ಲೇಖಕರು : ಮಹಾದೇವ ಹಡಪದ | ಕೃಪೆ: http://bayalu.co.in/
ವ್ಯಾಪಾರಿಗಳ ಮನೆಗಳಿಗೆ ದುಃಸ್ವಪ್ನವಾಗಿದ್ದ ಕನ್ನದ ಮಾರ ಹೇಳಿಕೇಳಿ ಕದಿಯುವ ಚಾಣಾಕ್ಷ ಕಳ್ಳ. ಇಂಥ ದಿನ ಇಷ್ಟು ಹೊತ್ತಿಗೆ ಸರಿಯಾಗಿ ನಿಮ್ಮ ಮನೆಗೆ ಕನ್ನ ಹಾಕತೇನೆ ಅಂತ ಮುಂಚಿತವಾಗಿಯೇ ಹೇಳಿಕೇಳಿ ಕದಿಯುವಷ್ಟು ಜಾಣ್ಮೆಯನ್ನು ಕಳ್ಳತನದಲ್ಲಿ ಸಾಧಿಸಿದ್ದ. ದಿನದಿನವೂ ಕಳ್ಳತನ ಮಾಡುವ ಜಾಯಮಾನ ಅವನದಲ್ಲ. ಹೆಂಡತಿ ಮಕ್ಕಳೊಂದಿಗೆ ಹೊತ್ತು ಕಳೆಯುತ್ತಾ ಇದ್ದವನು ಇದ್ದಕ್ಕಿದ್ದಂತೆ ರಾತ್ರಿ ಮಾಯವಾಗಿ ಅದೆತ್ತಲೋ ಹೋದನೆಂದರೆ ದಿನ ಬಿಟ್ಟು ದಿನ ಮೂಡಿದಾಗ ಮನೆಗೆ ಬಂದು ಬಿಡುತ್ತಿದ್ದ. ಬರಿಗೈಯಲ್ಲಿ ಹೋದವನು ಬರುವಾಗ ಕೈತುಂಬಾ ನಗನಾಣ್ಯ ತಂದು ಬಿಡುತ್ತಿದ್ದ. ಆ ನಗನಾಣ್ಯವನ್ನು ಗುಪ್ತವಾಗಿ ಸೋನಾರಣ್ಣನ ಮನೆಯಲ್ಲಿ ಮಾರಿ ಮನೆಗೆ ದಿನಸಿ ತಂದು ಬೇಸಿ ಹಾಕುವುದು ಹೆಂಡತಿಯ ಕೆಲಸ.
ಕಳ್ಳರ ಕುಲವೆಂದೇ ಕರೆಸಿಕೊಳ್ಳುತ್ತಿದ್ದ ಈ ಅಲೆಮಾರಿಗಳು ಊರಿಂದ ಊರಿಗೆ ಬಂಡಿಕಟ್ಟಿಕೊಂಡು ತಿರುಗುತ್ತಲೇ ಬದುಕು ನಡೆಸುತ್ತಿದ್ದರು. ಊರ ಪ್ರಮುಖನ ಮನೆಗೆ ಹೋಗಿ ನಾವು ಕಳ್ಳರ ಕುಲದವರು ನಿಮ್ಮ ಸೀಮೆಗೆ ಬಂದಿದ್ದೇವೆ, ನಮಗೆ ಹೊಟ್ಟೆಹೊರೆಯಲು ಕೆಲಸ ಕೊಡಿ, ಇಲ್ಲವಾದರೆ ಭಿಕ್ಷೆ ನೀಡಿ ಮುಂದಕ್ಕೆ ಕಳಿಸಿ ಎಂದು ಕುಲದ ಹೆಂಗಸರು ಕೇಳಿಕೊಳ್ಳಲು- ಊರಿನ ಸಮಸ್ತರು ತಳವಾರನ ದೇಖರೇಕಿಯಲ್ಲಿ ಈ ಕುಟುಂಬದವರಿಗೆ ಭಿಕ್ಷಾನ್ನ ನೀಡಿ ಕಳಿಸುತ್ತಿದ್ದರು. ಜೊತೆಗೊಬ್ಬ ತಳವಾರನಿಲ್ಲದಿದ್ದರೆ ಹಗಲು ಹೊತ್ತಲ್ಲೂ ದರೋಡೆ ಮಾಡಿಬಿಡುತ್ತಾರೆ ಎಂಬ ಭಯ ಈ ಕುಲದವರ ಬಗೆಗಿತ್ತು. ಹೀಗಿರುವಲ್ಲಿ ಯಾವ ಮನೆಯವರೂ ಪಡಿಕಾಳು ಭಿಕ್ಷೆ ನೀಡದೆ ಹಿಂದಕ್ಕೆ ಕಳಿಸುತ್ತಿದ್ದಿಲ್ಲ. ಹಾಗೊಂದು ವೇಳೆ ಯಾರ ಮನೆಯಲ್ಲಾದರೂ ಭಿಕ್ಷೆ ನೀಡುವುದಕ್ಕೆ ಹಿಂದೆಮುಂದೆ ನೋಡಿದರೋ ಅವರ ಮನೆಯಲ್ಲಿ ಆ ದಿವಸ ಕಳ್ಳತನವಾಗುತ್ತಿತ್ತು. ಹೀಗೆ ಹೆಂಗಸರು ಹಗಲು ಹೊತ್ತಿನಲ್ಲಿ ಊರೊಳಗೆ ಸೂಲಾಡಿ ಬೇಡಿಕೊಂಡು ಬರುತ್ತಿದ್ದರೆ, ಗಂಡಸರು ಮುಂಜಾನೆಯ ಎಳೆಬಿಸಿಲಿಗೆ ಮೈ ಕಾಯಿಸುವುದು, ಹಳ್ಳದ ಈಚಲುಮರದಲ್ಲಿ ಭಟ್ಟಿ ಇಳಿಸುವುದು, ಮಧ್ಯಾಹ್ನದ ಇಳಿಹೊತ್ತಿಗೆ ಯಾವುದಾದರೂ ಗಿಡದ ಕೆಳಗೆ ಮಲಗಿ ನಿದ್ರಿಸುವುದು ಬಿಟ್ಟರೆ ಅವರು ಮಾಡುವ ಕೆಲಸವೇನಿದ್ದರೂ ರಾತ್ರಿಯೇ…
ಬೆಲ್ಲ-ಸುಣ್ಣ ಬೆರೆಸಿ ಗಚ್ಚುಹಾಕಿ ಕಟ್ಟಿದ ಗೋಡೆ ಇರಲಿ, ಕರೀಕಲ್ಲಿನ ಮನೆಯೇ ಇರಲಿ ಕನ್ನ ಕೊರೆಯುವುದಕ್ಕೆ ಪ್ರಸಿದ್ಧನೆಂದರೆ ಮಾರ. ಈ ಕಡೆಯಿಂದ ಆ ಕಡೆಗೆ ಒಬ್ಬ ವ್ಯಕ್ತಿ ಹೋಗಿ ಬರುವಂಥ ಕೊಳವೆಯಾಕಾರದ ಕನ್ನ ಕೊರೆಯವುದು ಅವನಿಗೆ ಬಾಳೆ ಹಣ್ಣು ಸುಲಿದಷ್ಟು ಸುಲಭದ ಕೆಲಸ. ಹೀಗೆ ಸಾಗುತ್ತಾ ಕೊಂಕಣದ ಸೀಮೆಯ ಸುತ್ತುತ್ತಾ ಯಾವ ರಾಜ್ಯದ ಹಂಗಿನಲ್ಲಿಯೂ ಬದುಕದೇ ಊರಿಂದೂರಿಗೆ ತಿರುಗುತ್ತಾ ಕೃಷ್ಣಾ ನದಿ ಎಡದಂಡೆಗುಂಟ ಮುಂದಮುಂದಕ್ಕೆ ಮೂಡಣ ದಿಕ್ಕಿಗೆ ಬರುತ್ತಿರಲು ಅಲ್ಲಿ ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ಮಾತನ್ನು ಎಲ್ಲರೂ ಹೇಳುವುದು, ಆ ಪ್ರಕಾರವೇ ನಡೆದುಕೊಳ್ಳುವ ಜನರಿರುವ ಊರುಗಳ ಕಡೆಗೆ ಬಂದರು. ಅಲ್ಲಿಗೆ ಬರುತ್ತಿದ್ದಂತೆಯೇ ಹಸಿದ ಈ ಕಳ್ಳರ ಕುಲವನ್ನು ಮನೆಮನೆಗೆ ಕರೆದು ಊಟಕ್ಕೆ ಹಾಕುವ ಜನರು ಸಿಗತೊಡಗಿದರು.
