ದೈವದ ಇಚ್ಛೆ ಇಲ್ಲದೆ ಹುಲ್ಲು ಗರಿಯು ಅಲ್ಲಾಡುವುದಿಲ್ಲ, ನಡೆಯುವ ಕೆಟ್ಟ ಒಳ್ಳೆ ಯ ಘಟನೆಗೆ ದೈವ ಕಾರಣ ಅಂದುಕೊಂಡಿದ್ದೇನೆ. ನನಗೆ ಸಮಾಧಾನ ತಿಳಿಸಿ – ಎಂದು ‘ಅರಳಿಮರ’ ಓದುಗರೊಬ್ಬರು ಸಂದೇಶ ಕಳುಹಿಸಿದ್ದಾರೆ. ಅದಕ್ಕೆ ಉತ್ತರ ಕೊಡುವ ಪ್ರಯತ್ನ ಮಾಡಲಾಗಿದೆ ~ ಚಿತ್ಕಲಾ
ಈ ಸಮಾಜದಲ್ಲಿ ನಡೆಯುವ ಘಟನೆಗಳಿಂದ ನನಗೆ ದೈವದ ಮೇಲೆ ನಂಬಿಕೆ ಹೋಗಿದೆ. ಅತ್ಯಾಚಾರ ಘಟನೆಗಳು
ಹಾಗೂ ನಾನು ಕೆಲಸ ಮಾಡುವ ಜಾಗದಲ್ಲಿ ನ್ಯಾಯಯುತವಾಗಿ ಕೆಲಸ ಮಾಡಿದರು ಮೋಸ ಮಾಡಿದ್ದಾರೆ. ಬೆಲ್ಲದಂತೆ ಮಾತನಾಡುತ್ತಾರೆ ನಮಗೆ ನೀಡಬೇಕದನ್ನು ನೀಡದೆ ನಮ್ಮ ಮೇಲೆ ತಪ್ಪುರಿಸಿ ದೋಷಿಗಳನ್ನಾಗಿ ಮಾಡುತ್ತಾರೆ. ನನಗೆ ಸರಿಯಾದ ಆತ್ಮಿಯ ಸ್ನೇಹಿತರಿಲ್ಲ. ಮಾರ್ಗದರ್ಶನ ನೀಡುವವರಿಲ್ಲ. ನನ್ನಲ್ಲಿ ಪ್ರತಿಭೆ ಇಲ್ಲ ಜೀವನ ನಡೆಸುವುದು ಕಷ್ಟ ಎನ್ನಿಸುತ್ತಿದೆ. ನಾನು ಯಾರಿಗೂ ತೊಂದರೆ ನೀಡದಿದ್ದರು ನನ್ನನ್ನು ಆಡಿಕೊಳ್ಳುತ್ತಾರೆ. ಬೇಕೆಂದೆ ತುಚ್ಚವಾಗಿ ಮಾತನಾಡುತ್ತಾರೆ. ಒಂದೊಂದು ಬಾರಿ ನನಗಿಂತ ಕೆಳಗಿರುವವರನ್ನು ನೋಡಿ ಸಮಾಧಾನ ಮಾಡಿಕೊಳ್ಳುತ್ತೇನೆ. ದೈವದ ಇಚ್ಛೆ ಇಲ್ಲದೆ ಹುಲ್ಲು ಗರಿಯು ಅಲ್ಲಾಡುವುದಿಲ್ಲ, ನಡೆಯುವ ಕೆಟ್ಟ ಒಳ್ಳೆ ಯ ಘಟನೆಗೆ ದೈವ ಕಾರಣ ಅಂದುಕೊಂಡಿದ್ದೇನೆ. ನನಗೆ ಸಮಾಧಾನ ತಿಳಿಸಿ – ಎಂದು ‘ಅರಳಿಮರ’ ಓದುಗರೊಬ್ಬರು ಸಂದೇಶ ಕಳುಹಿಸಿದ್ದಾರೆ.
