ಕಾಯಬಲ್ಲವನೂ ಅವನೇ, ಕೊಲ್ಲಬಲ್ಲವನೂ ಅವನೇ… : ದೃಷ್ಟಾಂತ ಕಥೆ

ಪಾಂಡವರ ಮಾತುಗಳನ್ನು ಕೇಳುತ್ತಾ ಕೃಷ್ಣ ಒಳಗೊಳಗೆ ನಕ್ಕ. ಅವನ ತುಟಿಯ ಕೊಂಕು ಕಂಡ ಯುಧಿಷ್ಟಿರನಿಗೆ ಅಚ್ಚರಿ. ಇದರಲ್ಲೇನೋ ಮರ್ಮವಿದೆ ಎಂದು ಊಹಿಸಿದವನೇ, “ಕೃಷ್ಣಾ, ಯಾಕೆ ನಗುತ್ತಿದ್ದೀ? ನಮ್ಮಿಂದೇನಾದರೂ ತಪ್ಪಾಯಿತೇ?” ಎಂದು ಕೇಳಿದ.

“ಅಡವಿಯೊಳಗಾಡುವ ಮೃಗ ಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿತ್ತವರು ಯಾರೊ
ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನು ಇದಕೆ ಸಂಶಯವಿಲ್ಲ”
ಎಂದು ಹಾಡಿದ್ದಾರೆ ಕನಕದಾಸರು.

ಪಾಂಡವರ ಒಂದು ದೃಷ್ಟಾಂತದ ಮೂಲಕ ದಾಸರ ಈ ಪದಗಳ ಮರ್ಮವನ್ನು ಅರಿಯೋಣ.

ಕುರುಕ್ಷೇತ್ರ ಯುದ್ಧ ಕಾಲದಲ್ಲಿ ಹೀಗಾಯ್ತು. ಕೌರವ – ಪಾಂಡವರ ನಡುವೆ ಬಿರುಸಿನ ಯುದ್ಧ ನಡೆಯುತ್ತಿತ್ತು. ಆ ಧರ್ಮಭೂಮಿಯ ರಣಾಂಗಣದ ತುದಿಯಲ್ಲೊಂದು ಕದಂಬ ವೃಕ್ಷವಿತ್ತು. ಅಲ್ಲೊಂದು ಹಕ್ಕಿ ಗೂಡು ಕಟ್ಟಿ ಮೊಟ್ಟೆಗಳನ್ನಿಟ್ಟು ಕಾವು ಕೂರುತ್ತಿತ್ತು. ಯುದ್ಧೋನ್ಮಾದದ ಕೂಗು, ಕಿವಿಗಡಚಿಕ್ಕುವ ಆನೆಗಳ ಘೀಳು, ಕುದುರೆಗಳ ಹೇಷಾರವ ಗದ್ದಲಗಳಿಗೆ ಹೆದರಿ ಮೊಟ್ಟೆಗಳನ್ನು ತನ್ನ ರೆಕ್ಕೆಗಳಲ್ಲಿ ಬಚ್ಚಿಟ್ಟುಕೊಂಡು ಕಂಪಿಸುತ್ತ ಕಾಯುತ್ತಿತ್ತು.

ಇನ್ನೂ ಮೊಟ್ಟೆಗಳು ಒಡೆದಿರಲಿಲ್ಲ. ತಾಯಿ ಹಕ್ಕಿ ಕಾವು ಕುಳಿತಿರುವಾಗಲೇ ಯುದ್ಧದಲ್ಲಿ ಗಾಯಗೊಂಡ ಮದ್ದಾನೆಯೊಂದು ಅದು ಕುಳಿತಿದ್ದ ಕದಂಬ ವೃಕ್ಷಕ್ಕೆ ಢಿಕ್ಕಿ ಹೊಡೆಯಿತು. ಒಂದೇ ಏಟಿಗೆ ಮರ ಕೆಳಗುರುಳಿತು.

ಅದಾಗಿ ಒಂದು ವಾರ ಸುಮಾರಿಗೆ ಯುದ್ಧ ಕೊನೆಯಾಯ್ತು. ಪಾಂಡವರು ಗೆದ್ದರು. ಕೃಷ್ಣನೊಡನೆ ರಣಾಂಗಣದಲ್ಲಿ ಓಡಾಡುತ್ತಾ ಪಾಂಡವರು “ನಾವು ಇವರನ್ನು ಕೊಂದೆವು. ಅವರು ನಮ್ಮಿಂದ ಹತರಾದರು” ಎಂದು ಲೆಕ್ಕ ಹಾಕುತ್ತಿದ್ದರು. ನಾನು ಅದನ್ನು ಧ್ವಂಸ ಮಾಡಿದೆ, ಇದನ್ನು ನುಚ್ಚುನೂರು ಮಾಡಿದೆ ಎಂದು ಕೊಚ್ಚಿಕೊಳ್ಳುತ್ತಿದ್ದರು.

