ಗೆಳೆತನವೊಂದು ‘ಸಕಲ ಸಂಬಂಧ’

ಉಳಿದೆಲ್ಲ ಸಂಬಂಧಗಳೂ ಒಂದು ಕಾರಣದ ಎಳೆಯನ್ನು ಹೊತ್ತುಕೊಂಡೇ ಇರುತ್ತವೆಯಾದರೆ, ಗೆಳೆತನ ಅಕಾರಣವಾಗಿ ಘಟಿಸುತ್ತದೆ ಮತ್ತು ಜೊತೆಗಿರುತ್ತದೆ. ಮತ್ತು ಉಳಿದೆಲ್ಲ ಸಂಬಂಧಗಳೂ ಗೆಳೆತನವನ್ನು ಒಳಗೊಂಡಿದ್ದರಷ್ಟೆ ಅವು ಪರಿಪೂರ್ಣವೆನ್ನಿಸುತ್ತವೆ!  ~ ಗಾಯತ್ರಿ 

ಸಂಬಂಧಗಳಲ್ಲಿ ಅತ್ಯಂತ ಶ್ರೇಷ್ಟವಾದ ಬಾಂಧವ್ಯವೆಂದರೆ, ಅದು ಗೆಳೆತನ. ಕಾಲಾಂತರದಲ್ಲಿ ಮಾನವನ ಧಾವಂತ, ಸ್ಪರ್ಧೆ ಹಾಗೂ `ಬಲಶಾಲಿಗಷ್ಟೆ ಬದುಕು’ ಅನ್ನುವಂಥ ಚಿಂತನೆಗಳಿಂದ ಗೆಳೆತನದ ಹೆಸರು ಅಷ್ಟಿಷ್ಟು ದುರುಪಯೋಗವಾಗಿದೆ ಅನ್ನುವುದನ್ನು ಅಲ್ಲಗಳೆಯಲಾಗದು. ಆದರೂ ಈತನಕ ಜಗತ್ತಿನಲ್ಲಿ ಸೌಹಾರ್ದ ನೆಲೆಯಾಗಿದೆ ಎಂದರೆ ಅದಕ್ಕೆ ಕಾರಣ ಈ ಕಾರಣ ಬಾಂಧವ್ಯವೇ.
ಯಾವುದೇ ಸಂಬಂಧದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಮೈತ್ರಿ ಇರಬೇಕಾಗುತ್ತದೆ, ಮೈತ್ರಿ ಇಲ್ಲದ ಸಂಬಂಧ ಅರ್ಥಹೀನವೂ ವ್ಯರ್ಥವೂ ಆಗುತ್ತದೆ ಎನ್ನುವ ಮಾತು ವೇದಕಾಲದಿಂದಲೂ ಚಾಲ್ತಿಯಲ್ಲಿದೆ. ನಮ್ಮ ಪೂರ್ವಜರು `ವಯಸ್ಸಿಗೆ ಬಂದ ಮಕ್ಕಳನ್ನು ಗೆಳೆಯರಂತೆ ಕಾಣಬೇಕು’ ಎಂದು ಸೂಚಿಸಿದ್ದಾರೆ. ಮದುವೆ ಮಾಡುವಾಗ ಸಪ್ತಪದಿ ತುಳಿಸುವ ಉದ್ದೇಶವೂ ಮೈತ್ರಿ ಸ್ಥಾಪನೆಯದೇ. `ಯಾರೇ ಇಬ್ಬರು ಒಟ್ಟಿಗೆ ಏಳು ಹೆಜ್ಜೆ ನಡೆದರೂ ಸಾಕು ಅವರು ಗೆಳೆಯರಾಗುತ್ತಾರೆ’ ಎನ್ನುವ ಚಿಂತನೆ ಇದರ ಹಿಂದಿದೆ. ಯಾವ ತಾಯಿಯನ್ನು ಮಕ್ಕಳು ಗೆಳತಿಯಂತೆ ಕಾಣುತ್ತಾರೋ ಅಂಥಾ ತಾಯಿಯೇ ಧನ್ಯಳು ಎನ್ನುವ ಮಾತು ಕೂಡ ನಮ್ಮ ಮಹಾಕಾವ್ಯಗಳಲ್ಲಿ, ಪ್ರಾಚೀನ ಕೃತಿಗಳಲ್ಲಿ ಹಾದುಹೋಗುತ್ತವೆ. ಹೀಗೆ ಎಲ್ಲೆಡೆಯಲ್ಲಿಯೂ ಅಗತ್ಯವಿರುವ, ಜೀವ ಜೀವಗಳನ್ನು ಬೆಸೆಯುವ ಅದ್ಭುತ ಸೂತ್ರ ಈ ಗೆಳೆತನ.

