ಚಿನ್ಮುದ್ರೆ ಎಂದರೇನು? ಅದು ಏನನ್ನು ಸೂಚಿಸುತ್ತದೆ?

ಚಿನ್ ಅಂದರೆ ಅರಿವು. ಸಂಸ್ಕೃತ ವ್ಯಾಕರಣದ ನಿಯಮದ ಪ್ರಕಾರ ಚಿತ್ ಹಾಗೂ ಮುದ್ರಾ ಎರಡೂ ಸೇರಿದಾಗ ಅದು ಚಿನ್ಮುದ್ರಾ ಆಗುತ್ತದೆ. ಮುದ್ರಾ ಅಂದರೆ ಅರಿವು. ಇದನ್ನು ಜ್ಞಾನಮುದ್ರಾ ಎಂದೂ ಕರೆಯಲಾಗುತ್ತದೆ. 

ಮಹಾಗುರುವಾದ ದಕ್ಷಿಣಾಮೂರ್ತಿ ಶಿವನು ಚಿನ್ಮುದ್ರೆಯಲ್ಲಿ ಆಸೀನನಾಗಿರುತ್ತಾನೆ.  ಯಾವಾಗ ಅವನು ಚಿನ್ಮುದ್ರೆಯನ್ನು ತೋರುತ್ತಿರುತ್ತಾನೋ ಆಗ ವೇದಗಳ ಬೋಧನೆಯನ್ನು ಪ್ರದರ್ಶಿಸುತ್ತಾ ಇರುತ್ತಾನೆ. ಬುದ್ಧಗುರುವೂ ಚಿನ್ಮುದ್ರೆಯಲ್ಲಿ ಬೋಧಿಸುವುದು ಮಹಾಜ್ಞಾನವನ್ನೇ. ದಕ್ಷಿಣಾಮೂರ್ತಿಯಾಗಲೀ ಬುದ್ಧನಾಗಲೀ ಶಿಷ್ಯಗಣದೆದುರು ಚಿನ್ಮುದ್ರೆಯಲ್ಲಿ ಕುಳಿತಾಗ ಅಲ್ಲಿ ಮಾತಿಗೆ ಸ್ಥಾನವೇ ಇರುವುದಿಲ್ಲ. ಮುದ್ರೆಯೇ ಮೌನವಾಗಿ ಬೋಧಿಸುತ್ತಾ ಇರುತ್ತದೆ. 

ಮೇಲೆ ಹೇಳಿದಂತೆ  ಚಿನ್ಮುದ್ರೆಯು ಗೂಢವಾಗಿ ವೇದಾಂತದ ಬೋಧನೆಯನ್ನು ಸೂಚಿಸುತ್ತದೆ. ಈ ಮುದ್ರೆಯ ಮೂಲಕ ಅನೇಕ ಸಂಕೇತಗಳನ್ನೂ ಅರಿಯಬಹುದು.

