ನಿನಗೆ ನೀನೇ ತೊಡರಾಗಿರುವೆ; ನಿನ್ನ ನೀನು ದಾಟು ~ ಹಫೀಜ್

ಬುದ್ಧ ಹೇಳುತ್ತಾನೆ ‘ನಿನಗೆ ನೀನೇ ಬೆಳಕು’ ಎಂದು. ಒಂದರ್ಥದಲ್ಲಿ ಹಫೀಜ್ ಹೇಳುವುದು ಆ ಬೆಳಕನ್ನು ಕಾಣಲು ‘ನಿನಗೆ ನೀನೇ ತೊಡರು; ನಿನ್ನ ನೀನು ದಾಟು’ ಎಂದು  ~ ಸಾಕಿ

sss

ಸಾಮಾನ್ಯವಾಗಿ ನಾವು ನಮ್ಮ ಕುಂದು ಕೊರತೆಗಳನ್ನು ಮುಚ್ಚಿಟ್ಟುಕೊಳ್ಳುವುದು ಜಾಸ್ತಿ. ಪರಿಪೂರ್ಣ ಮನುಷ್ಯರು ಅಂತ ಯಾರೂ ಇರುವುದಿಲ್ಲ. ಅದರೂ ನಮ್ಮ ಊನಗಳ ಬಗ್ಗೆ ಮಾತಾಡಲು ಧೈರ್ಯ ಸಾಲುವುದಿಲ್ಲ. ಯಾಕೆ ಹೀಗೆ? ಇದಕ್ಕೆ ಮುಖ್ಯ ಕಾರಣ ನಮ್ಮ ಕೀಳರಿಮೆ ಅರ್ಥಾತ್ ನಮ್ಮನ್ನು ನಾವು ಲೋಕದ ದೃಷ್ಟಿಯಲ್ಲಿ ನೋಡಿಕೊಳ್ಳುವ ಅಭ್ಯಾಸ. ಉಳಿದವರು ಏನೆಂದಾರು ಎಂಬ ಭಯವೇ ನಮ್ಮನ್ನು ಬಹುತೇಕ ಸಾಹಸಗಳಿಂದ ತಡೆದಿರುತ್ತದೆ. ಆದರೆ ಒಮ್ಮೆ ಈ ಕೀಳರಿಮೆ ಕಳಚಿದರೆ ನಾವು ನಾವಾಗಿರುತ್ತೇವೆ.

ಇನ್ನು ಕೆಲವು ಸಂದರ್ಭಗಳಲ್ಲಿ ನಾವು ಸೋಲುತ್ತಲೇ ಇರುತ್ತೇವೆ. ನಮ್ಮೆಲ್ಲ ಕಠಿಣ ಪ್ರಯತ್ನಗಳು ವಿಫಲವಾಗುತ್ತಲೇ ಇರುತ್ತವೆ. ಯಾಕೆ ಹೀಗಾಗುತ್ತದೆ ಅಂತ ಯೋಚಿಸದೆ ಮತ್ತಷ್ಟು ಪ್ರಯತ್ನಗಳನ್ನು ನಡೆಸುತ್ತೇವೆ ಮತ್ತು ಪುನಃ ಸೋಲುತ್ತೇವೆ. ಯಾಕೆ ಹೀಗೆ? ಬಹುತೇಕ ಸಂದರ್ಭಗಳಲ್ಲಿ ನಮ್ಮ ಇಂತಹ ಸೋಲಿಗೆ ಕಾರಣ ನಾವೇ ಆಗಿರುತ್ತೇವೆ. ನಮ್ಮ ಅಹಂ ನಮ್ಮನ್ನು ಕಾಲೆಳೆಯುತ್ತಲೇ ಇರುತ್ತದೆ. ನಮಗದರ ಪರಿವೆಯೇ ಇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ಅಹಂ ಕಳಚಿಕೊಂಡು ಪುನಃ ಪ್ರಯತ್ನಿಸಿದರೆ ಗೆಲುವು ನಮ್ಮದಾಗಿರುತ್ತದೆ.

ಬುದ್ಧ ಹೇಳುತ್ತಾನೆ ‘ನಿನಗೆ ನೀನೇ ಬೆಳಕು’ ಎಂದು. ಒಂದರ್ಥದಲ್ಲಿ ಹಫೀಜ್ ಹೇಳುವುದು ಆ ಬೆಳಕನ್ನು ಕಾಣಲು ‘ನಿನಗೆ ನೀನೇ ತೊಡರು; ನಿನ್ನ ನೀನು ದಾಟು’ ಎಂದು. ಕೀಳರಿಮೆ ಮತ್ತು ಅಹಂಗಳೆಂಬ ನಮ್ಮೊಳಗೆ ಇರುವ ಎರಡು ತೊಡರುಗಳನ್ನು ಕಳೆದುಕೊಂಡ ಕ್ಷಣ ನಾವು ನಮ್ಮನ್ನೇ ದಾಟಿರುತ್ತೇವೆ. ಅದು ಆಧ್ಯಾತ್ಮದಲ್ಲಾಗಿರಲಿ ಅಥವಾ ನಮ್ಮ ದೈನಂದಿನ ವಹಿವಾಟುಗಳಲ್ಲೇ ಆಗಿರಲಿ ನಮ್ಮೊಳಗೆ ನಮಗೆ ತೊಡರಾಗಿರುವುದನ್ನು ಗುರುತಿಸಿ ಕಿತ್ತೆಸೆದು ಮುಂದುವರಿದರೆ ನಮಗೆ ನಾವೇ ಬೆಳಕಾಗಿ ಬೆಳಗುತಿರುತ್ತೇವೆ.

Leave a Reply