ಪ್ರೇಮ ಏನಾದರೂ ಕೊಡುವುದಾದರೆ  ಅದು ತನ್ನನ್ನು ಮಾತ್ರ : ಖಲೀಲ್ ಗಿಬ್ರಾನ್

ಮೂಲ : ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ದಾರಿ ನಿಷ್ಠುರ
ಆಯ ತಪ್ಪಿದರೆ ಪ್ರಪಾತ, ಆದರೂ
ಸನ್ನೆ ಮಾಡಿ ಕರೆದಾಗ ಪ್ರೇಮ 
ಎದ್ದು ಬಿಡಿ ಸುಮ್ಮನೇ.

ಮಿಂಚಿನಂತಿತ್ತು ಅವನ ಧ್ವನಿ.

ಅಂಚಿನಲ್ಲಿ ಮುಚ್ಚಿಟ್ಟುಕೊಂಡ ಚೂರಿ 
ಚುಚ್ಚಬಹುದೇನೋ, ಆದರೂ 
ರೆಕ್ಕೆ ಬಿಚ್ಚಿ ಕರೆದಾಗ 
ಅಪ್ಪಿಕೊಂಡುಬಿಡಿ ಸುಮ್ಮನೇ.

ಉತ್ತರ ಧ್ರುವದ ಗಾಳಿ
ಹೂವಿನ ತೋಟವ ಉಧ್ವಸ್ತಗೊಳಿಸುವಂತೆ
ಕೊಚ್ಚಿಹಾಕಿಬಿಡಬಹುದು ಈ ಪ್ರೇಮ ಪ್ರವಾಹ
ನಿಮ್ಮ ಕನಸುಗಳನ್ನು .

ಕಿರೀಟ ತೊಡಿಸಿದ ವೇಗದಲ್ಲೇ
ಹುತಾತ್ಮನ ಪಟ್ಟವನ್ನೂ 
ದಯಮಾಡಿ ದಯಪಾಲಿಸಬಲ್ಲದು.

ಆದರೂ ಮುಟ್ಟಿ ಮಾತನಾಡಿಸಿದಾಗ
ಬಿಗುಮಾನ ತೋರದೇ, 
ಥಟ್ಟನೇ
ಒಪ್ಪಿಕೊಂಡುಬಿಡಿ ಸುಮ್ಮನೇ.

ಪ್ರೇಮ, ನಿಮ್ಮನ್ನು ಎತ್ತರಕ್ಕೆ ಕರೆದೊಯ್ಯುತ್ತದೆಯೇನೋ ಹೌದು,
ಹಾಗೆಯೇ ಭ್ರಮೆಗಳನ್ನು ಕತ್ತರಿಸುತ್ತದೆ ಕೂಡ.

ನಿಮ್ಮ ಎತ್ತರಕ್ಕೆ ಏರಿ 
ಬಿಸಿಲಲ್ಲಿ ಕಂಪಿಸುವ ನಿಮ್ಮ ರೆಂಬೆಗಳನ್ನು ಮುದ್ದಿಸಬಲ್ಲದೇನೋ ಹೌದು,
ನಿಮ್ಮ ಆಳಕ್ಕಿಳಿದು 
ನೆಲವನ್ನು ತಬ್ಬಿಕೊಂಡಿರುವ
ನಿಮ್ಮ ಬೇರುಗಳನ್ನು ಅಲುಗಾಡಿಸಬಲ್ಲದು ಕೂಡ.

ಜೋಳದ ತೆನೆಗಳಂತೆ 
ತನ್ನ ಸುತ್ತ ನಿಮ್ಮನ್ನು
ಬಲವಾಗಿ ಒತ್ತಿಕೊಳ್ಳುವುದು.

ಝಾಡಿಸಿ, ಗುಡಿಸಿ ಬೆತ್ತಲೆ ಮಾಡುವುದು.

ಮೇಲಿನಿಂದ ತೂರಿ 
ಹೊಟ್ಟಿನಿಂದ ಬೇರೆ ಮಾಡುವುದು.

ಹಾಡ ಹಾಡುತ್ತ, ಬೀಸಿ ಬೀಸಿ 
ಬೆಳ್ಳಗೆ 
ಹಿಟ್ಟು ಮಾಡುವುದು.

ಮೆದುವಾಗುವ ತನಕ ನಾದುವುದು.

ಆಮೇಲೆ
ತನ್ನ ದಿವ್ಯ ಕುಲುಮೆಯಲ್ಲಿ ಸುಟ್ಟು
ರೊಟ್ಟಿ ಮಾಡಿ
ಭಗವಂತನಿಗೆ ಎಲೆ ಹಾಕಿ ಎಡೆಮಾಡುವುದು.

ಯಾಕೆ ಪ್ರೇಮಕ್ಕೆ ಈ ಎಲ್ಲ ಉಸಾಬರಿ?

ನಿಮ್ಮ ಎದೆಯ ರಹಸ್ಯಗಳು 
ನಿಮಗೆ ಗೊತ್ತಾಗಲೆಂದು.
ಆ ಅರಿವು 
ಸೃಷ್ಟಿಯ ಉಸಿರಿನೊಂದಿಗೆ 
ನಿಮ್ಮ ಉಸಿರನ್ನು ಒಂದಾಗಿಸಲೆಂದು.

