ನಷ್ಟಕ್ಕಿಂತ ಅಹಮಿಕೆಯ ಪೆಟ್ಟೇ ಹೆಚ್ಚು ನೋವು ಕೊಡುವುದು! : ಅಧ್ಯಾತ್ಮ ಡೈರಿ

ಪ್ರಾಮಾಣಿಕವಾಗಿ ಹೇಳಿ. ನಿಮ್ಮ ಯಾತನೆಗೆ ಕಾರಣ, ಸಾಂಗತ್ಯ ತಪ್ಪಿಹೋದ ದುಃಖವೋ; ಬಿಡಲ್ಪಟ್ಟ ಅವಮಾನದ ನೋವೋ? ನಿಮ್ಮನ್ನು ಕಾಡುತ್ತಿರುವುದು ಯಾವುದು? ಭಗ್ನಗೊಂಡ ಹೃದಯವೋ, ಘಾಸಿಗೊಂಡ ಅಹಂಕಾರವೋ!? ~ ಅಲಾವಿಕಾ

ಬಹುತೇಕವಾಗಿ ನಾವು ಇದನ್ನು ಅನುಭವಿಸಿರುತ್ತೇವೆ. ಆಟೋದವ ಐದೋ ಹತ್ತೋ ರುಪಾಯಿ ಜಾಸ್ತಿ ಕೇಳಿದರೆ, ಐದು ರುಪಾಯಿಗಿಂತ ಹೆಚ್ಚಿನ ಚಿಲ್ಲರೆ ಇಲ್ಲ ಅಂದುಬಿಟ್ಟರೆ ತೀರಾ ಸಿಡಿಮಿಡಿಗೊಳ್ಳುತ್ತೇವೆ. “ಬೇಕಂತ ಮಾಡ್ತಾರೆ” ಅಂತ ಗೊಣಗೋದರಿಂದ ಹಿಡಿದು, “ಎಷ್ಟು ಆಟ ಆಡಿಸ್ತಾರೆ! “ ಅಂತ ಬೈದುಕೊಳ್ಳೋವರೆಗೆ ನಮ್ಮ ಅಸಹನೆ ಕುದಿಯುತ್ತದೆ.

ಅದೇ ನಾವು ಯಾವಾಗಲಾದರೂ ಆಟೋದವನಿಗೆ ಹತ್ತು ರುಪಾಯಿಗಿಂತ ಹೆಚ್ಚೇ ದುಡ್ಡು ಕೊಟ್ಟುಬಿಟ್ಟಿರುತ್ತೇವೆ. ಕೆಲವೊಮ್ಮೆ ಅವರು ಕೇಳದೆ ಹೋದರೂ “ನಮ್ ಏರಿಯಾದಿಂದ ಬಾಡಿಗೆ ಸಿಗೋದು ಕಷ್ಟ… ಇರ್ಲಿ…” ಅಂತ ಔದಾರ್ಯ ತೋರಿಸಿ ಉಳಿದ ಚಿಲ್ಲರೆ ಅವರ ಬಳಿಯೇ ಬಿಟ್ಟುಬಿಡುತ್ತೇವೆ.

