ಹೇಗೆ ಭೇರುಂಡ ಪಕ್ಷಿಗೆ ಎರಡು ತಲೆಯಿದ್ದರೂ ದೇಹ ಒಂದೇ ಹಾಗೆಯೇ ಬಾಹ್ಯ ವಿವೇಚನೆಗೆ ಲಿಂಗ ಜಂಗಮ ಎರಡಾಗಿ ತೋರಿದರು ಅವುಗಳು ಒಂದೇ ಆಗಿವೆ. ಅದಕ್ಕಾಗಿ ಬಸವಣ್ಣನವರು ಒಂದು ಕಡೆ “ಛಲಬೇಕು ಶರಣಂಗೆ ಲಿಂಗಜಂಗಮ ಒಂದೆ ” ಎಂದು ಹೇಳಿದ್ದಾರೆ… | ಆಕರ : ಶಿವಯೋಗ ಶಿವಾನುಭವ ಮಂಟಪ
ಭೇರುಂಡನ ಪಕ್ಷಿಗೆ ದೇಹ ಒಂದೆ,
ತಲೆಯೆರಡರ ನಡುವೆ ಕನ್ನಡವ ಕಟ್ಟಿ
ಒಂದು ತಲೆಯಲ್ಲಿ ಹಾಲನೆರೆದು
ಒಂದು ತಲೆಯಲ್ಲಿ ವಿಷವನೆರೆದಡೆ
ದೇಹವೊಂದೇ, ವಿಷ ಬಿಡುವುದೇ ಅಯ್ಯಾ
ಲಿಂಗದಲ್ಲಿ ಪೂಜೆಯ ಮಾಡಿ
ಜಂಗಮದಲ್ಲಿ ನಿಂದೆಯ ಮಾಡಿದಡೆ
ನಾನು ಬೆಂದೆ ಕಾಣಾ, ಕೂಡಲಸಂಗಮದೇವಾ.
~ ಬಸವಣ್ಣ
ಈ ವಚನ ಲಿಂಗ ಜಂಗಮ ಎರಡು ಒಂದೇ ಎಂಬ ಮಹತ್ವದ ಕುರಿತಾದದ್ದು . ವೃಷಭೋದ್ಧರಣೆ , ಅನಾದಿ ಜಂಗಮೋದ್ಧರಣೆ , ಉದ್ವಮುಖಿ ಕುಂಡಲಿನಿ ಉದ್ಧರಣೆ ಮೊದಲಾದವುಗಳ ನಂತರ ವೀರಶೈವಾಗಮದಲ್ಲಿ ಅತೀ ಮಹತ್ವದ ಉಪಮೆಗಳೆಂದರೆ , ನೀರನ್ನು ಕುಡಿಯುವ ಮರದ ಬೇರು , ಕೀಟ ಭ್ರಮರ , ಪರುಷ ಲೋಹ , ಗಂಡಭೇರುಂಡ ಪಕ್ಷಿ ಮೊದಲಾದವುಗಳು.
ಲಿಂಗ ಜಂಗಮ ಒಂದೇ ಎಂದು ಭಾವಿಸಬೇಕೆಂದು ವೀರಶೈವ ಪ್ರಧಾನವಾದ ವಿಜಯಭೈರವಾಗಮ ( ಪಾರಮೇಶ್ವರಾಗಮದ ಉಪಾಗಮ ) ತಿಳಿಸುತ್ತದೆ.
ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯ ಚ ಜಂಗಮಃ
ಮಮ ತೃಪ್ತಿರುಮಾದೇವಿ ಜಂಗಮಸ್ಯಾನನಾದ್ಭವಃ
ಯಥಾ ಭೇರುಂಡಪಕ್ಷೀ ತು
ದ್ವಿಮುಖಾತ್ ಪರಿಭುಂಜತೇ
ತಥಾ ಭುಂಜಾಮಿ ದ್ವಿಮುಖಾಲ್ಲಿಂಗ ಜಂಗಮಯೋರಹಂ
ಅಂದರೆ ವೃಕ್ಷಕ್ಕೆ ಮುಖ ಯಾವುದು ಎಂದರೆ ಭೂಮಿ , ವೃಕ್ಷಕ್ಕೆ ನೀರುಣಿಸಬೇಕಾದರೆ ವೃಕ್ಷದ ಬುಡಕ್ಕೆ ನೀರು ಹಾಕಬೇಕು ಅಂತೇಯೇ ಲಿಂಗಕ್ಕೆ ಮುಖ ಯಾವುದು ಎಂದರೆ ಜಂಗಮ ( ಶಿವ ಚೈತನ್ಯ – ಸಮಾಜ ) , ಹಾಗಾಗಿ ಲಿಂಗವನ್ನು ತೃಪ್ತಿಪಡಿಸಬೇಕಾದಲ್ಲಿ ಜಂಗಮಕ್ಕೆ ಸೇವೆ ಮಾಡಬೇಕು. ಓಹಿಲನು ಸೌರಾಷ್ಟ್ರದಲ್ಲಿ ಲಿಂಗಕ್ಕೆ ನೀರು ಕುಡಿ ಎಂದು ಮಜ್ಜನಕ್ಕೆರೆಯುತ್ತಿದ್ದ ಆದರೆ ಲಿಂಗದ ಮೇಲಿನ ನೀರು ಹರಿದೇ ಹೋಗುತ್ತಿತ್ತು. ಒಡನೆಯೇ ಅಲ್ಲೊಬ್ಬ ಹೆಳವ ಕುಡಿಯುವ ನೀರಿಗೆ ಪರಿತಪಿಸುತ್ತ ಬಂದ ಆಗ ಅಭಿಷೇಕದ ನೀರನ್ನು ಹೆಳವನಿಗೆ ಕೊಟ್ಟ ಆತ ತೃಪ್ತಿಪಟ್ಟು ಹರಸಿ ಹೋದ., ಆಗ ಓಹಿಲೇಶ್ವರನು ಲಿಂಗದ ಮುಖವು ಜಂಗಮ ಎಂದು ಸಾಕ್ಷಾತ್ಕರಿಸಿಕೊಂಡು ಮೇಲಿನ ಶ್ಲೋಕವನ್ನು ಉದ್ಘೋಶಿಸಿದನಂತೆ. ಶರಣರ ಹಲವಾರು ವಚನದಲ್ಲಿ ಈ ಉಪಮೆಯ ಶ್ಲೋಕ ಬಳಕೆಯಾಗಿದೆ.
ಇನ್ನು ಮತ್ತೊಂದು ಉಪಮೆ ಗಂಡಭೇರುಂಡ ,
ಹೇಗೆ ಭೇರುಂಡ ಪಕ್ಷಿಗೆ ಎರಡು ತಲೆಯಿದ್ದರೂ ದೇಹ ಒಂದೇ ಹಾಗೆಯೇ ಬಾಹ್ಯ ವಿವೇಚನೆಗೆ ಲಿಂಗ ಜಂಗಮ ಎರಡಾಗಿ ತೋರಿದರು ಅವುಗಳು ಒಂದೇ ಆಗಿವೆ. ಅದಕ್ಕಾಗಿ ಬಸವಣ್ಣನವರು ಒಂದು ಕಡೆ “ಛಲಬೇಕು ಶರಣಂಗೆ ಲಿಂಗಜಂಗಮ ಒಂದೆ ” ಎಂದು ಹೇಳಿದ್ದಾರೆ.
ಭೇರುಂಡ ಪಕ್ಷಿಗೆ ಎರಡೂ ತಲೆಗೆ ನೀರನ್ನೇ ಕೊಟ್ಟರೆ ಅದು ಬದುಕುವುದು , ಒಂದು ತಲೆಗೆ ಹಾಲು ಇನ್ನೊಂದಕ್ಕೆ ವಿಷ ಕೊಟ್ಟರೆ ಅದು ಬದುಕುವುದಿಲ್ಲ. ಅಂತೆಯೇ ಲಿಂಗಪೂಜೆ ಸಾರ್ಥಕ್ಯವಾಗಬೇಕಾದಲ್ಲಿ ಜಂಗಮ ( ಶಿವ ಚೈತನ್ಯ – ಸಮಾಜ ) ಸೇವೆ ಅತೀ ಮುಖ್ಯ. ಜಂಗಮ – ಸಮಾಜ ಎಂದರೆ ಕೇವಲ ದೀನ ದಲಿತರು ಮಾನವರಷ್ಟೇ ಸೇರುವುದಿಲ್ಲ ಲಿಂಗಪುರಾಣವು ಜಂಗಮ ಎಂದರೆ ಸಕಲ ಪ್ರಾಣಿ ಪಕ್ಷಿ ತರು ಮರಗಳು ಸಕಲ ಭೂತದಯೆಯೇ ಜಂಗಮಸೇವೆ ಎನ್ನುತ್ತದೆ. ಜಂಗಮಸೇವೆಯ ಅಂಶ ಎಲ್ಲಾ ಮತಗಳಲ್ಲಿಯೂ ಇದೆ ರಾಮಕೃಷ್ಣ ಮಠದವರು ಜೀವಶಿವಸೇವೆ ಎಂದರೆ , ರಾಮಾನುಜರ ಅನುಯಾಯಿಗಳು ವೈಶ್ವಾನರ ಸೇವೆ ಎನ್ನುತ್ತಾರೆ. ಸ್ವಾಮಿ ವಿವೆಕಾನಂದರು ಹೇಳುವಂತೆ ದೇವಾಲಯಕ್ಕೆ ಹೋಗಿ ಶಿವನನ್ನು ಕಾಣುವವನಿಗಿಂತ ದೀನ ದಲಿತರಲ್ಲಿ ಶಿವನನ್ನು ಕಂಡು ಸೇವೆ ಸಲ್ಲಿಸುವವನ ಭಕ್ತಿ ಸರ್ವಶ್ರೇಷ್ಠ , ಹಾಗಾಗಿಯೇ ಅವರು ದೀನ ದೇವೋಭವ , ದಲಿತ ದೇವೋಭವ ಎಂದು ಘೋಷಿಸಿದ್ದು.
