ಶರ್ಮಿಷ್ಠೆ : ನೆರೆಯೊಂದಿಗೆ ಹರಿದವಳ ಕಥೆ

ಬಂಡಾಯ ಏಳುವುದೆಂದರೆ ಸತ್ಯವನ್ನು ನಿರಾಕರಿಸುವುದಲ್ಲ. ಪ್ರವಾಹದ ವಿರುದ್ಧ ಈಜಬೇಕಿರುವುದು, ವಿರುದ್ಧ ದಿಕ್ಕಿನಲ್ಲಿ ಗುರಿ ಇದೆಯೆಂದಾಗ ಮಾತ್ರವೇ ಹೊರತು ಕೈಗಳಲ್ಲಿ ಕಸುವಿದೆ ಎಂದಲ್ಲ. ಅನಗತ್ಯವಾಗಿ ವಿರುದ್ಧ ದಿಕ್ಕಿನ ದಾರಿಯಲ್ಲಿ – ಯಾವುದು ನಮಗಾಗಿ ಇಲ್ಲವೋ, ಯಾವುದು ಸುಳ್ಳೊ ಆ ದಾರಿಯಲ್ಲಿ ನಡೆಯುವ ರಿಸ್ಕ್ ಮೂರ್ಖತನ ಎನ್ನಿಸಿಕೊಳ್ಳುತ್ತದೆ ~ ಚೇತನಾ ತೀರ್ಥಹಳ್ಳಿ

Sharmi

ನಿಯತಿಯ ಆಟಕ್ಕೆ ನಿದರ್ಶನವಾಗಿ ಹಲವಾರು ಚಿತ್ರಣಗಳು ನಮ್ಮೆದುರಿಗಿವೆ. ಪಟ್ಟಾಭಿಷೇಕಕ್ಕೆ ಸಿದ್ಧನಾಗಿ ಮಂಗಳ ಸ್ನಾನದಲ್ಲಿದ್ದ ರಾಮ, ನಾರುಮಡಿಯುಟ್ಟಿದ್ದು; ಪಣ ಗೆದ್ದ ಅರ್ಜುನನಿಗೆ ಮಾಲೆ ಹಾಕಿದ ದ್ರೌಪದಿ ಉಳಿದ ನಾಲ್ವರನ್ನೂ ವರಿಸಬೇಕಾಗಿ ಬಂದಿದ್ದು; ಅಂಬೆ ತನ್ನ ಪ್ರೇಮಿಯನ್ನು ತೊರೆದು ಭೀಷ್ಮನ ಹಿಂದೆ ಹೋಗುವಂಥ ಸನ್ನಿವೇಶ ಸೃಷ್ಟಿಯಾಗಿದ್ದು – ಇವೆಲ್ಲ ಪೌರಾಣಿಕ ಸಂದರ್ಭಗಳು. ನಮ್ಮ ಇತಿಹಾಸವೂ ಕೂಡ ಇಂತಹ ಅದೆಷ್ಟೋ ಸಂಗತಿಗಳನ್ನು ತನ್ನ ಪುಟಗಳಲ್ಲಿ ದಾಖಲಿಸಿದೆ. ಆಧುನಿಕ ಕಾಲಘಟ್ಟದಲ್ಲೂ ಇಂತಹ ಅದೆಷ್ಟೋ ಉದಾಹರಣೆಗಳನ್ನು ನಾವು ಕಾಣಬಹುದು.

ಅನಿರೀಕ್ಷಿತ ತಿರುವುಗಳು ವ್ಯಕ್ತಿಯ ಬದುಕನ್ನೇ ಬದಲಿಸುವಂಥವು. ಮತ್ತೆ ಕೆಲವರು ಅಂಥ ತಿರುವುಗಳನ್ನು ತಾವೇ ತಂದುಕೊಳ್ಳುತ್ತಾರೆ. ಯಾರ ಒಳಗೊಂದು ಸಾಹಸದ ಕಿಡಿ ಇರುತ್ತದೆಯೋ, ಬದುಕು ಚಪ್ಪರಿಸುವ ಉತ್ಸಾಹ ಇರುತ್ತದೆಯೋ ಅವರು ಮಾತ್ರ ತಮ್ಮ ಕಂಫರ್ಟ್ ಝೋನ್ ಬಿಟ್ಟು ಹೊರಬರುವ ಧೈರ್ಯ ತೋರುತ್ತಾರೆ. ಪ್ರವಾಹದೊಡನೆ ಸಾಗುತ್ತಲೇ ಸಾಧನೆ ಮಾಡಬಲ್ಲವರಾಗಿರುತ್ತಾರೆ.

