ರಾಟೆಯ ಕುಲಜಾತಿ ಕೇಳಿರಣ್ಣಾ…. : ಶರಣೆ ಕದಿರ ರೆಮ್ಮವ್ವೆಯ ವಚನ

ಈ ವಚನದ ಮೂಲಕ ಶರಣೆ ಕದಿರ ರೆಮ್ಮವ್ವೆ, ರಾಟೆಯಿಂದ ನೂಲು ತೆಗೆಯುವ ಪ್ರಕ್ರಿಯೆಯಲ್ಲಿ ಸಮಸ್ತೆ ಸೃಷ್ಟಿಯ ದರ್ಶನವನ್ನೇ ಮಾಡಿಸುತ್ತಾಳೆ.

ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ;
ಅಡಿಯ ಹಲಗೆ ಬ್ರಹ್ಮ , ತೋರಣ ವಿಷ್ಣು, 
ನಿಂದ ಬೊಂಬೆ ಮಹಾರುದ್ರ; 
ರುದ್ರನ ಬೆಂಬಳಿಯವೆರಡು ಸೂತ್ರ ಕರ್ಣ .
ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ,
ಸುತ್ತಿತ್ತು ನೂಲು ಕದಿರು ತುಂಬಿತ್ತು.
ರಾಟೆಯ ತಿರುಹಲಾರೆಎನ್ನ ಗಂಡ ಕುಟ್ಟಿಹ
ಇನ್ನೇವೆ ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರಾ?

remmavve

ತನ್ನ ಕಾಯಕದಲ್ಲೇ ಕೈಲಾಸ ಕಂಡು ಅನುಭಾವ ಪಡೆದ ರೆಮ್ಮವ್ವೆ, ಈ ವಚನದಲ್ಲಿ ತನ್ನ ಕಾಯಕದ ಪರಿಕರಗಳ ಮೂಲಕವೇ ಪಾರಮಾರ್ಥಿಕ ಅರ್ಥವನ್ನು ಕಟ್ಟಿಕೊಟ್ಟಿದ್ದಾಳೆ. ತಾನು ಪ್ರತಿನಿತ್ಯ ತಿರುಗಿಸುವ ರಾಟೆಯ ಜಾತಿ ಇಂಥದೆಂದು ಹೇಳುವಾಗಲೇ, ಹಾಗೆ ಕೇಳುವವರ ಕುರಿತು ಆಕ್ರೋಶವಿದೆ. ಮತ್ತು,  ಜಾತಿ ಆಚರಣೆಯಿಂದಲ್ಲದೆ, ಕಾಯಕ ಶ್ರದ್ಧೆಯಲ್ಲೇ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು ಅನ್ನುವ ಅರಿವು ಇದೆ.

ತಾನು ನೂಲುವ ಕದಿರಿನ ಹಲಗೆಯನ್ನು ಆಕೆ ಬ್ರಹ್ಮ ಎನ್ನುತ್ತಾಳೆ. ಹಲಗೆ ಗಟ್ಟಿಯಾಗಿದ್ದರೆ ಮಾತ್ರ ಕದಿರು ತೆಗೆಯುವವರು ಅದರ ಮೇಲೆ ಕುಳಿತು ನೂಲಬಹುದು. ಅದು ಕದಿರಿನ ಉತ್ಪತ್ತಿಯ ಆರಂಭ (ಸೃಷ್ಟಿ). ಅದೇ ರೀತಿ ಕದಿರಿಗೆ ಕಟ್ಟುವ ತೋರಣವು ವಿಷ್ಣು – ಇದು ಸ್ಥಿತಿ ಪ್ರಜ್ಞೆಯಾಗಿದೆ. ಲಯದ ಸಂಕೇತವಾದ ರುದ್ರನು ಕದಿರಿನ ಹೆಮ್ಮೊಳೆ- ಲೋಹದ ತುಂಡು ಕದಿರು ತೆಗೆಯುವ ಸಾಧನ. ಇಲ್ಲಿಂದ ಹೊರಬರುವ ಅರಿವೇ ಕದಿರು.

ಭಕ್ತಿಯ ಕೈಯಲ್ಲಿ ರಾಟೆ ತಿರುಹಲಾಗಿ, ನೂಲು ಸುತ್ತಿಕೊಳ್ಳ ತೊಡಗಿತು ಮತ್ತು ಕದಿರು ತುಂಬಿ ಬಿಟ್ಟಿತು. ಪ್ರಾಪಂಚಿಕ ಪಾರಮಾರ್ಥಿಕ ನಿಲುವುಗಳನ್ನು ಸಮನ್ವಯಿಸುವ ಪ್ರಯತ್ನ ಇದಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಆದಾಯ ತಿರಸ್ಕರಿಸಿದ ಶರಣೆ ರೆಮ್ಮವ್ವೆ, ಹಾಗೇನಾದರೂ ಹೆಚ್ಚಿಗೆ ಕದಿರ ತೆಗೆದು ಆದಾಯ ಮಾಡಿಕೊಂಡರೆ, ತನ್ನ ಲಿಂಗವೆಂಬ ಗಂಡನು ತನ್ನನ್ನು ಶಿಕ್ಷಿಸುವನೆಂದು ತನ್ನನ್ನು ತಾನೇ ಎಚ್ಚರಿಸಿಕೊಳ್ಳುತ್ತಾಳೆ.

Leave a Reply