ಗಂಡಭೇರುಂಡ ಪಕ್ಷಿಯನ್ನು ಹಲವಾರು ರಾಜಮನೆತನಗಳು ಲಾಂಛನವಾಗಿ ಬಳಸಿದ್ದುಂಟು , ವಿಜಯನಗರದ ಕಾಲದಲ್ಲಿಯೂ ಗಂಡಭೇರುಂಡ ಪಕ್ಷಿಯ ಕೆತ್ತನೆಗಳಿವೆ. ಲೇಪಾಕ್ಷಿ ಮಥುರೈ ಪ್ರಾಚೀನ ದೇವಾಲಯಗಳಲ್ಲೂ ಗಂಡಭೇರುಂಡದ ಶಿಲ್ಪಗಳಿವೆ.
ವೀರಶೈವದ ಅಷ್ಟಾವರಣದಲ್ಲಿ ಜಂಗಮದ ಸೂಕ್ಷಾರ್ಥ – ಶಿವಚೈತನ್ಯವಾದರೆ , ಸ್ಥೂಲ ಅರ್ಥ – ಧರ್ಮ ಪ್ರಸಾರಕರು ನೆಡೆದಾಡುವ ಶಿವರು ಎಂದರ್ಥ.
ಇನ್ನು ಮೈಸೂರು ರಾಜರಿಗೆ ಒಡೆಯರ್ ಎಂಬ ಬಿರುದು ಕೊಟ್ಟವರು ಸಹ ಆ ಹೆಸರುಳ್ಳ ಜಂಗಮರೇ , ಮೈಸುರಿನ ರಾಜಲಾಂಛನವಾಗಿ ಗಂಡಭೇರುಂಡ ಪಕ್ಷಿಯನ್ನು ಸೂಚಿಸಿದವರು ಸಹ ಒಡೆಯರ್ ಜಂಗಮರೇ ಆಗಿದ್ದಾರೆ. ಈಗಲೂ ಹಲವಾರು ಭಾಗದಲ್ಲಿ ಒಡೆಯರ್ ಹೆಸರಿನ ಜಂಗಮರಿರುವರು.
ಸುತ್ತೂರಿನ ಇತಿಹಾಸದಲ್ಲಿ ಹಾದು ಹೋದ ಹನ್ನೊಂದನೇ ಶತಮಾನದ ಈಶಾನೇಶ್ವರರು
( ಕ್ರಿ.ಶ.1030 – 1090 ) ಸಹ ಒಡೆಯರ್ ಎಂಬ ಬಿರುದಿನವರು , ಈಶಾನೇಶ್ವರ ಒಡೆಯರ್ ಎಂಬ ಹೆಸರಿರುವ ಶಾಸನ ಸುತ್ತೂರಿನಲ್ಲಿ ದೊರೆತಿದೆ. ಕ್ರಿ.ಶ. 1490 ರಲ್ಲಿ ಸುತ್ತೂರಿನಲ್ಲಿಯೇ ಭಂಡಾರಿಬಸಪ್ಪ ಒಡೆಯರ್ ಎಂಬುವ ಸ್ಥಾನಾಚಾರ್ಯರಿದ್ದರು.
ಕೆಳದಿಯ ಅರಸರು , ಕೆಲ ಪಾಳೇಗಾರ ವಂಶಗಳು ಸಹ ಗಂಡಭೇರುಂಡವನ್ನು ಲಾಂಛನವಾಗಿ ಸ್ವೀಕರಿಸಿದ್ದಾರೆ.
ಹಲವಾರು ಕವಿಗಳು ಗಂಡಭೇರುಂಡ ಎಂಬ ಬಿರುದನ್ನು ಹೋಂದಿದ್ದಾರೆ ಉದಾಹರಣೆಗೆ ರಾಘವಾಂಕನು ಕವಿ ಶರಭ ಭೇರುಂಡ ಎಂಬ ಬಿರುದಿನಿಂದ ಹೆಸರಾಗಿದ್ದಾನೆ.