ತಾನಾಗೇ ಎದುರಾದದ್ದೋ, ನಾವಾಗಿಯೇ ತಂದುಕೊಂಡದ್ದೂ… ಒಟ್ಟಾರೆ ಈ ಹೊರಳುಗಳನ್ನು ನಾವು ಹೇಗೆ ಮುಖಾಮುಖಿಯಾಗುತ್ತೇವೆ, ಹೇಗೆ ಒಳಗೊಳಿಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಯಶಸ್ಸು ನಿರ್ಧಾರಗೊಳ್ಳುತ್ತದೆ. ಶರ್ಮಿಷ್ಠೆಯ ಬದುಕನ್ನು ಈ ಮಾತಿಗೆ ಮುಖಾಮುಖಿಯಾಗಿಸಿ ನೋಡುವಾಗ ದಕ್ಕುವ ಹೊಳಹುಗಳು ಅನೇಕ. ಈ ಪುರಾಣೈತಿಹಾಸಿಕ ಪಾತ್ರದ ಬದುಕಿನಲ್ಲಿ ಸಂದು ಹೋದ ಸಂಗತಿಗಳು ಒಂದಕ್ಕಿಂದ ಒಂದು ಸವಾಲಿನದು. ಅವೆಲ್ಲವನ್ನು ಆಕೆ ಹೇಗೆ ಎದುರಿಸಿದಳು ಮತ್ತು ನಾವು ಅದರಿಂದ ಸ್ಫೂರ್ತಿಯನ್ನು ಹೇಗೆ ಪಡೆಯಬಹುದೆಂದು ನೋಡೋಣ.

ಹರಿವಲ್ಲಿ ಹೆಜ್ಜೆಯಿಟ್ಟು…

ಶರ್ಮಿಷ್ಠೆ ಅಸುರ ಕುಲಕ್ಕೇ ರಾಜನಾಗಿದ್ದವನ ಮಗಳು. ಸಂಪತ್ತು ಮಾತ್ರವಲ್ಲ, ಅಧಿಕಾರದ ರುಚಿಯನ್ನೂ ಕಂಡುಂಡವಳು. ಅಪ್ಪ ಆಯ್ದುಕೊಡುವ ರಾಜ ಕುಮಾರನನ್ನು ಮದುವೆಯಾಗಿ, ಮುಂದೊಂದು ದಿನ ತಾನು ಪಟ್ಟದರಸಿಯಾಗುವ ಕನಸು ಹೆಣೆದವಳು. ಆದರೆ ವ್ಯವಸ್ಥೆಯ ನಡಿಗೆಯೇ ಬೇರೆ ಇತ್ತು. ಕುಲದಿಂದ ಒದಗಿದ ಅಂತಸ್ತು ಹಾಗೂ ತಂದೆಯ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ಅವಳ ಬದುಕು ಬಲಿಯಾಯ್ತು. ಮಹಾರಾಣಿಯಾಗಿ ಮೆರೆಯಬೇಕಿದ್ದವಳು ದಾಸಿಯಂತೆ, ಅಜ್ಞಾತವಾಗಿ ಯಯಾತಿ – ದೇವಯಾನಿಯರ ತೋಟದ ಮನೆಯಲ್ಲಿ ಬದುಕು ನಡೆಸಬೇಕಾಯ್ತು.

ಶರ್ಮಿಷ್ಠೆ ಒದಗಿ ಬಂದ ವಿಧಿಯಲ್ಲಿ ಹೆಜ್ಜೆ ಇಟ್ಟು ನಡೆದಳು. ತಾನು ದಾಸಿಯಂತೆ, ಬದುಕಿಡೀ ದೇವಯಾನಿಯ ಜೀತ ಮಾಡಿಕೊಂಡಿರಬೇಕು ಎಂಬ ಸತ್ಯವನ್ನು ಅರಗಿಸಿಕೊಂಡ ಕ್ಷಣದಲ್ಲೇ ತನ್ನ ಅರಸುತನದ ಗರ್ವವನ್ನು ಬಿಟ್ಟುಕೊಟ್ಟಳು. ಏಕಾಂಗಿಯಾಗಿ ಅಕ್ಷರಶಃ ದಾಸಿಯಂತೆ ಬಾಳಿದಳು.

