ರಾಷ್ಟ್ರೀಯತೆ ~ ಇದು ಪ್ರಜಾ ಧರ್ಮ : ಗಣರಾಜ್ಯೋತ್ಸವ ವಿಶೇಷ

ರಾಷ್ಟ್ರೀಯತೆ ಕೂಡಾ ಧರ್ಮವೇ. ಇದು ಪ್ರಜೆಗಳ ಧರ್ಮ ~ ಆನಂದ ಪೂರ್ಣ

ಜಗತ್ತಿನಲ್ಲಿ ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಕೇಂದ್ರವಿದೆ, ಆತ್ಮವಿದೆ. ರಾಜಕಾರಣ ಯುರೋಪಿನ ಆತ್ಮವಿದ್ದಂತೆ ಭಾರತಕ್ಕೆ ಆಧ್ಯಾತ್ಮಿಕತೆಯೇ ಆತ್ಮ. ಧರ್ಮ ಭಾರತದ ಕೇಂದ್ರಬಿಂದು – ಇದು ಸ್ವಾಮಿ ವಿವೇಕಾನಂದರ ಮಾತು. ಮುಂದೆ ಶ್ರೀ ಅರವಿಂದರೂ ಇವೇ ಮಾತುಗಳನ್ನು ಪುರುಚ್ಚರಿಸುತ್ತಾ `ಜಗತ್ತಿನ ಒಂದೊಂದು ರಾಷ್ಟ್ರಕ್ಕೆ ಒಂದೊಂದು ವಿಶಿಷ್ಟ ಸತ್ವ ಇರುತ್ತದೆ. ಭಾರತದ ವೈಶಿಷ್ಟ್ಯ ಅದರ ಆಧ್ಯಾತ್ಮಿಕ ಶಕ್ತಿ’ ಎಂದಿದ್ದರು.
ಹೌದು. ಭಾರತದ ಕೇಂದ್ರ ಇರುವುದು ಧಾರ್ಮಿಕತೆಯಲ್ಲಿಯೇ. ಈ ಎಳೆಯೇ ನೂರಾರು ವೈವಿಧ್ಯಗಳ ಪ್ರಾಂತ್ಯಗಳನ್ನು `ರಾಷ್ಟ್ರ’ವೆಂಬ ಸೂತ್ರದಲ್ಲಿ ಬೆಸೆದಿಟ್ಟಿರುವುದು. ಕಾಶಿ ಕಂಡು ಬಂದವರು ರಾಮೇಶ್ವರಕ್ಕೆ ಪಾದ ಬೆಳೆಸಬೇಕೆಂಬ ನಿಯಮವಿರಲಿ, ದೇಶದ ಎಂಟು ದಿಕ್ಕುಗಳಲ್ಲೂ ಹಂಚಿ ಹರಡಿದ ದ್ವಾದಶ ಜ್ಯೋತಿರ್ಲಿಂಗಗಳಿರಲಿ, ಹೆಚ್ಚೂಕಡಿಮೆ ದೇಶದ ಎಲ್ಲಾ ಭಾಗಗಳಲ್ಲಿಯೂ ಹರಡಿಕೊಂಡಿರುವ ಶಕ್ತಿಪೀಠಗಳಿರಲಿ- ಇವೆಲ್ಲವೂ ನಮ್ಮನ್ನು ಪರಸ್ಪರ ಜೋಡಿಸುವ ಕೊಂಡಿಗಳಾಗಿವೆ, ರಾಜ್ಯ – ರಾಜ್ಯಗಳ ಒಳಜಗಳಗಳಾಚೆಗೂ ನಾವೊಂದು `ರಾಷ್ಟ್ರ’ವಾಗಿರುವುದರ ಭಾವನೆಯನ್ನು ಕಾಯ್ದಿಟ್ಟಿವೆ. ಮತ್ತು ಈ ಎಲ್ಲ ಸ್ಥಳಗಳು ಧಾರ್ಮಿಕ ಭಾವನೆಗಳ ಪೋಷಣೆಯ ಜೊತೆಜೊತೆಗೇ ಆರ್ಥಿಕತೆಯನ್ನೂ ಪೋಷಿಸುತ್ತಾ ಭಾಷೆ ಮತ್ತು ಪ್ರಾದೇಶಿಕ ಸಂಸ್ಕೃತಿಯ ಕಟ್ಟುಗಳನ್ನೂ ಮೀರಿ ಈ ರಾಷ್ಟ್ರದ ಒಟ್ಟು ನಾಗರಿಕರಿಗೆ ಇಂಬಾಗಿ ನಿಂತಿವೆ. ಈ ಮೂಲಕ ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದಿವೆ.
