ನಾವು ನಮ್ಮನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ, ನಮಗೇನು ಬೇಕೆಂದು ಅರಿಯುವ ನಿಟ್ಟಿನಲ್ಲಿ ರಚ್ಚೆ ಹಿಡಿದು ಎಲ್ಲವನ್ನೂ ದೂರ ಮಾಡಿಕೊಳ್ಳುತ್ತೇವಲ್ಲ… ಆಗ ಆವರಿಸುವ ಹತಾಶೆಯಲ್ಲಿ ನಮ್ಮನ್ನು ಕಳೆದುಕೊಳ್ಳಬಾರದು ~ ಅಲಾವಿಕಾ
ಬಹಳ ಬಾರಿ, ಕೋಣೆಯ ತುಂಬ ಆಟಿಕೆ ಹರಡಿಬಿದ್ದಿದ್ದರೂ ರಚ್ಚೆ ಹಿಡಿದ ಮಗುವಿನಂತೆ ನಾವು ಆಡುತ್ತೇವೆ. ಸಮಾಧಾನಪಡಿಸಲು ಮನೆ ಮಂದಿಯೆಲ್ಲ ಸುತ್ತುವರಿದಷ್ಟೂ ಮಗುವಿನ ಹಠ ಜೋರಾಗುತ್ತದೆ. ಯಾರು ಏನು ಕೈಗೆ ಕೊಟ್ಟರೂ ಬಿಸಾಡುತ್ತದೆ. ಸುತ್ತಲಿನವರು ಅದಕ್ಕೆ ಹಸಿವಾಗಿರಬಹುದು ಎಂದು ಉಣಿಸಲು ಹೋಗುತ್ತಾರೆ. ಸೆಖೆಯಾಗಿರಬಹುದು ಎಂದು ಅಂಗಿ ಬಿಚ್ಚುತ್ತಾರೆ. ಹುಳ ಕಡಿಯಿತೇನೋ ಎಂದು ಕೊಬ್ಬರಿ ಎಣ್ಣೆ ಸವರುತ್ತಾರೆ. ಕೊನೆಗೆ ಎಲ್ಲವೂ ಸಾಕಾಗಿ ‘ಗಾಳಿ ಸೋಕಿರಬೇಕು’ ಎಂದು ಬ್ರಾಂದಿ ಬಾಟಲಿಯಲ್ಲಿ ಮುಳುಗಿಸಿಟ್ಟ ಸದಾಪಿನ ಸೊಪ್ಪು ತೆಗೆದು ಅಂಗಾಲಿಗೆ ಉಜ್ಜುತ್ತಾರೆ.
ವಾಸ್ತವದಲ್ಲಿ ಮಗು ಯಾಕೆ ಅಳುತ್ತಿದೆ? ಅದಕ್ಕೇನು ಬೇಕು? ಅದಕ್ಕೇನು ಸಮಸ್ಯೆಯಾಗಿದೆ?
ಮಗು ಹಠ ಹಿಡಿದಿದೆ, ಯಾವುದಕ್ಕೂ ಸುಮ್ಮನಾಗುತ್ತಿಲ್ಲ ಎಂದರೆ ಅಲ್ಲಿ ಎರಡೇ ಕಾರಣ. ಮೊದಲನೆಯದು: ದೇಹದೊಳಗೆ ಏನೋ ಆರೋಗ್ಯದ ಸಮಸ್ಯೆಯಾಗಿರುತ್ತದೆ. ಅದನ್ನು ಬಿಟ್ಟುಬಿಡೋಣ. ಆರೋಗ್ಯ ಇಲ್ಲಿ ಚರ್ಚೆಯ ವಿಷಯವಲ್ಲ. ಎರಡನೆಯದು: ಮಗುವಿಗೆ ಏನೂ ಬೇಕಾಗಿಯೇ ಇಲ್ಲ! ಆದರೆ, ‘ಬೇಕು’ಗಳಿಂದ ತಪ್ಪಿಸಿಕೊಳ್ಳಲಾಗದಂತೆ ಅದರ ಸುತ್ತ ಆಟಿಕೆಗಳು ಹರಡಿಕೊಂಡಿವೆ. ಮಗುವಿಗೆ ಕೈಗೆಟಕುವ ಅಥವಾ ಯಾರಾದರೂ ತಂದು ಕೈಲಿಡುವ ಯಾವುದೂ ಬೇಕಾಗಿಲ್ಲ. ಅದಕ್ಕೆ ಸ್ವತಃ ತಾನೇ ಏನನ್ನೋ ಕಂಡುಕೊಳ್ಳಬೇಕಿದೆ. ಒಟ್ಟಾರೆ, “ಸುಲಭದಲ್ಲಿ ಸಿಗುವ” ಯಾವುದೂ ಅದಕ್ಕೆ ಬೇಕಾಗಿಲ್ಲ. ಅದಕ್ಕೇ ಅದು ಕೊಟ್ಟಿದ್ದೆಲ್ಲ ಎಸೆದು ರಚ್ಚೆ ಹಿಡಿಯುತ್ತಿದೆ.