‘ಅಲೆಲೇ ಈ ವಚನದೊಳಗೆ ಏನೋ ಮರ್ಮ ಇದ್ದಂಗದೆ ಮಾರ, ಯಾವ ಊರುಗಳಲ್ಲಿಯೂ ನಮ್ಮನ್ನು ಮನುಷ್ಯರಾಗಿ ಕಾಣಲಿಲ್ಲ… ಈ ಕಡೆಯ ಊರುಗಳಲ್ಲಿ ಬನ್ನಿ ಅಯ್ಯಾ… ಅಂತ ಮನೆಗೆ ಕರೆದು ಊಟಕ್ಕೆ ಹಾಕತಾರಲ್ಲಾ..! ಏನು ಚೋಜಿಗಾ ಇದು.’
‘ಅದೇನೋ ಕಲ್ಯಾಣ ಅಂತೆ ಕಲಾ, ಅಲ್ಲೊಬ್ಬ ಬಸವ ಇದ್ದಾನಂತೆ.. ಆ ವಯ್ಯ ಮಹಾಮನೆ ನಡಸತಾನಂತೆ..’
‘ಮಾಮನೆ ಅಂದ್ರೆ ಏನುಲಾ..?’
‘ಅದೇ ಕಲಾ ಬಡಬಗ್ಗರಿಗೆ ಊಟಾ ಹಾಕುತಾನಂತೆ, ಅದೇನೋ ಲಿಂಗ ಪೂಜೆಯಂತೆ, ದಾಸೋಹ ಅಂತೆ, ಕಾಯಕಾ ಅಂತೆ… ಅನುಭವ ಮಂಟಪ ಅಂತೆ, ಶರಣರಂತೆ, ಗುಡಿಗೆ ಹೋಗೋದ್ಯಾಕೆ – ದೇಹವೇ ದೇಗುಲಾ ಅಂತೆ, ವಚನಾ ಅಂತೆ, ದಯೆ ಅಂತೆ, ಕೂಡಲಸಂಗಮನಂತೆ, ಯಾರುನ್ನಾ ಕೇಳುದರೂ ಬರೇ ಇದನ್ನೇ ಮಾತಾಡತಾವಲ್ಲಾ!’
‘ಹಂಗಾರೆ ಆ ಬಸವಣ್ಣ ಭಾಳ ಶ್ರೀಮಂತನೇ ಇರುಬೇಕಲಾ..’
‘ಇಲ್ಲವಯ್ಯೋ ಆ ಯಪ್ಪಾ ಭಂಡಾರದ ಮಂತ್ರಿ ಅಂತೆ, ಕಲ್ಯಾಣದ ಪ್ರಧಾನಿಯಂತೆ, ಶರಣರ ಕಾಯಕದಿಂದ ಮಹಾಮನೆ ನಡಿತದೆಯಂತೆ’
‘ಹೌದಾ.. ಹಂಗಾರೆ ನಾವು ಈಗಿಂದೀಗ್ಗೆ ಕಲ್ಯಾಣಕ್ಕ ಹೋಗಿ, ಆ ಶರಣರ ಮನೆಗೆ ಕನ್ನ ಹಾಕಿದರೆ ಹೆಂಗೆ..?’
ಎಲ್ಲರೂ ಹ್ಞೂಗುಟ್ಟಿದರು. ಅದೇ ರಾತ್ರಿ ತಮ್ಮತಮ್ಮ ಹೆಂಡ್ರು ಮಕ್ಕಳಿಗೆ ಹಂಗೆ ಮುಂದಕ್ಕ ಬನ್ನಿ ನಾವು ದೂರದ ಊರಿಗೆ ಹೋಗಿ ಕೆಲಸ ಪೂರೈಸಿಕೊಂಡು ಬರತೇವೆ ಅಂತ ಹೇಳಿ ಹೊರಟ ಆ ಕಳ್ಳರು ಕಲ್ಯಾಣ ಮುಟ್ಟಿದಾಗ ಬೆಳಕಾಗಿತ್ತು. ಅದೊಂದು ದಿನ ಊರಮುಂದಿನ ಹಾಳು ದೇಗುಲದಲ್ಲಿ ಕಳೆದು ರಾತ್ರಿಗೆ ಶರಣರ ಮನೆಗೆ ಕನ್ನ ಕೊರೆಯುವುದೆಂದು ತೀರ್ಮಾನಿಸಿ, ತಂದಿದ್ದ ಬುತ್ತಿಯ ಬಿಚ್ಚಿ ಉಂಡು ಮಲಗಿದರು. ಮಾರನೆಂಬ ಕಳ್ಳನಿಗೆ ನಿದ್ದೆ ಬರುವುದಾದರೂ ಹೇಗೆ ಸಾಧ್ಯ…? ಹೊಸ ಊರು, ಹೊಸ ಜಾಗವ ನೋಡಿ ಆ ಊರಿಗೆ ತಕ್ಕಹಾಗೆ ವೇಷ ಮಾಡಿಕೊಳ್ಳದಿದ್ದರೆ ಬಂದ ಕೆಲಸ ಪೂರೈಸಲಾಗದು ಎಂಬ ಬಗ್ಗೆ ಚಿಂತಿಸುತ್ತಾ ಹಾಳುಗುಡಿಯ ಮುಂಭಾಗದಲ್ಲಿ ಕುಳಿತ.