ರಾಷ್ಟ್ರದ ಪರಿಕಲ್ಪನೆ
ಭಾರತದ ಪ್ರಾಚೀನ ಸಾಹಿತ್ಯವೆಂದು ಪರಿಗಣಿಸಲ್ಪಡುವ ವೇದೋಪನಿಷತ್ತುಗಳಲ್ಲಿ `ರಾಷ್ಟ್ರ’ದ ಪರಿಕಲ್ಪನೆಯನ್ನು ಕಾಣಬಹುದು. ಅಂದಿನ ದಿನಗಳ `ಭರತ ವರ್ಷ’ ಇಂದಿನ ಭಾರತದಂತೆ ಸರಳವಾಗಿದ್ದಿಲ್ಲ. ಏಕಾಡಳಿತಕ್ಕೆ ಒಳಪಟ್ಟಿರಲಿಲ್ಲ. ಆದರೆ, ವಿಷ್ಣುಪುರಾಣದಲ್ಲಿರುವ `ಉತ್ತರಮ್ ಯತ್ ಸಮುದ್ರಸ್ಯ ಹಿಮಾದ್ರೇಶ್ಬೈವ ದಕ್ಷಿಣಮ್| ವರ್ಷಮ್ ತದ್ ಭಾರತಮ್ ನಾಮ ಭಾರತೀ ಯತ್ರ ಸಂತತಿಃ’ ಎಂಬ ಶ್ಲೋಕವನ್ನು ಅವಲೋಕಿಸಿದರೆ ಸಮುದ್ರದಿಂದ ಉತ್ತರಕ್ಕೆ, ಹಿಮಾಲಯದಿಂದ ದಕ್ಷಿಣಕ್ಕೆ ಇರುವ ಭೂಭಾಗ ಪೂರ್ತಿಯಾಗಿ `ಭಾರತ’ ಎಂದು ಗುರುತಿಸಲ್ಪಡುತ್ತಿತ್ತು.
ವಿಷ್ಣುಪುರಾಣ ಬರೆಯಲ್ಪಟ್ಟಿದ್ದೇ ಕ್ರಿಸ್ತ ಶಕ ಕಾಲಮಾನದಲ್ಲಿ, ಇಂಥಾ ಶ್ಲೋಕಗಳು ಸೇರ್ಪಡೆಯಾಗಿದ್ದು ಇತ್ತಿಚಿನ ಶತಮಾನಗಳಲ್ಲಿ ಅನ್ನುವ ಕೆಲವರ ವಾದವನ್ನು ಒಪ್ಪಿಕೊಂಡರೂ, ಈ ಸೇರ್ಪಡೆಯ ಕಾಲಮಾನ ಸ್ವಾತಂತ್ರ್ಯ ದೊರೆತ ಕಾಲಕ್ಕಿಂತ ಕೆಲವು ಶತಮಾನಗಳಾದರೂ ಹಿಂದಿನದ್ದು. ಆದ್ದರಿಂದ, ಭಾರತಕ್ಕೆ ರಾಷ್ಟದ ಪರಿಕಲ್ಪನೆ ಬಂದಿದ್ದು ಸ್ವಾತಂತ್ರ್ಯ ಹೋರಾಟದ ಕಿಡಿ ಹೊತ್ತಿದಾಗ ಎನ್ನುವುದು ಸರಿಯಲ್ಲ.
