ಪಿತೃಪಕ್ಷ – ಮಹಾಲಯ ಅಮಾವಾಸ್ಯೆ ಆಚರಣೆ ಮತ್ತು ವೈಚಾರಿಕತೆ

ಜಗತ್ತು, ಜನ ಜೀವನ ಕೇವಲ ವಿಜ್ಞಾನ ಅಥವಾ ವಿಚಾರದ ಮೇಲೆ ನಡೆಯುತ್ತಿಲ್ಲ. ಭಾವನೆಗಳು, ಸಂಸ್ಕೃತಿ, ಸಾಹಿತ್ಯ ಎಲ್ಲವೂ ಸೇರಿ ಮನುಷ್ಯ ಜೀವನ ರೂಪುಗೊಂಡಿದೆ. ಆದರೆ, ಸಂಪ್ರದಾಯದ ಹೆಸರಲ್ಲಿ ಆಚರಣೆಗಳನ್ನು ನಡೆಸುವಾಗ ಬದಲಾದ ಕಾಲಮಾನಕ್ಕೆ ತಕ್ಕಂತೆ ಸೂಕ್ಷ್ಮತೆ ಬೆಳೆಸಿಕೊಂಡು ಸಾಧ್ಯವಾದಷ್ಟೂ ಮತ್ತೊಬ್ಬರಿಗೆ ಯಾವುದೇ ಬಗೆಯಲ್ಲಿ ತೊಂದರೆಯಾಗದ ಹಾಗೆ ಆಚರಿಸುವುದು ಕೂಡಾ ಮುಖ್ಯ ~ ಚಿತ್ಕಲಾ

“ಪಿತೃಪಕ್ಷ ಆಚರಣೆ, ಮಹಾಲಯ ಅಮಾವಾಸ್ಯೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?”ನ್ನುವ ಪ್ರಶ್ನೆ ಅರಳಿ ಬಳಗಕ್ಕೆ 692 ಇಂದ ಕೊನೆಯಾಗುವ ಮೊಬೈಲ್ ಸಂಖ್ಯೆಯಿಂದ ಬಂದಿದೆ.

ಇದಕ್ಕೆ ಸಾರ್ವತ್ರಿಕ ಉತ್ತರ ಹೇಳಲು ಸಾಧ್ಯವಿಲ್ಲ. ಏಕೆಂದರೆ ಈ ಬಗೆಯ ಆಚರಣೆಗಳು ಮುಖ್ಯವಾಗಿ ನಂಬಿಕೆಯನ್ನು ಅವಲಂಬಿಸಿರುತ್ತದೆ. ವರ್ಷಕ್ಕೊಮ್ಮೆ ಪಿತೃಗಳನ್ನು (ಪೂರ್ವಜರನ್ನು) ನೆನೆದು, ಅವರ ಗೌರವಾರ್ಥ ಕುಟುಂಬಸ್ಥರೆಲ್ಲ ಸೇರಿ ಔತಣ ನಡೆಸುತ್ತಾರೆ. ಈ ಸಂದರ್ಭದಲ್ಲಿ ಪ್ರತಿಯೊಂದು ಸಮುದಾಯವೂ ತನ್ನದೇ ಸಂಪ್ರದಾಯವನ್ನು ಅನುಸರಿಸುತ್ತದೆ. ಆಚರಣೆಗಳು, ಆಹಾರ, ವಿಧಿವಿಧಾನಗಳೆಲ್ಲವೂ ಭಿನ್ನ. ಬಹುತೇಕ ಜನಸಮುದಾಯಗಳು (ಜಾತಿ – ಉಪಜಾತಿಗಳು) ಪಿತೃಪಕ್ಷವನ್ನು ಆಚರಿಸುತ್ತವೆ ಮತ್ತು ಇದನ್ನು ತಮ್ಮದೇ ಹೆಸರುಗಳಲ್ಲಿ ಕರೆಯುತ್ತವೆ.