ಯಾವ ನಾವು ಆಟೋ ಅಣ್ಣನ ಡಿಮಾಂಡಿಗೆ ರೇಗಿದೆವೋ ಅದೇ ನಾವು ಇಲ್ಲಿ ಉದಾರಿಯಾಗುತ್ತಿದ್ದೇವೆ. ಚಿಲ್ಲೆರೆಗೆ ಜಗಳ ಆಡುವ ನಾವು ಜುಗ್ಗರೇನಲ್ಲ. ಅಥವಾ ಐದೋಹತ್ತೋ ರುಪಾಯಿಯಲ್ಲಿ ನಾವು ಮನೆ ಕಟ್ಟಲೂ ಸಾಧ್ಯವಿಲ್ಲ. (ತೀರ ಅಗತ್ಯದಲ್ಲಿರುವವರ ಬಗೆಗಲ್ಲ ಈ ಮಾತು… ಕೆಲವೊಮ್ಮೆ ಅಂಥಾ ಕಡುಕಷ್ಟದಲ್ಲಿರುವವರು ಜಗಳ ಆಡದೆ ಹಣ ಬಿಟ್ಟುಬಿಡುವುದೂ ಉಂಟು) ಆದರೂ ನಾವು ಜಗಳ ಮಾಡುತ್ತೇವೆ. ಏಕೆಂದರೆ ನಮಗೆ ಅವನ ಡಿಮಾಂಡ್ ಕಿರಿಕಿರಿ ತರಿಸುತ್ತದೆ. ನಾವೇನೂ ತೀರಾ ನಿಜಾಯಿತಿಯವರಲ್ಲ. ಚಿಕ್ಕಪುಟ್ಟ ನಿಯಮಗಳನ್ನು ಮುರಿಯುತ್ತ ಬದುಕುವುದು ನಮಗೂ ಕರಗತವೇ. ಆದರೂ ನಾವು ಜಗಳ ಆಡುತ್ತೇವೆ. ಅದೇ ನಾವು, ಕೆಲವೊಮ್ಮೆ ಖುಷಿಯಿಂದಲೇ ಹೆಚ್ಚು ಹಣ ಕೊಟ್ಟು ಬಿಡುತ್ತೇವೆ.

ಏಕೆ ಹೀಗೆ?
ಕಾರಣ ಇಷ್ಟೇ. ನಾವಾಗಿಯೇ ಕೊಟ್ಟು ದೊಡ್ಡವರಾಗುವ ಬಯಕೆ ನಮ್ಮ ಅಂತರಂಗದಲ್ಲಿ ಸುಪ್ತವಾಗಿರುತ್ತದೆ. ಕೊಡುವ ಸ್ಥಾನದಲ್ಲಿ ನಿಲ್ಲುವುದರಿಂದ ನಮ್ಮ ಅಹಂಕಾರ ತೃಪ್ತಗೊಳ್ಳುತ್ತದೆ. ಅವರು ಕೇಳಿದಾಗ ಕೊಡದೆ ನಮಗೆ ಬೇಕೆನಿಸಿದಾಗ ಕೊಡುವುದು ನಮ್ಮ ಅಹಂತೃಪ್ತಿಗಾಗಿಯೇ ಹೊರತು ದಯೆ ಅಥವಾ ಸಹಾನುಭೂತಿಯಿಂದಲ್ಲ. ಅದೇನಿದ್ದರೂ ನಮ್ಮ ಅಹಮಿಕೆಯನ್ನು ಕೊಬ್ಬಿಸುವ ಉಣಿಸಷ್ಟೆ. ಯಾವಾಗಲೂ ನಿರ್ಧರಿಸುವವರ ಜಾಗದಲ್ಲಿ ನಾವಿರಬೇಕು. ನಮ್ಮ ಇಂಗಿತದಂತೆ, ನಮ್ಮ ಇಚ್ಛೆಯಂತೆ ಎಲ್ಲವೂ ನಡೆಯಬೇಕು. ಮತ್ಯಾರದೋ ಇಚ್ಛೆಗೆ ಬಾಗಿಬಿಟ್ಟರೆ ನಮ್ಮ ಅಹಂಕಾರಕ್ಕೆ ಪೆಟ್ಟು!