ಅಲ್ಲಿ ಕಲ್ಯಾಣದ ಮುಖ್ಯರಸ್ತೆಯಲ್ಲಿ ನಡೆದಾಡುವವರು ಮುಗುಳ್ನಗುತ್ತಾ ಶರಣು ಹೇಳುತ್ತಾ ಓಡಾಡುತ್ತಿದ್ದಾರೆ. ಯಾರ ಕೈಗಳೂ ಖಾಲಿ ಇಲ್ಲ. ಎಲ್ಲರ ಮುಖದಲ್ಲೂ ಮಂದಹಾಸ, ಎದುರು ಸಿಕ್ಕವರನ್ನು ಮಾತಾಡಿಸುವ ರೀತಿ, ಕೊರಳಲ್ಲಿನ ರುದ್ರಾಕ್ಷಿ, ನೊಸಲಲ್ಲಿನ ವಿಭೂತಿ, ಆ ಅಕ್ಕರೆಯ ನೋಟ ಎಲ್ಲದೂ ಹೊಸತೆನಿಸಿತು. ಮಧ್ಯಾಹ್ನದ ಹೊತ್ತಿಗೆ ಊರಮುಂದಲ ಕೆರೆಯ ಪಕ್ಕದಲ್ಲಿಗೆ ಬಂದ, ನೂರಾರು ಜನ ಹೆಣ್ಣಮಕ್ಕಳು ಬಟ್ಟೆ ಸೆಳೆದು ಒಣಹಾಕಿರಲಾಗಿ ಮಾರನು ನಾಲ್ಕು ಜೊತೆ ಶರಣರ ಬಟ್ಟೆ ಕದ್ದುಕೊಂಡ. ಮಹಾಮನೆಯ ಮುಂದಿನ ರಸ್ತೆಯ ಪಕ್ಕದಲ್ಲಿ ಕುಳಿತಿದ್ದ ಮುದುಕನ ಹತ್ತಿರ ರುದ್ರಾಕ್ಷಿ, ವಿಭೂತಿಯ ಕದ್ದುಕೊಂಡು ತನ್ನ ಗೆಳೆಯರಿದ್ದ ಹಾಳುಗುಡಿಗೆ ಬಂದು ಮಲಗಿಬಿಟ್ಟ.
ಸಂಜೆಯಾಗುತ್ತಿದ್ದಂತೆ ಕೋಟೆಗೋಡೆಗೆ ತೂಗುಹಾಕಲಾಗಿದ್ದ ದೀಪಗಳು ಹೊತ್ತಿಕೊಂಡವು. ಹಿಲಾಲ್ ಕಟ್ಟಿಗೆಗೆ ಮತ್ತಷ್ಟು ಬಟ್ಟೆ ಸುತ್ತಿ ಎಣ್ಣೆ ಹೊಯ್ದು ದೀಪ ಹಚ್ಚಿದ ಸೈನಿಕರು ಅರಮನೆಯೊಳಗಿನ ಶಿವಲಿಂಗಕ್ಕೆ ಪೂಜೆ ಆಗುವಾಗ ಭಕ್ತಿಯಿಂದ ತಾವು ನಿಂತಲ್ಲಿಯೇ ಕೈಮುಗಿದರು. ಆ ಬೃಹದಾಕಾರದ ನಗಾರಿ ಮತ್ತು ದೊಡ್ಡಗಂಟೆಯನ್ನು ಬಾರಿಸಲು ಶುರು ಮಾಡಿದಾಗ ಹಾಳುಗುಡಿಯಲ್ಲಿ ಮಲಗಿದ್ದ ಕಳ್ಳರು ಎಚ್ಚರಾದರು. ಸರೂ ರಾತ್ರಿಗೆ ಶರಣರ ಬಟ್ಟೆಗಳನ್ನು ಧರಿಸಿಕೊಂಡು, ಕೊರಳಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ ಧರಿಸಿಕೊಂಡು ಹೊರಡಲನುವಾದರು. ಆರೇಳು ಮೊಳದ ಹಗ್ಗ ಸೊಂಟಕ್ಕೆ ಸುತ್ತಿಕೊಂಡು, ಅದರ ತುದಿಯಲ್ಲೊಂದು ಕಿಗ್ಗತ್ತಿ, ಗೋಡೆ ಕೊರೆಯುವ ಮೊಳೆ, ಚಾಣ, ಸುತ್ತಿಗೆ ಇತ್ಯಾದಿ ಸಲಕರಣೆಗಳ ಹದ ಮಾಡಿಕೊಂಡ ಮಾರ ‘ನೋಡ್ರಾ ಈ ಪಟ್ಟಣದಾಗೆ ಎಲ್ಲಾರೂ ಬೇಗ ಮಲಿಕ್ಕೊಳತಾರೆ, ಯಾಕಂದ್ರೆ ಇವರು ಇಡೀ ದಿವಸ ಕಷ್ಟಪಟ್ಟು ದುಡಿತಾರೆ’ ಎಂದು ಗೆಳೆಯರಿಗೆ ಹೇಳಿದ.
