ಅಂತಿಮ ಗುರಿ ಇರದವನು… : ಇಕ್ಯೂ ಹಾಯ್ಕು, ಓಶೋ ವಿವರಣೆ

ಇಕ್ಯೂ ತನ್ನನ್ನು “ಯಾವ ಅಂತಿಮ ಗುರಿ ಇರದವನು, ಯಾವ ಮೌಲ್ಯವೂ ಇರದವನು” ಎಂದು ಹೇಳಿಕೊಂಡಿದ್ದಾನೆ.
ಗುರಿಯೂ ಇಲ್ಲದ, ಮೌಲ್ಯವೂ ಇಲ್ಲದ ಬದುಕನ್ನು ನಿರುಮ್ಮಳವಾಗಿ ಅನುಭವಿಸಬಹುದು. ಇದರಿಂದ ಲಾಭವೇನು ಎಂದು ತಲೆ ಕೆಡಿಸಿಕೊಳ್ಳಬೇಕಿಲ್ಲ. ಇದರ ಪಾಪ ಪುಣ್ಯಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಬದುಕನ್ನು ಲೀಲಾಮಾತ್ರವಾಗಿ ಅನುಭವಿಸಬೇಕು  

ಕಾಲಗಟ್ಟಲೆ ಮೊದಲು ನಾನು
ಪ್ರಕೃತಿಯಲ್ಲಿ ಇಲ್ಲವಾದವನು:
ಯಾವ ಅಂತಿಮ ಗುರಿ ಇರದವನು
ಯಾವ ಮೌಲ್ಯವೂ ಇರದವನು
~ ಇಕ್ಯೂ

Myself of long ago,
In nature
Nonexistent:
No final destination,
Nothing of any value.
~ Ikkyu

ikkyu

ಕ್ಯೂ ಈ ಹಾಯ್ಕುವಿನಲ್ಲಿ ಇಡಿಯ ಝೆನ್ ಆಶಯವನ್ನೇ ಹೇಳಿದ್ದಾನೆ.
“ಪ್ರಕೃತಿಯಲ್ಲಿ ಇಲ್ಲವಾದವನು”…. ಆದರೆ ಅವನಿಗೆ ತಾನು ಇಲ್ಲವಾಗಿದ್ದೇನೆ ಅನ್ನುವುದು ತಿಳಿದಿಲ್ಲ. ಇಲ್ಲವಾಗುವುದು ಎಂದರೆ ತನ್ನ ಅಸ್ತಿತ್ವವನ್ನು ಪ್ರಕೃತಿಯ ಅಸ್ತಿತ್ವದೊಳಗೆ ವಿಲೀನಗೊಳಿಸುವುದು. ತಾನು ಯಾವಾಗ ವಿಲೀನಗೊಂಡೆ ಎಂಬುದು ಅವನಿಗೆ ತಿಳಿದಿಲ್ಲ. ಅವನು ಅದನ್ನು ತನ್ನ ಡೈರಿಯಲ್ಲಿ ಬರೆದಿಟ್ಟುಕೊಂಡಿಲ್ಲ. ಹಾಗೆ ಇಲ್ಲವಾಗುವ ಮುನ್ನ ತಾನು ಏನಾಗಿದ್ದೆ ಅನ್ನುವುದೂ ಅವನಿಗೆ ಗೊತ್ತಿಲ್ಲ. ಅನಿಗೆ ತಾನು ಕಾಣಿಸುತ್ತಲೇ ಇಲ್ಲ!

ಇಲ್ಲವಾದವನು ಕಾಣಿಸುವುದು ಹೇಗೆ? ಅಸ್ತಿತ್ವವನ್ನು ಪ್ರಕೃತಿಯಲ್ಲಿ ವಿಲೀನಗೊಳಿಸಿಕೊಂಡವನಿಗೆ ತನ್ನ ಬದಲು ಪ್ರಕೃತಿಯೇ ಕಾಣುತ್ತದೆ. ಹಾಗೆಯೇ ಅವನಿಗೂ ಪ್ರಕೃತಿ ಮಾತ್ರ ಕಾಣಿಸುತ್ತಿದೆ. ಅವನಿಗೆ ಅಂತಿಮ ಗುರಿ ಇಲ್ಲ. ಗುರಿ ಇಲ್ಲದವರು ಎಲ್ಲಿಗಾದರೂ ಪ್ರಯಾಣಿಸುವ ಅಗತ್ಯವೇ ಇರುವುದಿಲ್ಲ ಅಲ್ಲವೆ? ಹಾಗೇನಾದರೂ ಅಂತಿಮ ಗುರಿಯೊಂದಿದೆ ಎಂದಾದರೆ, ಅದು ಸಾವೇ ಆಗಿರುತ್ತದೆ. ಆದರೆ ಬದುಕು ತುದಿಮೊದಲಿಲ್ಲದ ನಿರಂತರ ಚಲನೆ. ಬದುಕಿಗೆ ಸಾವು ಕೊನೆಯಲ್ಲ. ಅದು ಅಂತಿಮವಲ್ಲ. ಸಾವಿನ ನಂತರವೂ ಚಲನೆಯಿದೆ. ಆದ್ದರಿಂದ ಅವನು ಸಾವಿನತ್ತ ಧಾವಿಸುತ್ತಿಲ್ಲ.

