ಕರ್ಣಾಟಕ ಎಂಬುದೇನು ಹೆಸರೆ ಬರಿಯ ಮಣ್ಣಿಗೆ? : ಕುವೆಂಪು ಕವಿತೆ

1949ರಲ್ಲಿ ಒಮ್ಮೆ ಕುವೆಂಪು ಅವರು ಮಹಾರಾಜಾ ಕಾಲೇಜಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಏಕೀಕರಣದ ಪರವಾಗಿ ಮಾತನಾಡಿದಾಗ, ಸಚಿವರೊಬ್ಬರಿಂದ ಎಚ್ಚರಿಕೆಯ ‘ನೋಟೀಸ್’ ಬಂತು. ಅದಕ್ಕೆ ಪ್ರತ್ಯುತ್ತರವಾಗಿ ಮೊಳಗಿದ ಕವನವೇ ಈ ‘ಅಖಂಡ ಕರ್ಣಾಟಕ.’ ಈ ಕವನದ ಪೂರ್ಣಪಾಠ ಇಲ್ಲಿದೆ…

ಅಖಂಡ ಕರ್ಣಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರಕರ್ಣ ಕುಂಡಲ!

ಅಖಂಡ ಕರ್ಣಾಟಕ:
ಅಲ್ತೊ ನಮ್ಮ ನಾಲ್ಕುದಿನದ ರಾಜಕೀಯ ನಾಟಕ!
ನೃಪತುಂಗನೆ ಚಕ್ರವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ!
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ:
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ!

ಕರ್ಣಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ತಾಯಿ ಕಣಾ! ದೇವಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ
ಪಡೆದ ಚಲದ ಚಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ!
: ಕುವೆಂಪು | ಇಕ್ಷು ಗಂಗೋತ್ರಿ ಸಂಕಲನದಿಂದ

 

Leave a Reply