ಅಧ್ಯಾತ್ಮ ಡೈರಿ : ಜೊತೆ ಸಾಗಿಯೂ ನಮ್ಮ ನಡಿಗೆ ನಾವೇ ನಡೆಯಬೇಕು

ಪ್ರತಿಯೊಬ್ಬರಿಗೂ ಅವರ ಆಯ್ಕೆಗಳಿರುತ್ತವೆ. ನಮ್ಮನ್ನು ಸಂತಸವಾಗಿಟ್ಟುಕೊಳ್ಳುವುದು ನಮ್ಮದಷ್ಟೆ ಹೊಣೆ ಹೊರತು ಮತ್ಯಾರದೋ ಅಲ್ಲ. ಆದ್ದರಿಂದ, ಯಾವ ಸಂಬಂಧ ಸೌಹಾರ್ದಯುತವಾಗಿಲ್ಲವೋ ಅದನ್ನು ಬಿಟ್ಟುಕೊಡುವುದು ಒಳ್ಳೆಯದು ~ ಅಲಾವಿಕಾ

ಯಾವುದೂ ಶಾಶ್ವತವಲ್ಲ. ವಸ್ತುಗಳೂ, ವ್ಯಕ್ತಿಯೂ. ಹಾಗೆ ಯಾವುದಾದರೂ ನಮ್ಮೊಡನೆ ಶಾಶ್ವತವಾಗಿ ಇರಬೇಕು ಅಂದುಕೊಳ್ಳುವುದೆ ಮೂರ್ಖತನವಾದೀತು. ನಮ್ಮ ಜೀವನ ಯಾನದಲ್ಲಿ ಸಿಕ್ಕ ಪ್ರತಿಯೊಂದೂ ನಮ್ಮ ಜೊತೆ ಉಳಿದುಕೊಂಡೇ ಇರುವುದಾದರೆ ಬದುಕಿನುದ್ದಕ್ಕೂ ಹೊರೆ ಹೊತ್ತುಕೊಂಡೇ ಇರಬೇಕಾಗುತ್ತಿತ್ತು. ಸಂಬಂಧಗಳ ದಟ್ಟಣೆ ನಮ್ಮನ್ನು ಲೌಕಿಕಕ್ಕೆ ಅಂಟಿಸಿಡುತ್ತದೆ. ಸಂಬಂಧದೊಡನೆ ನಾವು ಗುರುತಿಸಿಕೊಂಡಷ್ಟೂ ವ್ಯಾಮೋಹ ಬೆಳೆಸಿಕೊಂಡಷ್ಟೂ ಅದರ ರಕ್ಷಣೆಗೆ ತಲೆ ಕೆಡಿಸಿಕೊಳ್ಳತೊಡಗುತ್ತೇವೆ. ಎಷ್ಟೆಂದರೆ, ಕೊನೆಗೊಮ್ಮೆ ಆಯಾ ಸಂಬಂಧಗಳಿಗಾಗಿಯೇ ಅವುಗಳಿಂದಾಗಿಯೇ ನಾವು ಬದುಕಿದ್ದೇವೋ ಎನ್ನುವಷ್ಟು!