ಎಲ್ಲಕ್ಕಿಂತ ಮೊದಲು, ದೇವರು ಅನ್ನುವ ಅಸ್ತಿತ್ವ ಒಂದಿದೆ ಮತ್ತು ಆ ದೇವರು ಪುರುಷ (ಏಕೆಂದರೆ, ಸಂಬೋಧನೆ ಬಹುತೇಕವಾಗಿ ಪುಲ್ಲಿಂಗದಲ್ಲೇ ಇರುತ್ತದೆ) ಅನ್ನುವ ಸಂಪೂರ್ಣ ನಂಬಿಕೆಯೊಂದಿಗೆ, ಈ ಚರ್ಚೆ ಆರಂಭಿಸೋಣ. ಹಾಗೂ ಈ ಪ್ರಶ್ನೆ ಹಿಂದೂ ಧಾರ್ಮಿಕ ಹಿನ್ನೆಲೆಯಿಂದ ಬಂದಿರುವುದರಿಂದ, ಅದಕ್ಕೆ ತಕ್ಕಂತೆ ರೆಫರೆನ್ಸ್ ಇರುತ್ತದೆ.
ಈಗ; ಈ ದೇವರು, “ಜನರಿಗೆ ಕಷ್ಟ ಸುಖಗಳನ್ನು ಕೊಡುವವನು ನಾನೇ” ಎಂದು ಯಾವಾಗ ಹೇಳಿದ್ದಾನೆ ಮತ್ತು ಎಲ್ಲಿ ಹೇಳಿದ್ದಾನೆ?
ದೇವರು ಕಷ್ಟ ಸುಖಗಳ ಲೌಕಿಕ ಮಾತಾಡುವ ಉಲ್ಲೇಖ ಬರುವುದು ಪುರಾಣ ಮತ್ತು ಅವುಗಳಿಂದೀಚೆ. ವೇದೋಪನಿಷತ್ತುಗಳಲ್ಲಿ ಋಷಿಗಳೇ ಮಾತಾಡುತ್ತಾರೆ. ಅದು ಬಿಟ್ಟರೆ ದೇವತೆಗಳ ಪರಸ್ಪರ ಸಂಭಾಷಣೆ ಕೆಲವು ಕಡೆ ಬರುತ್ತವೆ. ಅವುಗಳ ಹೊರತಾಗಿ ದೇವರುಗಳ ಮಾತಿಲ್ಲ.
ಪುರಾಣಗಳು ಬಹುತೇಕ ಕಥೆಗಳು. ರಾಮಾಯಣ – ಮಹಾಭಾರತಗಳು ಕೂಡಾ. ಆದ್ದರಿಂದ, ಅಲ್ಲಿ ದೇವರ ಹೇಳಿಕೆಯನ್ನು ಕೋಟ್ ಮಾಡಲಾಗುವುದಿಲ್ಲ. ಹಾಗೊಮ್ಮೆ ಮಾಡುವುದೇ ಆದರೆ, ಮಹಾಭಾರತದಲ್ಲಿ ಸೇರಿಸಲಾಗಿರುವ, ಕುರುಕ್ಷೇತ್ರಕ್ಕಿಂತಲೂ ಮೊದಲೇ ಭಗವಂತನಿಂದ ಹೇಳಲ್ಲಪಟ್ಟಿತ್ತು ಅನ್ನಲಾಗುವ ಭಗವದ್ಗೀತೆಯನ್ನು ಪ್ರಮಾಣವಾಗಿ ತೆಗೆದುಕೊಳ್ಳಬಹುದು.
ಆದ್ದರಿಂದ, ನೇರವಾಗಿ ಭಗವಂತನ ಹೇಳಿಕೆಗಳು ಎಂದೇನಾದರೂ ಇದ್ದರೆ, ಅದು ಭಗವದ್ಗೀತೆ ಮಾತ್ರ.
