ಈ ಪ್ರೀತಿ ಕೂಡ, ಈ ಹೊತ್ತಿನ ನಿಜ ಮಾತ್ರ! : ಪ್ರೇಮಿಯ ದಿನಚರಿ

ಖಾಲಿಯಲ್ಲಿ ಬದುಕೋದು ಕಲಿತರೆ ಆವರಣ ಬೇಕಾಗೋದಿಲ್ಲ. ಆವರಣ ಕಟ್ಟಿಕೊಂಡ ಕೂಡಲೆ ಅಲ್ಲೊಂದು ಮಿತಿ. ಜಿಗಿದಾಡುವ ಚೈತನ್ಯಕ್ಕೆ ಉಬ್ಬಸ. ಮತ್ತೆ, ಈ ಆವರಣ ಇದೆಯಲ್ಲ, ಅದು ತನ್ನನ್ನ ತಾನು ಸುರಕ್ಷೆ ಅಂತ ತೋರಿಸಿಕೊಳ್ಳುತ್ತೆ. ಅದೇ ಹೊತ್ತಿಗೆ ನಮ್ಮ ದೌರ್ಬಲ್ಯವೂ ಆಗಿರುತ್ತೆ. ಅದಕ್ಕೇ ಅವನು ನನ್ನ ಆವರಣವೂ ಅಲ್ಲ, ದೌರ್ಬಲ್ಯವೂ ಆಗೋದಿಲ್ಲ. ಅಂವ ನನ್ನ ರಕ್ಷೆ ಅಂದುಕೊಂಡಾಗ ಮಾತ್ರ ಅದು ಕದಲುವ ಆತಂಕ ಹುಟ್ಟೋದು ~ ಚೇತನಾ ತೀರ್ಥಹಳ್ಳಿ

ಅಲೆಮಾರಿ ಗಾಳಿ ಎಳೆಯೊಟ್ಟಿಗೆ ಕಾದ ಮಣ್ಣಿನ ಘಮ ತೂರಿ ಹಿತಾನುಭವ.
ಬಿದ್ದು ಹೋದ ಹತ್ತು ಹನಿಗೆ ಅವಳಿ ಕಾಮನಬಿಲ್ಲು….

ಬಾಗಿಲೂ ಗೋಡೆ ಹಾಗಿರುವ ಕಟ್ಟಡದೊಳಗೆ ಕುಂತ ನನಗೆ ಮಳೆ ಬಂದ ವಿಷಯ ಗೊತ್ತಾಗಿದ್ದು ಘಮದಿಂದಲಷ್ಟೆ. ಸಿಗರೇಟಿಗೆ ಹೋದವ ಕಾಮನ ಬಿಲ್ಲು ಕ್ಲಿಕ್ಕಿಸಿ ತಂದಿದಾನೆ, ನನಗಾಗಿ. ವಾಟ್ಸಪ್ಪಿನಲ್ಲಿ ಮೂರುಕ್ಷಣ, ಏಳು ಬಣ್ಣದ ಕಮಾನು ನನ್ನ ಮೊಬೈಲಿನೊಳಗೆ…

ಆ ಎಲ್ಲ ಬಣ್ಣಗಳು ಕಣ್ಣೊಳಗೆ ಗೂಡು ಕಟ್ಟಿ ನಾನು ಕೆಂಪುಕೆಂಪು.

ಏಳನೇ ಕ್ಲಾಸಿನ ಪಾಠ- ಬೆಳಕಿನ ಬಣ್ಣಗಳಲ್ಲಿ ಯಾವುದನ್ನ ಪ್ರತಿಫಲಿಸಲಾಗ್ತದೋ ಆ ಬಣ್ಣ ದಕ್ಕುತ್ತೆ. ಎಲ್ಲ ಹೀರಿಕೊಂಡು ಗಪ್ಪಗೆ ಕುಂತರೆ ಕಪ್ಪು. ಎಲ್ಲ ಪ್ರತಿಫಲಿಸಿ ಗಲಗಲವಾದರೆ ಬಿಳಿ.
ಅಂವ ಹೇಳುವ ಮಾತೂ ಹೆಚ್ಚೂಕಡಿಮೆ ಹೀಗೇನೇ. ಬಣ್ಣ ಮಾತ್ರ ಬೇರೆ ಬೇರೆ ಸಲ, ಬೇರೆ ಬೇರೆಯದರ ಸಂಕೇತವಾಗ್ತದಷ್ಟೆ. ಬೆಳಕು ಎಲ್ಲಕ್ಕೂ ಒಂದೇ ಇರ್ತದೆ. ನಾವು ದಕ್ಕಿಸಿಕೊಳ್ಳೋದಷ್ಟೆ ನಮಗೆ.
~

