ಕನ್ನಡಕ್ಕೆ : ಸುನೈಫ್
ಮಸೀದಿಯೊಳಗಿನ ಮೂಮಿನ್ ನಾನಲ್ಲ
ಧರ್ಮ ಕರ್ಮಗಳ ಭಕ್ತನು ನಾನಲ್ಲ
ಕಚಡರ ನಡುವೆ ಉತ್ತಮನು ನಾನಲ್ಲ
ಮೂಸನು ನಾನಲ್ಲ, ಫರೋವನು ನಾನಲ್ಲ
ಬುಲ್ಲೇ, ನೀನೆಂದರೆ ನಿನಗೇ ಅಪರಿಚಿತನು
ವೇದ ಕಿತಾಬಲಿ ತಡಕದಿರಿ ನನ್ನನು
ಅಫೀಮು ವೈನುಗಳ ಮತ್ತಲಿ ನಾನಿಲ್ಲ
ಕುಡುಕರ ಮತ್ತಲಿ ಹುಡುಕದಿರಿ ನನ್ನ
ಎಚ್ಚರ ಮಂಪರು ಎಂಬುದು ನನಗಿಲ್ಲ
ಬುಲ್ಲೇ, ನೀನೆಂದರೆ ನಿನಗೇ ಅಪರಿಚಿತನು
ಸುಖ ಸುಪ್ಪತ್ತಿಗೆ ನಾನಲ್ಲ
ದುಃಖ ಎಂಬುದು ನನಗಿಲ್ಲ
ಶುದ್ಧ ನೆಲವ ಕಂಡಿಲ್ಲ
ಕೊಳಚೆ ಗುಂಡಿಯ ಅರಿವಿಲ್ಲ
ನೀರಿನಲ್ಲಿ ನಾ ಹುಟ್ಟಿಲ್ಲ
ಮಣ್ಣಿಂದ ನನ್ನ ಮಾಡಿಲ್ಲ
ಅಗ್ನಿ ಪುತ್ರನು ನಾನಲ್ಲ
ವಾಯುಸುತನು ನಾನಲ್ಲ
ಬುಲ್ಲೇ, ನೀನೆಂದರೆ ನಿನಗೇ ಅಪರಿಚಿತನು
ಅರಬನಲ್ಲ ನಾನು ಲಾಹೋರಿಯಲ್ಲ ನಾನು
ಹಿಂದಿಯಲ್ಲ ನಾಗೋರಿಯಲ್ಲ ನಾನು
ಹಿಂದೂ ತುರ್ಕ ಪೇಷಾವರಿಯಲ್ಲ ನಾನು
ನನ್ನ ನೆಲವಲ್ಲ ಆ ಮುಗ್ದರ ನಾಡು ‘ನಾದಾನ್’
ಬುಲ್ಲೇ, ನೀನೆಂದರೆ ನಿನಗೇ ಅಪರಿಚಿತನು
ಧರ್ಮಗಳ ಒಳಗುಟ್ಟು ತಿಳಿದಿಲ್ಲ
ಆದಮ್ ಹವ್ವಾ ಹೆತ್ತಿಲ್ಲ
ಈ ಹೆಸರೂ ನನ್ನದಲ್ಲ
ಜಡವೂ ನಾನಲ್ಲ, ಹರಿವೂ ನಾನಲ್ಲ
ಬುಲ್ಲೇ, ನೀನೆಂದರೆ ನಿನಗೇ ಅಪರಿಚಿತನು
ಆದಿಯು ನಾನು ಅಂತ್ಯವು ನಾನು
ಬೇರೆ ಏನನ್ನೂ ಅರಿಯೆನು ನಾನು
ನಿಮಗಿಂತ ಜಾಣನು ನಾನು
ಬುಲ್ಲೇ! ಹೇಳು ಯಾರಿವನು?
ಬುಲ್ಲೇ, ನೀನೆಂದರೆ ನಿನಗೇ ಅಪರಿಚಿತನು