ಭಗವದ್ಗೀತೆಯಲ್ಲಿ ದೇವರು ಬಹಳ ಸ್ಪಷ್ಟವಾಗಿ “ನಿಮ್ಮ ನಿಮ್ಮ ಕಷ್ಟ ಸುಖಗಳಿಗೆ ನಿಮ್ಮ ಕರ್ಮಗಳೇ ಕಾರಣ. ನೀವು ಏನನ್ನು ಮಾಡುತ್ತೀರೋ, ಯಾವ ಮಾರ್ಗ ಅನುಸರಿಸಿ ಮಾಡುತ್ತೀರೋ ಅದರಂತೆ ಫಲ ಪಡೆಯುತ್ತೀರಿ” ಎಂದು ಹೇಳಿದ್ದಾನೆ. ಅವನ್ನೆಲ್ಲ ನಾನು ಕೊಡುತ್ತೇನೆ ಎಂದು ಅವನು ಅಪ್ಪಿತಪ್ಪಿಯೂ ಹೇಳಿಲ್ಲ…. ಅಲ್ಲವೆ?
ಹೀಗಿರುವಾಗ, ನಾವು ಕಷ್ಟ ಮಾತ್ರವಲ್ಲ, ಸುಖವನ್ನೂ ದೇವರ ತಲೆಯ ಮೇಲೆ ಹೊರಿಸಿ, ಅವನು ಕೊಟ್ಟ ಎಂದುಬಿಡುತ್ತೇವೆ. ಆದ್ದರಿಂದ, ತಪ್ಪು ದೇವರದ್ದಲ್ಲ, ನಮ್ಮದು. ಸುಖವನ್ನು ನಾವು ದೇವರ ಮೇಲೆ ಹೊರಿಸೋದು, ಅದನ್ನು ನಿಭಾಯಿಸುವ ಮತ್ತು ಕಾಯ್ದುಕೊಳ್ಳುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಅಷ್ಟೆ. ಹಾಗೆಯೇ ಕಷ್ಟವನ್ನು ದೇವರ ಮೇಲೆ ಹೊರಿಸೋದು, ಅದರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು!
ಆದ್ದರಿಂದ, ದುಃಖಗಳಿಗೆ ದೇವರನ್ನು ದೂರಬೇಡಿ. ನಾವೆಲ್ಲರೂ ಮೂಲವನ್ನು ಮರೆತ ದೇವರುಗಳೇ. ಮರೆವಿನಿಂದ ಮನುಷ್ಯರಾಗಿ ಬಾಳುತ್ತಿದ್ದೇವೆ. ನಾವು ಮನಸ್ಸು ಮಾಡಿದರೆ ನಮ್ಮ ಸುಖವನ್ನು ನಾವೇ ಸೃಷ್ಟಿಸಿಕೊಳ್ಳಬಹುದು. ದೇವರನ್ನು ದೂರಿದರೆ, ನಮ್ಮನ್ನೇ ನಾವು ದೂರಿಕೊಂಡಂತೆ. ಅಷ್ಟೇ…