ಹಾಗೆ ಅಂತಿಮ ಗುರಿ ತಲುಪಿದವರು ಏನು ಮಾಡುತ್ತಾರೆ? ಮಾಡುವುದೇನು? ಮುಮುಕ್ಷುಗಳಿಗೆ ಈ ಪ್ರಶ್ನೆ ಬಹುಶಃ ಹೊಳೆದಿರುವುದೇ ಇಲ್ಲ! ಮೋಕ್ಷ ದೊರೆಯಿತು… ಮುಂದೇನು ಮಾಡುವುದು? ಆ ವ್ಯಕ್ತಿ ಹತಾಶನಾಗುತ್ತಾನಷ್ಟೆ. ಯಾವ ಗುರಿಯನ್ನೂ ತಲುಪುವ ಅಗತ್ಯವಿಲ್ಲ ಎಂದು ಅರಿಯುವ ಯಾತ್ರಿಯು ತನ್ನ ಯಾತ್ರೆಯ ಸಂದರ್ಭದಲ್ಲಿ ಎಲ್ಲವನ್ನೂ ಪೋಲು ಮಾಡಿಕೊಂಡಿರುತ್ತಾನೆ. ಮೋಕ್ಷದ ಬಾಗಿಲನ್ನು ತಲುಪುವಾಗ ಅವನದು ಬರಿಗೈ! ಆಗ ಅವನಿಗೆ ತಾನೆಂಥ ಮೂರ್ಖ ಎಂದು ಅರಿವಾಗುತ್ತದೆ. ನಾನೇಕೆ ಇಲ್ಲಿಗೆ ಬಂದೆ ಎಂದು ಆತ ಕಂಗಾಲಾಗುತ್ತಾನೆ.

ಇದನ್ನು ಹೇಳುತ್ತಾ ನನಗೆ ರವೀಂದ್ರನಾಥ ಠಾಕೂರರ ಸಾಲುಗಳು ನೆನಪಾಗುತ್ತಿವೆ. ಆ ಸಾಲುಗಳು ಹೀಗೆ ಹೇಳುತ್ತವೆ:

ಶತಶತಮಾನಗಳಿಂದಲೂ ನಾನು ಭಗವಂತನನ್ನು ಅರಸುತ್ತಿದ್ದೆ.
ಅವನು ಚಂದ್ರನಲ್ಲಿ ಗೋಚರಿಸಿದ.
ಚಂದ್ರನನ್ನು ತಲುಪುವ ವೇಳೆಗೆ ಅವನೊಂದು ನಕ್ಷತ್ರವನ್ನು ತಲುಪಿದ್ದ.
ಆ ನಕ್ಷತ್ರದ ಬೆನ್ನತ್ತಿದಾಗ ಅವನು ಮತ್ತೊಂದು ನಕ್ಷತ್ರಕ್ಕೆ ಹಾರಿದ್ದ.
ಬೆಂಬಿಡದಂತೆ ಅವನನ್ನು ಹಿಂಬಾಲಿಸಿದೆ.
ಅವನು ದೂರದ ನಿಹಾರಿಕೆಗೆ ಹಾರಿದ…

ಇದು ಹೀಗೇ ನಡೆಯಿತು.
ಒಂದಲ್ಲ ಒಂದು ದಿನ ಅವನನ್ನು ಸೇರಿಯೇ ತೀರುವ ತವಕವೂ
ನನ್ನೊಳಗನ್ನು ತೀವ್ರವಾಗಿ ತಬ್ಬತೊಡಗಿತು.

ಅವನಾದರೂ ಎಷ್ಟು ದಿನ ಹೀಗೆ ಕಣ್ಣಾಮುಚ್ಚಾಲೆ ಆಡಬಲ್ಲ?
ಎಲ್ಲೆಲ್ಲಿ ಅಡಗಿರಬಲ್ಲ!?
ಕೊನೆಗೊಂದು ದಿನ ಅವನ ಮನೆಬಾಗಿಲು ತಲುಪಿದೆ.
ಫಲಕದ ಮೇಲವನ ಹೆಸರು ಬರೆಯಲಾಗಿತ್ತು.
ಹೇಗೂ ಗುರಿ ತಲುಪಿದೆನೆಂದು ನಿರುಮ್ಮಳ…
ಹಗುರಾದೆ… ಮೆಟ್ಟಿಲುಗಳನೇರಿ ಇನ್ನೇನು ಕದ ಬಡಿಯಬೇಕು,
ಎಚ್ಚರವಾಯಿತು.

