‘ಏಕ’ದ ಅರಿವಿನ ಸಿದ್ಧಿಯೇ ನಿಜವಾದ ಜ್ಞಾನ, ಧ್ಯಾನ…

‘ಏಕ’ದ ಮೇಲೆ ನೆಟ್ಟ ಮನಸ್ಸು ಹವ್ಯಾಸದ ಬಲದಿಂದ ಒಂದಿನ ‘ಏಕ’ದ ಮೇಲೆ ಪ್ರತಿಷ್ಠಾಪನೆಯಾಗಿರುವುದನ್ನೇ ಮರೆತುಬಿಡುತ್ತದೆ. ಆಗ ಮನಸ್ಸು ಖಾಲಿ. ಅದೇ ಶಾಂತಿಯುತ ಮನಸ್ಸು. ಸಮಾಧಿ ಸ್ಥಿತಿಯ ಮೊದಲನೇ ಹಂತವಿದು.

dhyana
ಚಿತ್ರ: ಅಲಾವಿಕಾ

ಗಾಳಿಗಿಂತಲೂ ವೇಗವಾಗಿ ಸಾಗುವ, ಏಕಕಾಲಕ್ಕೆ ಶತ ದಿಕ್ಕುಗಳಲ್ಲಿ ಚಲಿಸುವ ಚಂಚಲ ಮನಸ್ಸನ್ನು ‘ಏಕ’ದ (ಒಂದರ) ಮೇಲೆ ಕೇಂದ್ರೀಕರಿಸುವ ಸಾಧನೆಗೆ ಯೋಗ ಅಥವಾ ಧ್ಯಾನ ಎಂದು ಕರೆಯುತ್ತಾರೆ. ಪತಂಜಲಿ ಯೋಗ ಸೂತ್ರದಲ್ಲಿ ಹೇಳಿದಂತೆ, “ಯೋಗಃ ಚಿತ್ತವೃತ್ತಿ ನಿರೋಧಃ” – ಮನಸ್ಸು ಯಾವುದೋ ಆಲೋಚನೆಗಳ ಕೊನೆಯಿಲ್ಲದ ವೃತ್ತಕ್ಕೆ ಆವೃತ್ತಿಯಾಗುವುದನ್ನು ತಡೆಗಟ್ಟುವ ಮಾರ್ಗವೇ ಯೋಗ. ಯೋಗದ ರಹಸ್ಯವೇ ಒಂದರ ಮೇಲೆ ಮಾತ್ರ ಚಿತ್ತವನ್ನು ಕೇಂದ್ರೀಕರಿಸುವುದು. ಚಿತ್ತವನ್ನು ಏಕಾಗ್ರಚಿತ್ತವನ್ನಾಗಿಸುವುದು. ಏಕಾಗ್ರಚಿತ್ತ – ಒಂದಕ್ಕೆ ಅಗ್ರ ಸ್ಥಾನವನ್ನು ಕೊಡುವ ಚಿತ್ತ. ಈ ‘ಏಕ’ದ ಮಹತ್ವ ಶೂನ್ಯ, ಅನಂತಕ್ಕಿಂತ ಹೆಚ್ಚು. ಏಕೆಂದರೆ ಈ ‘ಏಕ’ಕ್ಕೆ ಅಗ್ರ ಸ್ಥಾನ ಕೊಡುವ ಚಿತ್ತ ಮಾತ್ರ ಶೂನ್ಯ ಅಥವಾ ಅನಂತವನ್ನು ಅನುಭವಿಸಲು ಸಾಧ್ಯ.

ಹೀಗೆ ‘ಏಕ’ದ ಮೇಲೆ ನೆಟ್ಟ ಮನಸ್ಸು ಇಂದ್ರಿಯದ ಬಗ್ಗೆ ಗಮನ ಹರಿಸುವುದು ಕ್ರಮೇಣ ಕಡಿಮೆಯಾಗುತ್ತದೆ. ಒಂದು ಘಟ್ಟದಲ್ಲಿ ಇಂದ್ರಿಯ ನೀಡುವ ಮಾಹಿತಿಯನ್ನು ಮನಸ್ಸು ಆಲಿಸುವುದೇ ಇಲ್ಲ. ಈ ಸ್ಥಿತಿಯನ್ನು ತಲುಪಲು ಹೆಚ್ಚು ಹೆಚ್ಚು ಅಭ್ಯಾಸ ಮಾಡುತ್ತಾ ಹೋದಂತೆ, ಈ ಅಭ್ಯಾಸ ನಮ್ಮ ಹವ್ಯಾಸವಾಗುತ್ತದೆ. ಹವ್ಯಾಸವನ್ನು ನಾವು ಯಾರ ಆದೇಶವಿಲ್ಲದೆ ನೆರವೆರಿಸುತ್ತೇವೆ.