ಕೆಲವೊಮ್ಮೆ ಆಚರಣೆಗಳು ಅತಿರೇಕ ಅನ್ನಿಸಬಹುದು. ನಮಗೆ ಅರ್ಥವೇ ಆಗದ ಪದ್ಧತಿಗಳು, ಮಂತ್ರಗಳು ಒಪ್ಪಿಗೆಯಾಗದೆ ಇರಬಹುದು. ಆದ್ದರಿಂದ, ಅವುಗಳ ಅರ್ಥವನ್ನು ಹಿರಿಯರಲ್ಲಿ ಕೇಳಿ ತಿಳಿದು,  ಅರ್ಥ ಮಾಡಿಕೊಂಡು, ಅನಂತರ ತಮ್ಮ ಹಿರಿಯರಿಗೆ ಗೌರವ ಸಲ್ಲಿಸುವುದು ಉತ್ತಮ. ಹಾಗೆ ವರ್ಷಕ್ಕೊಮ್ಮೆ ಕುಟುಂಬದ ಜನರು ಕಲೆತು ಊಟ ಮಾಡುವುದು ಹಿರಿಯರ ನೆನವರಿಕೆಯಲ್ಲಿ ಜೊತೆಗೂಡುವುದು ಕೂಡಾ ಒಳ್ಳೆಯದೇ. ಆದರೆ ಇದೊಂದು ಕಡ್ಡಾಯವಾಗಿ, ಸಾಲಸೋಲ ಮಾಡಿ ಕಾರ್ಯಕ್ರಮ ನಡೆಸುವುದು ಅಪೇಕ್ಷಣೀಯವಲ್ಲ. ಅದು ಉದ್ದೇಶಿತ ಆನಂದವನ್ನೂ ಅರ್ಥವನ್ನೂ ನೀಡುವುದಿಲ್ಲ. ನಮ್ಮ ಹಿರಿಯರು ನಾವು ಹೀಗೆಲ್ಲ ಒದ್ದಾಡುವುದನ್ನು ಬಯಸುವುದೂ ಇಲ್ಲ!

ಪಿತೃಗಳನ್ನು ಗೌರವಿಸುವ ಪದ್ಧತಿ ಭಾರತಕ್ಕೆ ಮಾತ್ರ ಸೀಮಿತವಲ್ಲ. ಇದು ವಿವಿಧ ರೂಪ – ಹೆಸರುಗಳಲ್ಲಿ ಜಗತ್ತಿನ ಎಲ್ಲೆಡೆಯೂ ಉಂಟು. ವಂಶವೃಕ್ಷದ ಬೇರುಗಳನ್ನು ನೆನೆಯುವುದು ಒಳ್ಳೆಯ ರೂಢಿ ಕೂಡಾ. ಹೀಗಾಗಿ, ಪಿತೃಪಕ್ಷದ ಆಚರಣೆಯನ್ನು ವಿರೋಧಿಸಬೇಕಿಲ್ಲ.

ಕೆಲವರು ಪಿತೃಪಕ್ಷ ಮೊದಲಾದ ಆಚರಣೆಗಳನ್ನು ‘ಗೊಡ್ಡು ಸಂಪ್ರದಾಯ’  ಎಂದು ಕರೆಯುತ್ತಾರೆ. ಆದರೆ ಜಗತ್ತು ಮತ್ತು ಜನ ಜೀವನ ಕೇವಲ ವಿಜ್ಞಾನ ಅಥವಾ ವಿಚಾರದ ಮೇಲೆ ನಡೆಯುತ್ತಿಲ್ಲ. ಭಾವನೆಗಳು, ಸಂಸ್ಕೃತಿ, ಸಾಹಿತ್ಯ ಎಲ್ಲವೂ ಸೇರಿ ಮನುಷ್ಯ ಜೀವನ ರೂಪುಗೊಂಡಿದೆ. ಆದ್ದರಿಂದ, ಸಾಧ್ಯವಾದಷ್ಟು ಸಹಜೀವಿಗಳಿಗೆ ತೊಂದರೆಯಾಗದಂತೆ ಇವೆಲ್ಲವನ್ನೂ ನಡೆಸುವುದು ಎಷ್ಟು ಮುಖ್ಯವೋ, ಅಂಥಾ ನಿರುಪದ್ರ ಆಚರಣೆಗಳನ್ನು ಅತಿರೇಕದಲ್ಲಿ ಟೀಕಿಸದೆ ಇರುವುದು ಕೂಡಾ ಮುಖ್ಯವಾಗುತ್ತದೆ. ವೈವಿಧ್ಯಮಯ ಆಚರಣೆಗಳು ಯಾವುದೇ ಸಂಸ್ಕೃತಿಯ ಬಹುತ್ವವನ್ನು ಕಾಯ್ದಿಡುತ್ತವೆ. 