“ಕೊಂಚ ತಡಿ. ಭಗವಂತ ಬಾಗಿಲು ತೆರೆದ ಮೇಲೇನು ಮಾಡುವೆ?”
ಪ್ರಶ್ನೆ ಎದುರು ನಿಂತಿತು.
ಭಗವಂತನೆದುರು ನಿಂತು ನಾನು ಏನು ತಾನೆ ಮಾತಾಡಬಲ್ಲೆ!?

– ಇದು ಠಾಕೂರರ ಕವನ. ದೇವರಿಗೆ ಮುಖಾಮುಖಿಯಾದ ಮೇಲೆ ನನ್ನಲ್ಲಾಗಲಿ ಅಥವಾ ದೇವರಲ್ಲಾಗಲಿ ನುಡಿಯಲು ಯಾವ ಮಾತುಗಳು ಉಳಿದಿರುತ್ತವೆ? ಅಂತಿಮ ಗುರಿಯನ್ನು ಅಂತಿಮ ಸಾವೆಂದೇ ತಿಳಿಯಬೇಕಾಗುತ್ತದೆ.

ಆದ್ದರಿಂದ ಇಕ್ಯೂ ತನ್ನನ್ನು “ಯಾವ ಅಂತಿಮ ಗುರಿ ಇರದವನು, ಯಾವ ಮೌಲ್ಯವೂ ಇರದವನು” ಎಂದು ಹೇಳಿಕೊಂಡಿದ್ದಾನೆ.
ಗುರಿಯೂ ಇಲ್ಲದ, ಮೌಲ್ಯವೂ ಇಲ್ಲದ ಬದುಕನ್ನು ನಿರುಮ್ಮಳವಾಗಿ ಅನುಭವಿಸಬಹುದು. ಇದರಿಂದ ಲಾಭವೇನು ಎಂದು ತಲೆ ಕೆಡಿಸಿಕೊಳ್ಳಬೇಕಿಲ್ಲ. ಇದರ ಪಾಪ ಪುಣ್ಯಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಬದುಕನ್ನು ಲೀಲಾಮಾತ್ರವಾಗಿ ಅನುಭವಿಸಬೇಕು. ಈ ಕ್ಷಣದ ಲೀಲೆ ಮುಗಿದರೆ, ಅದರು ಈ ಕ್ಷಣದ ಕೊನೆಯಷ್ಟೆ. ಮತ್ತೆ ಮತ್ತೊಂದು ಲೀಲೆಯ ಮೂಲಕ ಬದುಕು ಮುಂದುವರೆಯುವುದು ಇದ್ದೇ ಇರುತ್ತದೆ.

ಬಹುಶಃ ಭಾರತೀಯ ಆಧ್ಯಾತ್ಮಿಕ ಸಾಹಿತ್ಯಕ್ಕೆ ಬುದ್ಧ, ಝೆನ್ ಮತ್ತು ಸೂಫಿ, ಹಸೀದ್ ಇತ್ಯಾದಿ ಪಂಥಗಳನ್ನು ಓಶೋ ಅವರಷ್ಟು ಸ್ವಾರಸ್ಯಕರವಾಗಿ ಪರಿಚಯಿಸಿದವರು ಮತ್ತೊಬ್ಬರಿಲ್ಲ. ಝೆನ್ ಮತ್ತು ಬುದ್ಧನನ್ನು ಓಶೋರಷ್ಟು ಸುಂದರವಾಗಿ ವ್ಯಾಖ್ಯಾನ ಮಾಡಿದವರೂ ಬಹುಶಃ ಮತ್ತೊಬ್ಬರಿಲ್ಲ! ಓಶೋ ಝೆನ್ ಹಾಯ್ಕುಗಳಿಗೆ ನೀಡಿದ ವ್ಯಾಖ್ಯಾನಗಳ ಸರಣಿಯಲ್ಲಿ ಕೆಲವನ್ನು ಆಯ್ದು. ಇಂಗ್ಲೀಶ್’ನಿಂದ ಅನುವಾದಿಸಿ ಅರಳಿಬಳಗವು ಪ್ರಕಟಿಸಲಿದೆ | ಸಂಗ್ರಹ ಮತ್ತು ಅನುವಾದ ~ ಅಲಾವಿಕಾ

 

Leave a Reply