ಕಾಯಕವು ಕೈಲಾಸಕ್ಕಿಂತ ಮಿಗಿಲೆಂದ ಕುಂಬಾರ ಗುಂಡಯ್ಯ : ಶರಣ ಚರಿತೆ

ಕಾಯಕವೇ ಕೈಲಾಸ ಎನ್ನುವುದು ಶರಣಪರಂಪರೆಯ ಧ್ಯೇಯ. ಕುಂಬಾರ ಗುಂಡಯ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕಾಯಕಕ್ಕೆ ಕೈಲಾಸಕ್ಕಿಂತಲೂ ಹೆಚ್ಚು ಮನ್ನಣೆ ನೀಡುತ್ತಾನೆ

Ishtalinga3

ಬೇಡೆನಗೆ ಕೈಲಾಸ, ಬಾಡುವುದು ಕಾಯಕವು
ನೀಡೆನಗೆ ಕಾಯಕವ – ಕುಣಿದಾಡಿ
ನಾಡ ಹಂದರಕೆ ಹಬ್ಬಿಸುವೆ!
~ ಹೀಗೆಂದು ಶಿವ ಶರಣ ಕುಂಬಾರ ಗುಂಡಯ್ಯ ಕೈಲಾಸವನ್ನೂ ನಿರಾಕರಿಸಿ ನನಗೆ ಕಾಯಕವೇ ಇರಲಿ ಎಂದು ಬೇಡುತ್ತಾನೆ. ಕಾಯಕವೇ ಕೈಲಾಸ ಎನ್ನುವುದು ಶರಣಪರಂಪರೆಯ ಧ್ಯೇಯ. ಕುಂಬಾರ ಗುಂಡಯ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕಾಯಕಕ್ಕೆ ಕೈಲಾಸಕ್ಕಿಂತಲೂ ಹೆಚ್ಚು ಮನ್ನಣೆ ನೀಡುತ್ತಾನೆ.
ಶರಣ ಕುಂಬಾರ ಗುಂಡಯ್ಯನ ಕುರಿತ ಈ ವಿವರಣೆ ಸಿಗುವುದು ಜನಪದ ಕವಿ ಸಾವಳಿಗೇಶನ ಕೃತಿಯಲ್ಲಿ.

ಕುಂಬಾರ ಗುಂಡಯ್ಯ ಜೀವಿಸಿದ್ದು ಬೀದರದ ಭಲ್ಲುಕೆಯಲ್ಲಿ (ಇಂದಿನ ಭಾಲ್ಕಿ). ಇವನ ಬದುಕೇ ಕಾಯಕಕ್ಕೆ ಸಮರ್ಪಿತವಾಗಿತ್ತು. ಹರಿಹರ ಕವಿಯು ತನ್ನ ಕುಂಬರ ಗುಂಡಯ್ಯನ ರಗಳೆಯಲ್ಲಿ ವಿವರಿಸಿದಂತೆ;
ಆಧಾರಮೆಯಾಧಾರಮದಾಗಿರೆ
ಮಿಗೆ ಷಟ್ಚಕ್ರಮೆ ಚಕ್ರಮದಾಗಿರೆ
ಸೊಗಯಿಪ ನಾಭಿಯೆ ನಾಭಿಯದಾಗಿರೆ
ಕನಸಿನ ಕಾಯಂ ಮೃತ್ತಿಕೆಯಾಗಿರೆ
ನೆನಹುಂ ಚಟದಾರಂಗಳವಾಗಿರೆ
ನಷಿ್ಠೆಯೆ ತಿರುಹುವ ದಂಡವದಾಗಿರೆ
ಮಾಡುವ ಭಕ್ತಿ ಕಟಾಹಮದಾಗಲು
ಕೂಡಿದ ಕರಣದೆ ಮರ್ದಿಸುತಾಗಲು
ಮಿಗೆ ಶೋಷಣದಾತಪದಿಂದಾರಿಸಿ
ಬಗೆ ಮಿಗಲುದರಾಗ್ನಿಗಳಿಂದಹಿಸಿ
ಇಂತೊಳಗಣ ಘಟಕಾಕಮೊಪ್ಪಲು
ಸಂತತ ಹೊರಗಣ ಮಾಟಮದೊಪ್ಪಲು ಕುಂಬರ ನೆನೆಸಿರ್ಪಂ ಗುಂಡಯ್ಯಂ
~ ಕುಂಬಾರ ಗುಂಡಯ್ಯ ಒಳಗಣ ಕಾಯಕ ಮತ್ತು ಹೊರಗಣ ಕಾಯಕಗಳೆರಡರನ್ನೂ ಸಮನಾಗಿ, ಜೊತೆಜೊತೆಯಾಗಿ ನಿರ್ವಹಿಸುತ್ತಿದ್ದ ಬಗೆಯನ್ನಿದು ಹೇಳುತ್ತದೆ.