ಕನ್ನಡಿ ಎದುರು ನಿಂತಾಗ, ಪುಟಾಣಿ ದೇಹ, ಬಾಡ್ತಿರುವ ದುಂಡನೆ ಮುಖ, ಹೆಚ್ತಿರುವ ಸೊಂಟದ ಸುತ್ತಳತೆ, ಕಪ್ಪು ರೇಶಿಮೆಗೂದಲು, ಅದರೊಳಗೆ ಬೆಳ್ಳಿ ದಾರಗಳು ಕೆಲವು. ಇಷ್ಟೂ ವರ್ಷಗಳ ನೋಟ ನೆರಿಗೆಗಟ್ಟಿ ಕಣ್ಣ ಕೆಳಗೆರಡು ಗೆರೆ.

ಚಿಕ್ಕವಳಿರುವಾಗಿಂದ್ಲೂ ಹೀಗೇನೇ. ಯಾವತ್ತೂ ಕನ್ನಡಿ ಮುಂದೆ ನಿಂತಾಗ ನನಗೆ ನನ್ನ ಗುರುತು ಹತ್ತೋದೇ ಇಲ್ಲ. ಅದು ಯಾರೋ ಅನ್ನುವ ಹಾಗೆ ಕುತೂಹಲದಿಂದ ನೋಡಿಕೊಳ್ತೇನೆ. ನನಗಿಂತ ಬೇರೆ ಅನಿಸುವ ಈ ರೂಪದ ಬಗ್ಗೆ ತಿಳ್ಕೊಳ್ಳಬೇಕು ಅನ್ನುವ ಕಾತುರ. ಈಗ ಗೊತ್ತಾಗ್ತಿದೆ, ನಮ್ಮನ್ನ ನಾವು ತಿಳ್ಕೊಳ್ಳೋದು ಎಷ್ಟೊಂದು ಕಷ್ಟ!

ಕನ್ನಡಿ ಬೆನ್ನಿಗೆ ಪಾದರಸವೋ ಮತ್ತೊಂದೋ. ಅದನ್ನ ಗೀಚಿ ಹಾಕಿದರಾಯ್ತು, ಆಚೆಗಿನದು ಕಾಣ್ತದೆ. ಈ ತನಕ ಅಲ್ಲಿ ಮೂಡಿರುವ ನಾನು ಇಲ್ಲವಾಗ್ತೇನೆ.

ಹಹ್ಹ್! ನಾನು ಇಲ್ಲವಾಗೋದು ಇಷ್ಟೊಂದು ಸುಲಭವಾ?
ಅಜ್ಜಂದಿರು ಹೇಳಿದ್ದು ನಿಜ. ‘ನಾನು’ ಇಲ್ಲವಾದಾಗ ಮತ್ತೊಂದು ಸ್ಪಷ್ಟ ಕಾಣ್ತದೆ.

– ಹೀಗೆಲ್ಲ ಯೋಚನೆ ಬರುವಾಗ ಹುಬ್ಬುಗಳ ನಡುವೆ ಉದ್ದುದ್ದ ಸಮಾನಾಂತರ ರೇಖೆಗಳು. ದೊಡ್ಡ ಜಿಜ್ಞಾಸೆ ಮಾಡ್ತಿರುವಂತೆ. ಅದು ಮೂಡಿದೆಯಂತ ಗೊತ್ತಾಗ್ತಲೇ ಮಾಮೂಲು ಮುಖ ತಂದುಕೊಳ್ತೇನೆ.
ಇಷ್ಟಕ್ಕೂ ಗಂಭೀರವಾದದ್ದು ಏನಿದೆ? ಬದುಕು ಅಂದರೇನೇ ಒಂದು ತಮಾಷೆ.

