ಅರಿಷಡ್ವರ್ಗಗಳೆಂದರೆ ನಮ್ಮ ವ್ಯಕ್ತಿತ್ವದ ಕೋಟೆಯನ್ನು ಹಾಳುಗೆಡವಿ, ನಮ್ಮ ಅಸ್ತಿತ್ವವನ್ನು ದೋಚುವ ನಾವೇ ಪೋಷಿಸುವ ಶತ್ರುಗಳು. ಅವುಗಳನ್ನು ಸೋಲಿಸಲು ಆರು ಆಯುಧಗಳನ್ನು ನಾವು ಪ್ರಜ್ಞಾಪೂರ್ವಕವಾಗಿ ಪೋಷಿಸುತ್ತಾ ಸಿದ್ಧವಾಗಿಟ್ಟುಕೊಂಡಿರಬೇಕು ~ ಆನಂದಪೂರ್ಣ
ನಾವು ನಮ್ಮ ನೆಲದ, ಜಲದ, ಸಂಪತ್ತಿನ ರಕ್ಷಣೆಗೆ ಎಷ್ಟೆಲ್ಲ ಆದ್ಯತೆ ಕೊಡುತ್ತೇವೆ. ಜೀವ ಪಡೆದಾದರೂ ಜೀವ ಕಾಪಾಡಿಕೊಳ್ಳುವಷ್ಟು ಬದ್ಧತೆ ತೋರಿಸುತ್ತೇವೆ. ನಮ್ಮ ಬಾಹ್ಯ ಸೌಕರ್ಯಗಳಿಗಾಗಿ, ಸುರಕ್ಷತೆಗಾಗಿ ಎಷ್ಟೆಲ್ಲ ಕಾಳಜಿ ವಹಿಸುತ್ತೇವೆ.
ಆದರೆ ನಮ್ಮ ಅಂತರಂಗವನ್ನು ನಿರಂತರವಾಗಿ ಆಕ್ರಮಿಸಿ ಯಾತನೆಗೆ ನೂಕುತ್ತಿರುವ ನಮ್ಮೊಳಗಿನದೇ ವೈರಿಗಳ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಈ ವೈರಿಗಳನ್ನು ಮಟ್ಟಹಾಕಲು ಆಯುಧಗಳನ್ನೂ ಸಜ್ಜು ಮಾಡಿಟ್ಟುಕೊಳ್ಳುವುದಿಲ್ಲ. ಇನ್ನೂ ಹೇಳಬೇಕೆಂದರೆ, ಅರಿಷಡ್ವರ್ಗಗಳು ಅಂತರಂಗದ ಮೇಲೆ ಅತಿಕ್ರಮಣ ಮಾಡಿರುವುದು ನಮಗೆ ಎಷ್ಟೋ ಬಾರಿ ಸಂಪೂರ್ಣ ಹಾನಿಯಾಗುವವರೆಗೂ ಗೊತ್ತಾಗುವುದೇ ಇಲ್ಲ!
ಅರಿಷಡ್ವರ್ಗಗಳೆಂದರೆ ನಮ್ಮ ವ್ಯಕ್ತಿತ್ವದ ಕೋಟೆಯನ್ನು ಹಾಳುಗೆಡವಿ, ನಮ್ಮ ಅಸ್ತಿತ್ವವನ್ನು ದೋಚುವ ನಾವೇ ಪೋಷಿಸುವ ಶತ್ರುಗಳು. ಕಾಮ, ಕ್ರೋಧ, ಲೋಭ, ಮೋಹ, ಮದ ಹಾಗೂ ಮತ್ಸರಗಳೆಂಬ ಈ ಆರು ಗುಣಗಳು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಬೀಜರೂಪದಲ್ಲಿರುತ್ತವೆ. ಈ ಗುಣಗಳು ಬೆಳವಣಿಗೆಗೂ ಪೂರಕವಾಗಬಲ್ಲವು.