ಪುರಾಣಗಳ ಪ್ರಕಾರ ‘ಜಂಬೂ ದ್ವೀಪ’ದಲ್ಲಿದ್ದ ಈ ಭೂಭಾಗವನ್ನು ವಿಭಿನ್ನ ರಾಜವಂಶಗಳ ಅರಸರು ಆಳುತ್ತಿದ್ದು, ಪ್ರತಿಯೊಬ್ಬರ ಆಳ್ವಿಕೆಯ ಪ್ರಾಂತ್ಯಕ್ಕೆ ಬೇರೆ ಬೇರೆ ಹೆಸರುಗಳಿದ್ದರೂ ಒಟ್ಟಾರೆಯಾಗಿ ಅವೆಲ್ಲವೂ `ಭರತ ಖಂಡ’ದ ಅಡಿಯಲ್ಲೆ ಗುರುತಿಸಲ್ಪಡುತ್ತಿದ್ದವು. ಇಂತಹ ಏಕರೂಪದ ಗುರುತಿಗೆ ಕಾರಣ ನಿಸ್ಸಂದೇಹವಾಗಿ ಈ ಭೂಭಾಗದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಐಕ್ಯತೆಗಳೇ.
ರಾಮ ನಡೆದು ಬಂದನೆಂದು ಹೇಳುವ ಹಾದಿ, ಅವನಿಗೆ ಎದುರಾದ, ಜೊತೆಯಾದ ಜನಪದಗಳೆಲ್ಲವೂ ರಾಮಾಯಣದಲ್ಲಿ ಅಡಕಗೊಂಡಾಗ ಎಲ್ಲ ಭಾಗಗಳ ಜನರಿಗೆ ಪರಸ್ಪರರ ಆಪ್ತಭಾವ ಉಂಟಾಗಿದ್ದು ಸಹಜ. ಆಸಕ್ತಿಕರ ಅಂಶವೆಂದರೆ, ಒಂದು ಸೂತ್ರದಲ್ಲಿ ಹೆಣೆಯಲ್ಪಟ್ಟಿರದೆ ಇದ್ದರೂ ದೇವದೇವತೆಗಳು, ವೇದ ಪುರಾಣಗಳು ಈ ‘ಭರತ ಖಂಡ’ದ ಉದ್ದಗಲ ಹರಡಿಕೊಂಡಿದ್ದವು. ಮತ್ತು ಪ್ರತಿಯೊಂದೂ ರಾಜ್ಯ, ಸಮುದಾಯ, ಜನಪದವೂ ತಮ್ಮದೇ ಆದ ರಾಮರನ್ನು, ಕೃಷ್ಣರನ್ನು ಹೊಂದಿದ್ದವು. ಹೀಗೆ ರಾಮನ ಕಾರಣದಿಂದ, ಕೃಷ್ಣನ ಕಾರಣದಿಂದ, ಶಿವ ಶಿವೆಯರ ಕಾರಣಗಳಿಂದಲೂ ಭಾರತದ ಉತ್ತರ ದಕ್ಷಿಣ, ಪೂರ್ವ ಪಶ್ಚಿಮಗಳು ಪರಸ್ಪರ ನಂಟು ಸಾಧಿಸಿದ್ದವು.
ಸಂತರ ಕಾಲದ ಭಾರತ
`ಭಾರತದ ಚರಿತ್ರೆಯೆಂದರೆ ಇಲ್ಲಿನ ಮಹಾಪುರುಷರ ಜೀವನಗಾಥೆಗಳು’ ಎಂದಿದ್ದಾರೆ ಇತಿಹಾಸಕಾರ ಸುರೇಂದ್ರನಾಥ ಬ್ಯಾನರ್ಜಿ. ಭಾರತದ ಮಹಾಪುರುಷರೆಂದರೆ ಶ್ರೀಮಂತ ವ್ಯಾಪಾರಿಗಳಲ್ಲ, ರಾಜಮಹಾರಾಜರುಗಳಲ್ಲ. ಇಲ್ಲಿ ಸಾಧು ಸಂತರು, ಸಂನ್ಯಾಸಿಗಳಿಗೇ ಹೆಚ್ಚಿನ ಮನ್ನಣೆ, ಬೆಲೆ. ಮತ್ತು ಈ ಸಂತ ಸಾಲಿನಲ್ಲಿ ಜಾತಿ – ವರ್ಗ ಭೇದಗಳಿಲ್ಲ. ಭಾರತದ ಸಂತರೆಂದರೆ ಎಲ್ಲ ಸಮುದಾಯಗಳಿಂದಲೂ ಮೂಡಿಬಂದು ಸಮಾಜ ಏಳಿಗೆಗಾಗಿ ಶ್ರಮಿಸಿದ ಸಾಧಕರು. ಆಧ್ಯಾತ್ಮಿಕವಾಗಿ ವಿಕಾಸಗೊಂಡ ಪ್ರತಿಯೊಬ್ಬರನ್ನೂ ಇಲ್ಲಿನ ನೆಲ ಗುರುವೆಂದು ಸ್ವೀಕರಿಸಿದೆ, ಅನುಸರಿಸುತ್ತ ನೆಚ್ಚಿಕೊಂಡಿದೆ. ಇವರು ಧರ್ಮಭೀರುಗಳೂ ಹೌದು, ಬಂಡಾಯಗಾರರೂ ಹೌದು, ಅಧ್ಯಾತ್ಮ – ಅನುಭಾವಿಗಳೂ ಹೌದು, ಸಮಾಜ ಸುಧಾರಕರೂ ಹೌದು.