ಹೊರಗೆ ಚಕ್ರಕ್ಕೆ ಆಧಾರವಾಗಿ ಹುಗಿದ ಮರದ ತುಂಡೇ ಅವನಿಗೆ ಆಧಾರ ಚಕ್ರ; ಅದರ ಮೇಲಿನ ತಿಗರಿಯೇ ಅವನ ಷಟ್ಚಕ್ರ; ತಿಗರಿಯಲ್ಲಿಯ ಮೂಳೆ ನೆಡುವ ರಂಧ್ರವೇ ಅವನ ನಾಭಿ (ಮಣಿಪೂರಕ ಚಕ್ರ); ಶರೀರವೇ ಮಡಕೆ ಮಾಡುವ ಮಣ್ಣು; ನಿಷ್ಠೆಯೇ ದಂಡ; ಅದರಿಂದ ತಿರುಗಿಸಿ ಮಾಡಿದ ಮಡಕೆಗಳನ್ನು ನೆನಹೆಂಬ ಚಟಿದಾರಗಳಿಂದ ಕೊಯ್ದು, ಕರಣಗಳಿಂದ ತಿದ್ದಿ ಬಡಿದು, ಆರಿಸಿ, ಭಕ್ತಿಯೆಂಬ ಆವಿಗೆಯಲ್ಲಿ ಹಾಕಿ, ಉದರಾಗ್ನಿಗಳಿಂದ ಸುಟ್ಟು ಗಟ್ಟಿ ಮಾಡಿಡುತ್ತಿದ್ದ. ಆ ಮಡಕೆಗಳನ್ನೇ ಬಾರಿಸುತ್ತ ಕುಣಿದಾಡುತ್ತಿದ್ದ.

ಮಡಕೆಗಳ ಬಾರಿಸುತ ತೊಡಗಿದ್ದ ಕುಣಿತದೊಳು
ಹೆಡೆಯೆತ್ತಿ ನಾಗಮಣಿಯಂತೆ – ಗುಂಡಯ್ಯ
ತಡೆತಡೆದು ಹೆಜ್ಜೆ ಹಾಕುತಲಿ
~ ಇದು ಅವನ ನಿತ್ಯ ಕಾಯಕವಾಗಿತ್ತು. ಅವನ ಪಾಲಿಗೆ
ಕಾಯಕವೆ ಶಿವಭಕ್ತಿ, ಕಾಯಕವೆ ಶಿವಭಜನೆ
ಕಾಯಕವೆ ಲಿಂಗ ಶಿವಪೂಜೆ – ಶಿವಯೋಗ
ಕಾಯಕವೆ ಕಾಯ್ವ ಕೈಲಾಸ.