ನಾವು ಬದುಕಿನಲ್ಲಿ ನೆಮ್ಮದಿಯಿಂದ ಇರಬೇಕೆಂದರೆ, ಸಂಬಂಧ ಕಳಚಿ ಹೋದಾಗ ಉಂಟಾಗುವ ಆ ಕ್ಷಣದ ಸಹಜ ದುಃಖವನ್ನು ಮುಂದಿನ ಕ್ಷಣಕ್ಕೆ ಹೊತ್ತು ನಡೆಯಬಾರದು. ಕಳೆದ ಅನುಭವವನ್ನು, ಹೊರೆ ತಪ್ಪಿದ ನಿರಾಳತೆಯನ್ನು ಮನಗಾಣಬೇಕು. ಆಗ ಹಗುರ ಮನಸ್ಸು ನಮ್ಮದಾಗುವುದು. ಮತ್ತು ಈ ಹಗುರತೆ ನಮ್ಮನ್ನು ಭೂಮಿಯಿಂದ ಎತ್ತರಕ್ಕೆ, ಆಧ್ಯಾತ್ಮಿಕ ಆಕಾಶದಲ್ಲಿ ತೇಲಾಡುವ ಅನುಭವವನ್ನು ಕಟ್ಟಿಕೊಡುವುದು. ವಾಸ್ತವದಲ್ಲಿ ಈ ಅಂಶವೇ ನಷ್ಟವನ್ನು ಭರಿಸುವ ಶಕ್ತಿ ತುಂಬುವುದು. ಕಳಕೊಂಡ ವಸ್ತುವಿನ ವ್ಯಾಮೋಹದಿಂದ ಈಚೆ ತರುವುದು. `ಅದು ನನ್ನದಾಗಿರಲಿಲ್ಲ…..’ ಈ ಯೋಚನೆ ನಮ್ಮನ್ನು ಸಾಕ್ಷೀಭಾವ ಮಾತ್ರದಿಂದ ನೋಡಲು ಸಹಾಯ ಮಾಡುವುದು.

ಯಾವುದೇ ವಸ್ತು ಅಥವಾ ವ್ಯಕ್ತಿ ನಮ್ಮ ಜೀವಿತದ ಹಲವು ತಿರುವುಗಳಿಗೆ, ಅನುಭವಗಳಿಗೆ ನಿಮಿತ್ತ ಮಾತ್ರರಾಗುವರು. ಕಾಲಕ್ರಮೇಣ ಎಲ್ಲವೂ ನಮ್ಮಿಂದ ಕಳಚಿಕೊಳ್ಳಲೇಬೇಕು. ನಮ್ಮ ದೇಹವನ್ನು ರಕ್ಷಿಸುವ ಚರ್ಮವೂ ಕಾಲಕಾಲಕ್ಕೆ ಸತ್ತ ಜೀವಕೋಶಗಳನ್ನು ಉದುರಿಸಿ ಹೊಸತಾಗುತ್ತದೆ. ನಮ್ಮ ದೇಹದ ಭಾಗಗಳೇ ಆಗಿರುವ ಕೂದಲು, ಉಗುರುಗಳು ಕಳಚಿ ಬೀಳುತ್ತವೆ. ಹೀಗಿರುವಾಗ, ನಮ್ಮಿಂದ ಹೊರತಾಗಿರುವುದು ನಮ್ಮ ಜೊತೆಯಲ್ಲಿರಬೇಕೆಂದು ಬಯಸುವುದು ಯಾವ ನ್ಯಾಯ?

ಪ್ರತಿಯೊಬ್ಬರೂ ಅವರದೇ ಆದ ಜೀವನ ಪ್ರಯಾಣವನ್ನು ಹೊಂದಿರುವಂಥವರು. ಒಂದು ದಾರಿಯಲ್ಲಿ, ಒಂದು ತಿರುವಿನಲ್ಲಿ ನಿಮ್ಮ ಜೊತೆಯಾದರೆಂದ ಮಾತ್ರಕ್ಕೆ, ಅವರು ಕೊನೆತನಕ ನಿಮ್ಮ ಸಹಯಾತ್ರಿಯಾಗಿರಲೇ ಬೇಕು ಎಂದೇಕೆ ಬಯಸುವಿರಿ? ಇಬ್ಬರ ಗುರಿಯೂ ಒಂದೇ ಆಗಿದ್ದಲ್ಲಿ, ಅವರು ಕೂಡ ನೀವು ಹಿಡಿದ ಹಾದಿಯಲ್ಲೆ ಮುಂದುವರೆಯಲು ಬಯಸಿದಲ್ಲಿ, ಅದಕ್ಕೆ ಅಸ್ತಿತ್ವವು ಪೂರಕವಾಗಿ ಪ್ರಭಾವ ಬೀರಿದ ಪಕ್ಷದಲ್ಲಿ, ಈ ಸಹಯಾನದ ಸಾಹಚರ್ಯವು ಕೊನೆತನಕ ಉಳಿದುಕೊಳ್ಳುವುದು. ಹಾಗಿಲ್ಲದೆ, ಅವರು ಸಂಪೂರ್ಣ ಬೇರೆಯೇ ನಡೆ ನಡೆಯುತ್ತಿದ್ದಲ್ಲಿ, ನೀವೇಕೆ ಅದನ್ನು ತಡೆಯಬೇಕು? ಅಥವಾ ನಿಮ್ಮ ಜೊತೆಗೇ ಹೆಜ್ಜೆ ಹಾಕುವಂತೆ ಆಗ್ರಹಿಸಬೇಕು?