ಅದೇ ಶರ್ಮಿಷ್ಠೆ ತನ್ನ ತಂದೆಯ ಗೌರವಕ್ಕೆ ಚ್ಯುತಿ ತಂದು ತಾನು ದಾಸಿಯಾಗಿ ಹೋಗಲಾರೆ ಎಂದು ಪ್ರತಿಭಟಿಸಿದ್ದರೆ? ಬಹುಶಃ ಆಕೆ ತಂದೆಯಿಂದ ತಿರಸ್ಕಾರಕ್ಕೆ ಒಳಗಾಗುತ್ತಿದ್ದಳು. ಶುಕ್ರಾಚಾರ್ಯರ ಬೆಂಬಲವಿಲ್ಲದೆ ಅಸುರ ರಾಜನ ಅರಸೊತ್ತಿಗೆಗೂ ಭಂಗ ಬರುತ್ತಿತ್ತೇನೋ. ಅನಂತರ ಶರ್ಮಿಷ್ಠೆ ಮತ್ತೊಂದು ರೀತಿಯಿಂದ ದಾಸಿಯಾಗಿ, ಸಾಮಾನ್ಯ ಹೆಣ್ಣುಮಕ್ಕಳಂತೆ ಇರಬೇಕಾಗುತ್ತಿತ್ತು. ಆದರೆ ಶರ್ಮಿಷ್ಠೆ ಸತ್ಯವನ್ನು ಮನವರಿಕೆ ಮಾಡಿಕೊಂಡಳು. ಅದರಿಂದ ಯಯಾತಿಯೂ ಅವಳಿಗೆ ದಕ್ಕಿದ. ಅವನ ಸಂಪೂರ್ಣ ಪ್ರೀತಿ ಅವಳಿಗೆ ದೊರಕಿತು.

ನಾವಾದರೂ ಅಷ್ಟೇ. ಸತ್ಯವನ್ನು ನಿರಾಕರಿಸುವ ಯತ್ನ ಮಾಡಿದರೆ ನಷ್ಟ ನಮಗೇ. ಬಂಡಾಯ ಏಳುವುದೆಂದರೆ ಸತ್ಯವನ್ನು ನಿರಾಕರಿಸುವುದಲ್ಲ. ಪ್ರವಾಹದ ವಿರುದ್ಧ ಈಜಬೇಕಿರುವುದು, ವಿರುದ್ಧ ದಿಕ್ಕಿನಲ್ಲಿ ಗುರಿ ಇದೆಯೆಂದಾಗ ಮಾತ್ರವೇ ಹೊರತು ಕೈಗಳಲ್ಲಿ ಕಸುವಿದೆ ಎಂದಲ್ಲ. ಆ ಕ್ಷಣದ ದುಡುಕು ನಮ್ಮನ್ನು ಪರಿಣಾಮದಲ್ಲೆ ಅದೇ ಸ್ಥಳದಲ್ಲೇ ನಿಲ್ಲಿಸಬಹುದು. `ಹಾಳಾದರೂ ನನ್ನ ಇಚ್ಛೆಯಂತೆಯೇ ಆಗುವೆನು’ ಎಂಬ ಮೊಂಡು ವಾದ ಜೀವನವನ್ನು ಹಾಳು ಮಾಡುವುದು ಹೊರತು ಅದಕ್ಕಿಂತ ಹೆಚ್ಚಿನ ಸಾಧನೆಗೆ ದಾರಿಯಾಗದು. `ಪಾಲಿಗೆ ಬಂದ ಪಂಚಾಮೃತ’ವನ್ನು ಸ್ವೀಕರಿಸಿದರೆ, ಮುಂದೆ ಅದರ ಫಲ ನಮಗಾಗಿ ಕಾದಿರುವುದು. ಅಂತಹ ಆಶಾವಾದವೇ ಹಲವು ಬಾರಿ ನಮ್ಮನ್ನು ಬದುಕಿಸುವುದು. ನಮ್ಮ ಸತ್ವ, ರಿಸ್ಕ್ ಎದುರಿಸುವ ನಮ್ಮೊಳಗಿನ ಕಿಡಿ ನಮ್ಮನ್ನು ಕಾಯುವುದು. ವಿರುದ್ಧ ದಿಕ್ಕಿನ ದಾರಿಯಲ್ಲಿ – ಯಾವುದು ನಮಗಾಗಿ ಇಲ್ಲವೋ, ಯಾವುದು ಸುಳ್ಳೊ ಆ ದಾರಿಯಲ್ಲಿ ನಡೆಯುವ ರಿಸ್ಕ್ ಮೂರ್ಖತನ ಎನ್ನಿಸಿಕೊಳ್ಳುತ್ತದೆ. ನಿರ್ದೇಶಿತ ದಾರಿಯಲ್ಲಿ, ನಮಗೆ ಒದಗಿಬಂದಿರುವ ನಿಯತಿಯ ನಿಜದಾರಿಯಲ್ಲಿ ನಡೆದು ಗುರಿ ಮುಟ್ಟುವ ಸಾಹಸ ಸಾರ್ಥಕಗೊಳ್ಳುತ್ತದೆ.