ಹೌದೋ ಅಲ್ಲವೋ ಎನ್ನುವಷ್ಟು ಮೆಲುವಾಗಿ ಹೆಜ್ಜೆ ಹಾಕುತ್ತಾ ಶರಣರ ಮನೆಗಳಿದ್ದ ಮಣ್ಣಿನ ದಿಬ್ಬವ ಏರಿದರು. ಸಾಲುಸಾಲಾಗಿದ್ದ ಮನೆಗಳಲ್ಲಿ ಕೊಂಚ ದೊಡ್ಡದಾದ ಮನೆಯೊಂದನ್ನು ಗುರುತು ಮಾಡಿಕೊಂಡು ಕನ್ನ ಹಾಕುವುದಕೆಂದು ಕಿಗ್ಗತ್ತಿ ತೆಗೆದು ಗುರುತು ಮಾಡಿ, ಅದೇ ಆಕಾರದಲ್ಲಿ ಚಾಣ ಹಿಡಿದು ಸುತ್ತಿಗೆಯಿಂದ ಹೊಡೆಯಬೇಕೆನ್ನುವಷ್ಟರಲ್ಲಿ ಆ ಮನೆಯ ಬಾಗಿಲ ಕಡೆಗೊಮ್ಮೆ ಕಣ್ಣಾಡಿಸಿದ. ‘ಅರೆರೆ ಬಾಗಿಲು ತೆಗೆದಿದೆಯಲ್ಲಾ’ ಎಂದು ಎದ್ದು ಬಂದು ಆ ಮನೆಯ ಬಾಗಿಲ ಮುಂದೆ ನಿಂತ. ಅದೊಂದೆ ಮನೆ ಅಲ್ಲ- ಯಾರ ಮನೆಯ ಬಾಗಿಲಿಗೂ ಕದಗಳಿಲ್ಲದ್ದು ಕಂಡು ಕಳ್ಳರೆಲ್ಲ ಅಚ್ಚರಿಪಟ್ಟರು. ಕದಗಳಿಲ್ಲದ ಮನೆಗೆ ಕನ್ನ ಕೊರೆಯುವುದು ಪಾಪವೆನಿಸತೊಡಗಿತು.
‘ಇವು ಶರಣರ ಮನೆಗಳು ಕಣಾ ಮಾರ, ಆ ಬಸವಣ್ಣ ಮನೆ ಬಾಗಿಲಿಗೆ ಕದಾ ಹಚ್ಚಬ್ಯಾಡಾ ಅಂತಾನೂ ಹೇಳವನೋ ಏನೋ, ವಿಚಿತ್ರಾ ಆಗತದೋ ಮಾರಾಯ ಈ ಜನರಿಗೆ ಕಳ್ಳಕಾಕರ ಭಯಾನೂ ಇಲ್ಲವಲ್ಲೋ’
ಮಾರನ ಮನಸ್ಸು ವಿಚಲಿತವಾದಂಗೆ ಆಗಿ, ಯಾಕೋ ಏನೋ ಆ ಬಸವಣ್ಣ ಹೇಳಿದ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಅನ್ನೋ ಮಾತಿನಲ್ಲಿ ಅಂಥದ್ದೇನೋ ಗಮ್ಮತ್ತು ಇದೆ ಎನಿಸತೊಡಗಿತು. ಆದರೂ ಹಿಡಿದ ಕೆಲಸ ಮಾಡದಿದ್ದರೆ ಕುಲದೇವರಾದ ಮಾರೇಶ್ವರನ ಅಣತಿಗೆ ವಿರುದ್ಧ ಆದಂಗೆ ಆಗತದೆ ಅಂದುಕೊಂಡ ಮಾರನು ಪ್ಯಾಟೆ ಬದಿಯ ಜೋಡುಗಿಳಿ ಸೆಜ್ಜಾದ ಮನೆಯೊಂದಕ್ಕೆ ಕನ್ನ ಹಾಕಿದ. ಅಲ್ಲಿ ಒಂದು ಬೆಳ್ಳಿ ಮತ್ತೆರಡು ಬಂಗಾರದ ಹಾಗವನ್ನು ಕದ್ದುಕೊಂಡು ಹಾಳುಗುಡಿಗೆ ಹಿಂದಿರುಗಿದಾಗಲೂ ಅವನ ಮನಸ್ಸು ಆ ಕದಗಳಿಲ್ಲದ ಮನೆಗಳನ್ನೇ ಧ್ಯಾನಿಸುತ್ತಿತ್ತು.