ಆದರೆ ಇವನ್ನು ಕೇವಲ ದೇಹದ ಗುರುತಿನೊಂದಿಗೆ ಅಳವಡಿಸಿಕೊಂಡು ಪೋಷಿಸಿದರೆ ಇವೆಲ್ಲವೂ ದುರ್ಗುಣಗಳಾಗಿ ಪರಿವರ್ತನೆಗೊಳ್ಳುತ್ತವೆ ಮತ್ತು ನಮ್ಮ ಅಂತರಂಗವನ್ನು ಹಾನಿಗೀಡು ಮಾಡುತ್ತವೆ.
ಅರಿಷಡ್ವರ್ಗಗಳನ್ನು ಮಣಿಸುವ ಆಯುಧಗಳು
ಈ ದುರ್ಗುಣಗಳೆಂಬ ಅಂತರಂಗದ ಶತ್ರುಗಳನ್ನು ಎದುರಿಸಲು ಸದ್ಗುಣಗಳೆಂಬ ಆಯುಧಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ಸನ್ನಡತೆಯನ್ನು ಬೆಳೆಸಿಕೊಂಡರಷ್ಟೆ ಅರಿಷಡ್ವರ್ಗಗಳು ಉಂಟುಮಾಡುವ ಹಾನಿಯಿಂದ ಪಾರಾಗಲು ಸಾಧ್ಯ.
ಇವುಗಳನ್ನು ಮಣಿಸಲು ಸಹನೆ, ಅಲ್ಪತೃಪ್ತಿ, ಸ್ನೇಹಪರತೆ, ಪರೋಪಕಾರ ಬುದ್ಧಿ, ನಿಸ್ವಾರ್ಥ, ದಾನ ಬುದ್ಧಿ, ಕಾರುಣ್ಯ, ಕ್ಷಮಾಗುಣಗಳೆಂಬ ಆಯುಧಗಳನ್ನು ನಮ್ಮೊಳಗೆ ಸದಾ ಸನ್ನದ್ಧವಾಗಿ ಇರಿಸಿಕೊಳ್ಳಬೇಕು.
ಸಂಯಮವು ಕಾಮದ ವಶದಿಂದ ನಮ್ಮ ಮನಸ್ಸನ್ನು ಬಿಡಿಸುತ್ತದೆ. ಈ ಗುಣವು ಇಂದ್ರಿಯ ತೃಪ್ತಿಯ ಹಪಾಹಪಿಯನ್ನು ನಿಯಂತ್ರಿಸಿ, ಅಚಾತುರ್ಯಗಳು ಘಟಿಸದಂತೆ ರಕ್ಷಿಸುತ್ತದೆ. ಇಲ್ಲವಾದಲ್ಲಿ `ಕಾಮಾತುರಾಣಾಂ ನ ಭಯಂ ನ ಲಜ್ಜಾ’ ಎನ್ನುವ ಹೇಳಿಕೆಯಂತೆ ಲಜ್ಜಾಭಯಗಳಿಲ್ಲದ ಮನುಷ್ಯ ಯಾವ ಅಪರಾಧವನ್ನಾದರೂ ಮಾಡಬಲ್ಲ. ಇಂಥವರು ತಾನು ಕಾಮವೆಂಬ ವೈರಿಯಿಂದ ಸೋಲಿಸಲ್ಪಟ್ಟು, ಅದರ ಪರಿಣಾಮವಾಗಿ ಸಹಜೀವಿಗಳಿಗೆ ಸಮಸ್ಯೆ ಉಂಟುಮಾಡುವರು. ಇವರು ಸ್ವತಃ ಶತ್ರುವಿನ ದಾಳಿಗೆ ಒಳಗಾಗಿದ್ದುಕೊಂಡು ಇತರರಿಗೂ ಶತ್ರುಗಳಾಗಿ ಪರಿಣಮಿಸುವರು.