ಮತ್ತೆ ಅವನ ನೆನಪು…. ಹೇಳ್ತಾನಲ್ಲ, ಹೂವು ಅರಳುತ್ತೆ, ಬಿದ್ದು ಹೋಗತ್ತೆ. ಅದರ ಗಂಧ ಮೂಗಡರಿಸಿಕೊಂಡವರಿಗೆಲ್ಲ ಅದರ ಇರುವು ಗೊತ್ತಾಗತ್ತೆ. ಯಾರಾದರೂ ನೋಡಲಿ, ಗಮನಿಸಲಿ ಅಂತ ಕೂಗುತ್ತಾ ಅದು ಯಾವತ್ತಾದರೂ?

ಸುಮ್ಮನಿದ್ದರೆ ಸಾಕು. ಘಮವಿದ್ದರೆ ಜನ ಬಂದಾರು. ಹಾಗೆ ಬರಲೆಂದೇ ನಾವು ಅರಳಿಕೊಳ್ಳಬಾರದು ಮತ್ತೆ!
~

ಹಿಂದೆ ನೋಡಿದರೆ ಆಗ ತಾನೆ ಕುಸಿದ ನೆಲದ ಗುರುತು. ಕಿತ್ತಿಟ್ಟ ಪ್ರತಿ ಹೆಜ್ಜೆ ಅಳಿಸಿಹೋಗಿದೆ. ಅವು ಎಷ್ಟಿವೆಯೆಂದು ಕಾಣದೆ ಇರುವುದು ಒಳ್ಳೆಯದೇ. ಲೆಕ್ಕ ಯಾವತ್ತೂ ಎಣಿಕೆಯ ಆಯಾಸವನ್ನ ಹೊತ್ತುಕೊಂಡೇ ಇರುತ್ತೆ.

ಮುಂದೆ ಏನಿದೆ ಗೊತ್ತಿಲ್ಲ. ಕೆಲವು ದಿನ ಊಹೆಗಳಿದ್ದವು. ಕನಸುಗಳೂ. ಆದರೆ ಸಿಕ್ಕಿದ್ದೆಲ್ಲ ಅಚಾನಕ್ಕು ತಿರುವುಗಳೇ. ಇಷ್ಟು ದೂರ ಹೀಗೇ ಸಾಗಿ ಬಂದಾಗಿದೆ. ಇನ್ನಾದರೂ ಗೊತ್ತಾಗಬೇಡವೇ, ನಡೆದಷ್ಟೂ ದಾರಿ, ನಡೆಯೋದೆಲ್ಲಾ ದಾರಿಯೇ…

ಡಿಗೆ ಒಂದು ಗಮ್ಮತ್ತು ಅನಿಸೋದು, ದಾರಿಯನ್ನೇ ಗುರಿಯಾಗಿ ಮಾಡಿಕೊಂಡಾಗ. ಹಾಗಂತ ಅಂವ ಹೇಳ್ತಿರುತ್ತಾನೆ.
ನನಗೆ ಎಚ್ಚರವಿದೆ. ಇವೆಲ್ಲ ಈ ಹೊತ್ತಿನ ನಿಜಗಳು. ಆಯಾ ಹೊತ್ತಿನ ನಿಜಗಳು ಆಯಾ ಹೊತ್ತು ಗೆಲ್ತವೆ. ಅದಕ್ಕೇ ನಮಗೆ ಹಿಂದಿನ ಅದೆಷ್ಟೋ ಗೆಲುವುಗಳು ಇಂದು ಪ್ರಮಾದವಾಗಿ ಕಾಣೋದು.

– ಇಂಥ ಟಿಪ್ಪಣಿಗಳನ್ನೆಲ್ಲ ತೆಗೆದು ಹೇಳಿದರೂ ಅಷ್ಟೇ. ನನಗೆ ಗೊತ್ತಿದೆ. ಈ ಪ್ರೀತಿ ಕೂಡ, ಈ ಹೊತ್ತಿನ ನಿಜ ಮಾತ್ರ! ಕೊನೆತನಕ ನಮ್ಮ ದೇಹವೇ ಜೊತೆಗಿರೋದಿಲ್ಲ!!