ನಿಸ್ವಾರ್ಥ ಬಂಧ
ರಾಮಾಯಣದಲ್ಲಿ ಅಲ್ಲಲ್ಲಿ ರಾಮನು ಲಕ್ಷ್ಮಣನನ್ನು `ಮಿತ್ರ’ನೆಂದು ಕರೆಯುತ್ತಾನೆ. ಸೀತೆಯನ್ನು ಗೆಳತಿಯೆನ್ನುತ್ತಾನೆ. ಮಹಾಭಾರತದಲ್ಲಿ ಅರ್ಜುನನು ಕೃಷ್ಣನನ್ನು ಬಹಳ ಬಾರಿ `ಸಖ’ನೆಂದೇ ಕರೆಯುವುದು. ಭಾರತೀಯ ಸಂಸ್ಕೃತಿಯಲ್ಲಿ ಇತ್ತೀಚಿನ ಶತಮಾನಗಳವರೆಗೂ ಹೆಂಡತಿಯನ್ನು `ಸಖಿ’ ಎಂದು ಸಂಬೋಧಿಸುವ ಪರಿಪಾಠವಿತ್ತು ಎನ್ನುವುದನ್ನು ಕಾವ್ಯೇತಿಹಾಸಗಳಲ್ಲಿ ಗಮನಿಸಬಹುದು. ಯಾವ ಎರಡು ವ್ಯಕ್ತಿಗಳ ನಡುವೆ ಒಬ್ಬರನ್ನೊಬ್ಬರು ಆಳಬೇಕೆನ್ನುವ ವಾಂಛೆಯಿಲ್ಲದ, ಸ್ಪರ್ಧೆಯಿಲ್ಲದ, ನಿರೀಕ್ಷೆ ಇಲ್ಲದ ಬಾಂಧವ್ಯ ಇರುತ್ತದೆಯೋ ಆ ಎರಡು ವ್ಯಕ್ತಿಗಳು ಗೆಳೆಯರೇ ಆಗಿರುತ್ತಾರೆ.

ಕೇವಲ ಮನುಷ್ಯರ ನಡುವೆ ಮಾತ್ರವಲ್ಲ, ಯಾವ ಜೀವಿಯು ಸಹಜೀವಿಗೆ ಪೂರಕವಾಗಿ ವರ್ತಿಸುತ್ತದೆಯೋ, ನಿಸ್ವಾರ್ಥದಿಂದ ತನ್ನ ಕೈಲಾದ ಕೊಡುಗೆ ನೀಡುತ್ತದೆಯೋ ಅದು ಕೂಡ ಸ್ನೇಹ ಯೋಗ್ಯವೇ ಆಗಿರುತ್ತದೆ. ಹೀಗಾಗಿಯೇ ಚಿಕ್ಕದೊಂದು ಹುಳು ರೈತನ ಮಿತ್ರ ಎಂದೂ ಜಡ ಹಿಮಾಲಯ ದೇಶದ ಮಿತ್ರ ಎಂದೂ ಕರೆಸಿಕೊಳ್ಳುತ್ತವೆ. ಜೀವ ಸರಪಳಿಯಲ್ಲಿ ಹಲವು ಜೀವಿಗಳು ನೇರವಾಗಿಯೂ ಕೆಲವು ಸುಪ್ತವಾಗಿಯೂ ಮತ್ತೊಂದು ಜೀವಿಗೆ ಸ್ನೇಹಿತರಂತೆ ವರ್ತಿಸುತ್ತವೆ. ಒಂದು ನಿರ್ಜೀವ ಪುಸ್ತಕ ಕೂಡ ಮನುಷ್ಯನ ಮಿತ್ರನಾಗಬಲ್ಲದು ಎಂದರೆ ಮಿತ್ರತ್ವದ ಅರ್ಥವ್ಯಾಪ್ತಿಯನ್ನು ಊಹಿಸಿ.