ಕಳ್ಳತನಕ್ಕೆ ಹೊರಟರೆಂದರೆ ದಿನ ಬಿಟ್ಟು ದಿನ ಬೆಳಗಾಗುವುದರೊಳಗೆ ಮರಳಿ ಬಂಡಿಗೆ ಹೋಗುತ್ತಿದ್ದ ಮಾರ ಮತ್ತವನ ಗೆಳೆಯರು ವಾರ ಕಳೆದರೂ ಕಲ್ಯಾಣದಲ್ಲಿಯೇ ಉಳಿದರು. ಕಳ್ಳತನ ಮಾಡಲಾಗದೇ, ಹಿಂದಿರುಗಿ ಹೋಗಲಾಗದೆ ಒದ್ದಾಡುತ್ತಿದ್ದ ಅವನ ಮನಸ್ಸು ‘ಕನ್ನ ಕೊರೆದರೆ ಅರಮನೆಯ ಖಜಾನೆಗೆ ಗುರಿ ಇಡುವಾ’ ಅಂತ ಹೇಳಿದ್ದೆ ತಡ ಆ ದಿನ ರಾತ್ರಿಯೇ ಅರಮನೆಯತ್ತ ಹೊರಟ. ಅದೇ ಶರಣರ ಬಟ್ಟೆಯ ತೊಟ್ಟು ಯಥಾ ಪ್ರಕಾರ ಹಗ್ಗ, ಕಿಗ್ಗತ್ತಿ, ಮೊಳೆ, ಚಾಣಾ, ಸುತ್ತಿಗೆ ಇತ್ಯಾದಿ ಸಲಕರಣೆಗಳ ಕಟ್ಟಿಕೊಂಡು ಕತ್ತಲ ಹಾದಿ ಹಿಡಿದು ಬಂದೇಬಿಟ್ಟ. ನಡುರಾತ್ರಿಗೆ ಪಹರೆಯವರು ಚಣಹೊತ್ತು ಕೂತು ಮಾತಾಡಿಕೊಳ್ಳುವುದನ್ನೇ ಕಾಯುತ್ತ ಕುಳಿತ. ಜೊತೆಗಾರರು ಕೈಗಲ್ಲಳತೆಗೊಬ್ಬೊಬ್ಬ ನಿಂತಿದ್ದರು. ಆರಿ ಹೋಗುವ ದೊಂದಿಗಳಿಗೆ ಎಣ್ಣೆ ಹಾಕುತ್ತಿದ್ದವನೊಬ್ಬ ಕೋಟೆಗೋಡೆಯ ಮೇಲೇರಿ ಬಂದದ್ದೆ ಪಹರೆಯವನು ಅತ್ತ ವೀಳ್ಯೆದೆಲೆಗೆ ಸುಣ್ಣ ಕೇಳಿ ಪಡೆದು ಹದಮಾಡಿ ಹಾಕಿಕೊಳ್ಳಲು ಕುಳಿತ.