ನಾವು ಒಂದಲ್ಲ ಒಂದು ದಿನ ಇಲ್ಲವಾಗ್ತೇವೆ ಅಂತ ಗೊತ್ತೇ ಇದೆ. ಅದಕ್ಕೇ ಸಿದ್ಧವಿದ್ದೇವೆ ಅಂತಾದಮೇಲೆ ಸಿಕ್ಕುಗಳು ಯಾತಕ್ಕೆ? ನಾವಂತೂ ಅಸ್ತಿತ್ವಕ್ಕೆ ಅತಿಥಿಗಳು. ಇಂತಿಷ್ಟು ದಿನಕ್ಕೆ ಬಂದು ಒಡೆಯರ ಥರ ಆಡಿದರೆ? ಅಸ್ತಿತ್ವ ಕೊಡುತ್ತೆ ಚಪ್ಪಲಿಯೇಟು!
~

ಈಗೀಗ ನಾನು ಹೂಹಗುರ. ತಲೆಯಲ್ಲಿ ಕೊಳೀತಿದ್ದ ನೆನಪಿನ ಹೆಣಗಳನ್ನೆಲ್ಲ ಹದ್ದುಗಳಿಗೆ ಎಸೆದಿದ್ದೇನೆ. ನಾನೀಗ ಖಾಲಿ.
ಖಾಲಿಯಲ್ಲಿ ಬದುಕೋದು ಕಲಿತರೆ ಆವರಣ ಬೇಕಾಗೋದಿಲ್ಲ. ಆವರಣ ಕಟ್ಟಿಕೊಂಡ ಕೂಡಲೆ ಅಲ್ಲೊಂದು ಮಿತಿ. ಜಿಗಿದಾಡುವ ಚೈತನ್ಯಕ್ಕೆ ಉಬ್ಬಸ. ಮತ್ತೆ, ಈ ಆವರಣ ಇದೆಯಲ್ಲ, ಅದು ತನ್ನನ್ನ ತಾನು ಸುರಕ್ಷೆ ಅಂತ ತೋರಿಸಿಕೊಳ್ಳುತ್ತೆ. ಅದೇ ಹೊತ್ತಿಗೆ ನಮ್ಮ ದೌರ್ಬಲ್ಯವೂ ಆಗಿರುತ್ತೆ. ಅದಕ್ಕೇ ಅವನು ನನ್ನ ಆವರಣವೂ ಅಲ್ಲ, ದೌರ್ಬಲ್ಯವೂ ಆಗೋದಿಲ್ಲ. ಅಂವ ನನ್ನ ರಕ್ಷೆ ಅಂದುಕೊಂಡಾಗ ಮಾತ್ರ ಅದು ಕದಲುವ ಆತಂಕ ಹುಟ್ಟೋದು.

ದೊಡ್ಡದೊಡ್ಡವರೆಲ್ಲ ಹೇಳಿಹೋಗಿದಾರೆ. ನಿರೀಕ್ಷೆ ಇಟ್ಟುಕೊಂಡರೆ ಮಿಕ್ಕೆಲ್ಲ ಸಮಸ್ಯೆ. ಅವನ ಬಗೆಗೂ ಕನಸುಗಳಿಲ್ಲ. ಬದುಕೇ ಒಂದು ಕನಸಂತೆ, ಕನಸೊಳಗೊಂದು ಕನಸು ಯಾತಕ್ಕೆ? ಗೋಳಿನ ಮುಖ ಗೋಳನ್ನೇ ಸೆಳೆಯುತ್ತೆ, ಗೋಳನ್ನೇ ಉಳಿಸುತ್ತೆ. ಇರುವಷ್ಟು ದಿನ ನಗುವಿದ್ದರಾಯ್ತು. ನಗುತ್ತಿರುವಷ್ಟೂ ದಿನ ಸಂಗಾತ ಉಳಿಯುತ್ತೆ.

ಈ ಎಲ್ಲದರ ನಡುವೆ, ಅಂವ ಕೊಟ್ಟ ಜೋಡಿ ಕಾಮನ ಬಿಲ್ಲು ಅಂಗೈಲಿ ಬೆಚ್ಚಗಿದೆ. ಒಂದೊಂದೇ ಬಣ್ಣವನ್ನಾಯ್ದು ನಾನೂ ರಂಗಾಗುತ್ತಿದ್ದೇನೆ.

1 Comment

Leave a Reply