ಇಂದಿನ ತುರ್ತು ಅಗತ್ಯ
ಪುರಾಣೇತಿಹಾಸಗಳುದ್ದಕ್ಕೂ ಆದರ್ಶ ಗೆಳೆತನವನ್ನು ನಾವು ಕಾಣುತ್ತೇವೆ. ಪಂಚತಂತ್ರದ `ಮಿತ್ರ ಲಾಭ’ ತಂತ್ರದ ಕಥನದುದ್ದಕ್ಕೂ ಪ್ರಾಣಿಗಳ ಗೆಳೆತನ, ಗೆಳೆಯರಿಗಾಗಿ ಅವು ಮಾಡುವ ಸಾಹಸಗಳು, ತಂದುಕೊಳ್ಳುವ ಅಪಾಯಗಳು, ಪರಸ್ಪರ ಕೃತಜ್ಞತೆಯೇ ಮೊದಲಾದ ವಿವರಗಳಿವೆ. ಕಥಾ ಸರಿತ್ಸಾಗರ, ದಶಕುಮಾರ ಚರಿತ, ವಡ್ಡಾರಾಧನೆ ಮೊದಲಾದ ಕೃತಿಗಳು ಗೆಳೆತನದ ಮಹತ್ತು ಸಾರುವ ಕಥೆಗಳನ್ನು ಒಳಗೊಂಡಿವೆ.
ಇಂದಿಗೂ ನಾವು ಅನೇಕ ಕ್ಷೇತ್ರಗಳಲ್ಲಿ ಪರಸ್ಪರ ಪೂರಕವಾಗಿ ಬೆಳೆದ ಸಾಧಕರ ಗೆಳೆತನವನ್ನು ಕಾಣುತ್ತೇವೆ. ಮತ್ತು ಈ ಎಲ್ಲ ನಿದರ್ಶನಗಳಲ್ಲೂ ಸಾಮಾನ್ಯವಾಗಿ ಕಂಡುಬರುವ ಅಂಶ `ನಿಸ್ವಾರ್ಥ’. ಅದೇ ಗೆಳೆತನದ ಪರಮಾದರ್ಶ. ಅದು ಇಂದಿನ ಅಗತ್ಯವೂ ಹೌದು. 

ಧರ್ಮ, ದೇಶ, ಭಾಷೆ, ತರ್ಕ, ಸಿದ್ಧಾಂತ, ರಾಜಕಾರಣ ಹೀಗೆ ಅನೇಕ ಭಿನ್ನಾಭಿಪ್ರಾಯಗಳ ಇಂದಿನ ಕಾಲಮಾನದಲ್ಲಿ ತುರ್ತಾಗಿ ಬೇಕಿರುವುದು ಸೌಹಾರ್ದ. `ಸು’ (ಒಳ್ಳೆಯ) `ಹೃದ’ (ಹೃದಯ) – ಒಳ್ಳೆಯ ಹೃದಯವೇ `ಸುಹೃದ’. ಅದನ್ನು ಒಳಗೊಂಡಿರುವುದೇ `ಸೌಹಾರ್ದ’. ಹಾಗೆಯೇ ಗೆಳೆಯನನ್ನೂ ಸುಹೃದ ಅಥವಾ ಸಹೃದ ಎಂದು ಕರೆಯಲಾಗುತ್ತದೆ. ಒಳ್ಳೆಯ ಹೃದಯ ಹೊತ್ತ ಗೆಳೆಯರು ಜಗತ್ತಿನೆಲ್ಲೆಡೆ ಹಬ್ಬಿಕೊಂಡರೆ ಮಾತ್ರ ಸದ್ಯದ ವೈಷಮ್ಯಗಳು, ದ್ವೇಷ – ಪ್ರತೀಕಾರಗಳು ತಗ್ಗಬಹುದು. ಜಗತ್ತಿನ ಎಲ್ಲ ದೇಶಗಳೂ ಪರಸ್ಪರ ಮೈತ್ರಿಯಿಂದ ಇದ್ದರಷ್ಟೆ ಜಗತ್ತಿನ ಒಟ್ಟು ಪ್ರಗತಿ ಸಾಧ್ಯವಾಗುವುದು. ಎಲ್ಲ ಕೋಮಿನವರು ಸೌಹಾರ್ದದಿಂದ ಇದ್ದರಷ್ಟೆ ದ್ವೇಷದ ದಳ್ಳುರಿ ಶಮನವಾಗುವುದು. ಹಾಗೆಂದೇ `ಮೈತ್ರಿ’ಯ ಅವಶ್ಯಕತೆ ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದೆ ಅನ್ನಿಸುವುದು.

 

 

 

 

 

 

Leave a Reply