ಮೂರು ಪದರಿನ ಗೋಡೆಗೆ ಕನ್ನಕೊರೆದು ಒಳನುಗ್ಗಿದವನೇ ನೆಟ್ಟನೆ ಅರಮನೆಯ ಮುಂಬಾಗಿಲ ಮುಂದಿನ ಪನ್ನಾಳಿಗೆಯಲ್ಲಿ ತೂರಿಕೊಂಡ. ಆ ನೀರವ ರಾತ್ರಿಯಲ್ಲಿ ಎರಡು ಹೆಗ್ಗಣಗಳು ಚಲ್ಲಾಟವಾಡುತ್ತಾ ಕಾಳುಕಡಿ ಕೂಡಿಟ್ಟಿದ್ದ ದಾಸ್ತಾನುವಿನ ಕಡೆಗೆ ಓಡಿದವು. ಭಂಡಾರದ ಕೋಣೆಯ ಬಾಗಿಲು- ಗರಡಿಮನೆಯ ಬಾಗಿಲಿನಷ್ಟೆ ಪುಟ್ಟದಾದ್ದರಿಂದ ಸುಲಭದಲ್ಲಿ ಕನ್ನಕೊರೆದು ಕೈಗೆ ಸಿಕ್ಕಷ್ಟು ಬಾಚಿ ಬಟ್ಟೆಯ ಜೋಳಿಗೆಯಲ್ಲಿ ತುಂಬಿಕೊಂಡ. ಅಲ್ಲಿಂದ ಹೊರಬಿದ್ದು, ಅದೇ ಪನ್ನಾಳಿಗೆಯಿಂದ ಪಾರಾಗಿ ಅರಮನೆಯ ಆವರಣ ದಾಟಿ ಕೋಟೆಗೋಡೆಯನ್ನು ದಾಟಬೇಕೆನ್ನುವಷ್ಟರಲ್ಲಿ…. ಆ ಎರಡು ಹೆಗ್ಗಣಗಳು ಒಂದರ ಮೇಲೊಂದು ಬಿದ್ದು ಕಚ್ಚಾಡುತ್ತಾ ಕಾವಲು ಸೈನಿಕರನ್ನು ಎಚ್ಚರಿಸಿಬಿಟ್ಟವು.
ತಾಬಡತೋಬಡ ಕಾವಲುಗಾರ ಅಪಾಯದ ಗಂಟೆಯನ್ನು ಹೊಡೆದೇಬಿಟ್ಟ. ಕೋಟೆಯಿಂದ ಹೊರಗೆ ಬಿದ್ದಿದ್ದ ಮಾರ ಜೋಳಿಗೆಯನ್ನು ಗಂಟುಹಾಕಿ ಕೈಗಲ್ಲಳತೆ ದೂರದಲ್ಲಿ ನಿಂತಿದ್ದ ಇನ್ನೊಬ್ಬನತ್ತ ಎಸೆದ.. ಅವನು ಮತ್ತೊಬ್ಬನತ್ತ ಎಸೆದ.. ಆತ ಮಗದೊಬ್ಬನಿಗೆ ಎಸೆದ. ಹೀಗೆ ಜೋಳಿಗೆ ಕೈಯಿಂದ ಕೈಗೆ ದಾಟುತ್ತಾ ಹಾಳುಗುಡಿಯನ್ನು ಸೇರಿದ್ದೆ ಕಳ್ಳರೆಲ್ಲ ದಿಕ್ಕಾಪಾಲಾಗಿ ಪರಾರಿಯಾದರು. ಕೆಲಕೆಲವರು ಕಾಡು ಬಿದ್ದರು, ಕೆಲವರು ಕದಗಳಿಲ್ಲದ ಶರಣರ ಮನೆ ಹೊಕ್ಕರು, ಕೆಲವಿಬ್ಬರು ಹಾಳುಗುಡಿಯನ್ನೇ ಆಶ್ರಯಿಸಿದರು. ಕನ್ನದ ಮಾರನಿಗೆ ಯಾವ ಕಡೆಗೆ ಹೋಗಬೇಕು ಎಂದು ಯೋಚಿಸುವ ಮೊದಲೇ ಸೈನಿಕರು ಬೆನ್ನತ್ತಿದರು. ಬೇಟೆಯ ಪ್ರಾಣಿಯನ್ನು ಬೆಂಬತ್ತಿದ ಹಾಗೆ ಕಲ್ಯಾಣದ ಮೂಲೆಮೂಲೆಯಿಂದಲೂ ಹಾ.. ಹಾ.. ಇಲ್ಲಿ ಕಂಡ, ಅಲ್ಲಿ ಓಡಿದ. ಹಿಡಿಯಿರಿ, ಹಿಡಿಯಿರಿ ಎಂಬ ಗೌಜುಗದ್ದಲ ಕೇಳಲಾರಂಭಿಸಿದ್ದೆ ತಡ ಮಾರನು ‘ಮಾರನಿಗೆ ವೈರಿಯಾದೆಯಾ ಮಾರೇಶ್ವರಾ’ ಎಂದುಕೊಳ್ಳುತ್ತಾ ಮಿಣುಕು ಬೆಳಕಿದ್ದ ಮಹಾಮನೆಯ ಗೋಡೆಯನ್ನು ಜಿಗಿದು ಒಳಸೇರಿಕೊಂಡ.