ಇನ್ನು, ಕ್ರೋಧಕ್ಕೆ ಸಹನೆಯೇ ಮದ್ದು. ಕ್ರೋಧ ಯಾವತ್ತೂ ಸ್ಥಾಯೀ ಭಾವವಾಗಿ ಉಳಿಯಲಾರದು. ಅದರ ಇರುವು ಅತ್ಯಂತ ಕಡಿಮೆ ಅವಧಿಯದ್ದು. ಕ್ರೋಧವೇರಿದ ಕ್ಷಣವೊಂದು ಕಳೆದುಬಿಟ್ಟರೆ ಅನಂತರ ಯಾವ ಹಾನಿಯೂ ಇರುವುದಿಲ್ಲ. ಆದ್ದರಿಂದ ಸಾಧ್ಯವಾದಷ್ಟೂ ಸಹನೆಯನ್ನು ಬೆಳೆಸಿಕೊಂಡರೆ ಕ್ರೋಧದ ಆವೇಗವು ಕಡಿಮೆಗೊಳ್ಳುತ್ತ ಸಾಗುತ್ತದೆ.
ನಿಸ್ವಾರ್ಥ ಗುಣವು ಲೋಭವನ್ನೂ ಮತ್ಸರವನ್ನೂ ಹಿಮ್ಮೆಟಿಸುತ್ತದೆ. ಎಲ್ಲವೂ ತನಗೇ ಸೇರಬೇಕು ಎನ್ನುವ ಲೋಭಕ್ಕೆ ದಾನ ಮನೋಭಾವ ಹಾಗೂ ನಿಸ್ವಾರ್ಥಗಳು ಅಡ್ಡಿಯಾಗಿ ನಿಲ್ಲುತ್ತವೆ. ನಿಸ್ವಾರ್ಥವು ಎಲ್ಲರ ಏಳಿಗೆಯನ್ನೂ ಬಯಸುವ, ಮತ್ತೊಬ್ಬರ ಪ್ರಗತಿಗೆ ಸಂತಸಪಡುವ ಮನೋಭಾವ ಬೆಳೆಸುವುದರಿಂದ ಮತ್ಸರವನ್ನೂ ಅದು ಹಿಮ್ಮೆಟ್ಟಿಸುತ್ತದೆ.
ನಾವು ವ್ಯಕ್ತಿಕೇಂದ್ರಿತ ಚಿಂತನೆಯಿಂದ ವಿಸ್ತಾರಗೊಳ್ಳುತ್ತ ಸಾಗಿದಂತೆಲ್ಲ ಮೋಹವು ಕಡಿಮೆಯಾಗುತ್ತ ಸಾಗುತ್ತದೆ. ಮೋಹವೆಂದರೆ ಗೀಳು. ಯಾವುದಾದರೊಂದು ವಸ್ತು ಅಥವಾ ವ್ಯಕ್ತಿಯ ಮೇಲೆ ನಾವು ಬೆಳೆಸಿಕೊಳ್ಳುವ ಅತಿಶಯ ಹಂಬಲ. ಬಹಳ ಬಾರಿ ನಾವು ಅದನ್ನು `ಪ್ರೇಮ’ ಅಂದುಕೊಳ್ಳುತ್ತೇವೆ. ಆದರೆ ಪ್ರೇಮ ಯಾವುದರ ಮೇಲೂ ಒಡೆತನ ಬಯಸುವುದಿಲ್ಲ. ನಾವು ನಮಗೆ ಇಷ್ಟವಾಗುವ ವಸ್ತು ಅಥವಾ ವ್ಯಕ್ತಿಯನ್ನು `ಹೊಂದಲು’ ಬಯಸುತ್ತೇವೆ. ಈ ಬಯಕೆಯೇ `ಮೋಹ’. ನಮ್ಮ ಪ್ರಜ್ಞಾ ಪರಿಧಿಯನ್ನು ಹೆಚ್ಚಿಸಿಕೊಳ್ಳುವುದರಿಂದ, ವಿಶ್ವವನ್ನೇ ಅಖಂಡವಾಗಿ ಪ್ರೀತಿಸುವುದರಿಂದ ಈ ಮೋಹವನ್ನು ಮಟ್ಟ ಹಾಕಬಹುದು.