ಗೆಳೆತನ, ಪ್ರೇಮ ಅಥವಾ ಯಾವುದೇ ಬಾಂಧವ್ಯದಲ್ಲೂ ಹೀಗೇ ಆಗುವುದು. ಬಿಡುವ ಸ್ಥಾನದಲ್ಲಿ ನಾವಿರಬೇಕು. ಸಂಗಾತಿ ನನ್ನನ್ನು ‘ಡಂಪ್’ ಮಾಡಿದರೆ ನಾನು ಘಾಸಿಗೊಳ್ಳುತ್ತೇನೆ, ತೀವ್ರವಾಗಿ ದುಃಖಿಸ್ತೇನೆ. ಚಡಪಡಿಸುತ್ತೇನೆ. ಪ್ರಾಮಾಣಿಕವಾಗಿ ಹೇಳಿ. ಇದಕ್ಕೆ ಕಾರಣ ಸಾಂಗತ್ಯ ತಪ್ಪಿಹೋದ ದುಃಖವೋ; ಬಿಡಲ್ಪಟ್ಟ ಅವಮಾನದ ನೋವೋ? ನಿಮ್ಮನ್ನು ಕಾಡುತ್ತಿರುವುದು ಯಾವುದು? ಭಗ್ನಗೊಂಡ ಹೃದಯವೋ, ಘಾಸಿಗೊಂಡ ಅಹಂಕಾರವೋ!?

ಸಂಗಾತಿ ನಮ್ಮಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವ ಅಥವಾ ದೂರಾಗುತ್ತಿರುವ ಸೂಚನೆ ದೊರೆತಾಗ ಭೂಮಿ – ಆಕಾಶ ಒಂದು ಮಾಡುವ ನಾವು, ಅವರನ್ನು ಹೇಗೋ ಉಳಿಸಿಕೊಳ್ಳುತ್ತೇವೆ. ಆದರೆ, ಅದೇ ನಾವು ಕೆಲವೇ ದಿನಗಳಲ್ಲಿ ಅವರನ್ನು ಬಿಟ್ಟುಬಿಡಲು ತಯಾರಾಗುತ್ತೇವೆ. ಇಂಥ ಘಟನೆ ಬಹುತೇಕರ ಬದುಕಲ್ಲಿ ನಡೆದಿದೆ. ದೂರಾಗಲಿರುವ ಸಂಗಾತಿಯನ್ನು ಒಲಿಸಿಕೊಂಡು, ಅನಂತರ ತಾವಾಗಿಯೇ ಬಿಟ್ಟುಬಿಡುವುದು. ಈ ಬಿಡುವ ಯೋಚನೆ ಸಂಗಾತಿಯ ಆಯ್ಕೆ ಮತ್ತು ಸ್ವಾತಂತ್ರ್ಯವನ್ನು ಗೌರವಿಸಿ ತೆಗೆದುಕೊಂಡ ನಿರ್ಧಾರವಲ್ಲ; ಬದಲಿಗೆ, “ಬಿಡುವ ಸ್ಥಾನದಲ್ಲಿ ನಾನಿರಬೇಕು. ನನ್ನನ್ನು ಬಿಡಲು ಅವನ್ಯಾರು/ಅವಳ್ಯಾರು” ಅನ್ನುವ ಆಲೋಚನೆ!
ಸಾಂಗತ್ಯ ಕಡಿಯುವಾಗ, ಅದಕ್ಕೆ ಮತ್ತೊಂದು ಹೆಣ್ಣು/ಗಂಡಿನ ಆಗಮನ ಕಾರಣವಾಗಿದ್ದರಂತೂ ಎದೆ ಕುದ್ದು ಹೋಗುತ್ತದೆ. ಇದಕ್ಕೆ ಕಾರಣ, ಪುನಃ ಅಹಂಕಾರವೇ. ಜೊತೆಗೆ ಕಳಶವಿಟ್ಟಂತೆ ಮತ್ಸರ ಕೂಡಾ!