ಚುಮುಚುಮು ಬೆಳಕಾಡುವ ಮೊದಲೇ ಎದ್ದರಲ್ಲಾ ಶರಣರು..! ನಡುಮನೆಯ ಕಂಬದ ಮೇಲಿನ ದೀಪದ ಮಂದಬೆಳಕಿನಲ್ಲಿ ಯಾರು ಕಟ್ಟಿಗೆ ಸೀಳುವರೋ, ಯಾರು ಕಸಗುಡಿಸುವರೋ, ನೆಲ ಒರೆಸುವರೋ, ಸಗಣಿಯ ತಂದು ನೆಲವ ಸಾರಿಸಿ ಹದಗೊಳಿಸಿದರ್ಯಾರೋ, ನೀರು ಹೊತ್ತು ತಂದು ತಪೇಲಿ ತುಂಬಿಸುವರ್ಯಾರೋ.. ಒಲಿಪುಟು ಮಾಡಿ ಕುದಿ ಎಸರಿಟ್ಟವರಾರೋ..? ಮಸುಕು ಹರಿದು ಬೆಳಕಾಗುವ ಹೊತ್ತಿಗೆ ಮಾಮನೆಯ ಅಂಗಳ ಲಕಲಕ ಅಂತಿತ್ತು. ಆಹಾ ಶರಣರ ಮುಖಗಳೂ ಫಳಫಳ ಹೊಳೀತಿದ್ದವು. ಒಬ್ಬರಂತಲ್ಲ ಇಬ್ಬರಂತಲ್ಲ ನೂರಾರು ಜನ ಜಳಕಾವ ಮಾಡಿ ಪೂಜೆಪುನಸ್ಕಾರಾದಿ ಪೂರೈಸಿ, ಶರಣು ಹೇಳುತ್ತಾ ಕಾಯಕದತ್ತ ಮುಖ ಮಾಡಿ ಹೊಂಟೇ ಹೋದರು. ಮಾಮನೆ ಗೋಡೆಯ ಹಾರಿ ಜಿಗಿವ ಅವಸರದಲ್ಲಿ ಕಾಲುಳಿಕಿ ಬಿದ್ದಲ್ಲಿಯೇ ಬಿದ್ದಿದ್ದ ಮಾರನ ಪಾದ ಆನೆಕಾಲು ಗಾತ್ರದಲ್ಲಿ ಊದಿಕೊಂಡಿತ್ತು. ನರಳುವ ಮಾರನ ಧ್ವನಿ ಕೇಳಿ ಯಾರೋ ಒಬ್ಬ ಶರಣ ಬಗಲಿಗೆ ಕೈಹಾಕಿ ಮಾಮನೆಯ ಚಾವಡಿಗೆ ಕರೆದೊಯ್ದು ಕಂಬಳಿ ಹಾಸಿಕೊಟ್ಟ. ಮತ್ಯಾರೋ ಅಂಬಲಿ, ನೀರು ಕೊಟ್ಟು ಆರೈಕೆ ಮಾಡಿದರು. ಗುರುತಿಲ್ಲ ಪರಿಚಯವಿಲ್ಲ, ಕೊರಳಲ್ಲಿನ ಲಿಂಗ, ರುದ್ರಾಕ್ಷಿ, ಹಣೆಯ ಮೇಲಿನ ಈಬತ್ತಿಯ ದೆಸೆಯಿಂದಾಗಿ ಆ ಶರಣರೊಳಗೆ ಒಬ್ಬ ಬಂಧುವಿನಂತೆ ಅವರೆಲ್ಲ ಭಾವಿಸಿರುವುದ ಕಂಡು ಮಾರನ ಮನಸ್ಸು ಉಕ್ಕಿ ಬಂತು. ಬಿಸಿಲೇರಿದಂತೆ ಕಾಲು ನೋವು ಹೆಚ್ಚಾಯ್ತು. ಕಾಲು ಕಿತ್ತಿಡಲೂ ಸಾಧ್ಯವಾಗದಂಥ ನೋವು ಇಮ್ಮಡಿಯಾಗಲು ವೈದ್ಯ ಸಂಗಣ್ಣ ಬಂದು ನೋವಿನೆಣ್ಣೆ ಹಚ್ಚಿ ತೀಡಿದ.
ಸಂಪೂರ್ಣ ಲೇಖನ ಇಲ್ಲಿ ಓದಿ : http://bayalu.co.in/ಕನ್ನಗತ್ತಿಯ-ಮಾರಯ್ಯ/