಂದು ಸಮಾಧಾನ ಪಟ್ಟ.

ಆ ಗುಂಡಿಯಲ್ಲೊಂದು ಜೊಂಡಿನ ಪಿಳಿಕೆಯಿತ್ತು. ಅದು ಕ್ಷೌರಿಕನ ಗುಟ್ಟು ಕೇಳಿಸಿಕೊಂಡಿತು. ತನಗೆ ಗೊತ್ತಾದ ಗುಟ್ಟನ್ನು ಯಾರಿಗಾದರೂ ಹೇಳದೆ ಇದ್ದರೆ ತಾನು ಸತ್ತೇಹೋಗುತ್ತೇನೆ ಅನ್ನಿಸಿತು ಅದಕ್ಕೆ. ಬೇಗಬೇಗನೆ ಬೆಳೆದು ಮಣ್ಣೀನಿಂದ ಮೇಲಕ್ಕೆ ತಲೆಹಾಕಿದ ಪಿಳಿಕೆ, ಬೆಳಗಾಗುವ ಒಳಗೆ ಕುತ್ತಿಗೆ ಎತ್ತಿ ನಿಂತಿತ್ತು. ತನ್ನ ಆಸುಪಾಸಿನಲ್ಲಿ ಕಂಡ ಜೊಂಡುಗಳ ಗಮನ ಸೆಳೆದು, “ನಿಮಗೆ ಗೊತ್ತಾ? ದೊರೆ ಮೈದಾಸನ ಕಿವಿ ಕತ್ತೆ ಕಿವಿ!!” ಎಂದು ತನ್ನ ಗುಟ್ಟನ್ನು ಹೊರಹಾಕಿತು.

ಈ ಗುಟ್ಟು ಜೊಂಡುಗಳ ನಡುವೆ ಹರಿದಾಡಿತು. ಅವು ತಮ್ಮತಮ್ಮಲ್ಲೆ ಈ ಬಗ್ಗೆ ಮಾತಾಡಿಕೊಂಡು ಗೌಜಿ ಎಬ್ಬಿಸಿದವು. ಅವುಗಳ ಸಂಭಾಷಣೆ ಅಲ್ಲೇ ಹಾರಾಡುತ್ತಿದ್ದ ಹಕ್ಕಿಗಳನ್ನು ತಲುಪಿತು. ಹಕ್ಕಿಗಳು ಗುಂಪುಗಟ್ಟಿ “ದೊರೆ ಮೈದಾಸನ ಕಿವಿ ಕತ್ತೆ ಕಿವಿ” ಎಂದು ಗುಲ್ಲೆಬ್ಬಿಸಿದವು. ಅವುಗಳ ಗದ್ದಲ ಕೊರವಂಜಿ ಮೆಲಂಪಸನಿಗೆ ಕೇಳಿಸಿತು. ಅವನು ಹಕ್ಕಿಗಳ ಭಾಷೆ ಬಲ್ಲವನಾಗಿದ್ದ.

ಮೆಲಂಪಸ್ ಈ ಸುದ್ದಿಯನ್ನು ಜನರ ನಡುವೆ ಹರಡಿದ. ಫ್ರಿಜಿಯಾದ ತುಂಬೆಲ್ಲ ““ದೊರೆ ಮೈದಾಸನ ಕಿವಿ ಕತ್ತೆ ಕಿವಿ” ಅನ್ನುವ ವಿಷಯ ಕಿಚ್ಚಿನಂತೆ ಹರಡಿತು. ಮೈದಾಸ್ ರಾಜಬೀದಿಯಲ್ಲಿ ಹಾದುಹೋಗುವಾಗ ಪ್ರಜೆಗಳು ಎರಡೂ ಬದಿಗಳಲ್ಲಿ ಕಿಕ್ಕಿರಿದು ಸೇರಿದರು. ಅವರು ತನ್ನ ಮೇಲಿನ ಅಭಿಮಾನದಿಂದ ಕಾದುನಿಂತಿದ್ದಾರೆ ಎಂದು ಮೈದಾಸ್ ಭಾವಿಸಿದ. ಆದರೆ ಎದುರು ಸಾಲಲ್ಲಿ ನಿಂತ ಬಾಲಕನೊಬ್ಬ “ದೊರೆ ಮೈದಾಸರಿಗೆ ಕತ್ತೆ ಕಿವಿಗಳಿವೆಯಂತೆ!! ನಾನು ನೋಡಬೇಕು, ಟೊಪ್ಪಿ ತೆಗೆಯಲು ಹೇಳಿ” ಎಂದು ಹಟ ಹಿಡಿದ. ಬಾಲಕನನ್ನು ಹಿಂಬಾಲಿಸಿ ಜನರೂ ಮಾತಾಡಲು ಶುರು ಮಾಡಿದರು. ಮೈದಾಸ್ ನಾಚಿಕೆಯಿಂದ ಅಂತಃಪುರ ಸೇರಿದ.

ತನ್ನ ಗುಟ್ಟು ಪ್ರಜೆಗಳಿಗೆ ಗೊತ್ತಾಗಿಬಿಟ್ಟಿದೆ. ಇನ್ನುಮುಂದೆ ಅವರು ನನ್ನನ್ನು ವಿದೂಷಕನಂತೆ ಕಾಣುತ್ತಾರೆ ಎಂದು ಮೈದಾಸ್ ದುಃಖಿಸಿದ. ಗುಟ್ಟು ರಟ್ಟು ಮಾಡಿದ ಕ್ಷೌರಿಕನನ್ನು ಗಲ್ಲಿಗೇರಿಸಿದ ದೊರೆ, ತಾನೂ ಆತ್ಮಹತ್ಯೆ ಮಾಡಿಕೊಂಡು ಸತ್ತುಹೋದ.

Leave a Reply