ಪ್ರಜ್ಞಾಗುಪ್ತ ಶರೀರಸ್ಯ ಕಿಂ ಕರಿಷ್ಯಂತಿ ಸಂಗತಾಃ|
ಗೃಹೀತಚ್ಛತ್ರಹಸ್ತಸ್ಯ ವಾರಿಧಾರಾ ಇವಾರಯಃ || ಸುಭಾಷಿತ ಸುಧಾ ನಿಧಿ ||
: ಪ್ರಜ್ಞೆಯ ಹೊದಿಕೆಯನ್ನು ಹೊದ್ದವರು ಸಂಗತಿದೋಷದಿಂದ ಕೆಡುವುದಿಲ್ಲ.
ಕೊಡೆ ಹಿಡಿದು ನಡೆಯುವವರನ್ನು ಮಳೆ ಹನಿಗಳು ಹೇಗೆ ಒದ್ದೆ ಮಾಡಲಾರವೋ ಹಾಗೆಯೇ ಇದು.
ಯಾವುದೇ ವ್ಯಕ್ತಿ ತನ್ನ ಪ್ರಜ್ಞೆಯನ್ನು ತಾನು ಹೊಂದಿದ್ದರೆ ಇತರರನ್ನು ದೂಷಿಸುವುದು ತಪ್ಪುತ್ತದೆ. ಪ್ರಜ್ಞಾವಂತನನ್ನು ಯಾವುದೂ ಬಾಧಿಸಲಾರದು ಎಂಬುದನ್ನು ಈ ಸುಭಾಷಿತ ಅತ್ಯಂತ ಸರಳ ಉದಾಹರಣೆಯೊಂದಿಗೆ ಹೇಳುತ್ತಿದೆ.
ಸಾಮಾನ್ಯವಾಗಿ ನಾವು ನಮ್ಮ ಸಮಸ್ಯೆಗಳಿಗೆ ಮತ್ತೊಬ್ಬರನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ. “ಅವರ ಸಾಂಗತ್ಯದಲ್ಲಿ ಕೆಟ್ಟೆವು” “ಇಂಥವರ ಜೊತೆಗಿದ್ದುದರಿಂದ ಹಾಗೆ ಮಾಡಬೇಕಾಯಿತು” ಇತ್ಯಾದಿಯಾಗಿ ದೂರುತ್ತೇವೆ.
ಬಹಳ ಬಾರಿ ಪೋಷಕರು ತಮ್ಮ ಮಕ್ಕಳ ತಪ್ಪುಗಳಿಗೆ ಅವರ ಗೆಳೆಯರನ್ನು ದೋಷಿಗಳನ್ನಾಗಿ ಮಾಡುತ್ತಾರೆ.
ಇವೆಲ್ಲವೂ ತಪ್ಪು. ಇವೆಲ್ಲವೂ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನಗಳಾಗಿವೆ ಅಷ್ಟೆ.
ನಮ್ಮ ನಮ್ಮ ಕ್ರಿಯೆಗಳಿಗೆ ನಾವೇ ಜವಾಬ್ದಾರರು. ಇನ್ನೊಬ್ಬರ ಮೇಲೆ ಹೊರಿಸುವುದು ಸರಿಯಲ್ಲ.
“ಸಂಗಾತ್ ಸಂಜಾಯತೇ ಕಾಮಃ” ಅನ್ನುವುದು ನಿಜವಾದರೂ ಪ್ರತ್ಯೇಕ ವ್ಯಕ್ತಿಯಾಗಿ ನಮಗೆ ನಮ್ಮದೇ ಜವಾಬ್ದಾರಿಗಳಿರುತ್ತವೆ. ನಮ್ಮಲ್ಲಿ ಪ್ರಜ್ಞೆ ಜಾಗೃತವಾಗಿದ್ದರೆ ನಾವು ಯಾರ ಸಂಗಾತದಲ್ಲಿಯೂ ತಪ್ಪು ಹೆಜ್ಜೆ ಇಡಲು ಸಾಧ್ಯವಿಲ್ಲ.
ಮಳೆ ಬರುವಾಗ ಕೊಡೆ ಹಿಡಿಯದೆ ನಡೆದರೆ ನಾವು ಒದ್ದೆಯಾಗುತ್ತೇವೆ. ಹಾಗೆಯೇ ಸಂಗಾತದಲ್ಲಿ ನಾವು ಪ್ರಜ್ಞಾಶೂನ್ಯರಾಗಿದ್ದರೆ ಅದರ ಸಾಧಕ ಬಾಧಕಗಳಿಗೆ ಒಳಗಾಗುತ್ತೇವೆ. ಕೊಡೆ ಹಿಡಿದುಕೊಂಡು ಹೋದರೆ ಮಳೆಹನಿಗಳು ನಮ್ಮನ್ನು ಒದ್ದೆಮಾಡಲಾರವು. ನಮ್ಮ ಪ್ರಜ್ಞಾವಂತಿಕೆಯೇ ನಮ್ಮನ್ನು ನೆನೆಯದಂತೆ ಕಾಪಾಡುವ ಕೊಡೆ.
ಆದ್ದರಿಂದ ಪ್ರಜ್ಞೆಯನ್ನು ಸದಾ ಜಾಗೃತವಾಗಿಟ್ಟುಕೊಳ್ಳಬೇಕು. – ಇದು ಸುಧಾನಿಧಿಯ ಮೇಲಿನ ಸುಭಾಷಿತದ ಸಾರ.