ನನಗಿಂತ ಅವನಲ್ಲಿ / ಅವಳಲ್ಲಿ ಏನೋ ವಿಶೇಷವಿರಬೇಕು. ಅದಕ್ಕೇ ನನ್ನನ್ನು ತಿರಸ್ಕರಿಸಲಾಗಿದೆ ಅನ್ನುವ ಆಲೋಚನೆ ಹೆಚ್ಚು ಬಾಧಿಸುತ್ತದೆ. ನನ್ನಲ್ಲಿ ಏನು ಕಡಿಮೆಯಿದೆ? ನನಗೆ ಅವಮಾನವಾಯಿತು – ಎಂಬ ನೋವು ಕಿತ್ತು ತಿನ್ನತೊಡಗುತ್ತದೆ. ಇಲ್ಲಿ ಕೂಡಾ ಕೆಲಸ ಮಾಡುವುದು “ನಾನೇನು ಕಮ್ಮಿ!?” ಅನ್ನುವ ಮನಸ್ಥಿತಿಯೇ. ಇದು ಮುಂದುವರಿದು, “ನನ್ನನ್ನು ನೀನೇನು ತಿರಸ್ಕರಿಸೋದು? ನಾನೇ ನಿನ್ನ್ನನು ತಿರಸ್ಕರಿಸ್ತೀನಿ” ಅನ್ನುವಲ್ಲಿಗೆ ಹೋಗಿ ನಿಲ್ಲುತ್ತದೆ.
ಮುಳ್ಳು ಅಂಗಾಲಿಗೆ ಚುಚ್ಚಿದರೂ, ಅಂಗಾಲು ಮುಳ್ಳಿನ ಮೇಲೆ ಇಟ್ಟರೂ ನೋವು ಕಾಲಿಗೇ. ನಾವೇ ಬಿಟ್ಟರೂ ಅವರೇ ಬಿಟ್ಟರೂ ನಷ್ಟ ನಮಗೇನೇ. ಆದರೆ ನಮಗೆ “ನನ್ನ ಬದುಕು ನಾನೇ ಹಾಳು ಮಾಡಿಕೊಳ್ತೀನಿ. ಬೇರೆಯವರೇನು ಮಾಡೋದು!?” ಅನ್ನುವ ಹಠ. ಈ ಹಠವೇ ನಮ್ಮ ದಾರಿ ತಪ್ಪಿಸುವುದು.
ನಮ್ಮ ಧೋರಣೆ ಎಲ್ಲ ಬಾಂಧವ್ಯಗಳಲ್ಲೂ ಹೀಗೇ.

ವ್ಯವಹಾರಗಳಲ್ಲೂ ಹೀಗೇ. ನಮಗೆ ನಮ್ಮ ಅಹಂ ತೃಪ್ತಿ ಮುಖ್ಯ. ಈ ಧಾವಂತದಲ್ಲಿ ತೃಪ್ತಿಗೊಳ್ಳಬೇಕಿರೋದು ಅಂತರಂಗ ಅನ್ನೋದನ್ನು ಮರೆತುಬಿಡುತ್ತೇವೆ. ಬಹುತೇಕ ನಮ್ಮ ಎಲ್ಲ ದುಃಖಗಳೂ ಅಹಮಿಕೆ ಪೆಟ್ಟು ತಿಂದ ನೋವೇ ಆಗಿರುತ್ತದೆ. ಒಮ್ಮೆ ಈ ಅಹಮಿಕೆಯನ್ನು ಹೊರಗಟ್ಟಿ ಕದ ಮುಚ್ಚಿಬಿಡಿ. ಆಗ ನಿಮ್ಮ ಸಿಡುಕು, ನಿಮ್ಮ ವಿದ್ರೋಹದ ಗೋಳಾಟವೆಲ್ಲ ಹೇಗೆ ಮಟಾಮಾಯವಾಗುತ್ತದೆ, ನೀವೇ ನೋಡಿ! ಅನಂತರ ಯಾರೂ / ಯಾವುದೂ ನಿಮ್ಮನ್ನು ಕೆರಳಿಸಲಾಗಲೀ, ನೋಯಿಸಲಾಗಲೀ ಸಾಧ್ಯವೇ ಇಲ್ಲ!

Leave a Reply