ಹವ್ಯಾಸದ ಶಕ್ತಿಯೇ ಅಂಥದ್ದು. ‘ಏಕ’ದ ಮೇಲೆ ನೆಟ್ಟ ಮನಸ್ಸು ಹವ್ಯಾಸದ ಬಲದಿಂದ ಒಂದಿನ ‘ಏಕ’ದ ಮೇಲೆ ಪ್ರತಿಷ್ಠಾಪನೆಯಾಗಿರುವುದನ್ನೇ ಮರೆತುಬಿಡುತ್ತದೆ. ಆಗ ಮನಸ್ಸು ಖಾಲಿ. ಅದೇ ಶಾಂತಿಯುತ ಮನಸ್ಸು. ಸಮಾಧಿ ಸ್ಥಿತಿಯ ಮೊದಲನೇ ಹಂತವಿದು. ಇಂದ್ರಿಯಗಳ ಮಾಹಿತಿಯನ್ನು ಪರಿಷ್ಕರಿಸುವುದರಲ್ಲಿ ನಿರತವಾಗಿರುವ ಮನಸ್ಸಿಗೆ ಆತ್ಮದ ಅಸ್ಥಿತ್ವವೇ ಸುಳ್ಳು ಎಂದೆನಿಸುತ್ತದೆ. ನಾನು ಎಂಬುದು ಆತ್ಮದ ಬದಲು ಅಹಂಕಾರದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ‘ಏಕ’ದ ಮೇಲೆ ನೆಟ್ಟ ಮನಸ್ಸು ಶಾಂತಿಯನ್ನು ಕಂಡುಕೊಳ್ಳುವುದು ಒಂದು ಅಂತರ್ಯಾತ್ರೆ. ನಾನು ಎಂಬ ಅಹಂಕಾರದ ಅಜ್ಞಾನದಿಂದ ನಾನು ಎಂಬ ಆತ್ಮದ ಜ್ಞಾನದೆಡೆಗಿನ ಪ್ರಯಾಣದ ವಾಹಕವೇ ಈ ‘ಏಕ’.

ಏಕವನ್ನು ಆರಿಸಲು ಸ್ಫೂರ್ತಿ, ಪ್ರೀತಿ. ಆದರೆ ಪ್ರೀತಿಯನ್ನು ಆರಿಸಿಕೊಳ್ಳಲು ಸ್ಫೂರ್ತಿ ಯಾವುದು? ಅದು ಇಂದ್ರಿಯ. ಇಂದ್ರಿಯಗಳಿಗೆ ಯಾವ ‘ಏಕ’ದ ಮೇಲೆ ಬಯಕೆಗಳ ಗೊಂಚಲು ಕಾಣಿಸುತ್ತದೋ, ಅದೇ ‘ಏಕ’ದ ಮೇಲೆ ಮನಸ್ಸು ಪ್ರೀತಿ ತೋರುತ್ತದೆ. ಮೊದಲು ಇಂದ್ರಿಯದ ಮಾತನ್ನು ಕೇಳಿ ಪ್ರೀತಿ ಬೆಳೆಸಿಕೊಂಡ ಮನಸ್ಸು ನಂತರ ಇಂದ್ರಿಯಗಳನ್ನು ಆಲಿಸದೇ, ತಾನು ಪ್ರೀತಿಸುತ್ತಿದ್ದ ಪ್ರೀತಿಯನ್ನೂ ಮರೆತು ಶಾಂತಿ ಪಡೆದು, ಆತ್ಮದ ಅಭಿವ್ಯಕ್ತಿಗೆ ದಾರಿ ಮಾಡಿಕೊಡುತ್ತದೆ. ಈ ಶಾಂತಿ ಪಡೆಯುವ ಹಂತವೇ ಧ್ಯಾನ. 

 

 

Leave a Reply