ಆಧುನಿಕ ಭಾರತದ ಕಾಲಘಟ್ಟವನ್ನೆ ತೆಗೆದುಕೊಂಡರೆ, 20ನೇ ಶತಮಾನದಲ್ಲಿ ಆಗಿಹೋದ ಸ್ವಾಮಿ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದ, ಸ್ವಾಮಿ ರಾಮತೀರ್ಥ, ಯೋಗಿ ಅರವಿಂದ ಇವರೆಲ್ಲರೂ ರಾಷ್ಟ್ರರ್ಷಿಗಳಂತೆ ಮುಂಚೂಣಿಯಲ್ಲಿ ನಿಂತು ಅಧ್ಯಾತ್ಮ ಹಾಗೂ ರಾಷ್ಟ್ರೀಯ ಭಾವನೆಗಳನ್ನು ಜೊತೆಜೊತೆಯಲ್ಲೆ ಪೋಷಿಸಿದರು. ನಾರಾಯಣ ಗುರುಗಳಂತೂ ದಕ್ಷಿಣದಲ್ಲಿ ಸಾಮಾಜಿಕ ಕ್ರಾಂತಿಯನ್ನೇ ಹುಟ್ಟುಹಾಕಿದರು. ರಮಣ ಮಹರ್ಷಿ, ಓಶೋ, ಜಿಡ್ಡು ಕೃಷ್ಣಮೂರ್ತಿ ಮೊದಲಾದ ಅಧ್ಯಾತ್ಮ ಸಾಧಕರು ಸಮಾಜದ ಸುಶಿಕ್ಷಿತ ವರ್ಗವನ್ನು ವಿಶೇಷವಾಗಿ ಸೆಳೆದರು. ಈ ಎಲ್ಲ ಸಂತ – ಸಾಧಕರು ಜನರನ್ನು ಬೆಸೆಯುವ ಮೂಲಕ, ರಾಷ್ಟ್ರೀಯ ಐಕ್ಯತೆಗೆ ಅಡ್ಡಿಯಾಗಿದ್ದ ಮೇಲು ಕೀಳುಗಳನ್ನು ಅಳಿದು ಸಮನ್ವಯತೆಗೆ ಕರೆನೀಡುವ ಮೂಲಕ ದೇಶವನ್ನು ಬೆಸೆದಿಟ್ಟರು. ವಿದೇಶದಿಂದ ಬಂದು ನೆಲೆಸಿ ಇಲ್ಲಿನ ತತ್ತ್ವ ಶಾಸ್ತ್ರ, ಅಧ್ಯಾತ್ಮಗಳ ಅಭ್ಯಾಸದಲ್ಲಿ ತೊಡಗಿದ್ದ ಆ್ಯನಿ ಬೆಸೆಂಟ್ ಹಾಗೂ ಸೋದರಿ ನಿವೇದಿತಾ ತಮ್ಮ ಆಧ್ಯಾತ್ಮಿಕ ಚಟುವಟಿಕೆಗಳ ವಿಸ್ತರಣೆಯಾಗಿ ಭಾರತಪ್ರೇಮದಲ್ಲಿ, ಭಾರತದ ಸೇವೆಯಲ್ಲಿ ಆಸಕ್ತಿ ತೋರಿದರು. `ಈ ರಾಷ್ಟ್ರದ ಕಂಪನವನ್ನು, ಮಿಡಿತವನ್ನು ನಾವು ಅರಿಯಲಿಲ್ಲವಾದರೆ, ಈ ನೆಲದ ಅತಿ ಶ್ರೇಷ್ಠ ಆಧ್ಯಾತ್ಮಿಕ ಕೊಡುಗೆಗಳನ್ನೂ ನಾವು ಅರಿಯಲು ಸಾಧ್ಯವಾಗದು’ ಎಂದಿದ್ದರು ಭಗಿನಿ ನಿವೇದಿತಾ.