ನಮ್ಮ ವಿಷಯಕ್ಕೆ ಮರಳೋಣ. ನಾವೂ ಹೀಗೆ ಮಾಡುತ್ತೀವಲ್ಲವೆ? ಅವಕಾಶಗಳು ಸಿಕ್ಕಿರುತ್ತವೆ, ಜನಗಳು ಸುತ್ತ ಇರುತ್ತಾರೆ, ಚೂರು ಕಿನಿಸಾದರೂ ಸಹಾಯಕ್ಕೆ ಧಾವಿಸುವ ಮಂದಿ ಇದ್ದಾರೆ, ಉಂಡುಟ್ಟು ತಕ್ಕಮಟ್ಟಿಗೆ ಇರುವಷ್ಟಾದರೂ ದುಡಿಮೆಯಿದೆ. ಆದರೂ ಒಳಗಿನ ಪ್ರತಿ ಕಣ ರಚ್ಚೆ ಹಿಡಿದಂತೆ ಕಿರುಚುತ್ತಾ ಇರುತ್ತದೆ. ತನಗೇನೋ ಬೇಕು ಎಂದು ಅಳುತ್ತಿರುತ್ತದೆ. ಅದು ಏನೆಂದು ಕಂಡುಕೊಳ್ಳಲಾಗುತ್ತಿಲ್ಲ. ಈ ಸಿಟ್ಟಿಗೆ ಸಿಕ್ಕ ಅವಕಾಶ, ಜೊತೆಯಾದ ಜನರು, ಇರುವ ಸೌಲಭ್ಯಗಳೆಲ್ಲವನ್ನೂ ದೂರ ಮಾಡುತ್ತಾ ಹೋಗುತ್ತೇವೆ. ಅಕ್ಷರಶಃ ಏಕಾಂಗಿಯಾಗುತ್ತೇವೆ. ಈ ಏಕಾಕಿತನದ ನೋವನ್ನೆ ಸುಖಿಸುತ್ತ, ವಾಸ್ತವದಲ್ಲಿ ಇದು ಸುಖವೋ ನೋವೋ ಎಂದು ಗೊತ್ತಾಗದೆ ಗಲಿಬಿಲಿಗೊಳ್ಳುತ್ತೇವೆ.
ಇದಕ್ಕೆ ಪರಿಹಾರವೇನು?
ಅದನ್ನ ಹೇಳುವುದು ಅಷ್ಟು ಸುಲಭವಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಆದ್ಯತೆಗಳು ಭಿನ್ನ. ಹಿನ್ನೆಲೆ, ಆಲೋಚನಾಕ್ರಮ ಈ ಎಲ್ಲದರ ಮೇಲೆ ಪರಿಹಾರ ಹೇಳಬಹುದೇ ಹೊರತು ಸಾರ್ವತ್ರಿಕವಾಗಿ ಏನನ್ನೂ ಹೇಳಲಾಗದು.
ಆದರೆ ಒಂದು ಎಚ್ಚರಿಕೆಯನ್ನಂತೂ ನೀಡಬಹುದು.
