ಹಾವಿನ ತಲೆ ಮತ್ತು ಬಾಲ : Tea time story

snake2.jpgಹಾವಿನ ಬಾಲದ ಮೂರ್ಖತನದ ಪರಿಣಾಮವೇನಾಯ್ತು ಗೊತ್ತಾ? | ಸಂಗ್ರಹ ಮತ್ತು ಅನುವಾದ: ಅಲಾವಿಕಾ

ಒಂದು ದಿನ ಹಾವಿನ ಬಾಲಕ್ಕೆ ಇದ್ದಕ್ಕಿದ್ದ ಹಾಗೆ ತಲೆಯ ಮೇಲೆ ಮುನಿಸಾಯಿತು. ಯಾವಾಗಲೂ ಅದು ನಿರ್ಧರಿಸುವ ದಿಕ್ಕಿಗೇ ನಾನು ಚಲಿಸಬೇಕಲ್ಲ ಅನ್ನೋದು ಅದರ ದುಮ್ಮಾನ.
ಹೇಳಿತು, “ಇನ್ಮೇಲೆ ನಾನೇ ಚಲನೆಯ ದಿಕ್ಕು ನಿರ್ಧರಿಸ್ತೀನಿ. ನೀನು ನನ್ನನ್ನು ಹಿಂಬಾಲಿಸು”

ಹಾವಿನ ತಲೆ ನಕ್ಕುಬಿಟ್ಟಿತು. “ಅವೆಲ್ಲ ಆಗೋದಿಲ್ಲ. ಯಾವ ಹಾವಿನ ತಲೆಯೂ ಬಾಲ ಕೊಡೊಯ್ದಲ್ಲಿ ಹೋಗೋದಿಲ್ಲ. ಸುಮ್ಮನೆ ಬಾ” ಅಂದಿತು.

ಹಾವಿನ ಬಾಲಕ್ಕೆ ಸಿಟ್ಟು ಬಂದು. “ಒಂದು ಕೈ ನೋಡೇಬಿಡ್ತೀನಿ” ಅಂತ ತೀರ್ಮಾನಿಸಿತು. ಮುಂದೆ ಹರಿಯುತ್ತ ಇರುವಾಗ ದಾರಿಯಲ್ಲಿ ಒಂದು ಗಿಡಕ್ಕೆ ಹಾವಿನ ಬಾಲ ತನ್ನನ್ನು ಸುತ್ತಿಕೊಂಡುಬಿಟ್ಟಿತು. ತಲೆಯ ಭಾಗ ಎಷ್ಟು ಎಳೆದರೂ ಅದು ಬಿಡಲೊಲ್ಲದು.
ಹಾವಿನ ತಲೆ ಮುಂದಕ್ಕೆ ಎಳೆಯೋದು, ಬಾಲ ಹಿಂದಕ್ಕೆ ಎಳೆಯೋದು….

ಕೊನೆಗೂ ತಲೆಯ ಭಾಗ ಸೋತು, “ಆಗಲಿ… ಒಂದು ಸಲ ನೀನು, ಒಂದು ಸಲ ನಾನು…” ಎಂದು ಒಪ್ಪಂದ ಮಾಡಿಕೊಂಡಿತು.
ಕೊನೆಗೂ ಗೆದ್ದ ಠೀವಿಯಲ್ಲಿ ಹಾವಿನ ಬಾಲ ಗಿಡವನ್ನು ಬಿಟ್ಟು, “ನನ್ನನ್ನು ಹಿಂಬಾಲಿಸು” ಎಂದು ತನಗೆ ಇಷ್ಟಬಂದಲ್ಲಿ ಹರಿಯತೊಡಗಿತು.

ಆದರೆ ಬಾಲಕ್ಕೆ ಕಣ್ಣೆಲ್ಲಿ? ಅದು ಒಟ್ಟಾರೆ ಚಲಿಸುತ್ತಿತ್ತು…. ಹರಿಯುತ್ತ ಹರಿಯುತ್ತ ಕಾಡಿನ ಅಂಚಿಲ್ಲಿ ಒಂದು ಕಡೆ ಕಸ ಒಡ್ಡಿ ಹೊತ್ತಿಸಿದ್ದ ಬೆಂಕಿಯ ಬಳಿ ಬಂತು. ಅದರ ಬಿಸಿ ತಗುಲಿ, ಬೆಂಕಿ ಇದೆ ಎಂದು ಗೊತ್ತಾಗುವ ಹೊತ್ತಿಗೆ, ಅದಾಗಲೇ ಸುಟ್ಟು ಬೇಯತೊಡಗಿತ್ತು.

ಹಾವಿನ ಬಾಲದ ಮೂರ್ಖತನಕ್ಕೆ ತಲೆಯೂ ಬೆಲೆ ತೆರಬೇಕಾಯ್ತು.

 

Leave a Reply