ಕಷ್ಟ ಮಾತ್ರವಲ್ಲ, ಸುಖವನ್ನು ಕೊಡುವುದೂ ದೇವರೇ ಅನ್ನುವ ಹೇಳಿಕೆಯೇ ಒಂದು ಪಲಾಯನವಾದ. ದೈವೇಚ್ಛೆ ಅಥವಾ ವಿಧಿ ಬರಹ ಅನ್ನೋದು ಬಸ್ ಇದ್ದ ಹಾಗೆ. ನೀವು ಎಲ್ಲಿಗೆ. ಯಾವಾಗ, ಯಾರೊಂದಿಗೆ, ಯಾವ ದಾರಿಯಲ್ಲಿ ಹೋಗಬೇಕು ಅನ್ನೋದನ್ನು ಅದು ನಿರ್ಧರಿಸುತ್ತದೆ. ಅದರ ಸಂಚಾರದಲ್ಲಿ ಬದಲಾವಣೆ ಇಲ್ಲ. ನೀವು ಕೇವಲ ಪ್ರಯಾಣಿಕರಾಗಿದ್ದೀರಿ. ಆದರೆ, ಬಸ್ಸಿನೊಳಗೆ ನೀವು ಹೇಗೆ ಕೂರುತ್ತೀರಿ… ಪಕ್ಕದವರನ್ನು ಛೇಡಿಸಿ ಕೆನ್ನೆಗೆ ಹೊಡೆಸಿಕೊಳ್ಳುತ್ತೀರೋ, ಸಂಭಾವಿತರಂತೆ ಇರುತ್ತೀರೋ; ಪಕ್ಕದಲ್ಲಿ ಕುಳಿತವರು ನಿಮಗೆ ತಿಂಡಿ ಕೊಡುತ್ತಾರೋ ಬಿಡುತ್ತಾರೋ; ನೀವು ಮತ್ತೊಬ್ಬರಿಗೆ ಸೀಟ್ ಬಿಟ್ಟುಕೊಡುತ್ತೀರೋ ಅಥವಾ ಕಸಿದುಕೊಳ್ತೀರೋ: ತಲೆ ಹರಟೆ ಮಾಡುತ್ತೀರೋ ಗಂಭೀರವಾಗಿರುತ್ತೀರೋ; ನಿಲ್ದಾಣದವರೆಗೆ ಹೋಗುತ್ತೀರೋ ನಡುವಲ್ಲೇ ಇಳಿದುಬಿಡುತ್ತೀರೋ; ಹಾಗೆ ಇಳಿಯುವಾಗ ಕಾಳಜಿ ವಹಿಸುತ್ತೀರೋ ಅಪಘಾತಕ್ಕೆ ತುತ್ತಾಗುತ್ತೀರೋ – ಇವೆಲ್ಲ ನಿಮ್ಮ ಆಯ್ಕೆ.
ನಿಮ್ಮ ಆಯ್ಕೆಗಳೇ ನಿಮ್ಮ ಕರ್ಮವನ್ನು ನಿರ್ಧರಿಸುತ್ತವೆ ಮತ್ತು ಕರ್ಮಗಳು ನಿಮ್ಮ ಫಲವನ್ನು.
ದೈವೇಚ್ಛೆ ಒಟ್ಟು ಬದುಕನ್ನು ನಡೆಸುವಂಥದ್ದು. ಅದು ನಮ್ಮ ಪ್ರತಿದಿನದ ಆಯ್ಕೆಗಳನ್ನು ಆಯ್ದುಕೊಡುವಂಥದ್ದಲ್ಲ. ಅದು ನದಿಯ ಪಾತ್ರದಂತೆ. ನದಿ ಅಲ್ಲಿ ಹುಟ್ಟಿ, ಇಲ್ಲಿ ಸಮುದ್ರ ಸೇರಬೇಕು ಅನ್ನುವ ನಿರ್ಧಾರವದು. ಆದರೆ, ಆ ನದಿ ನಡುವಲ್ಲಿ ಉಕ್ಕಿ ಹರಿಯುತ್ತದೋ, ಬರ ಬೀಳುತ್ತದೋ; ಜಲಪಾತವಾಗುತ್ತದೋ, ಸುಮ್ಮನೆ ಹರಿಯುತ್ತದೋ; ಅಣೆಕಟ್ಟು ಕಟ್ಟಿಸಿಕೊಳ್ತದೋ ಸೇತುವೆ ಕಟ್ಟಿಸಿಕೊಳ್ತದೋ… ಇವೆಲ್ಲ ದೇಶಕಾಲಕ್ಕೆ ಹೊಂದಿಕೊಂಡ ಅದರ ಕರ್ಮ.