ಇಂಥಾ ಕುಂಬಾರ ಗುಂಡಯ್ಯ ನಮ್ಮ ಜನಪದದ ಬೇರುಗಳಲ್ಲಿ ಭದ್ರವಾಗಿದ್ದಾನೆ. ಹರಿಹರ ಕವಿ, ಶಿವ ಬಂದು “ಕೈಲಾಸಕ್ಕೆ ಬಾ” ಎಂದು ಕರೆದಾಗ ಗುಂಡಯ್ಯ ಹೊರಟುಬಿಡುತ್ತಾನೆಂದು ಹೇಳಿದರೆ, ಜನಪದ ಕವಿ ಸಾವಳಗೇಶನು, ಅವನು ಕಾಯಕದ ಕಾರಣವಿಟ್ಟು ತಾನು ಬರುವುದಿಲ್ಲ ಅನ್ನುತ್ತಾನೆಂದು ಹಾಡಿದ್ದಾನೆ.

ಕಾಯಕಪ್ರೇಮಿ ಕುಂಬಾರ ಗುಂಡಯ್ಯ, ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಇಂದಿಗೂ ಜನಜೀವನದ ಭಾಗವಾಗಿದ್ದಾನೆ. ಒಕ್ಕಲಿಗರು ತಮ್ಮ ಬೆಳೆಗಳ ರಕ್ಷಣೆಗಾಗಿ ಹೊಲಗಳಲ್ಲಿ ಒಂದು ಕೋಲಿಗೆ ಗಡಿಗೆ ಮಗುಚಿ ಹಾಕಿ, ಸುಣ್ಣ ಬಳಿದು, ‘ಬೆದರು ಬೊಂಬೆ’ಯನ್ನು ಮಾಡಿ ನಿಲ್ಲಿಸುತ್ತಾರೆ. ಆ ಗಡಿಗೆಯನ್ನು ಅವರು “ಗುಂಡ”ನೆಂದು ಕರೆದು, ಕುಂಬಾರ ಗುಂಡಯ್ಯ ರಕ್ಷಣೆ ಮಾಡುತ್ತಾನೆಂದು ನಂಬುತ್ತಾರೆ.

ಬೆಚ್ಚುಹಾಕಿದ ಗಡಿಗಿ ಮುಚ್ಚಿಟ್ಟ ಹೊಲ ಹುಲುಸು
ಬಚ್ಚಾದ ಬೆಳೆಯ ಕಣವುಕ್ಕಿ – ಗುಂಡಯ್ಯ
ಹೆಚ್ಚಾಯ್ತು ನಿನ್ನ ಶಿವಭಕ್ತಿ
ಎಂದು ಹಾಡುವ ಜನಪದರು, “ಗುಂಡಯ್ಯನ ಗಡಿಗೆ ಹೊಲವನ್ನು ಕಾಯುವುದು ಮಾತ್ರವಲ್ಲ, ಚಳಿಗಾಲದಲ್ಲಿ ಬೆಳೆಗಳಿಗೆ ಬೆಚ್ಚನೆಯ ಹಿತಕರವಾದ ಗಾಳಿಯನ್ನು ಬೀಸಿ ತರುತ್ತಾನೆ” ಎಂದೂ ನಂಬುತ್ತಾರೆ. ಆ ಚಳಿಗಾಲದ ಗಾಳಿಯನ್ನು “ಕುಂಬಾರನ ಗಾಳಿ”ಯೆಂದೇ ಕರೆಯುತ್ತಾರೆ.

ಆ ರಸಗಾಳಿ ವರ್ಷಕ್ಕೊಮ್ಮೆ ಬೀಸಿದರೆ, ಕುಂಬಾರ ಗುಂಡಯ್ಯನ ಭಕ್ತಿರಸ ಗಾಳಿ ಹಗಲಿರುಳು ಬೀಸುತ್ತದೆ, ಬೀಸುತ್ತಿರಲಿ ಎನ್ನುವ ಆಶಯ ಜನಪದರ ಹಾಡಿನಲ್ಲಿ ತೋರಿಬರುತ್ತದೆ. ಹೀಗೆ ಕುಂಬಾರ ಗುಂಡಯ್ಯ ತನ್ನ ಶಿವಭಕ್ತಿಯಿಂದ ಜನಮಾನಸದಲ್ಲಿ ಅಮರವಾಗಿದ್ದಾನೆ. 

(ಆಕರ : ಶರಣ ಚರಿತಾಮೃತ)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.