ರಾಷ್ಟ್ರದೊಡನೆ ತಾದಾತ್ಮ್ಯದ ಪ್ರಸ್ತಾಪ ಬಂದಾಗ ವಿವೇಕಾನಂದರಿಗಿಂತಲೂ ಒಂದು ಹೆಜ್ಜೆ ಮುಂದೆ ನಿಲ್ಲುವವರು ರಾಮತೀರ್ಥರು. ಅಪ್ರತಿಮ ಅದ್ವೈತಿಯಾಗಿದ್ದ ರಾಮತೀರ್ಥರು `ನಾನೇ ಭಾರತ, ಭಾರತವೇ ನಾನು. ನಾನು ನಡೆದಾಡಿದರೆ ಭಾರತ ನಡೆದಾಡಿದಂತೆ, ಮಾತಾಡಿದರೆ ಭಾರತವೇ ಮಾತಾಡಿದಂತೆ ನನಗೆ ಭಾಸವಾಗುತ್ತದೆ’ ಎಂದು ಘೋಷಿಸಿದ್ದರು ಅವರು. ಒಬ್ಬ ವ್ಯಕ್ತಿಯಲ್ಲಿ ಒಂದು ದೇಶವನ್ನು ಕಾಣಲು ಸಾಧ್ಯವಾಗಬೇಕು. ಹೀಗೆ ಪ್ರತಿಯೊಬ್ಬರಲ್ಲೂ ರಾಷ್ಟ್ರವನ್ನೆ ಕಂಡರೆ, ಪರಸ್ಪರ ಸೇವೆಗೈಯುತ್ತ ದೇಶವನ್ನು ಪ್ರಗತಿಯ ಉತ್ತುಂಗಕ್ಕೆ ಕೊಂಡೊಯ್ಯಬಹುದು ಎನ್ನುವುದು ಅವರ ಬೋಧನೆಯ ಸಾರವಾಗಿತ್ತು.
ಸ್ವತಂತ್ರ ಭಾರತದಲ್ಲಿ…
ಭಾರತ ಇನ್ನೂರು ವರ್ಷಗಳ ದಾಸ್ಯದಿಂದ ಮುಕ್ತಗೊಂಡಾಗ ತನ್ನ ಹಿಂದಿನ ಸ್ವರೂಪವನ್ನು ಕಳೆದುಕೊಂಡು ಛಿದ್ರವಾಗಿ ಹೋಗಿದ್ದು ಸರಿಯಷ್ಟೆ? ಸ್ವಾತಂತ್ರ್ಯಾನಂತರದ ಏಕೀಕರಣ ಸಂದರ್ಭದಲ್ಲಿ ಸ್ವತಂತ್ರರಾಗಿದ್ದ ಬಹುತೇಕ ಎಲ್ಲ ರಾಜವಂಶಗಳು ಭಾರತದೊಂದಿಗೆ ಗುರುತಿಸಿಕೊಳ್ಳಲು ಬಯಸಿ ಬಂದರು. ಇದಕ್ಕೆ ಸುಭದ್ರತೆಯ ಕಾರಣವೆಷ್ಟಿತ್ತೋ ಅದಕ್ಕಿಂತ ನೂರು ಪಟ್ಟು ಹೆಚ್ಚಿನದಾಗಿ ಧಾರ್ಮಿಕ ಭಾವನೆಗಳು ಕಾರಣವಾಗಿದ್ದವು. ಭಾರತ ಎಂಬ ಹೆಸರಿನೊಂದಿಗೆ ಬೆಸೆದುಕೊಂಡಿದ್ದ ದೇವತೆಗಳು, ಆಚರಣೆಗಳು, ಸಂಸ್ಕೃತಿ, ಧಾರ್ಮಿಕ – ಆಧ್ಯಾತ್ಮಿಕ ಪರಂಪರೆಗಳೂ ಕಾರಣವಾಗಿದ್ದವು. ಭಾರತೀಯ ತತ್ವಶಾಸ್ತ್ರದ ಪ್ರತಿಪಾದಕರಾಗಿದ್ದ ಸಂತರು ನಡೆದಾಡಿದ ನೆಲವೆಲ್ಲವೂ ಪೂಜನೀಯವಾಗಿಯೇ ಆದರಿಸಲ್ಪಡುತ್ತಿತ್ತು.