ಈ ಮಾತು ಎಲ್ಲ ಸಂಬಂಧಗಳಿಗೂ ಅನ್ವಯವಾಗುತ್ತದೆ. ಲ್ಲ ಸಂಬಂಧಗಳೂ ಒಂದಲ್ಲ ಒಂದು ರೀತಿಯಲ್ಲಿ ಕಳೆದುಹೋಗುತ್ತಲೇ ಇರುತ್ತದೆ. ಕೆಲವು ಸಂಬಂಧಗಳು ಸಂಪೂರ್ಣ ಕಡಿಯದಿದ್ದರೂ ಸ್ವರೂಪದಲ್ಲಿ ಬದಲಾಗುತ್ತವೆ. ತಾಯಿ – ಮಗುವಿನ ಸಂಬಂಧ, ಮಗು ದೊಡ್ಡದಾದಮೇಲೂ ಹಾಗೆಯೇ ಮುಂದುವರೆಯುವುದಿಲ್ಲ. ಸಂಬಂಧ ಹಾಗೆಯೇ ಇದ್ದರೂ ಅದರ ಸ್ವರೂಪ ಬೇರೆಯಾಗಿರುತ್ತದೆ. ಚಿಕ್ಕ ಮಗುವಿಗೆ ತಾಯಿ ಪ್ರತಿಯೊಂದನ್ನೂ ಹೇಳುತ್ತಾಳೆ ಮತ್ತು ಮಗು ಅದನ್ನು ಕೇಳಿ ಹಾಗೆಯೇ ನಡೆದುಕೊಳ್ಳುತ್ತದೆ. ಆದರೆ ಬೆಳೆದು ನಿಂತ ಮಕ್ಕಳಿಗೆ ತಾಯಿ ತನ್ನ ಕಾಳಜಿಗಳನ್ನು ಹೇಳುತ್ತಾ ಹೋದರೆ ಅದು ಹೇರಿಕೆಯಂತೆ ತೋರುತ್ತದೆ. ಆಕೆಯ ಕಾಳಜಿ ನೈಜವೇ ಆಗಿದ್ದರೂ ದೇಶ – ಕಾಲಗಳ ಬದಲಾವಣೆಯಿಂದ ಅದು ಬಹಳ ಸಲ ಮಕ್ಕಳ ಕಾಲಮಾನಕ್ಕೆ ಸಲ್ಲದೆ ಹೋಗಬಹುದು. ಅಥವಾ ಅವರು ತಪ್ಪುಗಳಿಂದ ಕಲಿಯುವ ಹಂತದಲ್ಲಿರಬಹುದು. ಅಥವಾ ತಮ್ಮದೇ ಆದ ಬೇರೊಂದಿ ಗುರಿಯ ಮೇಲೆ ಕಣ್ಣಿಟ್ಟುಕೊಂಡಿರಬಹುದು.

ಹೀಗಿರುವಾಗ ಪುಟ್ಟ ಮಗುವಿನೊಂದಿಗೆ ಇರುತ್ತಿದ್ದ ಭಾವವನ್ನೇ ಸಂಬಂಧ ಸ್ವರೂಪವನ್ನೇ ತೋರಲು ಹೋದರೆ ತಾಯಿ – ಮಕ್ಕಳಲ್ಲಿ ವಿರಸ ಏರ್ಪಡುತ್ತದೆ. ಆ ಒಂದು ಕಾಳಜಿಯ ಬಾಂಧವ್ಯ ಕಳೆದು, ಈಗ ಹೊಸತೊಂದು ಬಂಧ ಸ್ಥಾಪನೆಯಾಗಿದೆ ಎನ್ನುವುದನ್ನು ತಾಯಿ ಕರುಳು ಒಪ್ಪಿಕೊಳ್ಳಬೇಕಾಗುತ್ತದೆ.