ಅವರ ಮಾತುಗಳನ್ನು ಕೇಳುತ್ತಾ ಕೃಷ್ಣ ಒಳಗೊಳಗೆ ನಕ್ಕ. ಅವನ ತುಟಿಯ ಕೊಂಕು ಕಂಡ ಯುಧಿಷ್ಟಿರನಿಗೆ ಅಚ್ಚರಿ. ಇದರಲ್ಲೇನೋ ಮರ್ಮವಿದೆ ಎಂದು ಊಹಿಸಿದವನೇ, “ಕೃಷ್ಣಾ, ಯಾಕೆ ನಗುತ್ತಿದ್ದೀ? ನಮ್ಮಿಂದೇನಾದರೂ ತಪ್ಪಾಯಿತೇ?” ಎಂದು ಕೇಳಿದ.

ಕೃಷ್ಣ ಮುಗುಳ್ನಕ್ಕು ಅರ್ಜುನನ ಕಡೆ ತಿರುಗಿ, “ಪಾರ್ಥ, ಅದೋ ನೆಲದ ಸತ್ತು ಬಿದ್ದಿರುವ ಆನೆಯ ಕೊರಳ ಗಂಟೆಯನ್ನು ಮೇಲಕ್ಕೆತ್ತು ಅಂದ.

ಪಾರ್ಥ ಇದೇನಿರಬಹುದು ಅಂದುಕೊಳ್ಳುತ್ತಾ ಆನೆಯ ಕೊರಳ ಗಂಟೆಯನ್ನು ಮೇಲಕ್ಕೆತ್ತಿದ. ಎತ್ತುತ್ತಲೇ ಅದರ ಅಡಿಯಿಂದ ಪುಟ್ಟ ಹಕ್ಕಿ ಮರಿಗಳು ಕಷ್ಟಪಟ್ಟು ರೆಕ್ಕೆ ಬಡಿಯುತ್ತಾ ತಾಯಿ ಹಕ್ಕಿಯೊಡನೆ ಮೇಲಕ್ಕೆ ಹಾರಿದವು. ಪಾಂಡವರು ಅವಕ್ಕಾಗಿ ನೋಡನೋಡುತ್ತಲೇ ಮತ್ತೊಂದು ಮರದ ಕೊಂಬೆಯ ಮೇಲೆ ಕುಳಿತು ಕೃಷ್ಣನೆಡೆಗೆ ನೋಡಿದವು.

ಕೃಷ್ಣ ಪಾಂಡವರನ್ನು ಉದ್ದೇಶಿಸಿ ಕೇಳಿದ, “ಆ ತಾಯಿಹಕ್ಕಿಯನ್ನು ನೋಡಿ. ಹೇಗೆ ತನ್ನ ಮರಿಗಳನ್ನು ಕಾಪಾಡಿಕೊಂಡಿದೆ! ಈ ಯುದ್ಧಭೂಮಿಯಲ್ಲೂ ಅವನ್ನು ಸುರಕ್ಷಿತವಾಗಿರಿಸಿದೆ. ನೀವು ಅವರನ್ನು ಕೊಂದೆ, ಇವುಗಳನ್ನು ನಾಶ ಮಾಡಿದೆ ಅನ್ನುತ್ತಿದ್ದೀರಿ. ಹೇಳಿ, ನೀವು ಯಾರನ್ನಾದರೂ ಕಾಪಾಡಿದಿರಾ? ಹೇಳಿ, ಆ ಹಕ್ಕಿಗೂ ಅದರ ಮರಿಗಳಿಗೂ ರಕ್ಷೆ ದೊರಕಿದ್ದು ಹೇಗೆ?”

ಕೃಷ್ಣನ ಪ್ರಶ್ನೆ ಪಾಂಡವರು ನಾಚುವಂತೆ ಮಾಡಿತು. ಯುಧಿಷ್ಟಿರ ಕೈಮುಗಿದು ಹೇಳಿದ, “ಯಾರೇನು ಮಾಡಿದರೂ, ಯಾರು ಯಾರನ್ನು ಕೊಂದರೂ ಜೀವಿಯ ಜೀವ ಹೋಗುವುದು ನಿನ್ನ ಆಣತಿಯಿಂದ ಮಾತ್ರ. ನಾವು ಕೊಲ್ಲುತ್ತೇವೆಂದರೂ ಉಳಿಸುವ ಇಚ್ಛೆಯಿದ್ದರೆ ನೀನು ಹೇಗಾದರೂ ಯಾವ ರೂಪದಿಂದಾದರೂ ಜೀವಿಗಳನ್ನು ರಕ್ಷಿಸದೆ ಬಿಡಲಾರೆ. ಕೊಲ್ಲಬಲ್ಲವನೂ ನೀನೇ, ಕಾಯಬಲ್ಲವನೂ ನೀನೇ” ಅಂದ. ಎಲ್ಲ ಸಹೋದರರೂ ಕೃಷ್ಣನಿಗೆ ತಲೆಬಾಗಿ ಅಣ್ಣನ ಮಾತಿಗೆ ಸಹಮತ ತೋರುತ್ತಾ ಕೈಮುಗಿದರು.

(ಸಂಗ್ರಹ ಮತ್ತು ನಿರೂಪಣೆ : ಸಾ.ಹಿರಣ್ಮಯೀ)

Leave a Reply