ಆದರೆ ನೀವು ಹೆದರಿ
ಪ್ರೇಮ ಕೊಡುವ ಸಮಾಧಾನ 
ಮತ್ತು ಸುಖ ಮಾತ್ರ ಸಾಕು 
ಎನ್ನುವುದಾದರೆ,

ನಿಮ್ಮ ಬೆತ್ತಲೆಯ ಮುಚ್ಚಿಕೊಂಡು ಮರ್ಯಾದೆಯಿಂದ ಪ್ರೇಮದ ಕಣ ಬಿಟ್ಟು 
ಹೊರ ನಡೆಯಿರಿ
ಋತುಗಳಿಲ್ಲದ ಜಗತ್ತಿಗೆ.
ಅಲ್ಲಿ ನೀವು ನಗಬಹುದು 
ಆದರೆ ಎಲ್ಲ ನಗುವನ್ನಲ್ಲ,
ಅಳಬಹುದು 
ಆದರೆ ಎಲ್ಲ ಅಳುವನ್ನಲ್ಲ.

ಪ್ರೇಮ ಏನಾದರೂ ಕೊಡುವುದಾದರೆ 
ಅದು ತನ್ನನ್ನು ಮಾತ್ರ
ಮತ್ತು ಬಯಸುವುದಾದರೂ ಕೂಡ ಅಷ್ಟೇ, ಕೇವಲ ತನ್ನನ್ನು.

ಪ್ರೇಮ 
ಹತೋಟಿಗೆ ಮುಂದಾಗುವುದಿಲ್ಲ
ನಿಯಂತ್ರಣಕ್ಕೆ ಸಿಗುವುದೂ ಇಲ್ಲ

ಪ್ರೇಮ ತನ್ನೊಳಗೆ ತಾನು 
ಪರಿಪೂರ್ಣ.

“ಭಗವಂತ ನನ್ನ ಎದೆಯಲ್ಲಿ “ 
ಇದು ಪ್ರೇಮಿಯ ಮಾತಲ್ಲ
ಅವನ ಪ್ರಕಾರ 
ಅವನು ಭಗವಂತನ ಎದೆಯಲ್ಲಿ.

ಪ್ರೇಮಕ್ಕೊಂದು ದಾರಿ ಮಾಡುವುದು
ಸಾಧ್ಯವಿಲ್ಲದ ಮಾತು.
ನೀವು ಯೋಗ್ಯರಾಗಿದ್ದರೆ
ಪ್ರೇಮವೇ ನಿಮ್ಮನ್ನು ಕೈಹಿಡಿದು ನಡೆಸುವುದು.

ತನ್ನ ಸಾರ್ಥಕತೆಯ ಹೊರತಾಗಿ
ಪ್ರೇಮಕ್ಕೆ 
ಬೇರೆ ಬಯಕೆಯೇ ಇಲ್ಲ.

ಆದರೆ, ನಿಮ್ಮ ಪ್ರೇಮಕ್ಕೆ
ಬಯಕೆಗಳು ಬೇಕೇ ಬೇಕು ಎನ್ನುವುದಾದರೆ
ಇದೋ ಇಲ್ಲಿವೆ ನೋಡಿ ಆ ಕೆಲ ಬಯಕೆಗಳು ;

ಕರಗುವುದು ಮತ್ತು
ರಾತ್ರಿಗಾಗಿ ಮೈದುಂಬಿ ಜುಳು ಜುಳು ಎನ್ನುವ
ಹರಿಯುವ ತೊರೆಯಾಗುವುದು.

ಕಳೆತು ಹಣ್ಣಾಗುವ ಯಾತನೆಯ 
ಧರಿಸಿ ನೋಡುವುದು.

ಪ್ರೇಮದ ಬಗೆಗಿನ 
ನಿಮ್ಮ ತಿಳುವಳಿಕೆಯ ಚೂರಿಗೆ
ನೀವೇ ಘಾಸಿಯಾಗುವುದು.

ಖುಶಿಯಿಂದ ಉನ್ಮತ್ತರಾಗಿ, 
ಮನಸಾರೆ
ರಕ್ತದ ಧಾರೆಯಾಗುವುದು.

ಬೆಳಕು ಹರಿದಾಗ
ರೆಕ್ಕೆಯ ಹಕ್ಕಿಯಂತೆ ಎದ್ದು
ಇನ್ನೊಂದು ಪ್ರೇಮಮಯ ದಿನದ ಕರುಣೆಗಾಗಿ
ತಲೆಬಾಗುವುದು.

ಸೂರ್ಯ ನೆತ್ತಿಯ ಮೇಲೆ ಬರುವಾಗ
ಕಾಲುಚಾಚಿ, ಪ್ರೇಮದ ಉತ್ತುಂಗವನ್ನು ಧ್ಯಾನಿಸುವುದು.

ತುಂಬಿದ ಎದೆಯೊಂದಿಗೆ 
ಸಂಜೆ
ಮನೆಗೆ ಮರಳುವುದು.

ಮತ್ತು

ರಾತ್ರಿ ನಿದ್ದೆಯಲ್ಲಿ , 
ಪ್ರೇಮಿಗಾಗಿ 
ಎದೆತುಂಬ ಪ್ರಾರ್ಥನೆ ಹಾಗು
ತುಟಿ ಮೇಲೆ ಕೊಂಡಾಡುವ ಹಾಡನ್ನು
ಸಾಧ್ಯಮಾಡುವುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.