ವರ್ಷಕ್ಕೊಮ್ಮೆ ಮಹಾಲಯದ ಅವಧಿಯಲ್ಲಿ ಸಸ್ಯಾಹಾರಿಗಳು ಪಿಂಡ ಇಡುವ ಮೂಲಕವೂ ಮಾಂಸಾಹಾರಿಗಳು ಮಾಂಸ ಇತ್ಯಾದಿ ಎಡೆ ಇಡುವ ಮೂಲಕವೂ ತಮ್ಮತಮ್ಮ ಹಿರಿಯರಿಗೆ ಊಟ ಬಡಿಸುತ್ತಾರೆ. ಕಾಗೆಗಳಿಗೆ ಪಿಂಡ ಇಡುವವರಿಗೆ ಮರಿ ಕಡಿಯುವುದು ಗೊಡ್ಡು ಆಚರಣೆಯಾಗಿ ಕಾಣಬಹುದು. ಮರಿ ಕಡಿಯುವವರಿಗೆ ಪಿಂಡ ಇಡುವುದು ಗೊಡ್ಡು ಆಚರಣೆಯಾಗಿ ಕಾಣಬಹುದು. ಅಥವಾ ಯಾವುದನ್ನೂ ಮಾಡದವರಿಗೆ ಎರಡೂ ಅಸಂಬದ್ಧ ಅನ್ನಿಸಬಹುದು. ಮತ್ತು,  ಆ ಎರಡೂ ಬಗೆಯ ಜನರಿಗೆ ಈ ಏನೂ ಮಾಡದ ಜನರೇ ಅಸಂಬದ್ಧವಾಗಿ ಕಾಣಬಹುದು. ಈ ಮೂರೂ ಥರದವರಲ್ಲಿ ಸರಿ ತಪ್ಪುಗಳನ್ನು ತೀರ್ಮಾನಿಸಬಲ್ಲ ಅರ್ಹತೆ ಯಾರಿಗಿದೆ? ಆ ಅಧಿಕೃತತೆಯನ್ನು ಯಾರು ನೀಡಿದ್ದಾರೆ?  ಆದರೆ, ಈ ಯಾವುದೇ ಬಗೆಯ ಆಚರಣೆ ಮಾಡುವವರಾಗಲೀ, ಮಾಡದೆ ಇರುವವರಾಗಲೀ ಯಾವುದಾದರೂ ಸಮುದಾಯವನ್ನು / ಜಾತಿಯನ್ನು / ವರ್ಗವನ್ನು ತನ್ನ ಆಚರಣೆಯ ಮೂಲಕ ಅವಮಾನಿಸಿದರೆ, ಆಗ ಅದು ಸಾಮಾಜಿಕ ಲೋಪವಾಗುತ್ತದೆ. ಆದ್ದರಿಂದ, ಈ ಬಗೆಯ ಆಚರಣೆಗಳನ್ನು ನಡೆಸುವವರು ಸಮಾಜವನ್ನು ಕೆಡಿಸಿ ಸಂಪ್ರದಾಯ ನಡೆಸಬೇಕೆನ್ನುವ ಕಾಲಘಟ್ಟದಲ್ಲಿ ನಾವಿಲ್ಲ ಅನ್ನುವುದನ್ನು ನೆನಪಿಟ್ಟುಕೊಂಡು, ಅಂತಹಾ ಪ್ರಮಾದಗಳು ಆಗದಂತೆ ಎಚ್ಚರವಿಡುವ ಅಗತ್ಯವಿದೆ. 

ಪಿತೃಪಕ್ಷವೂ ಸೇರಿದಂತೆ ಯಾವುದೇ ಆಚರಣೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ ಗೆರೆ ಎಳೆದಂತೆ ಉತ್ತರಿಸುವುದ ಕಷ್ಟ. ಏಕೆಂದರೆ, ಯಾರಿಗೇ ಆದರೂ ಸ್ವಂತದ ಅಭಿಪ್ರಾಯ ಮತ್ತು ಸಾಮಾಜಿಕ ಅಭಿಪ್ರಾಯ ಎಂಬ ಎರಡು ಬಗೆಯ ಅಭಿಪ್ರಾಯಗಳಿರುತ್ತವೆ. ವೈಯಕ್ತಿಕವಾಗಿ ಈ ಯಾವುದನ್ನೂ ನಂಬದ, ಒಪ್ಪದ, ಅಚರಿಸದ ವ್ಯಕ್ತಿ ಜನರ ನಂಬಿಕೆಗಳು ಮತ್ತು ಆಚರಣೆಗಳನ್ನು (ಅವು ಸಾಮಾಜಿಕ ಅಪರಾಧ ಆಗದೆ ಇದ್ದ ಪಕ್ಷದಲ್ಲಿ) ಗಮನದಲ್ಲಿಟ್ಟುಕೊಂಡು ಅವನ್ನು ಸ್ವೀಕರಿಸಬೇಕಾಗುತ್ತದೆ. 

ಆದ್ದರಿಂದ, ನಮ್ಮ ಪಿತೃಗಳನ್ನು ಸ್ಮರಿಸುವ ಈ ಆಚರಣೆ ಮಾಡುವುದರಿಂದ ನಮಗೆ ನಷ್ಟವೇನೂ ಇಲ್ಲ. ಕಾಲಕ್ಕೆ ಯಾವುದು ಅಗತ್ಯವೋ ಯಾವುದು ಅನಗತ್ಯವೋ ಅದನ್ನು ಸ್ವತಃ ಕಾಲಚಕ್ರ ತಾನೇ ನಿರ್ಧರಿಸಿಕೊಳ್ಳುತ್ತದೆ. ಈಗಾಗಲೇ ಪಿತೃಪಕ್ಷ ಆಚರಣೆಯ ಸ್ವರೂಪ (ಎಲ್ಲ ಸಮುದಾಯಗಳಲ್ಲೂ) ಸಾಕಷ್ಟು ಬದಲಾಗಿದೆ, ಮುಂದೆಯೂ ಆಗಲಿದೆ. 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.