ಮದಕ್ಕೆ ವಿನೀತ ಗುಣವೇ ಆಯುಧ. ವಿನಯವಂತಿಕೆಯು ದಾರ್ಷ್ಟ್ಯವನ್ನು ತಗ್ಗಿಸುತ್ತದೆ. ಸಜ್ಜನಿಕೆಯು ದಬ್ಬಾಳಿಕೆಯನ್ನು ತಡೆಯುತ್ತದೆ. ನಾವು ಬಾಗಿದಷ್ಟೂ ಬೆಳೆಯುತ್ತೇವೆ, ಉಳಿಯುತ್ತೇವೆ. ಬಿರುಗಾಳಿಗೆ ಎದೆ ಸೆಟೆದು ನಿಂತ ಮರ ಉರುಳುತ್ತದೆಯೇ ಹೊರತು ಬೆನ್ನು ಬಾಗುವ ಹುಲ್ಲು ಉರುಳುವುದಿಲ್ಲ. ಈ ನಿದರ್ಶನವನ್ನು ಅರ್ಥೈಸಿಕೊಂಡರೆ ನಾವು ಬಾಗುವುದರಿಂದ ಏನು ಪ್ರಯೋಜನ ಎಂಬುದು ಮನದಟ್ಟಾಗುತ್ತದೆ.
ಈ ಆರು ಆಯುಧಗಳನ್ನು ನಾವು ಪ್ರಜ್ಞಾಪೂರ್ವಕವಾಗಿ ಪೋಷಿಸುತ್ತಾ ಸಿದ್ಧವಾಗಿಟ್ಟುಕೊಂಡಿರಬೇಕು. ಅರಿಷಡ್ವರ್ಗಗಳ ದಾಳಿಗೆ ಸಿಲುಕಿದ ಮೇಲೆ ಪ್ರತ್ಯಾಯುಧಗಳನ್ನು ಸಿದ್ಧಪಡಿಸುತ್ತ ಕೂರಲು ಆಗುವುದಿಲ್ಲ. ಲೋಭದಲ್ಲಿ ಮುಳುಗೇಳುತ್ತಿರುವವರು ಆ ಹಂತದಲ್ಲಿ ನಿಸ್ವಾರ್ಥವನ್ನೂ ದಾನ ಬುದ್ಧಿಯನ್ನೂ ಬೆಳೆಸಿಕೊಳ್ಳುವುದು ದುಸ್ಸಾಧ್ಯ. ಎಲ್ಲೋ ಕೆಲವು ಆಯ್ದ ಚೇತನಗಳಿಗಷ್ಟೆ ಇದರ ಕೃಪೆಯಾಗುವುದು. ಇದು ಇತರೆಲ್ಲ ಅರಿ ವರ್ಗಕ್ಕೂ ಅನ್ವಯಿಸುವ ಮಾತು. ಆದ್ದರಿಂದ, ಅಂತರಂಗದ ಈ ಶತ್ರುಗಳ ಆಕ್ರಮಣಕ್ಕೆ ಮುನ್ನವೇ ನಮ್ಮಲ್ಲಿ ಅವನ್ನು ಎದುರಿಸುವ ಸಿದ್ಧತೆ ಇರಬೇಕು.
ಇದು ಇತರೆಲ್ಲ ಅರಿ ವರ್ಗಕ್ಕೂ ಅನ್ವಯಿಸುವ ಮಾತು. ಆದ್ದರಿಂದ, ಅಂತರಂಗದ ಈ ಶತ್ರುಗಳ ಆಕ್ರಮಣಕ್ಕೆ ಮುನ್ನವೇ ನಮ್ಮಲ್ಲಿ ಅವನ್ನು ಎದುರಿಸುವ ಸಿದ್ಧತೆ ಇರಬೇಕು.
Nice information