ಸಹನೆಯ ಯಶೋಮಾರ್ಗ

ತೋಟದ ಮನೆಯಲ್ಲಿ ಒಂಟಿಯಾಗಿದ್ದ ಶರ್ಮಿಷ್ಠೆ ಯಯಾತಿಯ ಕಣ್ಣಿಗೆ ಬಿದ್ದು ಗೆಲ್ಲುತ್ತಾಳೆ. ಅವನ ಪ್ರೇಮವುಣ್ಣುತ್ತಾಳೆ. ಮೂವರು ಮಕ್ಕಳನ್ನೂ ಪಡೆಯುತ್ತಾಳೆ. ಅಂತಿಮವಾಗಿ ಯಯಾತಿಯ ಹೆಸರುಳಿಸಿ ವಂಶ ಮುನ್ನಡೆಸುವುದೂ ಶರ್ಮಿಷ್ಠೆಯ ಮಗನೇ. ಮಹಾರಾಣಿಯಾಗುವ ಅವಕಾಶ ತಪ್ಪಿಸಿಕೊಂಡ ಶರ್ಮಿಷ್ಠೆ ರಾಜಮಾತೆಯಾಗುವ ಅವಕಾಶ ಪಡೆಯುತ್ತಾಳೆ. ಸಹನೆಯ ಪ್ರತಿಫಲವಿದು!

ಶರ್ಮಿಷ್ಠೆ ತನಗೆದುರಾದ ಎಲ್ಲ ತಡೆಗಳನ್ನು ಮುನ್ನಡೆಗಾಗಿಯೇ ಬಳಸಿಕೊಂಡಳು. ಯಯಾತಿಯೊಂದಿಗಿನ ತನ್ನ ಗಾಂಧರ್ವ ವಿವಾಹ ಬಯಲಾದಾಗಲೂ ಅಂಜಲಿಲ್ಲ, ತಲೆ ತಗ್ಗಿಸಲಿಲ್ಲ. ಅವನು ಶಾಪಗ್ರಸ್ತನಾದಾಗ ತನ್ನ ಮಗನನ್ನು ಮುಂದಿಟ್ಟು ಅದನ್ನು ನಿವಾರಿಸಿದಳು.

ಒಳಿತಿನತ್ತ ದೃಷ್ಟಿ ನೆಟ್ಟಾಗ ನಡೆಸುವ ಪ್ರಯತ್ನಗಳೆಲ್ಲವೂ ಒಳ್ಳೆಯದೇ ಆಗಿರುತ್ತವೆ. ಸಚ್ಚಿಂತನೆಗಳು, ಸ್ವೀಕಾರ ಮನೋಭಾವ ನಮ್ಮನ್ನು ಪರಿಪೂರ್ಣರಾಗಿಸುತ್ತ ಯಶಸ್ಸಿನ ಕಡೆ ಕೈ ಹಿಡಿದು ನಡೆಸುತ್ತವೆ.

ಶರ್ಮಿಷ್ಠೆಯ ಬದುಕಿನಂತೆ ಅನಿರೀಕ್ಷಿತ ಏರುಪೇರುಗಳಾದಾಗ ಅದಕ್ಕಾಗಿ ಕೊರಗದೆ, ಸ್ವಾನುಕಂಪ ಬೆಳೆಸಿಕೊಳ್ಳದೆ ನಾವೂ ಸತ್ಯವನ್ನೊಪ್ಪಿ ಮುನ್ನಡೆದರೆ, ನಮ್ಮ ಬದುಕೂ ಯಶಸ್ಸು ಹೊಂದುವುದರಲ್ಲಿ ಸಂದೇಹವಿಲ್ಲ.

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.