ಹಾಗೆಯೇ ಪ್ರೇಮಿಗಳಲ್ಲೂ. ಯಾವುದೇ ಪ್ರೇಮ ಆರಂಭದಲ್ಲಿ ಬೇಡುವ ಗಮನವನ್ನು, ಸಮಯವನ್ನು, ತೀವ್ರತೆಯನ್ನು ಅನಂತರದ ದಿನಗಳಲ್ಲಿ ಬೇಡುವುದಿಲ್ಲ. ಒಮ್ಮೆ ಪ್ರೇಮವು ಗಟ್ಟಿಯಾಯಿತು ಅಂದಾಕ್ಷಣ ಆ ಎಲ್ಲ ಪೂರಕ ಪ್ರಕ್ರಿಯೆಗಳು ಸಹಜವಾಗಿ ನಿಂತುಹೋಗುತ್ತದೆ. ಪ್ರೇಮಿಗಳು ಉತ್ತಮ ಗೆಳೆಯರಾಗಿ, ಪರಸ್ಪರ ವಾತ್ಸಲ್ಯ ಹೃದಯಿಗಳಾಗಿ, ಮಕ್ಕಳಾಗಿ – ಒಬ್ಬರಿಗೊಬ್ಬರು ಕಾಲಕಾಲಕ್ಕೆ ಎಲ್ಲವೂ ಆಗುತ್ತ ಬದಲಾಗಬೇಕಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದೆ ಆ ಮೊದಲ ದಿನಗಳ ಹಸಿಪ್ರೀತಿಯ ಅಭಿವ್ಯಕ್ತಿಯೇ ಬೇಕೆಂದು ಪಟ್ಟು ಹಿಡಿದು ಕೂತರೆ ಪ್ರೇಮ ಕಳೆಯುತ್ತದೆ, ಪ್ರೇಮಿಯೂ. ಹಾಗೊಮ್ಮೆ ಆ ಸಂಗಾತಿಯೇ, ಪ್ರೇಮಿಯೇ ಅಥವಾ ಮಕ್ಕಳೇ ಬಿಟ್ಟು ಹೋದರೆಂದಿಟ್ಟುಕೊಳ್ಳಿ. ಅದು ತನ್ನ ಗಮ್ಯದತ್ತ, ತನ್ನ ಆಯ್ಕೆಯತ್ತ ಸಾಗುತ್ತಿದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳುವಷ್ಟು ನಮ್ಮ ಹೃದಯವನ್ನು ನಾವು ಹಿಗ್ಗಿಸಿಕೊಳ್ಳಬೇಕು.

ಪ್ರತಿಯೊಬ್ಬರಿಗೂ ಅವರ ಆಯ್ಕೆಗಳಿರುತ್ತವೆ. ನಮಗಾಗಿ ಯಾರೂ ಏನನ್ನೂ ಮಾಡಲಾರರು. ನಮ್ಮನ್ನು ಸಂತಸವಾಗಿಟ್ಟುಕೊಳ್ಳುವುದು ನಮ್ಮದಷ್ಟೆ ಹೊಣೆ ಹೊರತು ಮತ್ಯಾರದೋ ಅಲ್ಲ. ಆದ್ದರಿಂದ, ಯಾವ ಸಂಬಂಧ ಸೌಹಾರ್ದಯುತವಾಗಿಲ್ಲವೋ ಅದನ್ನು ಬಿಟ್ಟುಕೊಡುವುದು ಒಳ್ಳೆಯದು. ಸಂಬಂಧದಾಚೆ ನಡೆಯುವೆ ಎನ್ನುವ ಸಂಗಾತಿಯನ್ನು ಶಾಂತ ಮನಸ್ಕರಾಗಿ ಕಳಿಸಿಕೊಡುವುದು ಒಳ್ಳೆಯದು.

 

Leave a Reply