ಚಿನ್ಮುದ್ರೆಯಲ್ಲಿ ಜೋಡಣೆಗೊಳ್ಳುವ ಹಸ್ತದಲ್ಲಿನ ಕಿರು ಬೆರಳು, ಉಂಗುರ ಬೆರಳು ಹಾಗೂ ಮಧ್ಯದ ಬೆರಳುಗಳು ದೇಹ , ಮನಸ್ಸು ಹಾಗೂ ಇಂದ್ರಿಯಗಳನ್ನು ಪ್ರತಿನಿಧಿಸುತ್ತದೆ. ಅವುಗಳು ಜಾಗ್ರತ್, ಸ್ವಪ್ನ ಹಾಗೂ ಸುಷುಪ್ತಿ ಅವಸ್ಥೆಗಳನ್ನೂ ಸೂಚಿಸುತ್ತವೆ. ಅಲ್ಲದೇ ಈ ಮೂರು ಬೆರಳುಗಳು ಸ್ಥೂಲ, ಸೂಕ್ಷ್ಮ ಹಾಗೂ ಕರಣ ಶರೀರಗಳನ್ನೂ ಸೂಚಿಸುತ್ತವೆ. ಇವುಗಳು ಇನ್ನೂ ಅನೇಕ ಸೂಚನೆಗಳನ್ನೂ ನೀಡುತ್ತವೆ. ಸಾಮಾನ್ಯವಾಗಿ ಇವುಗಳು “ಕ್ಷರ” ( ಕಾಲಕ್ರಮದಲ್ಲಿ ಕೊಳೆಯುವ ) ನಿಮ್ಮಲ್ಲಿನ ನೀವು ಅನುಭವಿಸುವ ಒಂದು ಭಾಗ. ಇದಲ್ಲದೇ ಮತ್ತೊಂದು ಅಂಶವೂ ಇರುವುದು. ಅದೇ “ನೀವು ” – ಜಾಗೃತ ವೀಕ್ಷಕ – ಜಾಗೃತ ಸಾಕ್ಷಿ – ಸತ್ ಚಿತ್ ಆನಂದ ಆತ್ಮ. ಇದು ನಿಮ್ಮಲ್ಲಿನ ಮತ್ತೊಂದು ಭಾಗ ಹಾಗೂ ಇದೇ “ಅಕ್ಷರ ” ( ಎಂದೆಂದಿಗೂ ಕೊಳೆಯದೇ ಇರುವ ). ಒಟ್ಟಾರೆಯಾಗಿ ನೀವು ಕೇವಲ ಶರೀರ, ಮನಸ್ಸು ಹಾಗೂ ಇಂದ್ರಿಯಗಳ ಸಂಕೀರ್ಣವಲ್ಲ. ನೀವು ಜಾಗೃತ ಅಸ್ತಿತ್ವ ಎಂಬುದರ ಸಂಕೇತವಿದು.

ತೋರುಬೆರಳು ನೈಜವಾದ ನಿಮ್ಮನ್ನು – ಆತ್ಮವನ್ನು ಪ್ರತಿನಿಧಿಸುತ್ತದೆ. ಹಸ್ತಗಳ ಕಾರ್ಯವು ಹೆಬ್ಬೆಟ್ಟನ್ನು ಅವಲಂಬಿಸಿರುತ್ತದೆ. ಹೆಬ್ಬೆಟ್ಟನ್ನೇ ಬೇರೆಲ್ಲವೂ ಅವಲಂಬಿಸಿರುತ್ತದೆ. ಹಾಗಾಗಿ ಹೆಬ್ಬೆಟ್ಟು ಬ್ರಹ್ಮನ್ – ಸ್ಥಿರವಾದದ್ದು – ಇದರಿಂದ ಬೇರೆಲ್ಲಾ ಅಸ್ಥಿತ್ವದಲ್ಲಿರುವುದು.

ಹೀಗೆ ಒಟ್ಟಾಗಿ ಈ ನಾಲ್ಕು ಬೆರಳುಗಳು ಜೀವವನ್ನು ಪ್ರತಿನಿಧಿಸುತ್ತವೆ.  ಯಾರ ಮೇಲೆ ಎಲ್ಲವೂ ತನ್ನ ಅಸ್ತಿತ್ವಕ್ಕಾಗಿ ಅವಲಂಬಿಸಿರುತ್ತದೋ ಅದೇ ಬ್ರಹ್ಮನ್ ಹಾಗೂ ಅದು ಹೆಬ್ಬೆಟ್ಟನ್ನು ಪ್ರತಿನಿಧಿಸುತ್ತದೆ.