ನಾವು ನಮ್ಮನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ, ನಮಗೇನು ಬೇಕೆಂದು ಅರಿಯುವ ನಿಟ್ಟಿನಲ್ಲಿ ರಚ್ಚೆ ಹಿಡಿದು ಎಲ್ಲವನ್ನೂ ದೂರ ಮಾಡಿಕೊಳ್ಳುತ್ತೇವಲ್ಲ… ಆಗ ಆವರಿಸುವ ಹತಾಶೆಯಲ್ಲಿ ನಮ್ಮನ್ನು ಕಳೆದುಕೊಳ್ಳಬಾರದು.
ಬಹಳಷ್ಟು ಜನ ಈ ತಪ್ಪು ಮಾಡುತ್ತಾರೆ. ಸಮಸ್ಯೆಯಾಗುವುದು ಇಲ್ಲೇ. ಎಲ್ಲವನ್ನೂ ಕೊಡವಿಕೊಳ್ಳುವುದು ಹುಡುಕಾಟದ ಕೊನೆಯ ಹಂತದ ಒಂದು ಪ್ರಕ್ರಿಯೆ ಮಾತ್ರ. ಅದನ್ನು ನಾವು ನಮ್ಮ ಸಮ್ಮತಿಯಿಂದಲೇ, ಮುಂದಿನ ನಡೆಯ ಭಾಗವಾಗಿಯೇ ಮಾಡಿರುತ್ತೇವೆ. ಆದರೆ ಮತ್ತೆ ನಾವೇ ಅದಕ್ಕೆ ದುಃಖಿಸುತ್ತಾ, ಸ್ವಾನುಕಂಪದಲ್ಲಿ ಹಣ್ಣಾಗಿಹೋದರೆ ಕೊಳೆಯುವುದಷ್ಟೆ ಬಾಕಿ. ಖಾಲಿಯಾಗದೆ ಹೊಸತನ್ನು ತುಂಬಿಕೊಳ್ಳಲಾಗದು ಅನ್ನುವ ಕಾರಣಕ್ಕೆ ನಾವು ಎಲ್ಲ ಸವಲತ್ತು ಮತ್ತು ಸಂಬಂಧಗಳನ್ನು ದೂರ ಮಾಡಿಕೊಳ್ಳುವುದಷ್ಟೆ. ಆಗ ಉಂಟಾಗುವ ಖಾಲಿಯಲ್ಲಿ ನಾವು ನಮ್ಮನ್ನು ಕಂಡುಕೊಳ್ಳಬೇಕು. ಅದನ್ನು ಮೂರ್ತವಾಗಿ ಪಡೆಯಲು ಪ್ರಯತ್ನದ ಬೀಜ ಬಿತ್ತಬೇಕು. ಅದರ ಬದಲು ಕಳೆದುಕೊಂಡೆ ಎಂದು ಎದೆ ಬಡಿದುಕೊಂಡರೆ ಚೂರೂ ಪ್ರಯೋಜನವಿಲ್ಲ.
ಆದ್ದರಿಂದ, ಧೃತಿಗೆಡಬೇಡಿ. ಗೊಂದಲದ ಈ ಹಂತವನ್ನು ಎಚ್ಚರಿಕೆಯಿಂದ ದಾಟಿಬಿಡಿ. ನಿಮಗೆ ನೀವು ಕಾಣಿಸುತ್ತೀರಿ. ನಿಮಗೇನು ಬೇಕೆಂಬುದು ಸ್ಪಷ್ಟವಾಗುತ್ತದೆ. ಅದನ್ನು ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಶುರುವಿಡಿ. ಆಗ ಮೂಡುವ ನೆಮ್ಮದಿಯಲ್ಲಿ ನೀವು ಬಿಟ್ಟುಕೊಟ್ಟ ಎಲ್ಲ ಸಂಬಂಧಗಳೂ ಸವಲತ್ತುಗಳೂ ಪುನಃ ಬಂದು ನಿಮ್ಮನ್ನು ಕೂಡಿಕೊಳ್ಳುತ್ತವೆ.