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ, ಈ ಸಮಯಕ್ಕೆ ಹಲವಾರು ಜಾತಿಧರ್ಮಗಳಿಗೆ ಆಶ್ರಯವಾಗಿದ್ದ ಭಾರತ ಈ ಎಲ್ಲ ಪಂಗಡಗಳ ಮಹಾತ್ಮರನ್ನೂ ಪೋಷಿಸಿ, ರಾಜಕೀಯ ಐಕ್ಯತೆಯೊಂದಿಗೆ ಭಾವೈಕ್ಯತೆಯನ್ನೂ ಬೆಸೆದಿತ್ತು. ಶತಮಾನಗಳ ಕಾಲ ಹೊಸ ಹೊಸ ಧರ್ಮ- ಸಂಸ್ಕೃತಿಗಳು ಬಂದು ಸೇರುತ್ತಾ ಒಟ್ಟು ಭಾರತೀಯ ಅಸ್ಮಿತೆಯನ್ನು ಪೋಷಿಸುತ್ತಾ ನಡೆದವು. ಆಗೆಲ್ಲ ಧರ್ಮ – ಧರ್ಮಗಳ ನಡುವೆ, ಸಂಸ್ಕೃತಿ ಮತ್ತು ಭಾಷೆಗಳ ನಡುವೆ ಅಸಹಿಷ್ಣುತೆ ಉಂಟಾಗದಂತೆ ತಡೆದಿದ್ದು ಈ ನೆಲದ ಪ್ರತಿ ಜನರ ಅಧ್ಯಾತ್ಮ. ಸಂತ – ಸಾಧಕರು ಈ ನಿಟ್ಟಿನಲ್ಲಿ ಕಾಲಕಾಲಕ್ಕೆ ಜನರನ್ನು ತಿದ್ದುತ್ತಾ, ಸಮನ್ವಯ ಮೂಡಿಸುತ್ತಾ ಜನ ಸಾಮಾನ್ಯರ ಸಹಜ ಸ್ವೀಕೃತಿಗೆ ಮತ್ತಷ್ಟು ಬಲ ತುಂಬಿದರು. ಹೀಗೆ ಕೆಲವು ಆಂತರಿಕ ನ್ಯೂನತೆಗಳ ನಡುವೆಯೂ ಭಾರತ ಏಕತ್ರಗೊಂಡಿತು, ರಾಷ್ಟ್ರವಾಗಿ ಸಂಪನ್ನವಾಯಿತು.
ಇದೀಗ ನ್ಯೂನತೆಗಳನ್ನು ಇನ್ನಾದರೂ ಸರಿಪಡಿಸಿಕೊಳ್ಳುವ ಸಮಯ. ಜಾತಿ – ಮತೀಯ ಸಂಘರ್ಷಗಳನ್ನು ತೊಡೆದು, ನಾವೆಲ್ಲರೂ ಈ ನೆಲದ ಮಕ್ಕಳೆಂಬ ಭಾವನೆ ಬೆಳೆಯಲಿ. ಹಾಗೆಯೇ ಈ ನೆಲದೊಡನೆ ಗುರುತಿಸಿಕೊಂಡ ಪ್ರತಿಯೊಬ್ಬರಿಗೂ ಸಮಾನ ಅಧಿಕಾರವಿದೆ ಎಂಬ ಅರಿವು ಮೂಡುವುದೂ ಮುಖ್ಯ. ತಾರತಮ್ಯ ನಾಶವಾದರೆ ದೇಶ ಸುಸ್ಥಿರ. ಈ ಅರಿವಿಗೆ ಅಧ್ಯಾತ್ಮ ಊರುಗೋಲು. ಈ ಊರುಗೋಲು ಹಿಡಿದು ರಾಷ್ಟ್ರ ಧರ್ಮವನ್ನು ಪಾಲಿಸೋಣ.
ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

Leave a Reply