ಚಿನ್ಮುದ್ರೆಯಲ್ಲಿ ತೋರು ಬೆರಳು ಉಳಿದ ಮೂರು ಬೆರಳುಗಳಿಂದ ಬೇರ್ಪಡಬೇಕು. ಇದು ವೇದಾಂತದ ಬೋಧನೆ – ಆತ್ಮ ಅನಾತ್ಮ ವಿವೇಕ. ನೀವು ಜಾಗೃತ ವ್ಯಕ್ತಿಯೆಂಬುದು ನಿಮ್ಮ ಎಚ್ಚೆತ್ತ, ಕನಸಿನ ಮತ್ತು ಆಳವಾದ ನಿದ್ರಾ ಸ್ಥಿತಿಗಳಿಂದ ಸ್ವತಂತ್ರವಾದದ್ದು. ಹಾಗೆಯೇ ಇದು ಸ್ಥೂಲ ಶರೀರ ಸೂಕ್ಷ್ಮ ಶರೀರ ಹಾಗೂ ಕರನ ಶರೀರಗಳಿಂದ ಭಿನ್ನವಾದದ್ದು. ಅದೇ ನೀವು, ಸ್ವಯಂ ಪ್ರಜ್ಞಾ, ಸತ್ ಚಿತ್ ಆನಂದ ಆತ್ಮ ಬೇರೆ ಮೂರು ಅವಸ್ಥೆಗಳಿಂದ ಭಿನ್ನವಾದದ್ದು.

ಎರಡನೆಯದಾಗಿ – ಚಿನ್ಮುದ್ರೆಯಲ್ಲಿ ತೋರು ಬೆರಳು ಹಾಗೂ ಹೆಬ್ಬೆರಳುಗಳನ್ನು ಒಟ್ಟಾಗಿ ಹಿಡಿದಿರಬೇಕು. ತೋರು ಬೆರಳು ಸತ್, ಚಿತ್, ಆನಂದ – ಆತ್ಮನ್ ಗಳನ್ನು ಪ್ರತಿನಿಧಿಸುತ್ತದೆ. ಹೆಬ್ಬೆರಳು ಸತ್ಯಮ್, ಜ್ಞಾನಮ್, ಅನಂತಮ್ – ಬ್ರಹ್ಮನ್. ಎರಡೂ ಬೆರಳುಗಳನ್ನು ಒಟ್ಟಿಗೆ ಚಿನ್ಮುದ್ರೆಯ ರೀತಿಯಲ್ಲಿ ತಂದಾಗ ಆದಿ ಮತ್ತು ಅಂತ್ಯಗಳು ಒಗ್ಗೂಡುತ್ತವೆ. ಈ ಮುದ್ರೆಯು ವೃತ್ತಾಕಾರವಾಗಿದ್ದು, ವೃತ್ತದಲ್ಲಿ ಪ್ರಾರಂಭ ಹಾಗೂ ಕೊನೆ ಇರುವುದೇ ಇಲ್ಲ. ವೃತ್ತದ ಒಂದು ಭಾಗವನ್ನು ಮತ್ತೊಂದು ಭಾಗದಿಂದ ಪ್ರತ್ಯೇಕಿಸಲಾಗುವುದಿಲ್ಲ. ತೋರು ಬೆರಳು ಮತ್ತು ಹೆಬ್ಬೆರಳುಗಳಿಂದ ಉಂಟಾದ ವೃತ್ತವು ಆತ್ರ್ಮ ಹಾಗೂ ಬ್ರಹ್ಮನ್ ಇವೆರಡರ ಪ್ರತ್ಯೇಕತೆ ಇಲ್ಲದ ಸ್ಥಿತಿಯನ್ನು ಪ್ರತಿನಿಧಿಸುತ್ತದೆ.

ಇದೇ ವೇದಾಂತದ ಸಂಪೂರ್ಣ ಸಾರವಾದ ” ತತ್ ತ್ವಮ್ ಅಸಿ “. ಇದನ್ನೇ ಸಾಂಕೇತಿಕವಾಗಿ ಚಿನ್ಮುದ್ರೆಯ ಮೂಲಕ ವ್ಯಕ್ತಪಡಿಸಲಾಗಿದೆ. 

Leave a Reply